ಭ್ರಷ್ಟ ಅಧಿಕಾರಿಗಳು ಜಾಗ ಖಾಲಿ ಮಾಡಲಿ: ರಾಮಚಂದ

Team Udayavani, May 19, 2018, 3:59 PM IST

ಜಗಳೂರು: ತಾಲೂಕಿನಲ್ಲಿ ಜಿಡ್ಡುಗಟ್ಟಿದ ಆಡಳಿತಕ್ಕೆ ಕಾರಣವಾಗಿರುವ ಅಪ್ರಾಮಾಣಿಕ ಮತ್ತು ಭ್ರಷ್ಟ ಅಧಿಕಾರಿಗಳು ಈ ಕೂಡಲೇ ಜಾಗ ಖಾಲಿ ಮಾಡಬೇಕು. ಇಲ್ಲವಾದರೆ ನಾನೇ ಖಾಲಿ ಮಾಡಿಸಬೇಕಾಗುತ್ತದೆ ಎಂದು ನೂತನ ಶಾಸಕ
ಎಸ್‌.ವಿ. ರಾಮಚಂದ್ರ ಅಧಿಕಾರಿಗಳ ವಿರುದ್ಧ ಗುಡುಗಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದ ಅವಧಿಯಲ್ಲಿ ಲಂಚವಿಲ್ಲದೇ ಸಾರ್ವಜನಿಕರ ಯಾವುದೇ ಕೆಲಸ ಆಗಿಲ್ಲ. ಬರಪೀಡಿತ ಪ್ರದೇಶದ ಜನತೆ ಕೂಲಿನಾಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅಂತಹವರ ಬಳಿ ಲಂಚ ಪಡೆದಿರುವುದು ಬೇಸರ ತರಿಸಿದೆ. ಸಾರ್ವಜನಿಕರಿಗೆ ಸ್ಪಂದಿಸುವ ಅಧಿಕಾರಿಗಳಿಗೆ ಮಾನ್ಯತೆ ನೀಡುತ್ತೇನೆ. ಉಳಿದವರಿಗೆ ಯಾವುದೇ ರಿಯಾಯಿತಿ ಇಲ್ಲ. ಯಾವುದೇ ಸರ್ಕಾರ ಬರಲಿ ನಾನು ಅವರನ್ನು ಇಲ್ಲಿ ಇರಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

ಚುನಾವಣೆಗೆ ಸ್ಪರ್ಧಿಸುವ ಉದ್ದೇಶಕ್ಕಾಗಿ ನನಗೆ ಬೇಕಾಗಿದ್ದ ಬೇಬಾಕಿ ಪ್ರಮಾಣ ಪತ್ರ ನೀಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಎರಡು ಸಾವಿರ ಲಂಚ ಪಡೆದಿದ್ದಾರೆಂದು ಆರೋಪಿಸಿದ ಅವರು, ಈ ಹಿಂದೆ ಶಾಸಕನಾಗಿದ್ದಾಗ ಯಾವುದೇ ಒಂದು ಅಪಾದನೆ ಬಾರದಂತೆ ಆಡಳಿತ ನೀಡಿದ್ದೆ. ಅದರಂತೆ ಈಗಲೂ ಆಡಳಿತ ನೀಡುತ್ತೇನೆ. ಎಲ್ಲರನ್ನು
ಪ್ರೀತಿ ವಿಶ್ವಾಸಕ್ಕೆ ತೆಗೆದುಕೊಂಡು ಕ್ಷೇತ್ರವನ್ನು ಅಭಿವೃದ್ಧಿಪಡಿಸುವೆ ಎಂದರು.

ಕ್ಷೇತ್ರದ ಬಡವರಿಗೆ ಸೂರು, ನೀರು ಕಲ್ಪಿಸುವುದು ನನ್ನ ಮೊದಲ ಆದ್ಯತೆ. ಬಹುಗ್ರಾಮ ಕುಡಿಯುವ ನೀರು ಯೋಜನೆ
ಅನುಷ್ಠಾನ, ಭದ್ರಾ ಮೇಲ್ದಂಡೆ ಯೋಜನೆಯ ಶಾಖಾ ಕಾಲುವೆ ನಿರ್ಮಾಣ, 46 ಕೆರೆಗಳಿಗೆ ನೀರು ತುಂಬಿಸುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದರು.

ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ, ಮೋದಿ-ಅಮಿತ್‌ ಶಾ ಅಲೆ ನನ್ನ ಗೆಲುವಿಗೆ ಸಹಕಾರಿಯಾಯಿತು. ಎಲ್ಲಾ ಬಿಜೆಪಿ
ಕಾರ್ಯಕರ್ತರು ಸೈನಿಕರಂತೆ ಚುನಾವಣೆಯಲ್ಲಿ ಕೆಲಸ ಮಾಡಿದ್ದರಿಂದ ಬಹುಮತಗಳ ಅಂತರದಿಂದ ಆಯ್ಕೆಯಾಗಿದ್ದೇನೆಂದು ಹರ್ಷ ವ್ಯಕ್ತಪಡಿಸಿದ ಅವರು ಬಿಜೆಪಿ ಕಾರ್ಯಕರ್ತರಿಗೆ, ಮತದಾರರಿಗೆ ನಾನು ಋಣಿಯಾಗಿದ್ದೇನೆ ಎಂದರು.

ನರೇಗಾ ಅವ್ಯವಹಾರ ತನಿಖೆ: ನರೇಗಾ ಯೋಜನೆಯಡಿ ಜಗಳೂರು ತಾಲೂಕಿನಲ್ಲಿ ನಡೆದ ಅವ್ಯವಹಾರದ ಮರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. 

ವೆಂಡರ್‌ಗಳೆಂದು ಹೇಳಿಕೊಂಡು ತಮ್ಮ ಖಾತೆಗೆ ನರೇಗಾ ಯೋಜನೆಯ ಸಾಮಗ್ರಿ ವೆಚ್ಚವನ್ನು ಜಮಾ ಮಾಡಿಸಿಕೊಂಡ ಕೆಲವರ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಲಾಗುವುದು. ಸರ್ಕಾರದ ಹಣ ಲೂಟಿ ಹೊಡೆದವರು ಯಾರೇ ಆಗಿರಲಿ, ಸುಮ್ಮನೆ ಬಿಡುವುದಿಲ್ಲ ಎಂದರು.

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸವಿತಾ, ಸದಸ್ಯೆ ಶಾಂತಕುಮಾರಿ, ಬಿಜೆಪಿ ತಾಲೂಕಾಧ್ಯಕ್ಷ ಡಿ.ವಿ ನಾಗಪ್ಪ, ತಾ.ಪಂ. ಸದಸ್ಯರಾದ ಟಿ.ಬಸವರಾಜ್‌, ಶಂಕರನಾಯ್ಕ, ತಿಮ್ಮಬೋವಿ, ಮುಖಂಡ ಚಟ್ನಳ್ಳಿ ರಾಜಪ್ಪ ಸೇರಿದಂತೆ ಮತ್ತಿತರಿದ್ದರು. 

ದೊಂಬಿದಾಸರಿಗೆ ಪಜಾ ಪ್ರಮಾಣಪತ್ರ ಕೊಡಿಸುವೆ ತಾಲೂಕಿನಲ್ಲಿರುವ ದೊಂಬಿದಾಸರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್‌ ನೀಡುತ್ತಿಲ್ಲ ಶಾಸಕ ಎಸ್‌.ವಿ.ರಾಮಚಂದ್ರ ಆರೋಪಿಸಿದರು. ದೊಂಬಿದಾಸರಿಗೆ ಪರಿಶಿಷ್ಠ ಜಾತಿ ಪ್ರಮಾಣ ಕೊಡಬೇಕು. ತಹಶೀಲ್ದಾರರು ನಿರಾಕರಿಸಿರುವುದ ರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ. ತಾಲೂಕು ಆಡಳಿತವನ್ನು ಸರಿಪಡಿಸಿ, ನಂತರ ದೊಂಬಿದಾಸರಿಗೆ ಪರಿಶಿಷ್ಠ ಜಾತಿ ಪ್ರಮಾಣ ಪತ್ರ ಕೊಡಿಸುತ್ತೇನೆ ಎಂದರು

ಕಾಂಗ್ರೆಸ್ಸಿಗೆ ಹೋಗಲ್ಲ ನಾನು ಯಾವ ಕಾರಣಕ್ಕೂ ಕಾಂಗ್ರೆಸ್ಸಿಗೆ ಹೋಗಲ್ಲ. ನನಗೆ ಯಡಿಯೂರಪ್ಪನವರೇ ನಾಯಕರು. ನನ್ನನ್ನು ಯಾವ ಪಕ್ಷದವರೂ ಹೈಜಾಕ್‌ ಮಾಡಲು ಸಾಧ್ಯವಿಲ್ಲ. ಸ್ವತಃ ಯಡಿಯೂರಪ್ಪನರು ಮೊದಲು ಕ್ಷೇತ್ರಗಳಿಗೆ ಹೋಗಿ ನಿಮ್ಮ ಮತದಾರರಿಗೆ ಕೃತಜ್ಞತೆ ಸಲ್ಲಿಸುವಂತೆ ಸೂಚನೆ ನೀಡಿದ್ದರು. ಅದಕ್ಕಾಗಿ ಕ್ಷೇತ್ರಕ್ಕೆ ಬಂದಿದ್ದೇನೆ. ಮುಕ್ತವಾಗಿ ಇಲ್ಲಿ ಓಡಾಡಿಕೊಂಡಿದ್ದೇನೆ ಎಂದರು.
 
ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುವೆ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಚಿವ ಸ್ಥಾನ ನೀಡುವಂತೆ ನಾನು ಒತ್ತಡ ಹೇರುವುದಿಲ್ಲ. ಬಿಜೆಪಿ ಮುಖಂಡರು ಒಪ್ಪಿ ಯಾವುದೇ ಖಾತೆ ಕೊಟ್ಟರೂ ನಿಭಾಯಿಸುವೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ