ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಡಿಸಿ-ಎಸ್ಪಿ ಭೇಟಿ
Team Udayavani, Apr 7, 2021, 8:53 PM IST
ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರೊಂದಿಗೆ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಇಎಂಸಿಯು, ಐಸೋಲೇಷನ್ ಹಾಗೂ ಐಸಿಯು ವಾರ್ಡ್‌ಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುರಿತು ಶಸ್ತ್ರಚಿಕಿತ್ಸಕರು ಮತ್ತು ಇತರೆ ವೈದ್ಯರ ಬಳಿ ವಿಚಾರಿಸಿದರು.
ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು, ಗುಣಮಟ್ಟದ ಆಹಾರ ಪೂರೈಕೆ, ಆಸ್ಪತ್ರೆಯ ಕೊಠಡಿಗಳನ್ನು ಹಾಗೂ ಹೊರ ಆವರಣದ ಸ್ವತ್ಛತೆ ಕುರಿತು ವೈಯಕ್ತಿಕ ಗಮನ ಹರಿಸುವಂತೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ, ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳ ಕುರಿತು ಅರಿವು ಮೂಡಿಸಿ ಅವರಿಗೆ ಪ್ರಯೋಜನ ಸಿಗುವಂತೆ ಕ್ರಮ ವಹಿಸುವಂತೆ ತಿಳಿಸಿದರು.
ಆಸ್ಪತ್ರೆ ಭೇಟಿ ಮುಗಿದ ನಂತರ ನಗರ ಪ್ರದಕ್ಷಿಣೆ ಸಮಯದಲ್ಲಿ ಮೋತಿ ವೀರಪ್ಪ ಕಾಲೇಜಿನ ಮುಂಭಾಗ ಕೆಲ ವಿದ್ಯಾರ್ಥಿಗಳು ಮಾಸ್ಕ್ ಹಾಕದೇ ಇರುವುದನ್ನು ಗಮನಿಸಿದರು. ಅವರಿಗೆ ಬುದ್ದಿ ಹೇಳಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು.