ಪಾಲಿಕೆ ಚುನಾವಣೆಯಲ್ಲಿ ಛಲವಾದಿ ಸಮಾಜಕ್ಕೆ ಟಿಕೆಟ್‌ಗೆ ಆಗ್ರಹ.

Team Udayavani, Oct 29, 2019, 11:12 AM IST

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ 6 ವಾರ್ಡ್‌ಗಳಲ್ಲಿ ಕನಿಷ್ಟ ಪಕ್ಷ ಓರ್ವ ಪುರುಷ, ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎಂದು ಜಿಲ್ಲಾ ಛಲವಾದಿ ಮಹಾಸಭಾ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಬಿಎಸ್ಪಿ ಮುಖಂಡರಿಗೆ ಮನವಿ ಮಾಡಿದೆ.

ಪರಿಶಿಷ್ಟ ಜಾತಿಯಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಛಲವಾದಿ ಸಮಾಜಕ್ಕೆ ನಗರಸಭೆ, ಈಗಿನ ನಗರಪಾಲಿಕೆಯಲ್ಲಿ ಯಾವುದೇ ಪಕ್ಷಪರಿಗಣಿಸಿಯೇ ಇಲ್ಲ. ಒಬ್ಬರಿಗೂ ಟಿಕೆಟ್‌ ನೀಡದೇ ಕಡೆಗಣಿಸಿರುವುದು ಅತ್ಯಂತ ನೋವಿನ ವಿಚಾರ. ಇಂತದ್ದೇ ಪಕ್ಷ ಅಂತ ಕೇಳುತ್ತಿಲ್ಲ,. ನಾಲ್ಕು ಪಕ್ಷಗಳ ಮುಖಂಡರು ಕನಿಷ್ಟ ಪಕ್ಷ ಓರ್ವ ಪುರುಷ, ಮಹಿಳಾ ಅಭ್ಯರ್ಥಿಗೆ ಟಿಕೆಟ್‌ ನೀಡುವ ಮೂಲಕ ಛಲವಾದಿ ಸಮಾಜಕ್ಕೆ ಗೌರವ ನೀಡಬೇಕು ಎಂದು ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಸ್‌. ಶೇಖರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಛಲವಾದಿ ಸಮಾಜದವರು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಎಲ್ಲಾ ಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರು, ಮುಖಂಡರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 40 ವರ್ಷದಲ್ಲಿ ಯಾವುದೇ ಪಕ್ಷದಿಂದ ಒಬ್ಬೇ ಒಬ್ಬರಿಗೆ ಟಿಕೆಟ್‌ ನೀಡಿಲ್ಲ. ಈಗ ನಡೆಯುತ್ತಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಎಸ್ಪಿ ಒಳಗೊಂಡಂತೆ ನಾಲ್ಕು ಪಕ್ಷಗಳಲ್ಲಿ ಮಹಿಳೆ ಒಳಗೊಂಡಂತೆ ಇಬ್ಬರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ಎಂ.ಸಿ. ಓಂಕಾರಪ್ಪ ಮಾತನಾಡಿ, ದಾವಣಗೆರೆಯಲ್ಲಿ ಅತಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಛಲವಾದಿ ಸಮಾಜಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಕಡೆಗಣನೆ ಮಾಡುತ್ತಲೇ ಬರುತ್ತಿವೆ. ಅದು ಯಾವ ಕಾರಣಕ್ಕೋ ಗೊತ್ತಾಗುತ್ತಿಲ್ಲ, ಇಲ್ಲಿಯವರೆಗೂ ಸಹಿಸಿಕೊಂಡು ಬರಲಾಗಿದೆ. ಇನ್ನು ಮುಂದೆ ಸಹಿಸಿಕೊಂಡು ಸುಮ್ಮನಿರಲು ಆಗುವುದಿಲ್ಲ. ನಗರಪಾಲಿಕೆ ಚುನಾವಣೆಯಲ್ಲಿ ಛಲವಾದಿ ಸಮಾಜಕ್ಕೆ ಸೂಕ್ತ ಸ್ಥಾನ ನೀಡಲೇಬೇಕು. ಇಲ್ಲದೇ ಹೋದಲ್ಲಿ ಮುಖಂಡರೊಂದಿಗೆ ಚರ್ಚಿಸಿ, ರಾಜಕೀಯ ನಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಎಲ್ಲಾ ಪಕ್ಷದೊಂದಿಗೆ ಅತ್ಯಂತ ಆತ್ಮೀಯತೆ, ಒಡನಾಟ ಹೊಂದಿರುವ ಛಲವಾದಿ ಸಮಾಜ ಸದಾ ಶಾಂತಿಯನ್ನು ಬಯಸುವ ಸಮಾಜ. ಅಂತಹ ಸಮಾಜಕ್ಕೆ ಈವರೆಗೆ ದೊರೆಯದ ಟಿಕೆಟ್‌ ಕೇಳಲಾಗುತ್ತಿದೆ. ಟಿಕೆಟ್‌ ಕೊಡಲಿಲ್ಲ ಎಂದು ಪ್ರತಿಭಟನೆ, ಮತದಾನ ಬಹಿಷ್ಕಾರ ಯಾವುದೂ ಮಾಡುವುದಿಲ್ಲ. ಇಂತದ್ದೇ ಪಕ್ಷ ಎಂಬುದೇನು ಇಲ್ಲ. ಒಟ್ಟಾರೆಯಾಗಿ ಛಲವಾದಿ ಸಮಾಜದ ಒಬ್ಬ ಮಹಿಳೆ, ಪುರುಷನಿಗೆ ಟಿಕೆಟ್‌ ನೀಡಬೇಕು ಎಂಬುದು ನಮ್ಮ ಸಮಾಜದ ಮನವಿ ಎಂದು ತಿಳಿಸಿದರು.

ಛಲವಾದಿ ಮಹಾಸಭಾದ ಗೌರವ ಅಧ್ಯಕ್ಷ ವಸಂತ್‌ಕುಮಾರ್‌, ಮಧು ಛಲವಾದಿ, ಎಸ್‌. ನೇತ್ರಾವತಿ, ರುದ್ರಮ್ಮ, ಪ್ರಶಾಂತ್‌, ಹನುಮಂತಪ್ಪ ಐಗೂರು ಇತರರು ಸುದ್ದಿಗೋಷ್ಠಿಯಲ್ಲಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ