ಗುಳೆ ತಡೆಗೆ ಉದ್ಯೋಗ ಖಾತ್ರಿ
Team Udayavani, Mar 8, 2021, 6:58 PM IST
ಜಗಳೂರು: ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರ ದಾರಿ ದೀಪವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ವಿಜಯ್ ಮಹಾಂತೇಶ್ ದಾನಮ್ಮನವರ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ದಿದ್ದಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿದ್ದಿಗಿ ಗ್ರಾಮದ ಗೋಕಟ್ಟೆಯಲ್ಲಿ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ವೀಕ್ಷಿಸಿ ಕೂಲಿಕಾರರ ಸಮಸ್ಯೆಯನ್ನು ಆಲಿಸಿ ಮಾತನಾಡಿದ ಅವರು, ಗುಳೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಸರಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸದುಪಯೋಗವನ್ನು ಪ್ರತಿಯೋಬ್ಬರು ಪಡೆದುಕೊಳ್ಳಬೇಕು. ಕೆರೆ, ಗೋಕಟ್ಟೆ, ಚಕ್ ಡ್ಯಾಂಗಳಲ್ಲಿ ಹೂಳೆತ್ತುವುದರಿಂದ ಕೂಲಿಕಾರರಿಗೆ ಕೆಲಸ ದೊರೆಯುವುದರ ಜೊತೆಗೆ ಅಂತರ್ಜಲ ಹೆಚ್ಚಳವಾಗುತ್ತದೆ ಎಂದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಪ್ರತಿಯೋಬ್ಬರು ಕೆಲಸವನ್ನು ಕೇಳಿ ಪಡೆಯಿರಿ. ಯಾರೂ ಮನೆಯಲ್ಲಿ ಸುಮ್ಮನೇ ಕೂರುವುದು ಬೇಡ. ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳು ಸಮರ್ಪಕವಾಗಿ ಬಳಕೆಯಾದಾಗ ಯಶಸ್ವಿಯಾಗುತ್ತವೆ ಎಂದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ನೀರು , ನೆರಳಿನ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಮಗಾರಿ ಸ್ಥಳದಲ್ಲಿ 300 ಕ್ಕೂ ಅಧಿಕ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ತಾಪಂ ಇಓ ಮಲ್ಲಾನಾಯ್ಕ, ಎಡಿ ಶಿವಕುಮಾರ್ , ಪಿಡಿಒ ಶ್ರೀನಿವಾಸ್ ಸೇರಿದಂತೆ ಮತ್ತಿತರರು ಹಾಜರಿದ್ದರು.