ಮಾಜಿ ಸಚಿವ ಎಸ್ಸೆಸ್ಸೆಂ ನಡೆ ಇನ್ನೂ ನಿಗೂಢ

Team Udayavani, Mar 31, 2019, 5:07 PM IST

ದಾವಣಗೆರೆ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ದಾವಣಗೆರೆ ಕ್ಷೇತ್ರದಿಂದ ಕಣಕ್ಕಿಳಿಯುವ ಕಾಂಗ್ರೆಸ್‌ ಅಭ್ಯರ್ಥಿ
ಯಾರೆಂದು ಶನಿವಾರವೂ ಸ್ಪಷ್ಟವಾಗಿಲ್ಲ. ಹಾಗಾಗಿ ಕೈ ಪಾಳಯದಲ್ಲಿ ಬೇಸಿಗೆಯ ಸೂರ್ಯನ ತಾಪಕ್ಕಿಂತ ಈ ವಿಷಯ ಅಧಿಕ ತಲೆಬಿಸಿಯಾಗಿದೆ.

ಚುನಾವಣಾ ವೇಳಾಪಟ್ಟಿ ಪ್ರಕಟಣೆಗೂ ಮೊದಲು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾಜುನ್‌ ಅಭ್ಯರ್ಥಿ ಎಂದೇ ಬಿಂಬಿಸುತ್ತಿದ್ದ ಕಾಂಗ್ರೆಸ್‌ನಲ್ಲೀಗ ದಿನದಿಂದ ದಿನಕ್ಕೆ ನಿಜಕ್ಕೂ ಗೊಂದಲ ಹೆಚ್ಚುತ್ತಲೇ ಇದೆ. ಈ ಮಧ್ಯೆ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತುಗಳು ಅಭ್ಯರ್ಥಿ ಯಾರಾಗುವರೆಂಬ ಪ್ರಶ್ನೆ ಹುಟ್ಟು ಹಾಕಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಶಾಮನೂರು ಕುಟುಂಬದವರೇ ಸ್ಪರ್ಧಿಸಬೇಕೆಂಬ ಒತ್ತಾಸೆಯಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್‌ ಘೋಷಿಸಲಾಗಿತ್ತು. ಈ ಹಿಂದೆ ವಯಸ್ಸಾಗಿದೆ ಎಂಬ ಕಾರಣದಿಂದ ತಮಗೆ ಸಚಿವಗಿರಿ ನೀಡದ ವರಿಷ್ಠರು ಈಗ ಲೋಕಸಭಾ ಚುನಾವಣೆ ಟಿಕೆಟ್‌ ನೀಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸುವ ಮೂಲಕ ಶಾಮನೂರು ಶಿವಶಂಕರಪ್ಪನವರು ಅಭ್ಯರ್ಥಿಯಾಗಲು ನಿರಾಕರಿಸಿದ್ದರಿಂದ ಪರ್ಯಾಯ ಹುರಿಯಾಳು ಆಯ್ಕೆ ವಿಷಯದಲ್ಲಿ ಪ್ರಸ್ತುತ ಹೈಕಮಾಂಡ್‌ಗೂ ಒಂದು ರೀತಿ ಸಮಸ್ಯೆ ಎದುರಾಗಿದೆ.

ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಯನ್ನಾಗಿ ಶಾಮನೂರು ಶಿವಶಂಕರಪ್ಪನವರ ಪುತ್ರ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನರನ್ನೇ ಕಣಕ್ಕಿಳಿಸಲು ಪಕ್ಷದ ಹೈಕಮಾಂಡ್‌ ಪ್ರಯತ್ನಿಸುತ್ತಿದ್ದರೂ ಅದು ಸದ್ಯ ಫಲಪ್ರದವಾದಂತೆ ಕಾಣುತ್ತಿಲ್ಲ.

ಪರ್ಯಾಯ ಅಭ್ಯರ್ಥಿ ಹುಡುಕಾಟದ ಯತ್ನದಲ್ಲಿ ಜಿಲ್ಲಾ ಪಂಚಾಯತ್‌ ಪಕ್ಷೇತರ ಸದಸ್ಯ ತೇಜಸ್ವಿ ವಿ. ಪಟೇಲ್‌ (ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಸಹೋದರನ ಪುತ್ರ)ರನ್ನು ಬೆಂಗಳೂರಿಗೆ ಶುಕ್ರವಾರ ಕೆಪಿಸಿಸಿ ಅಧ್ಯಕ್ಷರು ಕರೆಯಿಸಿಕೊಂಡು ಮಾತನಾಡಿದ ಬೆನ್ನಲ್ಲೇ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪರೊಂದಿಗೆ ಬೆಂಗಳೂರಿಗೆ ತೆರಳಿ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿದ್ದಾರೆ.

ಮುಖಂಡರೊಂದಿಗೆ ಮಾತುಕತೆ ನಂತರ ಬಹುಶಃ ಈ ಬಾರಿಯೂ ಮಲ್ಲಿಕಾರ್ಜುನ್‌ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವರಿಷ್ಠರು ಅವರ ಮನವೊಲಿಸಿರಬಹುದು. ಹಾಗಾಗಿ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂಬ ಸುದ್ದಿಯೂ ಹರಡಿತ್ತು.

ಆದರೆ, ಶನಿವಾರ ಮಾಜಿ ಸಚಿವರು ತಮ್ಮ ನಿವಾಸದಲ್ಲಿ ಮಾಧ್ಯಮದವರ ಬಳಿ ಹೇಳಿದ ಮಾತು ಅಭ್ಯರ್ಥಿ ಸಂಬಂಧ ಮತ್ತಷ್ಟು ನಿಗೂಢತೆಗೆ ಎಡೆ ಮಾಡಿಕೊಟ್ಟಿತು. ನಾನು, ಪಕ್ಷದ ವರಿಷ್ಠರೊಂದಿಗೆ ಕೆಲವು ಸಾಮಾನ್ಯ ವಿಷಯ ಚರ್ಚಿಸಿದ್ದೇನೆ. ದಾವಣಗೆರೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಇನ್ನೂ ಬೇಕಾದಷ್ಟು ಸಮಯವಿದೆ. ಸೋಮವಾರ ಎಲ್ಲವೂ ಇತ್ಯರ್ಥ ಆಗಲಿದೆ ಎಂದು ಮಲ್ಲಿಕಾರ್ಜುನ್‌ ಹೇಳಿದರೆ ಹೊರತು ಅಭ್ಯರ್ಥಿ ಯಾರಾಗುವರೆಂಬ ಗುಟ್ಟು ಬಿಟ್ಟು ಕೊಡಲಿಲ್ಲ.

ಅವರ ಪ್ರಕಾರ, ದಾವಣಗೆರೆ ಸೇರಿ ಉತ್ತರ ಕರ್ನಾಟಕದ 2-3 ಕ್ಷೇತ್ರಗಳ ಅಭ್ಯರ್ಥಿಗಳ ಬದಲಾವಣೆ ಕುರಿತು ವರಿಷ್ಠರು ಸಭೆ ನಡೆಸಲಿದ್ದಾರಂತೆ. ಸಮಸ್ಯೆ, ಸಮುದಾಯದ ಪ್ರಾತಿನಿಧ್ಯ ಎಲ್ಲವನ್ನೂ ಚರ್ಚಿಸಿ, ನಂತರ ಅಭ್ಯರ್ಥಿ ಆಯ್ಕೆ ನಡೆಯಲಿದೆಯಂತೆ. ಈ ಮೊದಲು ಹೈಕಮಾಂಡ್‌ ದಾವಣಗೆರೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದರಿಂದ ಈಗ ಯಾವ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಇರಬಹುದು. ಮೇಲಾಗಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸ್ಪರ್ಧಿಸಿದರೆ ಸರಿ. ಇಲ್ಲದಿದ್ದಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಪೈಪೋಟಿ ನೀಡಬಲ್ಲ ಬೇರ್ಯಾವ ಸಮುದಾಯದ ಸಮರ್ಥ ಅಭ್ಯರ್ಥಿ ಕಣಕ್ಕಿಸಬೇಕೆಂದು ವರಿಷ್ಠರು ಚಿಂತಿಸಬಹುದು.

ಭಾನುವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ರಾಜ್ಯಕ್ಕೆ ಆಗಮಿಸಲಿದ್ದು, ರಾಜ್ಯ ವರಿಷ್ಠರು ಅವರೊಂದಿಗೂ ಚರ್ಚೆ ನಡೆಸುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆ ಆರಂಭವಾಗಿ ಮೂರು ದಿನ ಕಳೆದರೂ ಇನ್ನೂ ಅಭ್ಯರ್ಥಿ ಆಯ್ಕೆ ಗೊಂದಲದಲ್ಲೇ ಇರುವ ಕಾಂಗ್ರೆಸ್‌ ಯಾರನ್ನು ಕಣಕ್ಕಿಳಿಸಲಿದೆಯೋ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ.

ಇನ್ನು ಟಿಕೆಟ್‌ ನಿರಾಕರಿಸಿರುವ ಶಾಸಕ ಶಾಮನೂರು ಶಿವಶಂಕರಪ್ಪನವರು, ಕಾಂಗ್ರೆಸ್‌ ಅಭ್ಯರ್ಥಿ ಯಾರಾದರೇನು? ನಾವು ಅವರ ಪರ ಕೆಲಸ ಮಾಡಲೇಬೇಕು ಎಂದು ಹೇಳುತ್ತಾರೆ. ಎಸ್‌. ಎಸ್‌. ಮಲ್ಲಿಕಾರ್ಜುನ್‌ ಅಭ್ಯರ್ಥಿಯಾಗುತ್ತಾರಾ? ಎಂಬ ಪ್ರಶ್ನೆಗೆ ಅವರನ್ನೇ ಕೇಳಿ ಎನ್ನುತ್ತಾರೆ. ಟಿಕೆಟ್‌ ವಿಚಾರದಲ್ಲಿ ಅವರು ತೀರಾ ತಲೆಕೆಡಿಸಿಕೊಂಡಂತೆ ಕಾಣದಿದ್ದರೂ ಶಾಮನೂರು ಶಿವಶಂಕರಪ್ಪನವರು ಕೈ ಪಾಳೆಯ ಜಿಲ್ಲಾ ಹೈಕಮಾಂಡ್‌ ಆಗಿರುವುದರಿಂದ ಅವರ ಅಭಿಪ್ರಾಯವನ್ನು ಪಕ್ಷದ ವರಿಷ್ಠರು ಕಡೆಗಣಿಸುವಂತಿಲ್ಲ. ಆದರೆ, ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಕಾರ್ಯಕರ್ತರು, ಮುಖಂಡರಿಗೆ ಇನ್ನೂ ಸ್ಪಷ್ಟತೆ ಸಿಗದೆ ಎಲ್ಲವೂ ಗೊಂದಲದ ಗೊಂಚಲಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೂ 5 ದಿನ ಕಾಲಾವಕಾಶ ಇರುವುದರಿಂದ ಏನೇನು ಬೆಳವಣಿಗೆ ನಡೆಯಲಿದೆಯೋ ಕಾದು ನೋಡಬೇಕಿದೆ.

„ಎನ್‌.ಆರ್‌. ನಟರಾಜ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊನ್ನಾಳಿ: ಪಟ್ಟಣದಲ್ಲಿ ಹಲಸಿನ ಹಣ್ಣಿನ ವ್ಯಾಪಾರ ಜೋರಾಗಿ ನಡೆಯುತ್ತಿದ್ದು ಬುಧವಾರ ಪಟ್ಟಣದ ವಾರದ ಸಂತೆಯಾದ ಪ್ರಯುಕ್ತ ಹಲಸಿನ ಹಣ್ಣಿನ ವ್ಯಾಪಾರ ಭರ್ಜರಿಯಾಗಿ...

  • ರಾ.ರವಿಬಾಬು ದಾವಣಗೆರೆ: ಮಂಗಳವಾರ ಗುರುಪೂರ್ಣಿಮೆಯಂದು ಸಂಭವಿಸಿದ ಪಾರ್ಶ್ವ ಚಂದ್ರ ಗ್ರಹಣದ ನೇರ ಪರಿಣಾಮ ಸಿಜೇರಿಯಿನ್‌ ಶಸ್ತ್ರಚಿಕಿತ್ಸೆ ಮೇಲೆ ಉಂಟಾಗಿದೆ!. ಅರೆ...

  • ಹೊನ್ನಾಳಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯುಕ್ತಾಶ್ರಯದಲ್ಲಿ ಪ.ಪಂ ಸಭಾಂಗಣದಲ್ಲಿ ಮಂಗಳವಾರ ಶಿವಶರಣ ಹಡಪದ ಅಪ್ಪಣ್ಣ ಜಯಂತ್ಯುತ್ಸವ...

  • ದಾವಣಗೆರೆ: ಜಯದೇವ ವೃತ್ತ, ಜಗಳೂರು ಬಸ್‌ ನಿಲ್ದಾಣ, ಹಳೆ ಬಸ್‌ ನಿಲ್ದಾಣ...ದಲ್ಲಿ ಪೊಲೀಸರು ಮಂಗಳವಾರ 42 ಆಪೆ ಆಟೋ ವಶಕ್ಕೆ ತೆಗೆದುಕೊಂಡಿದ್ದಾರೆ. ನಗರ ಪೊಲೀಸ್‌...

  • ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ಸಮರ್ಪಕವಾಗಿ ಬರ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷ(ಸಿಪಿಐ) ಮುಖಂಡರು, ಕಾರ್ಯಕರ್ತರು...

ಹೊಸ ಸೇರ್ಪಡೆ