ದೇವರು-ಧರ್ಮದ ಹೆಸರಿನಲ್ಲಿ ವಂಚನೆ: ಶ್ರೀ

Team Udayavani, Aug 31, 2018, 4:58 PM IST

ಹರಪನಹಳ್ಳಿ: ಅನೇಕ ಸ್ವಾಮಿಗಳು ಲಾಂಛನಧಾರಿಗಳಾಗಿ, ದೇವರು, ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಸೊಳ್ಳೆಗೆ ಹೆದರಿ ಸೊಳ್ಳೆ ಪರದೆ ಒಳಗೆ ಮಲಗುವ ಸ್ವಾಮಿಗಳಿಗೆ ಶಾಪ ಕೊಡುವ ಅಥವಾ ವರ ಕೊಡುವ ಶಕ್ತಿಗಳು ಇರುವುದಿಲ್ಲ. ಅಂಥವರ ಮೋಸಕ್ಕೆ ಒಳಗಾಗದಂತೆ ಎಚ್ಚರಿಕೆ ವಹಿಸಬೇಕು. ದುಶ್ಚಟಗಳಿಂದ ಮುಕ್ತರಾದರೆ ನಾವೂ ಶರಣರಂತೆ ಲೋಕದೃಷ್ಟಿಯನ್ನು ಗಳಿಸಿಕೊಳ್ಳಲು ಸಾಧ್ಯ ಎಂದು ಸಾಣೇಹಳ್ಳಿ ಮಠದ ಪೀಠಾಧ್ಯಕ್ಷ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ನಾಗರಕೊಂಡ ಗ್ರಾಮದಲ್ಲಿ ಗುರುವಾರ ಸಾಣೇಹಳ್ಳಿ ಶಿವಾನುಭವ ಸಮಿತಿ ಹಮ್ಮಿಕೊಂಡಿದ್ದ ವಚನಕಾರರ ತಾತ್ವಿಕ ಚಿಂತನಾಗೋಷ್ಠಿಯ ಶ್ರಾವಣ ಸಂಜೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀವರ್ಚನ ನೀಡಿದರು. 

ಶರಣರ ಲೋಕದೃಷ್ಟಿ ಅತ್ಯಂತ ವಿಶಾಲವಾದುದು. ಅವರು ಈ ಲೋಕದಲ್ಲಿಯೇ ಸ್ವರ್ಗ-ನರಕಗಳನ್ನು ಕಂಡವರು. ಸತ್ತ ಮೇಲೆ ಕಾಣುವವರಲ್ಲ. “ಎಲವೋ ಎಂದರೆ ನರಕ, ಅಯ್ನಾ ಎಂದರೆ ಸ್ವರ್ಗ’ ಎಂದವರು. ಶರಣರ ದೃಷ್ಟಿಯಲ್ಲಿ ಈ ಜಗತ್ತು ಸತ್ಯ; ಮಿಥ್ಯವಲ್ಲ. “ಕೈಲಾಸವೆಂಬುದೊಂದು ಹಾಳು ಬೆಟ್ಟ..’ ಎನ್ನುವ ಮೂಲಕ “ಇಲ್ಲಿರುವುದೇ ನಮ್ಮನೆ ಅಲ್ಲಿರುವುದು ಸುಮ್ಮನೆ’ ಎಂದರು. ಶರಣರದು ಅತ್ಯಂತ ವಾಸ್ತವ ಮತ್ತು ವೈಚಾರಿಕ ದೃಷ್ಟಿಕೋನ. ಶರಣರು ದೇಹವನ್ನೇ ದೇವಾಲಯವಾಗಿಸಿಕೊಂಡು ದೇಹಕ್ಕೆ ಅತ್ಯಂತ ಮಹತ್ವ ಕೊಟ್ಟರು ಎಂದರು.

ವ್ಯಕ್ತಿಗೆ ದೈಹಿಕ ವಯಸ್ಸು ಮುಖ್ಯವಲ್ಲ. ಮಾನಸಿಕ ಪ್ರಬುದ್ಧತೆ ಬಹಳ ಮುಖ್ಯ. ಆ ಮಾನಸಿಕ ಪ್ರಬುದ್ಧತೆ ಸಮಾಜಸೇವೆಯಲ್ಲಿ ಪ್ರಕಟಗೊಳ್ಳಬೇಕು. ಕಾಮ, ಕ್ರೋಧ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳಿಂದಾಗಿ ನಾವು ನಮ್ಮ ತನವನ್ನು ಕಳೆದುಕೊಂಡು ಮೃಗದಂತಾಗಿದ್ದೇವೆ. ಹಣದ ದಾಹ ಅತಿಯಾಗಿ ಸಂಪದ್ಭರಿತ ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಇಂದು ತಂತ್ರಜ್ಞಾನ ಹೆಚ್ಚಾಗಿ ಜೀವನಕ್ಕೆ ಬೇಕಾದ ಆಧುನಿಕ ಸೌಲಭ್ಯಗಳು ಇದ್ದರೂ ನೆಮ್ಮದಿಯಿಲ್ಲವಾಗಿದೆ. ಮನೆಯಲ್ಲಿನ ಅಣ್ಣ, ತಮ್ಮ, ಅಕ್ಕ, ಮಾವ, ತಂದೆ, ತಾಯಿ ಮುಂತಾದ ಮಾನವೀಯ ಬಂಧುತ್ವ ಮರೆಯಾಗಿದೆ. ಇಂದು ನಮ್ಮ ದೃಷ್ಟಿಕೋನ ಸ್ವಾರ್ಥ, ಹಿಂಸೆ, ದುರಾಸೆಯಿಂದಾಗಿ ಸಂಕುಚಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶರಣರ ಲೋಕದೃಷ್ಟಿ ವಿಷಯ ಕುರಿತು ಉಪನ್ಯಾಸ ನೀಡಿದ ತರೀಕೆರೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಸಬಿತಾ ಬನ್ನಾಡಿ ಮಾತನಾಡಿ, ವಚನಗಳು ನನ್ನನ್ನು ಪ್ರಭಾವಿಸಿರುವುದಷ್ಟೇ ಅಲ್ಲ, ಹೊಸ ದೃಷ್ಟಿಯನ್ನು
ನೀಡಿವೆ. ಅಹಂಕಾರ ಎನ್ನುವ ಕತ್ತಲು ಓಡಿಸಲು ಬೆಳಕಿನ ದೀವಿಗೆಯಾಗಿ ವಚನಗಳಿವೆ. ವಚನಗಳು ಜಗತ್ತಿನ ಕಣ್ಣುಗಳು. ಈ ಕಣ್ಣುಗಳ ಮೇಲೆ ಕಾಲಕಾಲಕ್ಕೆ ಮುಸುಕು ಮುಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಮುಸುಕು ತೆಗೆಯುವ ಕೆಲಸ ಶ್ರಾವಣ ಸಂಜೆಯಂತಹ ಚಿಂತನಾಗೋಷ್ಠಿಗಳ ಮೂಲಕ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿ ಎಂದರು.

ವಿಕೃತಿಗಳು ಜನರ ನಡುವೆ ಸುಲಭವಾಗಿ ಸೇರಲು ಸಾಮಾಜಿಕ ಜಾಲತಾಣಗಳು ಕಾರಣವಾಗಿವೆ. ಭೋಗಗಳಲ್ಲಿ ಮುಳುಗಿದ ನಮಗೆ ನಮ್ಮ ಮಕ್ಕಳ ಮದುವೆಯೂ ಮಾರಾಟದ ಸರಕಾಗಿರುವುದು ವಿಪರ್ಯಾಸದ ಸಂಗತಿ.
ನಡೆ-ನುಡಿಯ ಶುದ್ಧತೆಯಿಂದ ನಾವು ನೆಮ್ಮದಿಯ ಬದುಕು ಕಾಣಲು ಸಾಧ್ಯ. ಶರಣರು ಜಾತಿ, ಮತಗಳನ್ನು ಎಣಿಸದೆ ಎಲ್ಲರನ್ನೂ “ಅಯ್ಯ, ಅಣ್ಣ, ಅಕ್ಕ’ ಎನ್ನುವ ಮೂಲಕ “ಬಾ ಬಂಧು’ ಎಂದು ಅಪ್ಪಿಕೊಂಡರು. ಆದರೆ ಇಂದು “ಬಡಿ, ಹೊಡಿ’
ಎನ್ನುವ ಶಬ್ದಗಳು ವಿಜೃಂಭಿಸುತ್ತಿವೆ. ಜಗತ್ತಿನಲ್ಲಿಯೇ ಅತ್ಯಂತ ತಳಸಮುದಾಯದ, ಸಾಮಾನ್ಯರಲ್ಲಿ ಸಾಮಾನ್ಯ ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದ ಚಳುವಳಿ ಶರಣ ಚಳುವಳಿ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಗ್ರಾಮದಲ್ಲಿ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು. ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷ ಮಂಜುನಾಥ ಗುಂಡಗತ್ತಿ, ಜಿ. ನಂಜನಗೌಡ, ಸಾಸ್ವಿಹಳ್ಳಿ ಚನ್ನಬಸವನಗೌಡ, ಸಿದ್ದೇಶಪ್ಪ, ಪಿಎಸ್‌ಐ ರಮೇಶ್‌, ಬಣಕಾರ್‌ ಕೊಟ್ರೇಶ್‌, ಗೋವಿಂದಶೆಟ್ರಾ, ಶಾಂತಕುಮಾರ, ಎಂ.ಟಿ. ಕೊಟ್ರೇಶ್‌, ಜಿ.ಕೊಟ್ರೇಶ್‌, ಎಚ್‌.ಎಸ್‌.ದ್ಯಾಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಗಳೂರು: ಶುಕ್ರವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಹಿರೇಮಲ್ಲನಹೊಳೆ ಸಮೀಪವಿರುವ ಚಿನ್ನಗರಿ ನದಿ ಸುಮಾರು ಅರ್ಧ ಟಿಎಂಸಿ ನೀರು ಸಂಗ್ರಹಗೊಂಡಿದೆ. ತಾಲೂಕಿನ...

  • ದಾವಣಗೆರೆ: ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯ ತಲುಪಿಸಿ, ನಿಗದಿತ ಸಮಯದೊಳಗೆ ಪ್ರಗತಿ...

  • ದಾವಣಗೆರೆ: ದೇಶ ಸೇವೆ ದೇವರು, ಈಶ ಸೇವೆ ಮಾಡಿದಂತೆ. ಅಂತಹ ಸೇವೆ ಸಲ್ಲಿಸುವ ಯೋಧರ ಸೇವೆ ಮರೆಯುವಂತಿಲ್ಲ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ...

  • ದಾವಣಗೆರೆ: ಕಳೆದ ಹಲವಾರು ವರ್ಷದಿಂದ ಕೇವಲ ಟ್ರಂಕ್‌ ವ್ಯವಹಾರ.. ಆಧಾರದಲ್ಲಿ ನಡೆದಿದ್ದ ಖಾಸಗಿ ಹಾಸ್ಟೆಲ್‌ಗ‌ಳ ವಿರುದ್ಧ ತನಿಖೆಗೆ ಜಿಲ್ಲಾ ಪಂಚಾಯತಿ ಸಾಮಾನ್ಯ...

  • ಜಗಳೂರು: ಬೆಳಗ್ಗೆಯಿಂದ ತನಿಖಾ ತಂಡದವರು ಬರುತ್ತಾರೆ ಎಂದು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾದು ಕಾದು, ಸಂಜೆ ಇನ್ನೇನು ಮನೆಗೆ ಹೋಗೋಣ...

ಹೊಸ ಸೇರ್ಪಡೆ