ಔರಾದಕರ್‌ ವರದಿ ಜಾರಿಗೆ ಸರ್ಕಾರ ಬದ್ಧ

Team Udayavani, Mar 7, 2019, 7:32 AM IST

ದಾವಣಗೆರೆ: ಎಡಿಜಿಪಿ ರಾಘವೇಂದ್ರ ಔರಾದಕರ್‌ ನೇತೃತ್ವದ ಸಮಿತಿ ನೀಡಿರುವ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ. ಬುಧವಾರ, ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣದಲ್ಲಿ ಪೂರ್ವವಲಯ ವಿಭಾಗದ ಇಲಾಖಾ ಪ್ರಗತಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಾದಕರ್‌ ವರದಿ ಪ್ರಕಾರ ರಾಜ್ಯದಲ್ಲಿ ಇತರೆ ಇಲಾಖೆಗಳ ಸಿಬ್ಬಂದಿಗೆ ಹೋಲಿಸಿದರೆ, ಪೊಲೀಸ್‌ ಇಲಾಖೆ ಕೆಳಹಂತದ ನೌಕರರ ವೇತನ ಕಡಿಮೆ ಇದೆ. ಬೇರೆ ಇಲಾಖೆಗಿಂತಲೂ ಪೊಲೀಸ್‌ ಇಲಾಖೆಯವರು ಹೆಚ್ಚು ಕಷ್ಟಪಟ್ಟು ಹಾಗೂ ವೈಯಕ್ತಿಕ ಜೀವನ ತೊರೆದು ಕೆಲಸ ಮಾಡುತ್ತಾರೆ. ಹಾಗಾಗಿ ಮುಖ್ಯಮಂತ್ರಿಯವರಿಗೆ ಈ ವಿಷಯ ಮನವರಿಕೆ ಮಾಡಿಕೊಟ್ಟು, ವರದಿ ಜಾರಿಗೊಳಿಸಲಾಗುವುದು. ಅದಕ್ಕೂ ಮುನ್ನ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದರು.

ಗೃಹ ಸಚಿವನಾದ ನಂತರ ಎಲ್ಲಾ ವಲಯಗಳಲ್ಲಿ ಸಭೆ ನಡೆಸಿ, ಇಲಾಖೆಯ ಪ್ರಗತಿ, ಸಮಸ್ಯೆ ಆಲಿಸುತ್ತಿದ್ದೇನೆ. ಈಗಾಗಲೇ ಮಂಗಳೂರು, ಮೈಸೂರು, ಹುಬ್ಬಳ್ಳಿ ನಂತರ ದಾವಣಗೆರೆಯಲ್ಲಿ ಪ್ರಗತಿ ಪರಿಶೀಲಿಸಿದ್ದೇನೆ. ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಎಲ್ಲಾ ವಲಯದಲ್ಲೂ ಸಭೆ ನಡೆಸಿ, ಪರಿಶೀಲನೆ ನಡೆಸುವೆ. ಇಲಾಖಾ ಕಾರ್ಯವೈಖರಿ ಸುಧಾರಣೆ ಹಾಗೂ ಸಮಸ್ಯೆ ನಿವಾರಣೆ, ಸಿಬ್ಬಂದಿ ಬೇಡಿಕೆ ಈಡೇರಿಕೆ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಈ ಸಂದರ್ಭದಲ್ಲಿ ಸಲಹೆ-ಸೂಚನೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು. 

ಇಲಾಖೆ ಅಧಿಕಾರಿಗಳ ವರ್ಗಾವಣೆಗೆ ಈ ಹಿಂದಿದ್ದ 2 ವರ್ಷವನ್ನು 1 ವರ್ಷಕ್ಕೆ ಇಳಿಸಲಾಗಿತ್ತು. ಇದರಿಂದ ಕೆಲವೊಮ್ಮೆ ಪ್ರಕರಣದ ತನಿಖೆಗೆ ಸಮಸ್ಯೆ ಉಂಟಾಗುತ್ತಿತ್ತು. ಆ ವಿಷಯವೂ ಸೇರಿದಂತೆ ಬರಲಿರುವ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭದ್ರತೆ, ಶಾಂತಿಯುತ ಚುನಾವಣೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಎಲ್ಲೆಡೆ ಚರ್ಚಿಸಿದ್ದೇನೆ. ಜತೆಗೆ ಮಟ್ಕಾ, ಕ್ರಿಕೆಟ್‌ ಬೆಟ್ಟಿಂಗ್‌, ಮರಳು ಮಾμಯಾ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದುತಿಳಿಸಿದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ಪೊಲೀಸರು ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿ ಜಿಲ್ಲೆಯಲ್ಲೂ ಜನಸಂಪರ್ಕ ಸಭೆ ನಡೆಸಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.
 
ದಾವಣಗೆರೆಯಲ್ಲಿ ಕಮೀಷನರೇಟ್‌ ಆರಂಭಿಸುವ ಬಗ್ಗೆ ಬೇಡಿಕೆ ಇದೆ. ಆ ಬಗ್ಗೆ ಇನ್ನೂ ಆಲೋಚಿಸಿಲ್ಲ. ಹೊಸ ಠಾಣೆಗಳನ್ನು ಸ್ಥಾಪಿಸಿದರೆ ಸಾಲದು, ಜತೆಗೆ ಸಿಬ್ಬಂದಿ ಒದಗಿಸಬೇಕು. ಹಾಗಾಗಿ ಎಲ್ಲ ಸಮಸ್ಯೆಗಳನ್ನು ಅರಿತು ಕ್ರಮ ವಹಿಸುವೆ ಎಂದು ಅವರು ತಿಳಿಸಿದರು.

ಸೈಬರ್‌ ಕ್ರೈಮ್‌ ತಡೆ ಬರೀ ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಕೇಂದ್ರ ಸರ್ಕಾರವೂ ಸಹ ಕಠಿಣ ಕ್ರಮ ಕೈಗೊಳ್ಳಬೇಕಿದೆ. ವಾಟ್ಸ್‌ ಆ್ಯಪ್‌ ಸಂದೇಶದ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ಟ್ವಿಟರ್‌,ಫೇಸ್‌ಬುಕ್‌ ಇತರೆ ಸಾಮಾಜಿಕ ಮಾಧ್ಯಮ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೆ, ರಾಜ್ಯ ಸರ್ಕಾರ ಸೈಬರ್‌ ಕ್ರೈಮ್‌ ತಡೆಗೆ ಸಿಐಡಿಯಲ್ಲಿ ಪ್ರತ್ಯೇಕ ವಿಭಾಗ ತೆರೆದು, ಆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಇಲಾಖೆಯ ಸಮಗ್ರ ಸಮಸ್ಯೆ ಅರಿತು ಸಮರ್ಪಕ ಬದಲಾವಣೆ ತರಲು ಪ್ರಯತ್ನಿಸುವುದಾಗಿ ಎಂ.ಬಿ.ಪಾಟೀಲ್‌ ಹೇಳಿದರು. ಈ ಸಂದರ್ಭದಲ್ಲಿ ದಾವಣಗೆರೆ ಎಸ್ಪಿ ಆರ್‌. ಚೇತನ್‌ ಹಾಗೂ ಚಿತ್ರದುರ್ಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು ಇದ್ದರು.

ಬೇಳೂರು ಹೇಳಿಕೆ ಖಂಡನೀಯ 
ದಾವಣಗೆರೆ: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ಬಗ್ಗೆ ಸತ್ಯಾಸತ್ಯತೆ ತಿಳಿಯಬೇಕಿದೆ. ದೇಶದ ಪ್ರಧಾನಿಯಿಂದ ಹಿಡಿದು ಸಾಮಾನ್ಯ ವ್ಯಕ್ತಿಯ ಬಗ್ಗೆಯೂ ಆ ರೀತಿ ಮಾತನಾಡುವುದು ತಪ್ಪು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕುರಿತು ನೀಡಿದ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಬೇಳೂರು ಹಾಗೇನಾದರೂ ಹೇಳಿದ್ದಲ್ಲಿ ನಾನು ಖಂಡಿಸುವೆ. ತನಿಖೆ ನಡೆಸಿ, ಆ ಬಗ್ಗೆ ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ನನ್ನ ಅಸ್ಮಿತೆ. ನಾನು ಗೃಹ ಸಚಿವನಾಗಿರುವುದರಿಂದ ಸದ್ಯ ಆ ಬಗ್ಗೆ ಏನೂ ಮಾತನಾಡುವುದಿಲ್ಲ. ಆ ಬಗ್ಗೆ ಜಾಗತಿಕ ಲಿಂಗಾಯತ ಮಹಾಸಭಾದ ಜಾಮದಾರ್‌, ಇತರರು ನೋಡಿಕೊಳ್ಳಲಿದ್ದಾರೆ. ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿದ್ದನ್ನು ಕೇಂದ್ರ ತಿರಸ್ಕರಿಸಿದೆ. ನ್ಯಾಯಾಲಯದ ಮೆಟ್ಟಿಲೇರಲಿರುವ ಬಗ್ಗೆ ಅವರೇ ಮುಂದುವರಿಯಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪಾಟೀಲ್‌ ಉತ್ತರಿಸಿದರು.

ಶಾಮನೂರು ಶಿವಶಂಕರಪ್ಪನವರು ಹಿರಿಯರು, ನನಗೆ ತಂದೆ ಸಮಾನ. ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಅವರೊಂದಿಗೆ ಭಿನ್ನಾಭಿಪ್ರಾಯವಿದೆ. ವಾದ-ವಿವಾದ ಏನೇ ಇದ್ದರೂ ಇನ್ನು ನ್ಯಾಯಾಲಯದಲ್ಲಿ ಬಗೆಹರಿಯಲಿದೆ ಎಂದು ಅವರು, ನಾನು ಬಸವಣ್ಣನವರನ್ನು ಬುದ್ಧ, ಕ್ರಿಸ್ತ, ಪೈಗಂಬರ್‌ ಸ್ಥಾನದಲ್ಲಿ ನೋಡ ಬಯಸುತ್ತೇನೆ. ಬಸವಣ್ಣ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂಬುದು ತಮ್ಮ ಆಶಯ. ಮುಂದೆ ಲೋಕಸಭಾ ಚುನಾವಣೆ ಬರಲಿರುವ ಕಾರಣ ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಚನ್ನಗಿರಿ: ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರು, ಬಾಣಂತಿಯರು ಹಾಗೂ ಹಾಗೂ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ಪದಾರ್ಥ ನೀಡಲಾಗುತ್ತಿದೆ ಎಂದು ಆರೋಪಿಸಿ...

  • ದಾವಣಗೆರೆ: ಪಿಂಚಣಿದಾರರ ಸಮಸ್ಯೆ, ಕುಂದುಕೊರತೆ ನಿವಾರಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ. ಜಿಲ್ಲಾಡಳಿತ...

  • ಹೊನ್ನಾಳಿ: ಶಿಕ್ಷಣ ಇಲಾಖೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ತಾಪಂ ಉಪಾಧ್ಯಕ್ಷ ಎಸ್‌.ಪಿ. ರವಿಕುಮಾರ್‌ ಆರೋಪಿಸಿದರು. ಗುರುವಾರ...

  • ದಾವಣಗೆರೆ: ವೃತ್ತಿಗೆ ಜಾತಿ ಹಚ್ಚಿದ ಕಾರಣದಿಂದ ಇಂದು ಆ ವೃತ್ತಿಗಳೇ ಮರೆಯಾಗುವಂತಾಗಿದೆ ಎಂದು ಶ್ರೀ ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಾ ಮಠದ ಪಟ್ಟಾಧ್ಯಕ್ಷ...

  • ದಾವಣಗೆರೆ: ನಗರದ ಹೊರವಲಯದಲ್ಲಿರುವ ಗಾಜಿನಮನೆಯಲ್ಲಿ ತೋಟಗಾರಿಕೆ ಇಲಾಖೆ ಇಂದಿನಿಂದ ಆ. 27ರ ವರೆಗೆ ಐದು ದಿನಗಳ ಕಾಲ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದೆ. ಗುರುವಾರ,...

ಹೊಸ ಸೇರ್ಪಡೆ