ಬೆಂಬಲ ಕೊಟ್ಟರೆ ಬೇಡ ಎನ್ನುವುದಿಲ್ಲ: ಜೆಡಿಎಸ್ ಗೆ ಆಹ್ವಾನ ನೀಡಿದ್ರಾ ಕೆ.ಎಸ್.ಈಶ್ವರಪ್ಪ ?

Team Udayavani, Nov 6, 2019, 1:20 PM IST

ದಾವಣಗೆರೆ: ರಾಜ್ಯ ಬಿಜೆಪಿಗೆ ಸಂಪೂರ್ಣ ಬಹುಮತವಿರುವುದರ ಜೊತೆಗೆ ಶಾಸಕರ ಸಹಕಾರವು ಇದೆ. ಕೇಂದ್ರದಲ್ಲಿ ಬಹುಮತವಿದ್ದರೂ ಅನೇಕ‌ ಪಕ್ಷಗಳು ಬೆಂಬಲ ನೀಡಿವೆ. ಅದೇ ರೀತಿ ರಾಜ್ಯದಲ್ಲಿ ಕೂಡ  ಬೆಂಬ‌ಲ ನೀಡಿದರೆ ಬೇಡ ಎನ್ನುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಪರೋಕ್ಷವಾಗಿ ಜೆಡಿಎಸ್ ಪಕ್ಷಕ್ಕೆ ಆಹ್ವಾನ ಕೊಟ್ಟಿದ್ದಾರೆ.

ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದಲ್ಲಿ ಗ್ರಾಮ ಪಂಚಾಯತಿ ನೂತನ ಕಟ್ಟಡದ ಉದ್ಘಾಟನೆಗೆ ಆಗಮಮಿಸಿದ್ದ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಲು ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಮತ್ತು ದೇವೇಗೌಡರೇ ಹೇಳಿದ್ದಾರೆ.  ಕಾಂಗ್ರೆಸ್- ಜೆಡಿಎಸ್ ಮಿತ್ರತ್ವ ಹೆಚ್ಚು ಕಾಲ ಉಳಿಯಲಿಲ್ಲ. ಅದರ ಫಲವನ್ನು ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದರು. ಬಿಜೆಪಿಗೆ ಪೂರ್ಣ ಬಹುಮತ ಬರದಿದ್ದರೂ, ಬಿಜೆಪಿಯೇ ಆಡಳಿತ ನಡೆಸಬೇಕು ಎನ್ನುವ ವಾತವರಣ ಸೃಷ್ಟಿಯಾಗಿದೆ ಎಂದರು.

ಬಿಜೆಪಿಗೆ ಜೆಡಿಎಸ್ ಸೇರಿದಂತೆ ಹಲವು ಪಕ್ಷಗಳು ಸೇರ್ಪಡೆಯಾಗುತ್ತಿದೆ.  ಆ ಮೂಲಕ ಬಿಜೆಪಿ ಸದೃಢವಾಗಿ ಬೆಳೆಯುತ್ತಿದೆ. ಚುನಾವಣೆ ನಡೆದರೆ  ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪೇಜಾವರ ಶ್ರೀಗಳು ನಮ್ಮ‌ಮನೆ ದೇವರು ಇದ್ದಂತೆ. ಅವರನ್ನು ಭೇಟಿ ಮಾಡುವುದನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡಲಿ ಎಂದು ಇದೇ ವೇಳೆ ತಿಳಿಸಿದರು

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು  ತಿರುಕನ‌ ಕನಸು. ಅಹಿಂದ ಸಮಾವೇಶ ಮಾಡಿದರೂ  ಕಾಂಗ್ರೆಸ್ ಗೆ ರಾಜ್ಯದಲ್ಲಿ ಭವಿಷ್ಯ ಇಲ್ಲ. ಕರ್ನಾಟಕದಲ್ಲಿ ಜಾತಿ ವಿಚಾರಗಳಿಗೆ ಜನ ಬೆಂಬಲ ಕೊಡುವುದಿಲ್ಲ. ರಾಷ್ಟ್ರೀಯ ವಿಚಾರಗಳಿಗೆ ಮಾತ್ರ ಸಹಕಾರ ಸಿಗುತ್ತದೆ.  ಸಿದ್ದರಾಮಯ್ಯ ಲಿಂಗಾಯತ- ವೀರಶೈವ ಪ್ರತ್ಯೇಕ ಧರ್ಮ , ಟಿಪ್ಪು ಜಯಂತಿ ವಿಚಾರವನ್ನು ತಂದು ಬೆಂಕಿ ಹಚ್ವುವ ಕೆಲಸ ಮಾಡಿದರು.

ದಕ್ಷಿಣ ಕನ್ನಡದಲ್ಲಿ ಹಿಂದೂಗಳ‌ ಕಗ್ಗೊಲೆಯಾಯ್ತು. ಜಾತಿ, ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದ್ದಾರೆ. ಆದರೂ ಬುದ್ಧಿ ಬಂದಿಲ್ಲ. ಅಲ್ಪ ಸಂಖ್ಯಾತರನ್ನು, ದಲಿತರನ್ನು ಅಭಿವೃದ್ಧಿ ಮಾಡ್ತಿನಿ ಎಂದರು. ಇವರೇ ರಚಿಸಿದ ಕಾಂತರಾಜ್ ಸಮಿತಿಯಿಂದ ಜಾತಿ‌ಜನಗಣತಿ ಮಾಡಿಸಿದರು. 188 ಕೋಟಿ ಖರ್ಚು ಅದಕ್ಕಾಗಿ ಖರ್ಚು ಮಾಡಿದ್ದರೂ ಈವರೆಗೂ  ವರದಿ ಬಿಡುಗಡೆಯಾಗಲಿಲ್ಲ. ಈಗ ಹಿಂದುಳಿದ ಆಯೋಗದ ವರದಿ ಬಿಡುಗಡೆ ಬಗ್ಗೆ ಸಿ ಎಂ ಯಡಿಯೂರಪ್ಪ ನವರಿಗೆ ಆಸಕ್ತಿ ಇಲ್ಲ ದೂರುತ್ತಿದ್ದಾರೆ.

ಅಹಿಂದವನ್ನು ಕಾಂಗ್ರೆಸ್ ನವರು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಮಾತ್ರ ರಾಷ್ಟ್ರೀಯ ವಿಚಾರಗಳಿಗೆ ಮೊದಲಿನಿಂದ ಬದ್ದವಾಗಿದೆ. ಅದ್ದರಿಂದ ಬಿಜೆಪಿ ಬೆಳೆಯುತ್ತಿದೆ, ಕಾಂಗ್ರೆಸ್ ದಿನೇದಿನ ಕುಗ್ಗುತ್ತಿದೆ. ಕಾಂಗ್ರೆಸ್ ಗೆ ಸಿದ್ದರಾಮಯ್ಯ ಶನಿ ಎಂದು ಹೇಳಿಕೆ ನೀಡಿದ ಜನಾರ್ದನ ‌ಪೂಜಾರಿ‌ ಮಾತನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಶನಿನೋ‌ ಹೌದೋ ಅಲ್ವೋ ಎನ್ನುವುದು ಜನಾರ್ದನ ‌ಪೂಜಾರಿಯವರನ್ನು ಕೇಳಬೇಕು ಎಂದರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ