ಕೇಂದ್ರದ ಕಿಸಾನ್‌ ಸಮ್ಮಾನ್‌ ನೋಂದಣಿಗೆ 30 ಕಡೇ ದಿನ

Team Udayavani, Jun 25, 2019, 1:18 PM IST

ದಾವಣಗೆರೆ: ಕೇಂದ್ರ ಸರ್ಕಾರ ರೈತರ ಆದಾಯ ವೃದ್ಧಿಸಲು ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ (ಪಿಎಂ-ಕಿಸಾನ್‌) ಯೋಜನೆ ಫಲಾನುಭವಿಗಳಾಗಲು ಜೂ. 30ರೊಳಗೆ ಎಲ್ಲಾ ವಿವರ ವಿವರ ನಮೂದಿಸಿ, ಸ್ವಯಂ ಘೋಷಣೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಕೋರಿದ್ದಾರೆ.

2019ರ ಫೆಬ್ರವರಿ 1ರಿಂದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಎಂಬ ಯೋಜನೆ ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ಭೂ ಒಡೆತನ ಹೊಂದಿರುವ ಪ್ರತಿ ರೈತ ಕುಟುಂಬಕ್ಕೆ 3 ಕಂತುಗಳಲ್ಲಿ ವಾರ್ಷಿಕ ಒಟ್ಟು 6,000 ರೂ. ನೀಡಲು ಉದ್ದೇಶಿಸಲಾಗಿದೆ. ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ, ತೋಟಗಾರಿಕೆ ಇಲಾಖೆ, ಸಾಮಾನ್ಯ ಸೇವಾ ಕೇಂದ್ರಗಳಿಗೆ ತೆರಳಿ ಸ್ವಯಂ ಘೋಷಣೆ ಅನುಬಂಧದಲ್ಲಿ ತಮ್ಮ ಹೆಸರು, ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ವಿವರ, ಜಮೀನಿನ ವಿವರವನ್ನು ನಮೂದಿಸಿ ಸ್ವಯಂ ಘೋಷಣೆ ಸಲ್ಲಿಸಲು ಅವರು ತಿಳಿಸಿದ್ದಾರೆ.

ಭೂಮಿ ಹೊಂದಿರುವ ಸಂಘ ಅಥವಾ ಸಂಸ್ಥೆಗಳು ಅಥವಾ ಮಾಜಿ ಮತ್ತು ಹಾಲಿ ಸಂವಿಧಾನಿಕ ಹುದ್ದೆ ಹೊಂದಿರುವವರು, ಮಾಜಿ ಮತ್ತು ಹಾಲಿ ಸಚಿವರು, ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರು, ಪುರಸಭೆ ಅಧ್ಯಕ್ಷರು, ಜಿಲ್ಲಾ ಪಂಚಾಯತಿ ಅಧ್ಯಕ್ಷರು, ನಿವೃತ್ತ ಅಥವಾ ಹಾಲಿ ಸೇವೆಯಲ್ಲಿರುವ ಕೇಂದ್ರ, ರಾಜ್ಯ ಸರ್ಕಾರಗಳ ಸಚಿವಾಲಯ ಕಚೇರಿ, ಇಲಾಖೆ, ಕ್ಷೇತ್ರ ಕಚೇರಿಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಅದರ ಅಂಗ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳು ಹಾಗೂ ನೌಕರರು, ಸ್ಥಳೀಯ ಸಂಸ್ಥೆಗಳ ಗ್ರೂಪ್‌-ಡಿ ಮತ್ತು 4ನೇ ವರ್ಗ ಅಥವಾ ಮಲ್ಟಿ ಟಾಸ್ಕಿಂಗ್‌ ಸಿಬ್ಬಂದಿ ಹೊರತುಪಡಿಸಿ ಉಳಿದ ಖಾಯಂ ನೌಕರರು ಮತ್ತು 10,000 ರೂ.ಗಳಿಗಿಂತ ಅಥವಾ ಹೆಚ್ಚಿನ ಮೊತ್ತ ಪಡೆಯುತ್ತಿರುವ ನಿವೃತ್ತ ಪಿಂಚಣಿದಾರರು, ಕಳೆದ ಸಾಲಿನ ಆದಾಯ ತೆರಿಗೆ ಪಾವತಿದಾರರು,, ರೈತ ಕುಟುಂಬದಲ್ಲಿ ಒಬ್ಬರು ಅಥವಾ ಹೆಚ್ಚು ಸದಸ್ಯರು ಇದ್ದರೆ ಆ ಕುಟುಂಬ ಯೋಜನೆ ಫಲಾನುಭವಿಯಾಗಲು ಅರ್ಹವಿರುವುದಿಲ್ಲ. ಅರ್ಜಿಯೊಂದಿಗೆ ರೈತರು ಪಹಣಿ(ಆರ್‌ಟಿಸಿ) ನೀಡುವ ಅಗತ್ಯ ಇಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ