ಪ್ರತಿಯೊಬ್ಬರು ಹಕ್ಕು ಪ್ರತಿಪಾದನೆ ಜತೆಗೆ ಕರ್ತವ್ಯ ನಿರ್ವಹಿಸಲಿ

ಕಾನೂನು ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ರಥಯಾತ್ರೆ ಮೂಲಕ ಜನರ ಬಳಿಗೆ ಕಾನೂನು ಇಲಾಖೆ

Team Udayavani, Jul 9, 2019, 7:48 AM IST

ದಾವಣಗೆರೆ: ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.

ದಾವಣಗೆರೆ: ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಪ್ರತಿಪಾದನೆಯ ಜೊತೆಗೆ ಕರ್ತವ್ಯಗಳನ್ನು ನಿರ್ವಹಿಸಿದಲ್ಲಿ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎಂ. ಸಾಬಪ್ಪ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ, ಆರಕ್ಷ‌ಕ ಮತ್ತು ಸರ್ಕಾರಿ ಅಭಿಯೋಜಕ ಇಲಾಖೆ, ತಾಲೂಕು ಮತ್ತು ಗ್ರಾಮ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಕಾನೂನು ಸಾಕ್ಷ‌ರತಾ ರಥಯಾತ್ರೆಯ ಅಂಗವಾಗಿ ಸೀತಮ್ಮ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೂ ಕಾನೂನು ಅರಿವು ಅವಶ್ಯಕ. ಕಾನೂನಿನ ಅಜ್ಞಾನ ಕ್ಷಮಾರ್ಹವಲ್ಲ ಎಂದರು.

ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಪರಿಹರಿಸಲು ನ್ಯಾಯಾಂಗ ಇಲಾಖೆ ರಥಯಾತ್ರೆ ಮೂಲಕ ಜನರ ಹತ್ತಿರ ಬಂದಿದೆ. ಪ್ರತಿಯೊಬ್ಬರೂ ತಮ್ಮ ಸಮಸ್ಯೆಗಳ ಬಗ್ಗೆ ಮತ್ತು ಸರ್ಕಾರದ ಇಲಾಖೆಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಕಾನೂನು ಸೇವಾ ಪ್ರಾಧಿಕಾರದ ಮುಂದೆ ತಮ್ಮ ಅಹವಾಲುಗಳನ್ನು ಸಲ್ಲಿಸಿ ಪರಿಹರಿಸಿಕೊಳ್ಳಬಹುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಇರುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಟಿವಿಗಳ ದಾಸರಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ ಎಂದು ವಿಷಾದಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್‌ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಪ್ರಾಧಿಕಾರ ಹಲವು ಕಾರ್ಯಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಮಕ್ಕಳು ತಮ್ಮ ಜೀವನದಲ್ಲಿ ತಪ್ಪು ದಾರಿಯನ್ನು ತುಳಿಯದ ಹಾಗೆ ಮತ್ತು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಹಾಗೂ ಕಾನೂನು ಉಲ್ಲಂಘಿಸದಂತೆ ಸರಿದಾರಿಯಲ್ಲಿ ನಡೆಸಬೇಕೆಂಬ ಉದ್ದೇಶ ಹೊಂದಿರುವ ಕಾರ್ಯಕ್ರಮಗಳು ಸಫಲವಾಗಬೇಕಾದರೆ ಅವುಗಳನ್ನು ಪಾಲಿಸುವ ಮೂಲಕ ಅನುಷ್ಠಾನ ಗೊಳಿಸುವಂತೆ ತಿಳಿಸಿದರು.

ವಿದ್ಯಾರ್ಥಿಗಳು ಮೊದಲು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಮೂಲಕ ಉತ್ತಮ ಮಾರ್ಗಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಗುರು-ಹಿರಿಯರಿಗೆ, ತಂದೆ-ತಾಯಿಗಳಿಗೆ ಗೌರವ ನೀಡುವುದರ ಮೂಲಕ ಉತ್ತಮ ಸಂಸ್ಕಾರವನ್ನು ಪಡೆಯುವುದರಿಂದ ತಮ್ಮ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ತಿಳಿಸಿದರು.

ಕಾನೂನು ಮತ್ತು ಇತರೆ ಇಲಾಖೆಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸುವ ಮೂಲಕ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‌ಕುಮಾರ್‌ ಮಾತನಾಡಿ, ಇಂದು ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದಾರೆ. ಸಮ ಸಮಾಜ ನಿರ್ಮಾಣವಾಗಬೇಕಾದರೆ ಎಲ್ಲರಿಗೂ ಶಿಕ್ಷ‌ಣ, ಆರೋಗ್ಯ ಮತ್ತು ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ದೊರೆಯಬೇಕು. ಮಕ್ಕಳು ಬದುಕುವ, ಬಾಳುವ, ವಿಕಾಸ ಹೊಂದುವ ಹಕ್ಕುಗಳಿಂದ ವಂಚಿತರಾಗಬಾರದು ಎಂಬುದು ಸಂವಿಧಾನದ ಉದ್ದೇಶವಾಗಿದೆ ಎಂದು ತಿಳಿಸಿದರು.

ನೊಂದವರಿಗೆ, ಅನ್ಯಾಯಕ್ಕೊಳಗಾದವರಿಗೆ ಮತ್ತು ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಜೀವನಕ್ಕೆ ಬೇಕಾಗುವ ಕಾನೂನಿನ ಅರಿವು ಪಡೆದುಕೊಂಡು, ಪರಿಹಾರ ಪಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ವಕೀಲ ಕೆ. ದಾದಾಪೀರ್‌, ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಕಾಯ್ದೆ ಕುರಿತು ಉಪನ್ಯಾಸ ನೀಡಿದರು.

ಉಪಪ್ರಾಚಾರ್ಯ ಎ.ಆರ್‌. ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಉಪಾಧ್ಯಕ್ಷ‌ ಎಚ್. ದಿವಾಕರ್‌, ವಕೀಲರಾದ ಕೆ. ಹನೀಫ್‌ಸಾಬ್‌, ಎನ್‌.ಎಂ.ಆಂಜನೇಯ ಇತರರು ಇದ್ದರು. ಎಲ್. ಗಂಗಾಧರ್‌ ಸ್ವಾಗತಿಸಿದರು, ಕೆ.ಎಂ. ಕೊಟ್ರೇಶ್‌ ವಂದಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಅಡುಗೆ ಆದ ನಂತರ ಅದಕ್ಕೆ ಮುಕ್ತಾಯ ಹಾಡಬೇಕಾದರೆ ಒಗ್ಗರಣೆಗೆ ಕರಿಬೇವು ಬೇಕೇ ಬೇಕು. ಅದರಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲದೆ ಊಟದ ಮಧ್ಯೆ ಸಿಗುವ ಕರಿಬೇವನ್ನು...

  • ಸುರತ್ಕಲ್‌: ಎಂಆರ್‌ಪಿಎಲ್‌ನಿಂದ ಮೊದಲ ಬಾರಿಗೆ 36 ಸಾವಿರ ಟನ್‌ ಪೆಟ್‌ ಕೋಕ್‌ ಅನ್ನು ರೈಲಿನ ಮೂಲಕ ಗುಲ್ಬರ್ಗಕ್ಕೆ ಸಾಗಿಸಲಾಗಿದೆ. ಈ ಮೂಲಕ ರೈಲ್ವೇ ಸಂಪರ್ಕ ಪಡೆದ...

  • ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...

  • ದಿ ಲೀಡರ್‌ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ...

  • ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ಟರು 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ....