ಪಟ್ಟಿಯಲ್ಲಿ ಹೆಸರು ಖಾತರಿಪಡಿಸಿಕೊಳ್ಳಿ

Team Udayavani, Sep 2, 2019, 10:31 AM IST

ದಾವಣಗೆರೆ: ಪ್ರಜಾತಂತ ವ್ಯವಸ್ಥೆಯಲ್ಲಿ ಪವಿತ್ರ ಹಕ್ಕಾದ ಮತದಾನಕ್ಕೆ ಮತದಾರರ ಪಟ್ಟಿಯಲ್ಲಿ ಹೆಸರು ಇರುವುದು ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ.

ಭಾನುವಾರ ಜಿಲ್ಲಾಡಳಿತದ ತುಂಗಭದ್ರಾ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಷ್ಟೋ ಬಾರಿ ಉತ್ಸಾಹದಿಂದ ಮತ ಚಲಾಯಿಸಲು ಮತಗಟ್ಟೆಗೆ ಹೋದಾಗ ಮತದಾರರ ಪಟ್ಟಿಯಲ್ಲಿ ಹೆಸರೇ ಮಾಯವಾಗಿರುತ್ತದೆ. ಆಗ ನಿರಾಶೆಯಿಂದ ಮನೆಗೆ ವಾಪಸ್‌ ಆಗಬೇಕಾಗುತ್ತದೆ. ಅದನ್ನು ತಪ್ಪಿಸುವ ಮತ್ತು ಮತ ಚಲಾವಣೆ ಮಾಡಲು ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಎಂಬುದನ್ನ ಖಾತರಿ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದ ಅವಕಾಶದಿಂದ ವಂಚಿತರಾಗಬೇಕಾದ ಗೊಂದಲಗಳಿಗೆ ಅವಕಾಶ ಮಾಡಿ ಕೊಡದಂತೆ ಮೊದಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ವಯಸ್ಸು, ಭಾವಚಿತ್ರ, ಸಮರ್ಪಕವಾಗಿ ಇದೆಯೇ ಎಂಬುದರ ಪರಿಶೀಲನೆಯೇ ಮತದಾರರ ಪರಿಶೀಲನಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಮತದಾರರು ಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ತಮ್ಮವೈಯಕ್ತಿಕ ಜವಾಬ್ದಾರಿಯಿಂದ ಪ್ರತಿ ಗ್ರಾಮ ಪಂಚಾಯತ್‌, ಬಾಪೂಜಿ ಸೇವಾ ಕೇಂದ್ರ, ಅಟಲ್ಜೀ ಜನಸ್ನೇಹಿ ಕೆಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ದಾವಣಗೆರೆ ನಗರದಲ್ಲಿ ದಾವಣಗೆರೆ ಒನ್‌ ನಲ್ಲಿ ಅರ್ಜಿಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳಬಹುದು. ಸಿಟಿಜನ್‌ ಆ್ಯಪ್‌… ಮೂಲಕ ಮೊಬೈಲ್ನಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಬಹುದು. ಮತದಾರ ಪಟ್ಟಿಯನ್ನು ಹೇಗೆ ಮತ್ತು ಎಲ್ಲಿ ಸರಿಪಡಿಸಿಕೊಳ್ಳಬಹುದು ಎಂಬ ಮಾಹಿತಿಗಾಗಿ 1950 ಸಹಾಯವಾಣಿಗೆ ಕರೆಮಾಡಬಹುದು ಎಂದು ತಿಳಿಸಿದರು.

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮದ ಅಂಗವಾಗಿ ಗಣ್ಯರು, ನ್ಯಾಯಾಧೀಶರು, ಅಧಿಕಾರಿಗಳು, ವಿಕಲಚೇತನರ ಮನೆಗಳಿಗೆ ತೆರಳಿ ಮತದಾರರ ಪಟ್ಟಿಯಲ್ಲಿರುವ ಅವರ ಹೆಸರುಗಳನ್ನು ಪರಿಶೀಲಿಸಲಾಗುವುದು. ಉಳಿದಂತೆ ಇತರೆ ಅಧಿಕಾರಿಗಳು ಹಾಗೂ ಸಂಬಂಧಿಸಿದ ಬಿಎಲ್ಓಗಳು ಪರಿಶೀಲನಾ ಕಾರ್ಯಕ್ರಮದ ಪ್ರಥಮ ದಿನದಿಂದಲೇ ಮನೆ ಮನೆಗೆ ತೆರಳಿ ಮತದಾರರ ಪಟ್ಟಿಯ ಲೋಪಗಳನ್ನು ಸರಿಪಡಿಸುವುದು, ಹೊಸ ಮತದಾರರ ಹೆಸರುಗಳನ್ನು ನೋಂದಣಿ ಮಾಡುವುದು ಹಾಗೂ ಕುಟುಂಬದ ಸದಸ್ಯರುಗಳ ಹೆಸರುಗಳು ಕ್ರಮಬದ್ಧವಾಗಿ ಒಂದೇ ಕಡೆ ಇವೆಯೇ ಎಂದು ಪರಿಶೀಲನೆ ನಡೆಸಲಿದ್ದು, ಇದೊಂದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಪ್ರಾಸ್ತಾವಿಕ ಮಾತುಗಳಾಡಿದ ಉಪವಿಭಾಗಾಧಿಕಾರಿ ಬಿ.ಟಿ ಕುಮಾರಸ್ವಾಮಿ, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶ‌ ಭಾರತದಲ್ಲಿ ಚುನಾವಣೆ ಎಂಬುದು ಒಂದು ಹಬ್ಬವಿದ್ದಂತೆ. ಸುಭದ್ರ ಸರ್ಕಾರಕ್ಕಾಗಿ ತಮ್ಮ ಹಕ್ಕನ್ನು ಚಲಾಯಿಸುವ ಒಂದು ಸಂಭ್ರಮದ ಹಬ್ಬವಾಗಿದೆ ಎಂದರು.

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಒಂದು ರೀತಿ ಚುನಾವಣಾ ಆಯೋಗವೇ ಮತದಾರರ ಬಳಿ ಹೋಗುವ ಪ್ರಕ್ರಿಯೆ. ಮತದಾರರ ಮನೆ ಮನೆಗಳಿಗೆ ತೆರಳಿ ಅಧಿಕಾರಿಗಳು ಹೊಸ ಮತದಾರರ ಹೆಸರುಗಳ ಸೇರ್ಪಡೆ, ಪತಿ, ಪತ್ನಿ ಹೆಸರುಗಳು ಬೇರೆ ಬೇರೆ ಕಡೆಗಳಲ್ಲಿ ಇರುವುದು, ವಾಸಸ್ಥಳ ಬದಲಾವಣೆ, ವಲಸೆ ಪ್ರಕರಣಗಳು, ಮರಣಹೊಂದಿದವರ ಹೆಸರುಗಳು ಮತದಾರರ ಪಟ್ಟಿಯಲ್ಲಿರುವುದನ್ನು ತೆಗೆದು ಹಾಕುವುದು ಮುಂತಾದ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ತಿಳಿಸಿದರು.

ಬಿಎಲ್ಓಗಳು ಬಂದಾಗ ಅವರಿಗೆ ಸರಿಯಾದ ಮಾಹಿತಿ ನೀಡಿ ಸಾರ್ವಜನಿಕರು ಸಹಕಾರ ನೀಡಬೇಕು. ಒಂದು ವೇಳೆ ಅರ್ಹ ಮತದಾರರಲ್ಲದವರ ಹೆಸರುಗಳು ಪಟ್ಟಿಯಲ್ಲಿದ್ದರೆ ಅವರಿಗೆ ನೋಟಿಸ್‌ ನೀಡಲಾಗುವುದು. ಈಗಾಗಲೆ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ನ್ಯೂನ್ಯತೆಗಳಿದ್ದರೆ ಸರಿಪಡಿಸಿಕೊಳ್ಳಬಹುದು. ಮತದಾರರ ನೋಂದಣಿ ಕಚೇರಿಯಲ್ಲಿರುವ ಹೆಲ್ಪ್ಡೆಸ್ಕ್ಗಳಲ್ಲಿ ಮಾಹಿತಿ ಪಡೆದುಕೊಂಡು ಮತದಾರರ ಪಟ್ಟಿಯಲ್ಲಿರುವ ತಮ್ಮ ಮಾಹಿತಿ ಸರಿಯಾಗಿ ಇದೆಯೇ ಎಂದು ಪರಿಶೀಲಿಸಿಕೊಳ್ಳಬಹುದು ಎಂದು ತಿಳಿಸಿದರು.

ಹರಿಹರ -ಕೊಟ್ಟೂರು ರೈಲ್ವೆ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಪಾಲಿಕೆ ಉಪ ಆಯಕ್ತ ರವೀಂದ್ರ ಬಿ. ಮಲ್ಲಾಪುರ, ಜಗಳೂರು ತಹಶೀಲ್ದಾರ್‌ ತಿಮ್ಮಣ್ಣ, ಪಾಲಿಕೆ ಸಹಾಯಕ ಮತದಾನ ಅಧಿಕಾರಿ ನಾಗರಾಜ್‌, ಗದುಗೇಶ್‌, ಚುನಾವಣಾ ತಹಶೀಲ್ದಾರ್‌ ಪ್ರಸಾದ್‌, ಶ್ರೀಕುಮಾರ್‌, ಲಕ್ಷ್ಮಿಕಾಂತ್‌ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ