ಆಯುಷ್‌ ಆಸ್ಪತ್ರೆ ಸೇವೆ ಶೀಘ್ರ ದೊರಕಲಿ

•50 ಹಾಸಿಗೆ ಸಾಮರ್ಥ್ಯದ ಸಂಯುಕ್ತ ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ಎಸ್ಸೆಸ್‌ ಚಾಲನೆ

Team Udayavani, Jul 9, 2019, 7:41 AM IST

ದಾವಣಗೆರೆ: ಆಯುಷ್‌ ಆಸ್ಪತ್ರೆ ನಿರ್ಮಾಣಕ್ಕೆ ಸೋಮವಾರ ಶಾಸಕ ಶಾಮನೂರು ಶಿವಶಂಕರಪ್ಪ ಭೂಮಿಪೂಜೆ ನೆರವೇರಿಸಿದ ಸಂದರ್ಭ.

ದಾವಣಗೆರೆ: ಜಿಲ್ಲೆಯಲ್ಲಿ ಸಂಯುಕ್ತ ಆಯುಷ್‌ ಆಸ್ಪತ್ರೆ ಸೇವೆ ಆದಷ್ಟು ಬೇಗ ಜನರಿಗೆ ದೊರೆಯುವಂತಾಗಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಸೋಮವಾರ, ನಗರದ ನಾಗಮ್ಮ ಕೇಶವ ಮೂರ್ತಿ ಬಡಾವಣೆಯಲ್ಲಿ 50 ಹಾಸಿಗೆಗಳ ಸಂಯುಕ್ತ ಆಯುಷ್‌ ಆಸ್ಪತ್ರೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಉತ್ತಮ ಆಸ್ಪತ್ರೆಗಳಿಂದಾಗಿ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿ ಮಾನವನ ಜೀವಿತಾವಧಿ ಹೆಚ್ಚಾಗಿದೆ. ಅಧಿಕಾರಿಗಳು ವಿಳಂಬ ತೋರದೆ ಆದಷ್ಟು ಬೇಗ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಿ ಎಂದರು.

ಜನರು ಇಂದು ಅಲೋಪಥಿ ಜೊತೆಗೆ ಆಯುರ್ವೇದ ಪದ್ಧತಿ ಚಿಕಿತ್ಸೆ ಸಹ ಪಡೆಯುತ್ತಿದ್ದಾರೆ. ಆಯುಷ್‌ ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿದೆ. ಆದ್ದರಿಂದ ನಮ್ಮ ಜಿಲ್ಲೆಯ ಜನರಿಗೆ ಆಯುರ್ವೇದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಯುಷ್‌ ಆಸ್ಪತ್ರೆ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಪ್ರಕೃತಿಯ ಮಡಿಲಲ್ಲಿರುವ ಈ ಜಾಗ ಪ್ರಕೃತಿ ಚಿಕಿತ್ಸೆಗೆ ಉತ್ತಮವಾಗಿದೆ. ಜಿಲ್ಲೆ ಜನರು ಪ್ರಕೃತಿ ಚಿಕಿತ್ಸೆಗೆಂದು ಉಜಿರೆ, ಬೇರೆ ಕಡೆಗೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆಯುಷ್‌ ಆಸ್ಪತ್ರೆಯಲ್ಲಿ ಆ ಪದ್ಧತಿ ಚಿಕಿತ್ಸೆ ದೊರೆಯುಂತಾಗಲಿ ಎಂದು ಆಶಿಸಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು.ಸಿದ್ದೇಶಿ ಮಾತನಾಡಿ, ನಗರದಲ್ಲಿ 7.5 ಕೋಟಿ ರೂ. ವೆಚ್ಚದಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಸಂಯುಕ್ತ ಆಯುಷ್‌ ಆಸ್ಪತ್ರೆ ನಿರ್ಮಾಣವಾಗಲಿದೆ. ಆಯುಷ್‌ ಆಸ್ಪತ್ರೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಹೊಂದಲಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ್‌ ಸದಸ್ಯ ಡಿ.ಸಿ. ನಿಂಗಣ್ಣ, ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯ ಚಂದ್ರಣ್ಣ, ಕಾರ್ಯಪಾಲಕ ಇಂಜಿನಿಯರ್‌ ನವೀನ್‌, ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ