ತಪ್ಪಿದ ಕುಡಿವ ನೀರಿನ ಬವಣೆ

Team Udayavani, Nov 25, 2018, 2:50 PM IST

ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಬವಣೆ ಎದುರಾಗಬಾರದು ಎಂಬ ಹಿನ್ನೆಲೆಯಲ್ಲಿ ಎರಡು ಕೆರೆಗಳನ್ನು ಅಭಿವೃದ್ಧಿಸುವ ಜೊತೆಗೆ ಜಲಸಿರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಶನಿವಾರ, ಮಹಾನಗರಪಾಲಿಕೆಯ 14ನೇ ವಾರ್ಡ್‌ನ ಬಸಾಪುರ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ, ಮಾತನಾಡಿದ ಅವರು, ಕಳೆದ 3 ವರ್ಷಗಳಿಂದಲೂ ರಾಜ್ಯದೆಲ್ಲೆಡೆ ಬರಗಾಲ ಇದ್ದರೂ ಕೂಡ ದಾವಣಗೆರೆ ಜನತೆಗೆ ನೀರಿನ ಸಮಸ್ಯೆ ಉಂಟಾಗಲಿಲ್ಲ. ಇದಕ್ಕೆ ನಗರದ ಟಿ.ವಿ. ಸ್ಟೇಷನ್‌ ಮತ್ತು ಕುಂದುವಾಡ ಕೆರೆ ಅಭಿವೃದ್ಧಿಪಡಿಸಿರುವುದೇ ಕಾರಣ. ಈ ಎರಡು ಕೆರೆಗಳ ಅಭಿವೃದ್ಧಿ ಕೆಲವರು ವಿರೋಧಿಸಿದರೂ ಸಹ ಸಾರ್ವಜನಿಕರ ಹಿತದೃಷ್ಟಿಯಿಂದ ಕೆರೆಗಳನ್ನು ಅಭಿವೃದ್ಧಿಗೊಳಿಸಲಾಯಿತು ಎಂದರು.

ಇದೀಗ ಜಲಸಿರಿ ಯೋಜನೆಯಡಿ ಕಾಮಗಾರಿ ಪ್ರಾರಂಭಗೊಂಡಿದ್ದು, ಮುಂದಿನ ಬೇಸಿಗೆ ವೇಳೆಗೆ ದಿನದ 24 ಗಂಟೆಯೂ ನೀರಿನ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಬಸಾಪುರ ಗ್ರಾಮದಲ್ಲಿ ಎಂದೂ ಸಹ ನೀರಿನ ಸಮಸ್ಯೆ ಉಂಟಾಗಿಲ್ಲ. ಆದರೆ ಶುದ್ಧ ಕುಡಿಯುವ ನೀರಿನ ಘಟಕದ ಅವಶ್ಯಕತೆ ಮನಗಂಡು 8 ಲಕ್ಷ ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ 15ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಗೌಡ್ರು ರಾಜಶೇಖರ್‌, ಆನೆಕೊಂಡ ಲಿಂಗರಾಜ್‌, ಕಾರ್ಯಪಾಲಕ ಅಭಿಯಂತರ ಕೆ.ಎಂ. ಮಂಜುನಾಥ್‌, ಗುತ್ತಿಗೆದಾರರಾದ ಮುನಿಯಪ್ಪ, ಸುರೇಶ್‌, ಸುರೇಂದ್ರಪ್ಪ, ಸಿದ್ದಪ್ಪ, ಬಸವರಾಜಪ್ಪ, ಮಹೇಶ್ವರಪ್ಪ, ಇತರರು ಈ ಸಂದರ್ಭದಲ್ಲಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ