ನಾರಾಯಣಗೌಡ ಕ್ಷಮೆಯಾಚನೆಗೆ ಮರಾಠ ಸಮಾಜ ಆಗ್ರಹ

Team Udayavani, Jan 6, 2018, 12:44 PM IST

ದಾವಣಗೆರೆ: ಹಿಂದೂ ಸಮಾಜದ ಉಳಿವಿಗಾಗಿ ಹೋರಾಡಿದ ಮಹಾನ್‌ ಹೋರಾಟಗಾರ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿರುವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಒತ್ತಾಯಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರು ಎಂದೆಂದಿಗೂ ತಮ್ಮ ರಾಜ್ಯ ವಿಸ್ತರಣೆ, ಭಾಷೆ, ಜಾತಿಗಾಗಿ ಯುದ್ಧ ಮಾಡಿದವರೇ ಅಲ್ಲ. ಸಮಸ್ತ ಹಿಂದೂ ಧರ್ಮದ ಉದ್ಧಾರಕ್ಕೋಸ್ಕರ ಹೋರಾಟ ನಡೆಸಿದವರು. ಅಂತಹವರ ಇತಿಹಾಸ ತಿಳಿಯದೇ ನಾರಾಯಣಗೌಡ ಮೂರ್ಖತನದ ಹೇಳಿಕೆ ನೀಡಿದ್ದಾರೆ. ಅವರು ತಮ್ಮ ಹೇಳಿಕೆ ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ, ಮುಂದಿನ ದಿನಗಳಲ್ಲಿ ಇಡೀ ಹಿಂದೂ ಸಮಾಜ ಅವರ ವಿರುದ್ಧ ಹೋರಾಟ ನಡೆಸಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. 

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣಗೌಡ, ಶಿವಾಜಿಗೆ ಜೈಕಾರ ಕೂಗಬಾರದು ಎಂದೆಲ್ಲ ಮಾತನಾಡಿದ್ದಾರೆ. ಶಿವಾಜಿ ಮತ್ತು ಅವರ ತಂದೆ ಷಹಾಜಿ ಮಹಾರಾಜರು ಆಡಳಿತ ನಡೆಸುವಾಗ ಎಂದೆಂದಿಗೂ ಕನ್ನಡಿಗರ ಮೇಲೆ ಬಲವಂತವಾಗಿ ಮರಾಠಿ ಭಾಷೆ ಹೇರುವ ಪ್ರಯತ್ನ ಮಾಡಿದವರೇ ಅಲ್ಲ. ಶಿವಾಜಿ ಮಹಾರಾಜರು ಆಪತ್ಕಾಲದಲ್ಲಿದ್ದಾಗ ಕೆಳದಿ ರಾಣಿ ಚೆನ್ನಮ್ಮ ಅವರಿಗೆ ಆಶ್ರಯ ನೀಡಿದ್ದು ನೋಡಿದರೆ ಅವರ ಬಗ್ಗೆ ಕನ್ನಡಿಗರು ಯಾವ ಭಾವನೆ ಹೊಂದಿದ್ದರು ಎಂಬುದನ್ನ ತೋರಿಸುತ್ತದೆ. ನಾರಾಯಣಗೌಡ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ನೀಡಿರುವುದನ್ನ ಇಡೀ ಮರಾಠ ಸಮಾಜ ಖಂಡಿಸುತ್ತದೆ ಎಂದರು.

ಮರಾಠರು ಸದಾ ದೇಶಭಕ್ತರು. ಹಾಗಾಗಿ ಈ ಕ್ಷಣಕ್ಕೂ ಭಾರತೀಯ ಸೈನ್ಯದಲ್ಲಿ ಮರಾಠ ರೆಜಿಮೆಂಟ್‌ ಇದೆ. ಸ್ವತಃ ಶಿವಾಜಿ ಮಹಾರಾಜರೇ ಗೆರಿಲ್ಲಾ ಯುದ್ಧ ತಂತ್ರ ಪರಿಚಯಿಸಿದವರು. ಕರ್ನಾಟಕದಲ್ಲಿರುವ ಪ್ರತಿಯೊಬ್ಬ ಮರಾಠರು ಅಪ್ಪಟ ಕನ್ನಡಿಗರು. ಶಿವಾಜಿಯವರ ತಂದೆ ಷಹಾಜಿ ಮಹಾರಾಜರ ಸಮಾಧಿ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿದೆ. ಅಲ್ಲಿ ಮರಾಠ ಸಮಾಜದವರ ಒಂದೇ ಒಂದು ಮನೆ ಇಲ್ಲ. ಆದರೂ, ಸಮಾಧಿಗೆ ಗೌರವ ಸಲ್ಲಿಸಲಾಗುತ್ತದೆ. ಇಂತಹ ವಿಚಾರ ತಿಳಿಯದವರು ಬರೀ ಪ್ರಚೋದನಕಾರಿ ಹೇಳಿಕೆ ನೀಡುತ್ತಾರೆ. ಕನ್ನಡ ಪರ ಸಂಘಟನೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರ ಬಗ್ಗೆ ಎಂದಿಗೂ ಗಮನ ನೀಡದ ನಾರಾಯಣಗೌಡ, ಕನ್ನಡ ಪರ ಸಂಘಟನೆಯ ಹೆಸರಲ್ಲಿ ಏನೆಲ್ಲ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ತಿಳಿಸಿದರು.

ಸಮಾಜದ ಮುಖಂಡ ವೈ. ಮಲ್ಲೇಶ್‌ ಮಾತನಾಡಿ, ಕನ್ನಡ ಪರ ಸಂಘಟನೆಯ ಮುಖಂಡ ನಾರಾಯಣಗೌಡ ರಾಷ್ಟ್ರನಾಯಕ ಶಿವಾಜಿ ಮಹಾರಾಜರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ರಾಜ್ಯ ಸರ್ಕಾರ ಕೂಡಲೇ ಅವರ ವೇದಿಕೆಯನ್ನ ನಿಷೇಧಿಸಬೇಕು. ಅವರ ಸಂಘಟನೆಯಲ್ಲಿರುವ ಮರಾಠ ಸಮಾಜದವರು ರಾಜೀನಾಮೆ ನೀಡಿ, ಸಂಘಟನೆಯಿಂದ ಹೊರ ಬರಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಎ.ಸಿ. ರಾಘವೇಂದ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಇದೇ ವೇಳೆ ತಿಳಿಸಿದರು. ಸಮಾಜದ ಅಜ್ಜಪ್ಪ ಪವಾರ್‌, ಗೋಪಾಲ್‌ರಾವ್‌ ಮಾನೆ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ