ಜಮೀನಿನಲ್ಲಿ ಸಂಗ್ರಹಿಸಿದ್ದ ಗಾಂಜಾ ವಶ
Team Udayavani, Apr 1, 2022, 4:52 PM IST
ದಾವಣಗೆರೆ: ನ್ಯಾಮತಿ ತಾಲೂಕು ಕುದುರೆಕೊಂಡ ಗ್ರಾಮದ ಬಳಿ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಒಣ ಗಾಂಜಾ ಹಾಗೂ ಅಡಿಕೆ ತೋಟವೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ.
ಜಮೀನಿನಲ್ಲಿ ಮೆಕ್ಕೆಜೋಳದ ದಿಂಡು ಸಂಗ್ರಹಿಸಿದ ಸ್ಥಳದಲ್ಲಿ ಇಟ್ಟಿದ್ದ ಗಾಂಜಾ ಎಲೆ, ಗಾಂಜಾ ತೆನೆಯ ಪುಡಿ ಹಾಗೂ ಗಾಂಜಾ ಬೀಜಗಳ ಮಿಶ್ರಣ ಸೇರಿ ಒಟ್ಟು 268 ಗ್ರಾಂನಷ್ಟು ಒಣ ಗಾಂಜಾ ಪತ್ತೆ ಹಚ್ಚಲಾಗಿದೆ.
ಇದು ಒಟ್ಟು 4500ರೂ. ಮೌಲ್ಯದ್ದಾಗಿದೆ. ಇದೇ ಗ್ರಾಮದ ಅಡಕೆ ತೋಟವೊಂದರಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದು ಕಂಡುಬಂದಿದ್ದು, ಸುಮಾರು 134ಗ್ರಾಂ.ನಷ್ಟು ಹಸಿ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ನಾಪತ್ತೆಯಾಗಿದ್ದು ಪ್ರಕರಣ ದಾಖಲಿಸಲಾಗಿದೆ.