ವಾರಕ್ಕೆರಡು ಸಲ ನೀರು ಪೂರೈಸಿ

Team Udayavani, Jan 25, 2019, 5:31 AM IST

ದಾವಣಗೆರೆ: ಫೆಬ್ರವರಿಯಿಂದ ಕನಿಷ್ಟ ವಾರಕ್ಕೆರಡು ಬಾರಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗುರುವಾರ ಗೃಹಕಚೇರಿಯಲ್ಲಿ ನಡೆದ ಜಲಸಿರಿ ಯೋಜನೆ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ನಗರ ವ್ಯಾಪ್ತಿಯಲ್ಲಿ ವಾರಕ್ಕೆ ಒಮ್ಮೆ ನೀರು ಸರಬರಾಜು ಮಾಡುವ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವುದಕ್ಕೆ ಆಕ್ಷೇಪಿಸಿದ ಅವರು, ಭದ್ರಾ ಕಾಲುವೆಯಿಂದ ನೀರು ತೆಗೆದುಕೊಂಡು ಫೆಬ್ರವರಿಯಿಂದ ವಾರಕ್ಕೆರಡು ಬಾರಿ ನೀರು ಒದಗಿಸಬೇಕು. ನದಿಗೆ ನೀರು ಬಂದ ತಕ್ಷಣ ಕನಿಷ್ಟ 2 ದಿನಕ್ಕೊಮ್ಮೆ ನೀರು ಒದಗಿಸಬೇಕು ಎಂದು ಸೂಚಿಸಿದರು.

ಜಲಸಿರಿ ಯೋಜನೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಆಕ್ಷೇಪಿಸಿದ ಅವರು, ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳನ್ನು ಶೀಘ್ರ ಮುಗಿಸಿ ಇನ್ನುಳಿದ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿದರು.

ಮುಂಬರುವ ದಿನಗಳಲ್ಲಿ ಜನತೆಗೆ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ತುಂಗಭದ್ರಾ ನದಿಯಿಂದ ಸರಬರಾಜು ಆಗುವ 2ನೇ ಹಂತದ ನೀರು ಸರಬರಾಜು ಕೇಂದ್ರದ ರಾಜನಹಳ್ಳಿ ಜಾಕ್‌ವೆಲ್‌ಗೆ ನೀರು ಸಿಗದೇ ತೊಂದರೆ ಆಗಿದೆ. ನೀರು ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.

ಮಹಾನಗರ ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ, ನಗರಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌.ಬಳ್ಳಾರಿ, ಎಂ. ನಾಗರಾಜ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಂ. ಮಂಜುನಾಥ್‌, ಜಲಸಿರಿ ಯೋಜನೆಯ ಮಹಮ್ಮದ್‌ ಷರೀಫ್‌, ರವಿ, ರವಿಕುಮಾರ್‌ ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ