ಕಾಲೇಜಿಗೆ ಮೂಲ ಸೌಲಭ್ಯ ಒದಗಿಸುವ
Team Udayavani, Aug 2, 2018, 12:15 PM IST
ಜಗಳೂರು: ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ಇಂದಿಲ್ಲಿ ಭರವಸೆ ನೀಡಿದರು.
ತಾಲೂಕಿನ ಪಲ್ಲಾಗಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಟಿಎಸ್‌ಪಿ ಯೋಜನೆಯ 1 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪಲ್ಲಾಗಟ್ಟೆ ತಾಲೂಕು ಕೇಂದ್ರದಿಂದ ಬಹು ದೂರದಲ್ಲಿರುವುದರಿಂದ ಈ ಭಾಗದ ಹೆಣ್ಣು ಮಕ್ಕಳು ಉನ್ನತ
ವಿದ್ಯಾಭ್ಯಾಸದಿಂದ ವಂಚಿತರಾಗಿದ್ದಾರೆ. ಹೀಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಜೂರು ಮಾಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆಯೂ ಜಗಳೂರು ಮತ್ತು ಪಲ್ಲಾಗಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಇದು ಒಳ್ಳೆಯ ಬೆಳವಣಿಗೆ. ದಾಖಲಾದ
ವಿದ್ಯಾರ್ಥಿಗಳಿಗೆ ಕಲಿಕಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕೆಂದು ಉಪನ್ಯಾಸಕರಿಗೆ ಕಿವಿಮಾತು ಹೇಳಿದರು.
ತಾ.ಪಂ ಉಪಾಧ್ಯಕ್ಷ ಮುದೇಗೌಡ್ರು ಮಾತನಾಡಿ, ಪಲ್ಲಾಗಟ್ಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ನಿರ್ಮಾಣಕ್ಕೆ ಈ ಹಿಂದಿನ ಶಾಸಕ ಎಚ್.ಪಿ.ರಾಜೇಶ್ ಅವರು 2 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದಾರೆ. ತಾಂತ್ರಿಕ ತೊಂದರೆಯಿಂದ ಭೂಮಿಪೂಜೆ ವಿಳಂಬವಾಗಿತ್ತು. ನೂತನ ಶಾಸಕ ಎಸ್ .ವಿ. ರಾಮಚಂದ್ರ ಅವರು ಭೂಮಿಪೂಜೆ ನೆರವೇರಿಸಿದ್ದಾರೆಂದರು.
ಜಿ.ಪಂ. ಪ್ರಭಾರಿ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ಸದಸ್ಯ ಎಸ್.ಕೆ. ಮಂಜುನಾಥ್, ಉಮಾ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್ ಮಾತನಾಡಿದರು. ಪಲ್ಲಾಗಟ್ಟೆ ಗ್ರಾಪಂ ಅಧ್ಯಕ್ಷ ಸಣ್ಣಗೌಡ್ರು, ಗ್ರಾಪಂ ಉಪಾಧ್ಯಕ್ಷೆ ರುದ್ರಮ್ಮ, ಪಿಡಿಒ ಅನಿಲ್, ಜಿ.ಪಂ ಎಇಇ ಚಂದ್ರಶೇಖರ್, ಕಾಲೇಜು ಉಪನ್ಯಾಸಕರಾದ ಲಕ್ಷ್ಮೀಕಾಂತ್, ಎ.ಎಲ್.ತಿಪ್ಪೇಸ್ವಾಮಿ,
ಮತ್ತಿತರರು ಹಾಜರಿದ್ದರು.