ಸ್ವಪ್ರಯತ್ನದಿಂದಲೇ ಸಿಕ್ತು ಸಮಸ್ಯೆಗೆ ಪರಿಹಾರ

Team Udayavani, May 26, 2018, 11:12 AM IST

ದಾವಣಗೆರೆ: ಹಲವು ದಶಕಗಳ ಕಾಲದಿಂದಲೂ ಪ್ರತಿ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಸಮಸ್ಯೆಗೆ ಸ್ವಯಂ ನೀಲಮ್ಮನ ತೋಟ ಪ್ರದೇಶದ ನಿವಾಸಿಗಳೇ ಪರಿಹಾರ ಕಂಡುಕೊಂಡಿದ್ದಾರೆ!. ಮಳೆಗಾಲ ಪ್ರಾರಂಭವಾಯಿತೆಂದರೆ
ದಾವಣಗೆರೆಯ ಹಳೆ ಪಿಬಿ ರಸ್ತೆಯ ಪಕ್ಕದಲ್ಲೇ ಇರುವ ನೀಲಮ್ಮನ ತೋಟ ಪ್ರದೇಶದ ನಿವಾಸಿಗಳಿಗೆ ಆತಂಕ ಮತ್ತು ಭಯ. ಸಣ್ಣ ಮಳೆಯಾದರೆ ಸಾಕು ಮನೆಗಳಿಗೆ ನೀರು ನುಗ್ಗಿ ಇನ್ನಿಲ್ಲದ ತೊಂದರೆ. ಮಳೆ ಮತ್ತು ಮನೆಗಳಿಗೆ ನುಗ್ಗಿದ ನೀರಿನ ಪ್ರಮಾಣ ಕಡಿಮೆ ಆಗುವತನಕ ರಸ್ತೆ, ಬಯಲೇ ಆಶ್ರಯತಾಣ.

ಇನ್ನು ಎಡೆಬಿಡದೆ ಮಳೆ ಸುರಿದರೆ ಮಕ್ಕಳು, ಮರಿ, ಗರ್ಭಿಣಿ, ಬಾಣಂತಿ, ಕಾಯಿಲೆಗೆ ತುತ್ತಾದವರು, ವಯೋವೃದ್ಧರು ದೇವಸ್ಥಾನ, ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡಬೇಕಾದ ಅನಿವಾರ್ಯತೆಯ ಸ್ಥಿತಿ. ಪ್ರತಿ ಮಳೆಗಾಲದಲ್ಲಿ ನೀಲಮ್ಮನತೋಟ ಪ್ರದೇಶದ ಜನರು ಕೈಯಲ್ಲಿ ಜೀವ ಹಿಡಿದುಕೊಂಡೇ ಕಾಲ ತಳ್ಳಬೇಕಾಗುತ್ತಿತ್ತು. ರಾತ್ರಿ ವೇಳೆ ಮಳೆಯಾದರೆ ರಾತ್ರೋರಾತ್ರಿ ಎಲ್ಲರ ಬದುಕು ಅಕ್ಷರಶಃ ಬೀದಿಗೆ ಬರುತ್ತಿತ್ತು. ಇಂತಹ ಸಂಕಷ್ಟ ಮುಗಿಯಲಾರದಂತ
ಕಥೆಯಂತಾಗಿತ್ತು.

ಪ್ರತಿ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುವುದು, ಬೀದಿಯಲ್ಲೇ ಜೀವನ ನಡೆಸುವುದು, ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಸಾಂತ್ವನ ಹೇಳುವುದು, ಒಂದರೆಡು ದಿನಗಳ ಮಟ್ಟಿಗೆ ಗಂಜೀಕೇಂದ್ರ ತೆರೆಯುವುದು, ಏನಾದರೂ ಸೂಕ್ತ ವ್ಯವಸ್ಥೆಯ ಭರವಸೆ ನೀಡುವುದು… ನಡೆಯುತ್ತಲೇ ಇತ್ತು.

ಕಳೆದ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ರಾತ್ರೋರಾತ್ರಿ ಮನೆಗಳು ಧರೆಗೆ ಉರುಳಿದ ಪರಿಣಾಮ ಇಡೀ ನೀಲಮ್ಮನ ತೋಟ ಪ್ರದೇಶದ ಜನಜೀವನ ದುಸ್ತರವಾಗಿತ್ತು. ವಾರಗಟ್ಟಲೆ ಬೀದಿಯಲ್ಲೇ ಕಾಲ ಕಳೆಯಬೇಕಾಯಿತು. ಮನೆ ಕಳೆದುಕೊಂಡವರು ಅನಿವಾರ್ಯವಾಗಿ ಸಂಬಂಧಿಕರು, ಬಾಡಿಗೆ ಮನೆಗೆ ಎಡತಾಕಬೇಕಾಯಿತು.

ಪರಿಹಾರ: ಪ್ರತಿ ಮಳೆಗಾಲದಲ್ಲಿ ಇದೇ ಸ್ಥಿತಿ ಅನುಭವಿಸುತ್ತಾ ರೋಸಿ ಹೋಗಿದ್ದ ನೀಲಮ್ಮನ ತೋಟ ಪ್ರದೇಶದ ಜನರು ಸಭೆ ಸೇರಿ, ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳುವ ನಿರ್ಧಾರಕ್ಕೆ ಬಂದರು. ಮಳೆಗೆ ಬಿದ್ದಿದ್ದ ಮನೆಗಳ ತೆರವುಗೊಳಿಸಿ, ಎಲ್ಲರೂ ಸಮಾನವಾಗಿ ಜಾಗ ಹಂಚಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಿದರು. ಅದರಂತೆ ಎಲ್ಲರೂ 16+32 ಅಡಿ ಸುತ್ತಳತೆ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳಲು ನಿಶ್ವಯಿಸಿದರು. ಎಲ್ಲರೂ ಒಂದಾಗಿ ರಸ್ತೆಗೆ ಜಾಗ ಬಿಟ್ಟರು. ಮಾತ್ರವಲ್ಲ ಪ್ರತಿ ಮನೆಯವರು ರಸ್ತೆಗೆ 5 ಲೋಡ್‌ ಮಣ್ಣು ಹಾಕಿಸುವ ಒಪ್ಪಂದ ಮಾಡಿಕೊಂಡರು. ಇನ್ನು ಅಗತ್ಯವಾದ ಚರಂಡಿ, ಒಳ ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಗೆ ಮಹಾನಗರ ಪಾಲಿಕೆ ಮೊರೆ ಹೋಗಲು ನಿಶ್ಚಯಿಸಿದರು. 

ನೀಲಮ್ಮನ ತೋಟದ ಪ್ರದೇಶದ ಜನರ ಸಾಂಘಿಕ ನಿರ್ಧಾರದ ಫಲವಾಗಿ ಸರ್ಕಾರದ ಅಲ್ಪಸ್ವಲ್ಪ ನೆರವಿನ ಜೊತೆಗೆ ಸುಸಜ್ಜಿತ ಮನೆಗಳು ನಿರ್ಮಾಣವಾಗುತ್ತಿವೆ. ಇಡೀ ಪ್ರದೇಶ ಸರ್ಕಾರಿ ವಸತಿ ಸಮುಚ್ಚಯದಂತೆ ಕಂಡು ಬರುತ್ತಿದೆ. ಮಳೆಯ ನೀರು ಮನೆಗೆ ನುಗ್ಗದಂತೆ ರಸ್ತೆಗಿಂತಲೂ 2 ಅಡಿ ಎತ್ತರದಲ್ಲಿ ಮನೆ ಕಟ್ಟಿಸಿಕೊಂಡಿದ್ದಾರೆ. ಮನೆ ಕಟ್ಟಿಕೊಳ್ಳಲು ಒಬ್ಬರು ಒಬ್ಬರಿಗೆ ನೆರವು ನೀಡುತ್ತಿದ್ದಾರೆ. ಕೆಲವರು ತಾವೇ ಮನೆ ನಿರ್ಮಾಣಕ್ಕೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಎಲ್ಲರ ಉದ್ದೇಶ ಒಂದೇ ಇಷ್ಟು ವರ್ಷಗಳ ಕಾಲ ಮಳೆಗಾಲದಲ್ಲಿ ಅನುಭವಿಸುತ್ತಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು.

ಸರ್ವರಿಗೆ ಸಮಪಾಲು… ಸರ್ವರಿಗೆ ಸಮಬಾಳು… ಎಂಬ ತತ್ವವನ್ನು ಸಾಂಘಿಕವಾಗಿ ಅನುಷ್ಠಾನಕ್ಕೆ ತರುತ್ತಿರುವ ಪರಿಣಾಮ ಕೆಲ ದಿನಗಳ ಹಿಂದೆ ಹಾಳು ಕೊಂಪೆಯಾಗಿ ಕಂಡು ಬರುತ್ತಿದ್ದ ನೀಲಮ್ಮನ ತೋಟ ಪ್ರದೇಶ ಹೊಸ ಬಡಾವಣೆಯಂತಾಗುತ್ತಿದೆ.  1930ರ ದಶಕದಲ್ಲಿ ದಾವಣಗೆರೆ ಕಾಟನ್‌ ಮಿಲ್‌ ಕಟ್ಟಡ ನಿರ್ಮಾಣಕ್ಕೆಂದು ತಮಿಳುನಾಡಿ ನಿಂದ ಬಂದಿರುವ ಕುಟುಂಬಗಳೇ ಇಲ್ಲಿ ಹೆಚ್ಚಾಗಿ ನೆಲೆಸಿವೆ.
 
1974-75 ರಲ್ಲಿ ಅಂದಿನ ನಗರಸಭೆ ಅಧ್ಯಕ್ಷರಾಗಿದ್ದ ಪಂಪಾಪತಿಯವರು ನೀಲಮ್ಮನ ತೋಟ ಪ್ರದೇಶವನ್ನು ಅಧಿಕೃತ ಕೊಳಚೆ ಪ್ರದೇಶ ಎಂದು ಘೋಷಿಸಿದ್ದಾರೆ. ಈಗಲೂ ಈ ಜಾಗದ ವ್ಯಾಜ್ಯ ಇದೆ. ಅಧಿಕೃತ ಕೊಳಚೆ ಪ್ರದೇಶ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜಾಗದ ಸಮಸ್ಯೆ ಬಾಧಿಸದು ಎಂಬ ವಿಶ್ವಾಸದಲ್ಲೇ ಜನರಿದ್ದಾರೆ.

ಸಾಂಘಿಕ ಪ್ರಯತ್ನದ ಫಲ ನಾವ್‌ ಸಣ್ಣ ಹುಡುಗರಾಗಿದ್ದಾಗನಿಂದಲೂ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗೊàದು ಕಾಮನ್‌ ಆಗಿತ್ತು. ಬೆಳೆದು ದೊಡ್ಡವರಾದರೂ ಈ ಪ್ರಾಬ್ಲಿಂ ತಪ್ಪಲೇ ಇಲ್ಲ. ಗೌರಮೆಂಟ್‌ನೊರು ಬರೋದು ಮಳೆ ನೀರು ಮನೆಗಳಿಗೆ ನುಗ್ಗದಂತೆ ಮಾಡೀ¤ವಿ, ಮನೆ ಕಟ್ಟಿಸಿಕೊಡೀ¤ವಿ ಎಂದು ಹೇಳಿ ಹೋಗುತ್ತಿದ್ದರು. ಹೋದ
ವರ್ಷ ಮಳೆಗಾಲದಲ್ಲೂ ಇದೇ ಪ್ರಾಬ್ಲಿಂ ಆಯ್ತು. ಮಿನಿಸ್ಟು ಮಲ್ಲಿಕಾರ್ಜುನ್‌, ಎಂಎಲ್‌ಎ ಶಾಮನೂರು ಶಿವಶಂಕರಪ್ಪ ಬಂದು ನೋಡಿ, ಏನಾದರೂ ಮಾಡೋ ಭರವಸೆ ನೀಡಿದರು. 

ಮೌಲ್ಡ್‌ ಮನೆ ಕಟ್ಟಿಸಿಕೊಡುವ ಜೊತೆಗೆ ಜಾಗದ ಪ್ರಾಬ್ಲಿಂ ಸಾಲ್ವ ಮಾಡುವುದಾಗಿ ತಿಳಿಸಿದರು. ಆಮೇಲೆ ಈ ಏರಿಯಾದ ಜನರೆಲ್ಲ ಮೀಟಿಂಗ್‌ ಮಾಡಿ, ನಾವೇ ಏನಾದರೂ ಮಾಡಿಕೊಳ್ಳೋಣ. ಇಲ್ಲ ಅಂದರೆ ಈ ಪ್ರಾಬ್ಲಿಂ ಮುಗಿಯೊದೇ ಇಲ್ಲ ಅಂದುಕೊಂಡೆವು. ಅದರಂತೆ ಮನೆ ಕಟ್ಟಿಕೊಳ್ಳುತ್ತಿದ್ದೇವೆ. ಸರ್ಕಾರದಿಂದ 15-20 ಸಾವಿರ, 3 ಚೀಲ ಸಿಮೆಂಟ್‌ ಸಿಕ್ಕಿದೆ. ಇನ್ನು ಉಳಿದುದ್ದನ್ನ ಸಾಲ-ಸೋಲ ಮಾಡಿ ಮನೆ ಕಟ್ಟಿಕೊಳ್ಳುತ್ತಿದ್ದೇವೆ. ನಾವೇ ಒಟ್ಟಾಗಿ ಪರಿಹಾರ ಕಂಡಿಕೊಂಡೀವಿ. ಮಳೆ ನೀರು ಮನೆಗೆ ನುಗ್ಗೊದು ನಿಲ್ತಾ ಇದೆ ಎಂದು ಖುಷಿಯಿಂದ ಹೇಳಿಕೊಳ್ಳುವ ಜೊತೆಗೆ ಸರ್ಕಾರ ಇನ್ನೂ ಹೆಲ್ಪ್ ಮಾಡಬೇಕು ಎನ್ನುವುದು ವೇಲುಮಣಿ, ಕೃಷ್ಣಮೂರ್ತಿ, ಇಳವರಸಿ, ರತ್ನಮ್ಮ ಇತರರ ಒತ್ತಾಯ.

ರಾ.ರವಿಬಾಬು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ