ಅಪಾಯದ ಅಂಚಿನಲ್ಲಿದೆ ದೇಶದ ಪ್ರಜಾಪ್ರಭುತ್ವ

Team Udayavani, Mar 10, 2019, 7:23 AM IST

ದಾವಣಗೆರೆ: ದೇಶದಲ್ಲಿ ಪ್ರಜಾಪ್ರಭುತ್ವ ಅಪಾಯದ ಅಂಚಿನಲ್ಲಿದೆ ಎಂದು ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯ ಪಿ.ವಿ ಲೋಕೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ. ಶನಿವಾರ, ನಗರದ ರೋಟರಿ ಬಾಲಭವನದಲ್ಲಿ ಭಾರತ ಕಮ್ಯೂನಿಸ್ಟ್‌ ಪಕ್ಷದ ಜಿಲ್ಲಾ ಮಂಡಳಿ ಆಯೋಜಿಸಿದ್ದ ಸಿಪಿಐ ರಾಜಕೀಯ ಸಮಾವೇಶ ಉದ್ಘಾಟಿಸಿ, ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಯಲು ಬಿಜೆಪಿ ಹೊರತಾಗಿ ಮತದಾನ ಮಾಡಬೇಕು ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ ಹೆಚ್ಚಾಗಿದೆ. ಸಾಮಾನ್ಯ ಜನರ ಬದುಕು ಕಸಿಯುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬಾರದು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣ ಕೇವಲ ಶೇ. 31ರಷ್ಟು ಮಾತ್ರ ಮತದಾನ ನಡೆದಿರುವುದು. 

ಬಿಜೆಪಿಗೆ ಶೇ. 90ರಷ್ಟು ಜನ ವಿರೋಧಿಗಳಿದ್ದಾರೆ. ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರೆ ಮಾತ್ರ ದೇಶದಲ್ಲಿ ಬದುಕುವ ಹಕ್ಕು ಉಳಿಯಲು ಸಾಧ್ಯ ಎಂದು ಅವರು ಹೇಳಿದರು. ನರೇಂದ್ರ ಮೋದಿಯವರು 2014ರಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ
ಈವರೆಗೂ ಈಡೇರಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿಲ್ಲ, ರೈತರ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಇಲ್ಲ. ಡಾ| ಸ್ವಾಮಿನಾಥನ್‌ ವರದಿ ಜಾರಿಯಾಗಿಲ್ಲ.

ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇವೆ. ಜಿಎಸ್‌ಟಿ ಜಾರಿ, ನೋಟು ಬ್ಯಾನ್‌, ಆಧಾರ್‌ ಕಡ್ಡಾಯ ಇವು ಚುನಾವಣಾ ಪ್ರಣಾಳಿಕೆಯಲ್ಲಿರಲಿಲ್ಲ. ಬಿಜೆಪಿ ಹೇಳುವುದು ಒಂದು, ಮಾಡುವುದು ಇನ್ನೊಂದು ಎಂದು ಅವರು ವ್ಯಂಗ್ಯವಾಡಿದರು. 

ಪ್ರಧಾನಿ ಮೋದಿಯವರು ಸ್ವಯಂ ವೈಭವೀಕರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ರಾಮ ಮಂದಿರ ನಿರ್ಮಾಣದ ಹೆಸರೇಳಿಕೊಂಡು ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಉಗ್ರರ ದಾಳಿ ವಿಷಯ ಬಳಸಿಕೊಂಡು ಜನರನ್ನು ಮತ್ತೂಮ್ಮೆ ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಹೇಳುವ ಪ್ರಧಾನಿ ಮೋದಿ, ರಫೆಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡುವುದಿಲ್ಲ. 

ನ್ಯಾಯಾಲಯ ರಫೆಲ್‌ ಬಗ್ಗೆ ತನಿಖೆ ನಡೆಸಲು ಎಲ್ಲಿ ಹೇಳುತ್ತದೆಯೋ ಎಂಬ ಆತಂಕದಿಂದ ದಾಖಲೆಗಳೇ ಕಳೆದಿವೆ ಎಂಬುದಾಗಿ ಸುಳ್ಳು ಹೇಳುತ್ತಾರೆಂದು ಅವರು ಆಪಾದಿಸಿದರು. ಸಿಪಿಐ ಮುಖಂಡ ಎಚ್‌. ಕೆ ರಾಮಚಂದ್ರಪ್ಪ, ಆವರಗೆರೆ ವಾಸು,ಆನಂದರಾಜ್‌, ಪಾಲಿಕೆ ಸದಸ್ಯ ಎಚ್‌.ಜಿ ಉಮೇಶ್‌, ಎಂ.ಬಿ ಶಾರದಮ್ಮ ಇತರರು ಈ ಸಂದರ್ಭದಲ್ಲಿದ್ದರು. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ