ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ

Team Udayavani, Jan 25, 2019, 5:28 AM IST

ದಾವಣಗೆರೆ: ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಗುತ್ತಿಗೆದಾರರ ಸಂಘದಿಂದ ದೂರು ಬಂದಿವೆ. ಭ್ರಷ್ಟಾಚಾರಕ್ಕೆ ಇಲ್ಲಿ ಅವಕಾಶವೇ ಇಲ್ಲ. ಲೂಟಿ ಹೊಡೆಯಲು ಬಿಡುವುದಿಲ್ಲ. ನಿಮಗೆ ಎಲ್ಲಿ ಲೂಟಿ ಹೊಡೆಯಲು ಅವಕಾಶವಿದೆಯೋ ಅಲ್ಲಿಗೆ ಹೋಗಿ…

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಗುರುವಾರ ಸ್ಮಾರ್ಟ್‌ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.

ಸ್ಮಾರ್ಟ್‌ಸಿಟಿ ಕಚೇರಿಯಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದರ ಬಗ್ಗೆ ದೂರು ಬಂದಿವೆ. ನಾವು ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ. ನಿಮಗೆ ಎಲ್ಲಿ ಲೂಟಿ ಹೊಡೆಯಲು ಅವಕಾಶವಿದೆಯೋ ಅಲ್ಲಿಗೆ ಹೋಗಿ… ಎಂದು ಗರಂ ಆದರು.

ಶಾಸಕ ಶಾಮನೂರು ಶಿವಶಂಕರಪ್ಪ ಆರೋಪ, ಆಕ್ರೋಶಕ್ಕೆ ಧ್ವನಿಗೂಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ಎಸ್‌.ಎ. ರವೀಂದ್ರನಾಥ್‌, ಭ್ರಷ್ಟಾಚಾರ ಎಂಬುದು ಮಾಮೂಲು ಎಂಬಂತೆ ಆಗಿದೆ. ದಾವಣಗೆರೆಯಲ್ಲಿ ಭ್ರಷ್ಟಾಚಾರಕ್ಕೆ ಅಸ್ಪದ ಇಲ್ಲ ಎಂದರು. ಕೆಲವರು ನಮ್ಮ ಮೇಲೆ ಆ ರೀತಿ ಆರೋಪ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ಆದರೆ, ಕಾಮಗಾರಿಗಳು ನಿಗದಿತ ಅವಧಿಯೊಳಗೆ ಮುಕ್ತಾಯವಾಗಿಲ್ಲ. ನಾಗರಿಕರು ಜನಪ್ರತಿನಿಧಿಗಳನ್ನು ದೂರುತ್ತಿದ್ದಾರೆ. ಹಾಗಾಗಿ ಜನಪ್ರತಿನಿಧಿಗಳು ಮುಜುಗರಕ್ಕೆ ಒಳಗಾಗುತ್ತಿದ್ದೇವೆ. ಅಧಿಕಾರಿಗಳು ಸಂಬಂಧಿತ ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್‌.ಎ.ರವೀಂದ್ರನಾಥ್‌ ಸೂಚಿಸಿದರು.

ಒಂದು ವರ್ಷದ ಹಿಂದೆ ಕಾಮಗಾರಿಗಳು ಆರಂಭಗೊಂಡಿದ್ದರೂ ದಾವಣಗೆರೆ ಹಳೇ ಭಾಗದ ಕಾಮಗಾರಿಗಳು ಮುಕ್ತಾಯಗೊಳ್ಳದಿರುವ ಬಗ್ಗೆ ಶಾಮನೂರು ಶಿವಶಂಕರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಿಗದಿತ ಅವಧಿಯೊಳಗೆ ಮುಗಿಸಲು ವಿಳಂಬ ಏಕೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಪ್ರಶ್ನಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆಯಿಂದಾಗಿ ಕಾಮಗಾರಿಗಳನ್ನು ಗುತ್ತಿಗೆ ನೀಡುವ ವೇಳೆ ತಾಂತ್ರಿಕ ತೊಂದರೆ ನಿವಾರಿಸದೆ ಇರುವುದರಿಂದ ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಲಾಗುತ್ತಿಲ್ಲ ಎಂದು ಸ್ಮಾರ್ಟ್‌ಸಿಟಿ ಯೋಜನೆ ನಿರ್ದೇಶಕ ಶಿವನಹಳ್ಳಿ ರಮೇಶ್‌ ದೂರಿದರು.

ಏನೇ ಸಮಸ್ಯೆ ಇದ್ದರೂ ಇದೀಗ ಆರಂಭಗೊಂಡಿರುವ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಮುಗಿಸಬೇಕು. ಮುಂದೆ ಸ್ಮಾರ್ಟ್‌ಸಿಟಿಯ ಯಾವುದೇ ಕಾಮಗಾರಿಗಳು ವಿಳಂಬ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಮಿತಿ ಸೂಚಿಸಿತು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಮಾಜಿ ಮೇಯರ್‌ ಅನಿತಾ ಮಾಲತೇಶ್‌ ಜಾಧವ್‌, ದಿನೇಶ್‌ ಕೆ. ಶೆಟ್ಟಿ, ನಿರ್ದೇಶಕರಾದ ಅಥಣಿ ಎಸ್‌. ವೀರಣ್ಣ, ಡಾ| ಎಚ್. ಈರಮ್ಮ, ಅಜ್ಜಂಪುರಶೆಟ್ರಾ ಶಂಭುಲಿಂಗಪ್ಪ, ಮುರುಘರಾಜೇಂದ್ರ ಜೆ. ಚಿಗಟೇರಿ, ಡಾ| ಶಾಂತಾ ಭಟ್, ಮಂಜುಳಾ ಬಸವಲಿಂಗಪ್ಪ, ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್‌ ಷರೀಫ್‌, ನಗರಪಾಲಿಕೆ ಆಯುಕ್ತ ಮಂಜುನಾಥ್‌ ಆರ್‌. ಬಳ್ಳಾರಿ, ಇಂಜಿನಿಯರ್‌ ಎಂ.ನಾಗರಾಜ್‌, ಹೈಡೆಕ್‌ ಸಂಸ್ಥೆಯವರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ