70 ಅಡಿ ಎತ್ತರದ ಕಟ್ಟಡದಿಂದಬಿದ್ದು ಕಳವು ಆರೋಪಿ ಸಾವು
Team Udayavani, Apr 10, 2018, 12:57 PM IST
ದಾವಣಗೆರೆ: ಕಳ್ಳನೊಬ್ಬ ಸಾರ್ವಜನಿಕರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಹಾರುವಾಗ ಆಯತಪ್ಪಿ ಕೆಳಕ್ಕೆ ಬಿದ್ದು ಸಾವಿಗೀಡಾದ ಘಟನೆ ನಗರದ ನಿಟುವಳ್ಳಿ ಕರಿಯಾಂಬಿಕೆ ದೇವಸ್ಥಾನ ರಸ್ತೆಯಲ್ಲಿ ಭಾನುವಾರ ತಡರಾತ್ರಿ 2.30ರ ಸುಮಾರಿಗೆ ಸಂಭವಿಸಿದೆ.
ಲೆನಿನ್ ನಗರ ಕೊರಚರ ಹಟ್ಟಿ ನಿವಾಸಿ ಅಭಿ ಅಲಿಯಾಸ್ ಅಭಿಷೇಕ್(18) ಸಾವಿಗೀಡಾದ ಯುವಕ. ಅಭಿಷೇಕ್, ಕಿರಣ್ ಹಾಗೂ ಮತ್ತಿಬ್ಬರು ಸೇರಿ ನಾಲ್ವರು ಕರಿಯಾಂಬಿಕೆ ದೇವಸ್ಥಾನದ ಬಳಿ ಸೆಕೆಯ ಕಾರಣಕ್ಕೆ ಹೊರಗೆ ಮಲಗಿದ್ದ ಮಹಿಳೆ ಮಾಂಗಲ್ಯ ಸರ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಎಚ್ಚರಗೊಂಡ ಮಹಿಳೆ ಕೂಗಿಕೊಂಡಿದ್ದಾರೆ. ಆಗ ಸುತ್ತಮುತ್ತಲ ಜನ ಕಳ್ಳರನ್ನು ಅಟ್ಟಿಸಿಕೊಂಡು ಹೋಗಿದ್ದಾರೆ. ಮೂವರು ಬೇರೆ ಬೇರೆ ಮಾರ್ಗ ಹಿಡಿದು ತಪ್ಪಿಸಿಕೊಂಡಿದ್ದಾರೆ. ಆದರೆ, ಅಭಿ ಮಾತ್ರ ಪಕ್ಕದ ರಸ್ತೆಯಲ್ಲಿದ್ದ ಮನೆಯ ಮಾಳಿಗೆ ಏರಿದ್ದಾನೆ. ಜನ ಅವನನ್ನು ಹಿಡಿಯಲು ಮುಂದಾದಾಗ ಸುಮಾರು 70 ಅಡಿ ಎತ್ತರದ ಕಟ್ಟಡದಿಂದ ಟಿವಿ ಕೇಬಲ್ ಹಿಡಿದು ಪಕ್ಕದ ಕಟ್ಟಡಕ್ಕೆ ಹಾರಲು ಯತ್ನಿಸಿದ್ದಾನೆ. ಆದರೆ, ಆಯತಪ್ಪಿ ಕಟ್ಟಡದಿಂದ ಕೆಳಕ್ಕೆ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಕ್ಕೂ ಮುನ್ನ ರಾಷ್ಟ್ರೋತ್ಥಾನ ಶಾಲೆಯ ಎದುರಿನ ಎರಡು ಮನೆಯಲ್ಲಿ ಚಿನ್ನದ ಸರ, ನಗದು ಕಳವು ಮಾಡಲಾಗಿದೆ. ಪೊಲೀಸರ ಪ್ರಕಾರ ಈ ಕಳ್ಳತನ ಸಹ ಈ ನಾಲ್ವರು ಮಾಡಿದ್ದಂತೆ. ಅಲ್ಲಿಂದ ಕರಿಯಾಂಬಿಕೆ ದೇವಸ್ಥಾನದ ಬಳಿ ಬಂದು ಅಲ್ಲಿ ಮನೆಯ ಹೊರಗೆ ಮಲಗಿದ್ದ ಮಹಿಳೆಯ ಚಿನ್ನದ ಸರ ಕದಿಯಲು ಯತ್ನಿಸಿದ್ದಾರೆ. ಮಹಿಳೆ ಕೂಗಿಕೊಂಡಾಗ ಸೇರಿದ ಜನರು ಇವರನ್ನು ಹಿಡಿಯಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಭಿಷೇಕ್ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಯುವಕ ಸಾವಿಗೀಡಾದ ಸುದ್ದಿ ತಿಳಿದ ಜನ ರಾತ್ರಿ 3 ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೆ ಅಭಿಷೇಕ್ ಬಿದ್ದು ಸಾವಿಗೀಡಾದ ಸ್ಥಳ ವೀಕ್ಷಿಸುತ್ತಿದ್ದುದು ಸಾಮಾನ್ಯವಾಗಿತ್ತು. ಪೊಲೀಸ್ ಉಪಾಧೀಕ್ಷಕ ಮಂಜುನಾಥ ಗಂಗಲ್, ವೃತ್ತ ನಿರೀಕ್ಷಕ ಆನಂದ, ಪಿಎಸ್‌ಐ ಸಂದೀಪ್ ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿದರು.
ತಂದೆ-ತಾಯಿ ಹೇಳ್ಳೋದೆ ಬೇರೆ ಘಟನೆಯಲ್ಲಿ ಸಾವಿಗೀಡಾಗಿರುವ ಅಭಿಷೇಕ್ ಸಾವಿನ ಕುರಿತು ಆತನ ತಂದೆ-ತಾಯಿ ಬೇರೆ ಕಾರಣ ಹೇಳುತ್ತಿದ್ದಾರೆ. ಅಭಿಷೇಕ್ ಪ್ಲಂಬರ್ ಕೆಲಸ ಮಾಡಿಕೊಂಡಿದ್ದ. ಇತ್ತೀಚೆಗೆ ಕೆಲಸ ಕಡಿಮೆ ಆದ ಹಿನ್ನೆಲೆಯಲ್ಲಿ ಮನೆ ಹತ್ತಿರದ ಕಿರಣ್ ಎಂಬುವನ ಜೊತೆ ಓಡಾಡಿಕೊಂಡಿದ್ದ. ಈ ವೇಳೆ ಕಿರಣ್ ತಂಗಿ ಮತ್ತು ಅಭಿಷೇಕ್‌ರ ಸಂಬಂಧ ಕುರಿತು ಕಿರಣ್ ಜೊತೆ ಜಗಳ ಆಗಿತ್ತು. ಇದೇ ಕಾರಣಕ್ಕೆ ಅಭಿಷೇಕ್‌ನನ್ನು ಕಿರಣ್ ಕರೆದುಕೊಂಡು ಹೋಗಿ ಚೆನ್ನಾಗಿ ಕುಡಿಸಿ, ಈ ರೀತಿ ಕೊಲೆ ಮಾಡಿರಬೇಕು ಎಂದು ತಂದೆ- ತಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಶ್ವಾನಗಳು ನೇರ ಅಭಿ ಮನೆಗೆ ಅಭಿಷೇಕ್ ಸಾವಿಗೀಡಾದ ಸ್ಥಳ, ರಾಷ್ಟ್ರೋತ್ಥಾನ ಶಾಲೆಯ ಬಳಿಯ ಮನೆಗಳಲ್ಲಿನ ತನಿಖೆಗೆಂದು ಕರೆತಂದಿದ್ದ ಶ್ವಾನಗಳು ರಾಷ್ಟ್ರೋತ್ಥಾನ ಶಾಲೆಯ ಬಳಿ ಕಳ್ಳತನ ಆಗಿದ್ದ ಮನೆಯಿಂದ ನೇರ ಅಭಿಷೇಕ ಮನೆಗೆ ಬಂದಿವೆ. ಈ ಮನೆಗಳಲ್ಲಿ ಕಳವಾಗಿದ್ದ ವಸ್ತುಗಳನ್ನು ಅಭಿಷೇಕ್ ಮೊದಲು ಮನೆಗೆ ತಂದಿಟ್ಟು ವಾಪಸ್ ಹೋಗಿರಬಹುದು. ಇದೇ ಕಾರಣಕ್ಕೆ ಶ್ವಾನಗಳು ಈ ರೀತಿ ನೇರ ಆತನ ಮನೆಗೆ ಬಂದಿವೆ ಎಂಬ ಅಭಿಪ್ರಾಯ ಕೇಳಿಬರುತ್ತಿವೆ. ಈ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸರಣಿ ಕಳ್ಳತನದಲ್ಲಿ ಕೈವಾಡ?
ಕಳೆದ ನಾಲ್ಕೈದು ದಿನಗಳಿಂದ ಪ್ರತಿನಿತ್ಯ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿ ಮತ್ತು ಸಮೀಪದಲ್ಲಿ ಕಳವು ಪ್ರಕರಣ ನಡೆದಿವೆ. ಕೆಟಿಜೆ ನಗರ 17ನೇ ತಿರುವಿನಲ್ಲಿ 2 ದೇವಸ್ಥಾನದ ಹುಂಡಿ, ಜಿಲ್ಲಾ ಕ್ರೀಡಾಂಗಣದ ಬಳಿ ಮೆಡಿಕಲ್ ಅಂಗಡಿ ಸೇರಿ 6 ಅಂಗಡಿಗಳಲ್ಲಿ ಕಳವು ಮಾಡಲಾಗಿತ್ತು. ಅದಾದ ನಂತರ ಸೋಮವಾರ ತಡರಾತ್ರಿ ರಾಷ್ಟ್ರೋತ್ಥಾನ ಶಾಲೆ ಮುಂದೆ ಮನೆಗಳ್ಳತನ ನಡೆದಿದೆ. ಈ ಎಲ್ಲಾ ಕಳ್ಳತನ ಇವರೇ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.