ಸಿಡಿಲು-ಗುಡುಗು,ಮಳೆ ನಿಂತ ನಂತರದ ಶಾಂತತೆ

Team Udayavani, May 12, 2018, 4:08 PM IST

ದಾವಣಗೆರೆ: ಗುಡುಗು, ಸಿಡಿಲು, ಭೋರ್ಗರೆವ ಮಳೆ ಸುರಿದು, ಶಾಂತತೆ ಆವರಿಸಿದಂತೆ ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರದ ನಂತರ ಶುಕ್ರವಾರ ಇಡೀ ನಗರದಲ್ಲಿ ಒಂದು ರೀತಿಯ ಮೌನ ಇತ್ತು.

ಚುನಾವಣಾ ಅಖಾಡದಲ್ಲಿ ಮತದಾರರ ಮನ ಗೆಲ್ಲಲು ಬಹಿರಂಗ-ಕಾರ್ಯಕರ್ತರ ಸಭೆ, ರೋಡ್‌ ಶೋ, ರ್ಯಾಲಿ, ಬೈಕ್‌ ರ್ಯಾಲಿ, ಮನೆ ಮನೆಗೆ ಅಭಿಯಾನ ಹೀಗೆ ತರೇಹವಾರಿ ಪಟ್ಟು ತೋರಿಸುವಲ್ಲಿ ರಾಜಕೀಯ ಪಟುಗಳು
ನಿರತರಾಗಿದ್ದರು.

ಈ ಅಖಾಡದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ನಿತೀಶಕುಮಾರ್‌, ಯೋಗಿ ಆದಿತ್ಯನಾಥ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಜ್ಯಸಭಾ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌,
ಹೈದರಾಬಾದ್‌ ಸಂಸದ ಅಸಾದುದ್ದೀನ್‌ ಓವೈಸಿ, ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೀಗೆ ಸಾಲು ಸಾಲು ದಿಗ್ಗಜರು ತಮ್ಮ ತಮ್ಮ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗಿಯಾಗಿ, ಮತಯಾಚಿಸಿದರು.  ಇನ್ನು ಕಾರ್ಯಕರ್ತರು ಸಹ ತಮ್ಮದೇ
ಪಾತ್ರ ನಿರ್ವಹಿಸಿದ್ದರು. ಪ್ರತಿಯೊಬ್ಬ ನಾಯಕ ಬಂದಾಗಲೂ ಪಕ್ಷದ ಕಾರ್ಯಕರ್ತರು ಅತಿ ಉತ್ಸಾಹದಿಂದ ಅವರನ್ನು ಸ್ವಾಗತಿಸಿದ್ದರು. ಭರ್ಜರಿ ಮೆರವಣಿಗೆ ನಡೆಸಿ, ನಾಯಕರಿಂದ ಮತದಾರರ ಮನ ಸೆಳೆಯಲು ಪ್ರಯತ್ನಿಸಿದ್ದರು.

ಅಭ್ಯರ್ಥಿಗಳು ಹಲವು ದಿನಗಳು ಸರಿಯಾಗಿ ನಿದ್ದೆ ಸಹ ಮಾಡದೆ ತಂತ್ರ, ಪ್ರತಿತಂತ್ರ ಹೆಣೆಯುವುದರಲ್ಲಿ ಕಾಲ ಕಳೆದಿದ್ದರು. ಇನ್ನು ಪಕ್ಷದ ನಾಯಕರು ವಿರೋಧಿ ಪಾಳಯದ ಯೋಜನೆ, ಯೋಚನೆ ಅರಿತು ಅದಕ್ಕೊಂದು ಪ್ರತಿ ಯೋಜನೆ ರೂಪಿಸಿದ್ದರು. ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ದಣಿವರಿಯದೆ ಕೆಲಸ ಮಾಡಿದ್ದರು. ಮನೆ ಮನೆಗೆ ತೆರಳಿ, ಮತಯಾಚಿಸಿದ್ದರು. ಬಲ್ಲವರು, ಸ್ನೇಹಿತರು, ಬಂಧು, ಬಳಗ ಎಲ್ಲರೊಂದಿಗೆ ಪದೇ ಪದೇ ಮಾತನಾಡಿ ತಮ್ಮದೇ ಅಭ್ಯರ್ಥಿ ಗೆಲ್ಲಿಸಿ ಎಂದು ಕೇಳಿಕೊಂಡಿದ್ದರು.

ಇತ್ತ ದೊಡ್ಡ ದೊಡ್ಡ ನಾಯಕರು ಬಂದಾಗ ಬ್ಯಾನರ್‌ ಕಟ್ಟುವ, ಕರಪತ್ರ ಹಂಚುವ, ವೇದಿಕೆ ಸಿದ್ಧಗೊಳಿಸುವ, ಕಾರ್ಯಕ್ರಮಕ್ಕೆ ಬಂದ ಪರ ಊರುಗಳ ಪಕ್ಷದ ಬೆಂಬಲಿಗರು, ಕಾರ್ಯಕರ್ತರಿಗೆ ಉಪಚರಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಪ್ರಚಾರಕ್ಕಾಗಿ ನಾಯಕರು ಬಂದ ಮೇಲೆ ಅವರ ಪರ ಘೋಷಣೆ ಕೂಗುತ್ತಾ, ಕೇಕೆ ಹಾಕುತ್ತ, ಸಿಳ್ಳೆ ಹೊಡೆಯುತ್ತಾ ಮೆರವಣಿಗೆಯೊಂದಿಗೆ ಸಾಗಿದ್ದೂ ಆಯಿತು. ನಾಯಕರು ಹೋದ ಮೇಲೆ ಅವರೆಲ್ಲಾ ವಾಪಸ್‌ ತಮ್ಮ ತಮ್ಮ ಊರಿಗೆ ತಲುಪುವರೆಗೆ ಕಾರ್ಯ ನಿರತರಾಗಿದ್ದರು.

ಕಾರ್ಯಕರ್ತರು, ಬೆಂಬಲಿಗರು ಹಾಗೂ ಅಭಿಮಾನಿಗಳ ಶ್ರಮಕ್ಕೆ ಶನಿವಾರ ಮತಯಂತ್ರದ ಮೂಲಕ ಮತದಾರ ಪ್ರಭು ಫಲ ನೀಡಲಿದ್ದಾರೆ. ಇತ್ತ ಅಧಿಕಾರಿಗಳು ಸಹ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಕೆಲಸ ಮಾಡಿದ್ದಾರೆ. ಎಲ್ಲೂ ಸಹ ಲೋಪ ಆಗಬಾರದು, ನ್ಯಾಯಸಮ್ಮತ, ಮುಕ್ತ ಚುನಾವಣೆ ನಡೆಸಬೇಕೆಂಬ ಕಾರಣಕ್ಕೆ ಚುನಾವಣಾ ಆಯೋಗ ನೀಡಿದ್ದ ಮಾರ್ಗಸೂಚಿ ಅನುಸರಿಸಿದ್ದಾರೆ. ಚುನಾವಣೆಯ ಪ್ರಮುಖ 2 ಘಟ್ಟಗಳಲ್ಲಿ ಒಂದಾದ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. 

ಇನ್ನೇನಿದ್ದರೂ ಮತದಾರರ ಪಾತ್ರ ಪ್ರಮುಖವಾಗಲಿದೆ. ಇಂದು ಬೆಳಗ್ಗೆ 7 ಗಂಟೆಯಿಂದಲೇ ಆರಂಭವಾಗುವ ಮತದಾನ ಪ್ರಕ್ರಿಯೆ ಸಂಜೆಯವರೆಗೆ ನಡೆಯಲಿದೆ. ತಮ್ಮ ನೆಚ್ಚಿನ ಅಭ್ಯರ್ಥಿ ಪರ ಮತದಾರ ತನ್ನ ಮತವನ್ನು ಮತಯಂತ್ರದಲ್ಲಿ ಅಡಗಿಸಿಡಲಿದ್ದಾನೆ. ಮತದಾರ ಅಡಗಿಸುವ ಇಂಗಿತ ತಿಳಿಯಲು ಮೇ 15ರ ವರೆಗೆ ಕಾಯಬೇಕಿದೆ.

ಬೂತ್‌ನತ್ತ ಸಿಬ್ಬಂದಿ
ಶನಿವಾರ ನಡೆಯಲಿರುವ ಮತದಾನಕ್ಕೆ ಅಣಿಯಾಗಿರುವ ಅಧಿಕಾರಿಗಳು ಶುಕ್ರವಾರ ದಾವಣಗೆರೆ ಉತ್ತರ (ಡಿಆರ್‌
ಆರ್‌ ಪಾಲಿಟೆಕ್ನಿಕ್‌), ದಕ್ಷಿಣ(ಯುಬಿಡಿಟಿ ಕಾಲೇಜ್‌) ಹಾಗೂ ಮಾಯಕೊಂಡ (ಮೋತಿ ವೀರಪ್ಪ ಸರ್ಕಾರಿ ಪಪೂ
ಕಾಲೇಜ್‌) ಕ್ಷೇತ್ರದ ಮಸ್ಟರಿಂಗ್‌ ಕೇಂದ್ರದಿಂದ ಮತಯಂತ್ರ ಪಡೆದು, ತಮ್ಮ ತಮ್ಮ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು.
ಗ್ರಾಮೀಣ ಪ್ರದೇಶಗಳಿಗೆ ತೆರಳುವ ಸಿಬ್ಬಂದಿ, ಅಧಿಕಾರಿಗಳಿಗೆ ಹೈಸ್ಕೂಲ್‌ ಮೈದಾನದಿಂದ ಮಸ್ಟರಿಂಗ್‌ ಕೇಂದ್ರಕ್ಕೆ ತೆರಳಲು ಬಸ್‌ ವ್ಯವಸ್ಥೆ ಮಾಡಲಾಗಿತ್ತು. ಮಸ್ಟರಿಂಗ್‌ ಕೇಂದ್ರದಿಂದ ಚುನಾವಣಾ ಸಲಕರಣೆಗಳೊಂದಿಗೆ ಮತದಾನ ಕೇಂದ್ರಕ್ಕೆ ಬಸ್‌ ಏರಿ ನಿಗದಿತ ಸ್ಥಳಕ್ಕೆ ತೆರಳಿದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಸಿಬ್ಬಂದಿ, ಅಧಿಕಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ ಅಧಿಕಾರಿಗಳು ಸುಸೂತ್ರವಾಗಿ ಮತದಾನ ನಡೆಯುವಂತೆ ನೋಡಿಕೊಳ್ಳಿ ಎಂಬ ಸೂಚನೆ ನೀಡಿದರು.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ