ಕೂಲಿ ಮಾಡುವ ಹುಡುಗ ಪಿಯು ಟಾಪರ್‌!

Team Udayavani, Apr 16, 2019, 3:34 PM IST

ಹರಪನಹಳ್ಳಿ: ಕಷ್ಟಪಟ್ಟರೆ ಯಶಸ್ಸು ಖಂಡಿತ ಎಂಬ ಮಾತಿಗೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿರುವ ಬಾರಿಕರ ಶಿವಕುಮಾರ ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಕೂಲಿ ಕೆಲಸ ಮಾಡುತ್ತಾ ಓದಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.
ಪಟ್ಟಣದ ಉಜ್ಜಯಿನಿ ಪೀಠದ ಎಸ್‌ ಯುಜೆಎಂ ಪಿಯು ಕಾಲೇಜಿನ ವಿದ್ಯಾರ್ಥಿ ತಾಲೂಕಿನ ಸಾಸ್ವಿಹಳ್ಳಿ ಗ್ರಾಮದ ಬಾರಿಕರ ಶಿವಕುಮಾರ ಓದಿನೊಂದಿಗೆ ಬಿಡುವಿನ ಸಮಯದಲ್ಲಿ ಬೇರೆಯವರ ಹೊಲದಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಾ ಪಿಯುಸಿ ಕಲಾ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ.
ಹರಪನಹಳ್ಳಿ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರಿದ್ದರೂ ಶೈಕ್ಷಣಿಕವಾಗಿ ದಾವಣಗೆರೆ ವ್ಯಾಪ್ತಿಗೆ ಒಳಪಡುತ್ತಿರುವುದರಿಂದ ಬಾರಿಕರ ಶಿವಕುಮಾರ ದಾವಣಗೆರೆ ಜಿಲ್ಲೆಗೂ ಪ್ರಥಮ ಸ್ಥಾನ ಗಳಿಸಿದಂತಾಗಿದೆ. ಬಾರಿಕರ ಶಿವಕುಮಾರ ಕಲಾ ವಿಭಾಗದಲ್ಲಿ 589(98.01) ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದು, ಸಂಸ್ಕೃತ ಹಾಗೂ ಶಿಕ್ಷಣ(ಎಜ್ಯುಕೇಷನ್‌) ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದಾನೆ. ಕನ್ನಡ 96, ಐಚ್ಛಿಕ ಕನ್ನಡ 97, ರಾಜ್ಯಶಾಸ್ತ್ರ 99, ಇತಿಹಾಸ 97 ಅಂಕ ಪಡೆದು ಸಾಧನೆ ಮಾಡಿದ್ದಾನೆ. ದ್ವಿತೀಯ ಪಿಯುಸಿ ಓದಿದ್ದರೂ ಕೂಲಿ ಕೆಲಸ ಮಾಡಿಕೊಂಡು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ತಂದೆ ಬಾರಿಕರ ಗೋಣ್ಯೆಪ್ಪ ಹಾಗೂ ಕೋಟ್ರಮ್ಮ ಅವರಿಗೆ ತೀವ್ರ ಬಡತನ ಕಾಡುತ್ತಿದೆ. ತಂದೆ, ತಾಯಿ ದಿನಗೂಲಿ ಕೆಲಸಕ್ಕೆ ಹೋಗುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಕೂಲಿ ಕೆಲಸದ ಮೂಲಕವೇ ತಮ್ಮಬ್ಬರು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿರುವ ಗೋಣ್ಯೆಪ್ಪನ ಹಿರಿಯ ಮಗ ಶಿವಕುಮಾರ ಪಿಯುಸಿಯಲ್ಲಿ ಟಾಪರ್‌ ಆಗುವ ಮೂಲಕ ಪೋಷಕರಿಗೆ ಹೆಮ್ಮೆ ತಂದಿದ್ದಾನೆ. ಗೋಣ್ಯೆಪ್ಪ ಅವರ ಎರಡನೇ ಪುತ್ರಿ 8ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
 ರಜೆ ದಿನಗಳಲ್ಲಿ ಕೂಲಿ ಕೆಲಸ ಮಾಡಿಕೊಂಡ ಕಲಾ ವಿಭಾಗದಲ್ಲಿ ಟಾಪರ್‌ ಆಗಿರುವ ಶಿವಕುಮಾರ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.88 ಅಂಕ ಗಳಿಸಿದ್ದು, ಪಿಯುಸಿಯಲ್ಲಿ ಟಾಪರ್‌ ಆಗಬೇಕೆಂದು ಕನಸು ಕಂಡಿದ್ದ. ಸೋಮವಾರ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಾಗ ಶಿವಕುಮಾರ ಬೇರೆಯವರ ಹೊಲದಲ್ಲಿ ಗೊಬ್ಬರ ಹಾಕುವ ಕೆಲಸ ಮಾಡುತ್ತಿದ್ದ. ಸ್ನೇಹಿತರು ಫೋನ್‌ ಮಾಡಿ ಕೇಳಿದಾಗ ಕಾಲೇಜಿಗೆ ಬಂದು ಫಲಿತಾಂಶ ಖಚಿತಪಡಿಸಿಕೊಂಡಿದ್ದಾನೆ. ಅಂದಿನ ಪಾಠ ಅಂದೇ ಅಭ್ಯಾಸ ಮಾಡುತ್ತಾ ರಾತ್ರಿ 12 ಗಂಟೆವರೆಗೂ ಓದುತ್ತಿದ್ದೆ. ತಾಯಿಯ ಅಣ್ಣ (ಮಾವ) ಪರುಶುರಾಮ ಅವರ ಸಹಕಾರದಿಂದ
ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾನೆ ಬಾರಿಕರ ಶಿವಕುಮಾರ.
ಸೈನ್ಯಕ್ಕೆ ಸೇರುವ ಆಸೆ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂಬ ಹಂಬಲವಿದೆ. ತಾಯಿ ನಾಡು ಕಾಯುವ
ಮೂಲಕ ಜನರನ್ನು ರಕ್ಷಿಸುವ ತುಡಿತ ನನ್ನಲ್ಲಿದೆ. ಮುಂದೆ ಏನು ಆಗುತ್ತದೆಯೋ ಗೊತಿಲ್ಲ. ಐಎಎಸ್‌, ಕೆಎಎಸ್‌ ಮಾಡಲು ನಮ್ಮ ಬಳಿ ಹಣವಿಲ್ಲ. ಕೊನೆಗೆ ಕಂದಾಯ ಇಲಾಖೆಯಲ್ಲಿ ಕಂದಾಯ ನಿರೀಕ್ಷಕನಾಗಿ ಬಡಜನರಿಗೆ ಭೂಮಿ ದೊರಕಿಸುವ ಕೆಲಸ ಮಾಡುತ್ತೇನೆ.
 ಬಾರಿಕರ ಶಿವಕುಮಾರ, ಟಾಪರ್‌ ವಿದ್ಯಾರ್ಥಿ.
„ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಚಿಕ್ಕಬಳ್ಳಾಪುರ: ಕಳೆದ ಏ.18 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಒಟ್ಟು 2,284 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮೇ.23 ರಂದು ನಗರದ ಹೊರ ವಲಯದ...

  • ಸಂತೆಮರಹಳ್ಳಿ: ಪಟ್ಟಣದ ತಹಶೀಲ್ದಾರ್‌ ಕಚೇರಿಯಲ್ಲಿರುವ ಪಡಸಾಲೆಯಲ್ಲಿ ಆಧಾರ್‌ ನೋಂದಣಿಯನ್ನು ಪುನಾರಂಭ ಮಾಡಲಾಗಿದೆ. ಈ ಬಗ್ಗೆ ಉದಯವಾಣಿ ಮೇ. 15 ರಂದು ಆಧಾರ್‌...

  • ಚಾಮರಾಜನಗರ: ಬಸವಾದಿ ಶರಣರು ಸ್ಥಾಪನೆ ಮಾಡಿರುವ ವೀರಶೈವ ಲಿಂಗಾಯತ ಧರ್ಮ ಸಂವಿಧಾನ ಕಲಂನಲ್ಲಿ ಪ್ರತ್ಯೇಕ ಧರ್ಮವಾಗುವ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಬಂಧುಗಳು...

  • ಹುಮನಾಬಾದ: ಕ್ಯಾಂಪಸ್‌ ಸಂದರ್ಶನ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿಯಾಗುತ್ತದೆ ಎಂದು ತೆಲಂಗಾಣ ಜಹೀರಾಬಾದನ ಮಹೀಂದ್ರಾ ಆ್ಯಂಡ್‌ ಮಹಿಂದ್ರಾ ಆಟೋಮೊಬೈಲ್...

  • ಬೀದರ: ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿನ ಹವಾನಿಯಂತ್ರಿತ (ಎಸಿ)ವ್ಯವಸ್ಥೆ ಎರಡು ದಿನಗಳಿಂದ ಕೈ ಕೊಟ್ಟ ಹಿನ್ನೆಲೆಯಲ್ಲಿ ಚಿಕಿತ್ಸೆ...

  • ದೇವನಹಳ್ಳಿ: ಇಲ್ಲಿನ ಪುರಸಭೆ ಚುನಾವಣೆ 29ರಂದು 23 ವಾರ್ಡ್‌ಗಳಿಗೆ ವಿವಿಧ ಪಕ್ಷಗಳಿಂದ 78 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಾಮಪತ್ರ ಹಿಂಪಡೆಯಲು ಸೋಮವಾರ ಕಡೆ ದಿನವಾಗಿದ್ದರಿಂದ...