ಸಮಾಜದ ಋಣ ತೀರಿಸಲು ಅಭಿವೃದ್ಧಿಗೆ ಚಿಂತಿಸಿ

Team Udayavani, Aug 31, 2018, 4:52 PM IST

ದಾವಣಗೆರೆ: ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡು ಲಭ್ಯವಿರುವ ಸಂಪನ್ಮೂಲದಿಂದ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯದಲ್ಲಿ ಸರ್ವರೂ ಕೊಡುಗೆ ನೀಡಬೇಕು ಎಂದು ವೆಸ್ಟ್‌ಇಂಡೀಸ್‌ನ ಕಿಂಗ್‌ಸ್ಟನ್‌ ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ| ಎ.ಬಿ. ಕುಲಕರ್ಣಿ ಸಲಹೆ ನೀಡಿದರು.

ಗುರುವಾರ, ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಜ್ಞಾನ ಸೌಧ ಸಭಾ ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮಗಳಿಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ವಿವಿ ಅಭಿವೃದ್ಧಿ ನಿಜಕ್ಕೂ ಗಮನಾರ್ಹವಾಗಿದೆ. ಈ ವಿವಿ ಇದುವರೆಗಿನ ಪ್ರಗತಿಗೆ ಕಾರಣೀಭೂತರಾದವರನ್ನು ಸ್ಮರಿಸಲೇಬೇಕು. ಭವಿಷ್ಯದಲ್ಲಿ ದಾವಿವಿ ದೇಶದ ಮೊದಲ ಹತ್ತು ವಿಶ್ವವಿದ್ಯಾಲಯಗಳಲ್ಲಿ ಒಂದಾಗಬೇಕು ಎಂದು ಆಶಿಸಿದರು.

ದಾವಣಗೆರೆ ವಿಶ್ವವಿದ್ಯಾಲಯ ಸಾಗಿಬಂದ ದಾರಿ ಕುರಿತು ಸಿಂಹಾವಲೋಕನ ಮಾಡಿಕೊಳ್ಳಬೇಕಿದೆ. ವಿವಿ ಸ್ಥಾಪನೆಗೆ ಕಾರಣರಾದವರಿಂದ ಹಿಡಿದು ಸಂಪನ್ಮೂಲ, ಸ್ಥಳ ಹಾಗೂ ಹಣದ ನೆರವು ನೀಡಿದವರು ಸೇರಿ ಎಲ್ಲರ ಕೊಡುಗೆ
ಗಣನೀಯವಾಗಿದೆ. ಹಾಗಾಗಿಯೇ ಈ ವಿವಿ ಕಡಿಮೆ ಅವಧಿಯಲ್ಲಿಯೇ ಇಷ್ಟೊಂದು ಪ್ರಗತಿ ಸಾಧಿಸಿದೆ. ಯಾವುದೇ ವಿವಿಯ ಅಭಿವೃದ್ಧಿ ಕುಲಪತಿ ಒಬ್ಬರಿಂದಲೇ ಅಸಾಧ್ಯ. ವಿದ್ಯಾರ್ಥಿಗಳು, ಬೋಧಕರು, ಬೋಧಕೇತರರು, ದಾನಿಗಳು,
ಸರ್ಕಾರ ಹೀಗೆ ಸರ್ವರ ಕೊಡುಗೆಯಿಂದ ಬೆಳವಣಿಗೆ ಆಗಲಿದೆ ಎಂದು ಹೇಳಿದರು. 

ಯಾವುದೇ ವ್ಯಕ್ತಿ ಹೊಸ ಹುದ್ದೆ ಇಲ್ಲವೇ ಸ್ಥಾನ ಅಲಂಕರಿಸಿದಾಗ ತಾನು ಏನಾದರೂ ಸಮಾಜಕ್ಕೆ ಕೊಡುಗೆ ನೀಡುವ ಬಗ್ಗೆ ಆಲೋಚಿಸಬೇಕು. ಸಿಕ್ಕ ಅವಕಾಶದಿಂದ ಲಭ್ಯವಿರುವ ಸೌಲಭ್ಯ ಬಳಸಿಕೊಂಡು ಪ್ರಗತಿಗೆ ಸಿದ್ಧರಾಗಬೇಕು. ಬೇಕಿರುವ ಸೌಲಭ್ಯ ಹೇಗೆ ಪಡೆಯಬೇಕು ಎಂಬುದಾಗಿ ಯೋಚಿಸಬೇಕು. ಕೇವಲ ಪ್ರಚಾರಕ್ಕಾಗಿ ಕೆಲಸ ಮಾಡುವಂತಾಗಬಾರದು. 

ಅಭಿವೃದ್ಧಿ ನಮ್ಮ ಕೆಲಸದ ಭಾಗ ಎಂಬುದಾಗಿ ಪರಿಗಣಿಸಿ, ಜವಾಬ್ದಾರಿ, ಬದ್ಧತೆಯಿಂದ ಕಾರ್ಯೋನ್ಮುಖರಾಗಬೇಕು. ಏಕೆಂದರೆ ವಿವಿ ಕುಲಪತಿಗಳಿಂದ ಸಮಾಜ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಸಂಗತಿ ಬಗ್ಗೆ ನಿರಂತರವಾಗಿ ಆಲೋಚಿಸಿ, ಅದನ್ನು ಕಾರ್ಯಗತಗೊಳಿಸಬೇಕು ಎಂದು ತಾವು ಈ ಹಿಂದೆ ಗುಲ್ಬರ್ಗ ವಿವಿ ಪ್ರೊಫೆಸರ್‌ ಹಾಗೂ ಡೀನ್‌ ಆಗಿದ್ದಾಗಿನಿಂದ ವಿದೇಶಕ್ಕೆ ತೆರಳಿ, ಅಲ್ಲಿ ಯಶಸ್ಸು ಗಳಿಸಿದ್ದನ್ನ ಇದೇ ಸಂದರ್ಭದಲ್ಲಿ ಹಂಚಿಕೊಂಡ ಅವರು, ವಿವಿ ಕುಲಪತಿ ಹಾಗೂ ಬೋಧಕರು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಆಲೋಚಿಸಿದರೆ ಸಾಧನೆ ಸುಲಭ ಎಂದರು.

ವಿಶ್ವವಿದ್ಯಾಲಯದಲ್ಲಿ ಪದವಿ ಪಡೆಯುವ ಜತೆಗೆ ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಯಲ್ಲಿ ಪರಿಣಿತರಾಗಬೇಕು. ಆಗ ಪದವಿ ಜತೆಗೆ ಪಡೆಯುವ ಮತ್ತೂಂದು ಕೋರ್ಸ್‌ ನಿಮ್ಮ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದ
ಅವರು, ದಾವಣಗೆರೆಯಲ್ಲಿರುವ ದೃಶ್ಯಕಲಾ ಕಾಲೇಜಿನ ಆವರಣದಲ್ಲಿ ಸಾಕಷ್ಟು ಜಾಗವಿದ್ದು, ವಿದ್ಯಾರ್ಥಿಗಳು ಯುಪಿಎಸ್‌ಸಿ, ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜುಗೊಳ್ಳಲು ತರಬೇತಿ ಕೇಂದ್ರ ತೆರೆಯಲು ಕ್ರಮ ವಹಿಸುವಂತೆ ವಿವಿ ಕುಲಪತಿಯವರಿಗೆ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ಆರ್‌. ಜಯಶೀಲ ಮಾತನಾಡಿ, ಜ್ಞಾನಕಾಶಿ ದಾವಣಗೆರೆ ನಗರದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ಇಂದು ಎಲ್ಲಾ ಕೋರ್ಸ್‌ಗಳನ್ನ ವಿದ್ಯಾರ್ಥಿಗಳು ವ್ಯಾಸಂಗ ಮಾಡಬಹುದಾಗಿದೆ. ಕಲಿತ ಶಾಲೆಯಿಂದ ಹಿಡಿದು ದೇಶದವರೆಗೂ ಯಾವುದನ್ನೂ ವಿದ್ಯಾರ್ಥಿಗಳು ಮರೆಯಬಾರದು. ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳು ವಿದ್ಯಾವಂತರಾಗಲೆಂದು ಕಾಲೇಜ್‌, ವಿವಿಗೆ ಕಳುಹಿಸುತ್ತಾರೆ. ಅವರ ನಂಬಿಕೆ ಹುಸಿಮಾಡದೇ, ದುಶ್ಚಟ, ವ್ಯಸನಿಗಳಾಗದೇ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳಿದರು. 

ವಿವಿಯ ವಿದ್ಯಾ ವಿಷಯಕ ಪರಿಷತ್‌ ಮಾಜಿ ಸದಸ್ಯ ಶರಣಪ್ಪ , ದಾವಣಗೆರೆ ವಿವಿ ಆರಂಭಕ್ಕೆ ಕಾರಣೀಭೂತರಾದವರನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು. ಅಧ್ಯಕ್ಷತೆ ವಹಿಸಿದ್ದ ದಾವಿವಿ ಕುಲಪತಿ ಪ್ರೊ| ಶರಣಪ್ಪ ವಿ. ಹಲಸೆ ಮಾತನಾಡಿ, ವಿವಿ ಬೆಳವಣಿಗೆಯಲ್ಲಿ ವಿದ್ಯಾರ್ಥಿಯೂ ಸೇರಿ ಪ್ರತಿಯೊಬ್ಬರೂ ಏನಾದರೂ ಕೊಡುಗೆ ನೀಡಬೇಕೆಂದು ಆಲೋಚಿಸಿ, ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ವಿವಿಯಲ್ಲಿ ಬೋಧಕ ಸಿಬ್ಬಂದಿ ಕಡಿಮೆ ಇರಬಹುದು.

ಇರುವ ಸಿಬ್ಬಂದಿಯೇ ಹೊಸದನ್ನು ಆಲೋಚಿಸಿ, ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು. ಸಿಬ್ಬಂದಿಯಲ್ಲಿ ಸಮರ್ಪಣಾ ಮನೋಭಾವ ಹಾಗೂ ಕಠಿಣ ಪರಿಶ್ರಮ ಇದ್ದಲ್ಲಿ ಈ ಕಾರ್ಯ ಸಾಧ್ಯ ಎಂದರು. ದಾವಿವಿ ಹಣಕಾಸು ಅಧಿಕಾರಿ ಜೆ.ಕೆ. ರಾಜು ವೇದಿಕೆಯಲ್ಲಿದ್ದರು. ಮೈಕ್ರೋ ಬಯೋಲಜಿ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ವಿದ್ಯಾರ್ಥಿನಿ ವಿದ್ಯಾಭಟ್‌ ಪ್ರಾರ್ಥಿಸಿದರು. ಕುಲ ಸಚಿವ (ಆಡಳಿತ) ಪ್ರೊ| ಪಿ.ಕಣ್ಣನ್‌ ಸ್ವಾಗತಿಸಿದರು. ಮತ್ತೋರ್ವ ಕುಲಸಚಿವ (ಪರೀಕ್ಷಾಂಗ) ಕೆ.ಎನ್‌. ಗಂಗಾನಾಯ್ಕ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್‌. ರಾಜ್‌ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಪ್ರೊಟೋಕಾಲ್‌ ಪ್ರಶ್ನೆ ಪ್ರೊಟೋಕಾಲ್‌ (ಶಿಷ್ಠಾಚಾರ) ಪಾಲನೆ ಕಡ್ಡಾಯ. ಆದರೆ, ಅದರ ಪಾಲನೆ ಬಗ್ಗೆ ಅರಿಯದಿದ್ದರೆ?. ಈ ಪ್ರಶ್ನೆ ಉದ್ಭವವಾಗಿದ್ದು ಗುರುವಾರ ದಾವಣಗೆರೆ ವಿವಿ ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ. ವೆಸ್ಟ್‌ಇಂಡೀಸ್‌ನ ಕಿಂಗ್‌ಸ್ಟನ್‌ ಜಮೈಕಾದ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಉಪಾಧ್ಯಕ್ಷ ಪ್ರೊ. ಎ.ಬಿ.ಕುಲಕರ್ಣಿ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ವಹಿಸಿದ್ದರು. ಆಹ್ವಾನ ಪತ್ರಿಕೆಯಲ್ಲೂ ಈ ಇಬ್ಬರ ಹೆಸರಿತ್ತು. ಕಾರ್ಯಕ್ರಮಕ್ಕೂ ಮುನ್ನ ಆಗಮಿಸಿದ ಜಿಪಂ ಅಧ್ಯಕ್ಷೆ ಕೆ.ಆರ್‌.ಜಯಶೀಲ ಗಣ್ಯರಿಗಾಗಿ ಮೀಸಲಿಟ್ಟಿದ್ದ ಕುರ್ಚಿಯಲ್ಲಿ ಆಸೀನರಾಗಿದ್ದರು. ವೇದಿಕೆಯಲ್ಲಿ ಅತಿಥಿಗಳು ಆಸೀನರಾದ ಮೇಲೆ ಕಾರ್ಯಕ್ರಮ ನಿರೂಪಕರು ಜಿಪಂ ಅಧ್ಯಕ್ಷರನ್ನು ನೋಡಿ ಅವರನ್ನೂ ವೇದಿಕೆಗೆ ಆಹ್ವಾನಿಸಿದರು. ವಿಶ್ವವಿದ್ಯಾಲಯ ಸ್ವಾಯತ್ತ ಸಂಸ್ಥೆ. ಪ್ರೊಟೋಕಾಲ್‌ ಪ್ರಕಾರ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲ ದವರನ್ನು ವೇದಿಕೆಗೆ ಆಹ್ವಾನಿಸುವಂತಿಲ್ಲ.
ಆದರೂ ಸೌಜನ್ಯಕ್ಕಾಗಿ ಅತಿಥಿಗಳ ಹಿಂದೆ ಆಸನ ಹಾಕಿ, ಜಿಪಂ ಅಧ್ಯಕ್ಷರನ್ನು ಆಹ್ವಾನಿಸಲಾಯಿತು. ಆಗ ಜಿಪಂ ಅಧ್ಯಕ್ಷರ ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮಿನಿಸ್ಟರ್‌ ರ್‍ಯಾಂಕ್‌ನವರು. ಅವರಿಗೆ ಹಿಂದೆ ಚೇರ್‌ ಹಾಕಬಾರದು ಎಂಬುದಾಗಿ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಅತಿಥಿಗಳ ಜತೆಗೆ ಆಸನ ಹಾಕಲಾಯಿತಲ್ಲದೆ, ಅವರಿಗೂ ಭಾಷಣ ಮಾಡಲು ಅವಕಾಶ ಕಲ್ಪಿಸಲಾಯಿತು. ವಿವಿಯ ಹತ್ತನೇ ವರ್ಷದ ಸಂಸ್ಥಾಪನಾ ದಿನಾಚರಣೆಗೆ
ಕ್ಷೇತ್ರದ ಶಾಸಕರು, ಸಂಸದರನ್ನೇ ಆಹ್ವಾನಿಸಿರಲಿಲ್ಲ.

ಮೇಲಾಗಿ ವಿಶ್ವವಿದ್ಯಾಲಯ ಒಂದು ಸ್ವಾಯತ್ತ ಸಂಸ್ಥೆ. ಅದಕ್ಕೆ ತನ್ನದೇ ಆದ ನಿಯಾವಳಿಗಳಿವೆ. ರಾಜ್ಯಪಾಲರು ವಿವಿ ಕುಲಾಧಿಪತಿಗಳಾಗಿದ್ದು, ಉನ್ನತ ಶಿಕ್ಷಣ ಸಚಿವರು ಸಮಕುಲಾಧಿಪತಿಯಾಗಿರುತ್ತಾರೆ. ಘಟಿಕೋತ್ಸವದಲ್ಲಿ ಕ್ಯಾಬಿನೆಟ್‌ ಮಿನಿಸ್ಟರ್‌ ಭಾಷಣಕ್ಕೂ ಸಹ ಅವಕಾಶವಿರುವುದಿಲ್ಲ. ಹಾಗಾಗಿ ವಿವಿ ಕಾರ್ಯಕ್ರಮದಲ್ಲಿ ಯಾವ ಪ್ರೊಟೋಕಾಲ್‌ ಸರಿ ಎಂಬ ಪ್ರಶ್ನೆ ಎದುರಾಯಿತು.

ಪದವಿ ಜತೆ ಕೌಶಲ್ಯಾಭಿವೃದ್ಧಿ ವಿದ್ಯಾರ್ಥಿಗಳು ಪದವಿ ಜತೆಗೆ ಕೌಶಲ್ಯಾಭಿವೃದ್ಧಿ ಗಳಿಸಿದಾಗ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ. ಎಂಎ. ಎಂಎಸ್ಸಿ, ಎಂಕಾಂ, ಯಾವುದೇ ಪದವಿ ವ್ಯಾಸಂಗದ ಜತೆಗೆ ಕಂಪ್ಯೂಟರ್‌ ಸೇರಿ ಬೇರೆ ಬೇರೆ ಕೋರ್ಸ್‌ಗಳಲ್ಲಿ ಕೌಶಲ್ಯ ಹೊಂದಬೇಕು. ಏಕಕಾಲದಲ್ಲಿ ಎರಡು ಕೋರ್ಸ್‌ನಲ್ಲಿ ಪರಿಣಿತಿಯಾದಲ್ಲಿ ಭವಿಷ್ಯದಲ್ಲಿ ಅನುಕೂಲವಾಗಲಿದೆ. 

ದಾವಣಗೆರೆಯ ದೃಶ್ಯಕಲಾ ಕಾಲೇಜಿರುವ ಪ್ರದೇಶದಲ್ಲಿ ಹಾಸ್ಟೆಲ್‌ ನಿರ್ಮಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲವಾಗಲು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಆರಂಭಿಸಲಾಗುವುದು. ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣದ ಕೊರತೆ ಇದೆ. ಮೊದಲು ನಕಾರಾತ್ಮಕ ಆಲೋಚನೆ ಬಿಟ್ಟು ಸಕಾರಾತ್ಮಕವಾಗಿ ಚಿಂತನೆ ಮೈಗೂಡಿಸಿಕೊಳ್ಳಬೇಕು.
 ಪ್ರೊ| ಶರಣಪ್ಪ ವಿ.ಹಲಸೆ  ದಾವಿವಿ ಕುಲಪತಿ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾವಣಗೆರೆ: ಮೌಲ್ಯಯುತ ವಿಜ್ಞಾನ ಶಿಕ್ಷಣವೊಂದೇ ಜಗತ್ತಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಎಂದು ಸ್ವದೇಶಿ ವಿಜ್ಞಾನ ಆಂದೋಲನ- ಕರ್ನಾಟಕದ ಕಾರ್ಯಾಧ್ಯಕ್ಷ,...

  • ಸಿ.ಎಸ್‌. ಶಶೀಂದ್ರ ಚನ್ನಗಿರಿ: ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರಿ ಇರಲ್ಲ. ಅಲ್ಲಿ ಸರಿಯಾದ ಚಿಕಿತ್ಸೆ ಸಿಗೊಲ್ಲ, ಮೂಲ ಸೌಕರ್ಯಗಳು ಇರಲ್ಲ...

  • ದಾವಣಗೆರೆ: ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಏಕೆಂದರೆ ಟಿವಿ ಚಾನಲ್ಗಳಲ್ಲಿ ಕ್ರೌರ್ಯದ ಕಾರ್ಯಕ್ರಮ ಹೆಚ್ಚು ಬಿತ್ತರಗೊಳ್ಳುತ್ತಿದ್ದು, ಅದು...

  • ಚಿತ್ರದುರ್ಗ: ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಕಸ್ಟಡಿಗೆ ಕೊಟ್ಟಿರುವುದು ನ್ಯಾಯಾಲಯವೇ ಹೊರತು ಬಿಜೆಪಿ ಅಲ್ಲ. ಕಾನೂನು ಮತ್ತು ನ್ಯಾಯಾಲಯಕ್ಕಿಂತ ಯಾರೂ...

  • ಜಗಳೂರು: ಜಗಳೂರಿಗೆ ಭದ್ರಾ ಮೇಲ್ದಂಡೆ ಯೋಜನೆ ವಿಸ್ತರಣೆ ಮತ್ತು ಮಾರ್ಗ ಬದಲಾವಣೆ ಮಾಡುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ...

ಹೊಸ ಸೇರ್ಪಡೆ