ಗರ್ಭಿಣಿಯರು ಧನಾತ್ಮಕವಾಗಿ ಆಲೋಚಿಸಲಿ

ಶಿಶು ಆರೈಕೆ ತಿಳಿವಳಿಕೆ ಅಗತ್ಯ •ಟಿವಿ ವೀಕ್ಷಣೆಯಿಂದ ದೂರವಿರಿ•ಪೋಷಣ್‌ ಅಭಿಯಾನ ಪುಸ್ತಕ ಬಿಡುಗಡೆ

Team Udayavani, Sep 15, 2019, 11:15 AM IST

ದಾವಣಗೆರೆ: ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು.

ದಾವಣಗೆರೆ: ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಏಕೆಂದರೆ ಟಿವಿ ಚಾನಲ್ಗಳಲ್ಲಿ ಕ್ರೌರ್ಯದ ಕಾರ್ಯಕ್ರಮ ಹೆಚ್ಚು ಬಿತ್ತರಗೊಳ್ಳುತ್ತಿದ್ದು, ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಕಿವಿಮಾತು ಹೇಳಿದ್ದಾರೆ.

ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮತ್ತು ದಾವಣಗೆರೆ ತಾಲೂಕು ಮಟ್ಟದ ಪೋಷಣ್‌ ಅಭಿಯಾನ್‌ ಜನಾಂದೋಲನ ಹಾಗೂ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ ಎಂದರು.

ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತತೆಯಿಂದ ಧ್ಯಾನ, ಶ್ಲೋಕಗಳನ್ನು ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದು ಸಲಹೆ ನೀಡಿದರು.

ಪ್ರಸ್ತುತ ಅವಿಭಕ್ತ ಕುಟುಂಬಗಳಿಲ್ಲ. ವಿಘಟಿತ ಕುಟುಂಬಗಳೇ ಹೆಚ್ಚಾಗಿದ್ದು, ಪತಿಯ ಮೇಲೆಯೇ ಗರ್ಭಿಣಿ ಪತ್ನಿ ನೋಡಿಕೊಳ್ಳುವ ಜವಾಬ್ದಾರಿ ಇದೆ. ಗರ್ಭಿಣಿಯರನ್ನು ಕಾಳಜಿ ಮಾಡುವ ಅವರ ಮನೆಯವರನ್ನು ಕರೆದು ಈ ಕಾರ್ಯಕ್ರಮ ನಡೆಸಿಕೊಟ್ಟರೆ ಉತ್ತಮ. ಆ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಗರ್ಭಿಣಿಯರ ಪತಿ ಹಾಗೂ ಅವರ ಮನೆಯವರನ್ನು ಕಾರ್ಯಕ್ರಮಕ್ಕೆ ಕರೆದು, ಗರ್ಭಿಣಿ ಮತ್ತು ಶಿಶು ಆರೈಕೆ ಬಗ್ಗೆ ತಿಳಿವಳಿಕೆ ನೀಡಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಮಾತನಾಡಿ, ದಾವಣಗೆರೆಯನ್ನು ಅಪೌಷ್ಟಿಕಮುಕ್ತ ಜಿಲ್ಲೆಯನ್ನಾಗಿಸುವುದು ತಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ. ಹಿಂದೆ ಬೀದರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದೆ. ಆ ಭೇಟಿಯಿಂದ ಅಂಗನವಾಡಿಗಳು ಸಕ್ರಿಯವಾಗುತ್ತಿದ್ದವು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಕೂಡ ಜಿಲ್ಲಾಧಿಕಾರಿಗಳು ತಿಂಗಳಿಗೆ 20 ರಿಂದ 30 ಅಂಗನವಾಡಿಗಳಿಗೆ ಭೇಟಿ ನೀಡಲು ಸೂಚಿಸಿದ್ದಾರೆ. ತಾವು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಲಿದ್ದು, ಭೇಟಿ ಅವಧಿಯಲ್ಲಿ ಹಾಜರಾತಿಯಲ್ಲಿರುವುದಕ್ಕಿಂತ ಕೇಂದ್ರದಲ್ಲಿ ಕಡಿಮೆ ಮಕ್ಕಳಿದ್ದರೆ ಸಂಬಂಧಿಸಿದ ಸಿಬ್ಬಂದಿ ವೇತನ ತಡೆಹಿಡಿಯಲಾಗುವುದೆಂದು ಎಚ್ಚರಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಕೆಲಸ ಒಂದು ಸೇವೆ ಇದ್ದಂತೆ. ಅದನ್ನು ಉತ್ತಮವಾಗಿ ನಿರ್ವಹಿಸಬೇಕಿದೆ. ಗರ್ಭಿಣಿಯರು ಯಾವುದೇ ಹಿಂಜರಿಕೆ ಇಲ್ಲದೇ ಅಂಗನವಾಡಿಗೆ ಭೇಟಿ ನೀಡಿ ಪೌಷ್ಟಿಕ ಆಹಾರ, ಇತ್ಯಾದಿ ಸೌಲಭ್ಯ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಇದೊಂದು ಅದ್ಭುತ ಕಾರ್ಯಕ್ರಮವಾಗಿದ್ದು, ಸರ್ಕಾರ ಸದುದ್ದೇಶದಿಂದ ಈ ಅಭಿಯಾನ ಆರಂಭಿಸಿದ್ದು, ಇದು ಮುಂದಿನ ಪೀಳಿಗೆ ಸದೃಢಗೊಳ್ಳಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌.ಎ.ರವೀಂದ್ರನಾಥ್‌ ಮಾತನಾಡಿ, ಹಿಂದೆಲ್ಲ ಗರ್ಭಿಣಿಯರು ಸೇರಿದಂತೆ ಎಲ್ಲ ಹೆಣ್ಣುಮಕ್ಕಳು ಬೀಸುವುದು, ಕುಟ್ಟುವುದು, ನೀರು ಸೇದುವುದು ಹೀಗೆ ಮನೆಯ ದೈನಂದಿನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಇಂದು ಸೋಮಾರಿತನ ಹೆಚ್ಚಾಗಿದ್ದು, ಗರ್ಭಿಣಿಯರು ಚಟುವಟಿಕೆಯಿಲ್ಲದೇ ಆಸ್ಪತ್ರೆಯಲ್ಲಿ ಹೆರಿಗೆಯಾಗುತ್ತಿವೆ. ಪೌಷ್ಟಿಕತೆ ಕೊರತೆಯೂ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಪೋಷಣ್‌ ಅಭಿಯಾನ್‌ ಎಂಬ ಅತ್ಯುತ್ತಮ ಕಾರ್ಯಕ್ರಮ ಜಾರಿಗೆ ತಂದಿದ್ದು, ಅಂಗನವಾಡಿ ಕಾರ್ಯಕರ್ತೆಯರು ಈ ಯೋಜನೆ ಸೌಲಭ್ಯವನ್ನು ಪ್ರಾಮಾಣಿಕವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕಿದೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್.ವಿಜಯಕುಮಾರ್‌, ಕೇಂದ್ರ ಸರ್ಕಾರದ ಪೋಷಣ್‌ ಅಭಿಯಾನದ ಉದ್ದೇಶ ಗರ್ಭಿಣಿಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ ತಪಾಸಣೆ, ಕಾಲಕಾಲಕ್ಕೆ ಚುಚ್ಚುಮದ್ದು ಸೇರಿದಂತೆ ಉತ್ತಮ ಆರೋಗ್ಯ ಕಲ್ಪಿಸುವುದು. 2017ರ ಮೇ ಮಾಹೆಯಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು, ಈ ಅಭಿಯಾನದ ಅಂಗವಾಗಿ ಸೆ.1 ರಿಂದ ಒಂದು ತಿಂಗಳ ಕಾಲ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು. ಅಂಗನವಾಡಿಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಗರ್ಭಿಣಿಯರು, ಪಾಲಕರಿಗೆ ಈ ಕುರಿತು ಅರಿವು ಮೂಡಿಸಲಾಗುವುದು. ಪ್ರತಿ ತಿಂಗಳು ಮೊದಲನೇ ಮತ್ತು ಮೂರನೇ ಶುಕ್ರವಾರ ನಿರಂತರ ಪೋಷಣ್‌ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ಒಂದು ಕಾರ್ಯಕ್ರಮಕ್ಕೆ ಫಲಾನುಭವಿಗಳ ಖಾತೆಗೆ ನೇರವಾಗಿ 250 ರೂ. ಪಾವತಿಸಲಾಗುವುದು ಎಂದು ತಿಳಿಸಿದರು.

100 ಗರ್ಭಿಣಿಯರಿಗೆ ಹಾಗೂ 6 ತಿಂಗಳು ತುಂಬಿದ 50 ಮಕ್ಕಳಿಗೆ ಪೂರಕ ಆಹಾರ (ಅನ್ನಪ್ರಾಶನ) ನೀಡಲಾಯಿತು. ಇದೇ ಸಂದರ್ಭದಲ್ಲಿ ಪೋಷಣ್‌ ಅಭಿಯಾನ ಕುರಿತಾದ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಜಿ.ಪಂ ಸದಸ್ಯೆ ಮಂಜುಳಾ ಟಿ.ವಿ. ರಾಜು, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿದರು. ತಾ.ಪಂ ಸದಸ್ಯೆ ಅಂಬುಜಾಕ್ಷಿ, ಡಿಎಚ್ಒ ಡಾ|ರಾಘವೇಂದ್ರಸ್ವಾಮಿ ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ