ರೈಲ್ವೆ ಗೇಟ್ ಸಮಸ್ಯೆಗೆ ಶೀಘ್ರ ಪರಿಹಾರ

20 ವರ್ಷಗಳ ಸಮಸ್ಯೆ •ಎಲ್ಲರಿಗೂ ಒಪ್ಪಿಗೆ-ಅನುಕೂಲವಾಗುವ ಪರಿಹಾರ: ಜಿಲ್ಲಾಧಿಕಾರಿ

Team Udayavani, Sep 11, 2019, 11:34 AM IST

ದಾವಣಗೆರೆ: ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆ ಪರಿಶೀಲನೆ ನಡೆಸಿದರು.

ದಾವಣಗೆರೆ: ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆಗೆ ಶೀಘ್ರವೇ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ತಿಳಿಸಿದ್ದಾರೆ.

ಮಂಗಳವಾರ ಅಶೋಕ ಚಿತ್ರಮಂದಿರ ಮುಂದಿನ ರೈಲ್ವೆ ಗೇಟ್ನಿಂದ ಪದ್ಮಾಂಜಲಿ ಚಿತ್ರಮಂದಿರದವರೆಗೆ ರೈಲ್ವೆ ಹಳಿಯ ಮೇಲೆ ಸಂಚರಿಸಿ ಪ್ರತಿಯೊಂದು ಅಂಶದ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಶೋಕ ಚಿತ್ರಮಂದಿರ ರೈಲ್ವೆ ಗೇಟ್ ಸಮಸ್ಯೆ 20 ವರ್ಷದ್ದು. ಅಂದಿನಿಂದ ಸಮಸ್ಯೆ ಬಗೆಹರಿಸುವ ಮಾತು ಇವೆ. ಇನ್ನು ಕೆಲವೇ ದಿನಗಳಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಅಶೋಕ ಚಿತ್ರಮಂದಿರ ಮುಂದಿನ ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೆ ಮೇಲ್ಸೇತುವೆ, ಕೆಳ ಸೇತುವೆ, ಫ್ಲೈ ಓವರ್‌ ಒಳಗೊಂಡಂತೆ 3-4 ಅವಕಾಶಗಳಿವೆ. ಅದರಲ್ಲಿ ಸರ್ಕಾರಕ್ಕೆ ಹೆಚ್ಚಿನ ಹೊರೆ ಇಲ್ಲದೆ, ಸಾರ್ವಜನಿಕರಿಗೆ ಯಾವುದೇ ತೊಂದರೆ ಇಲ್ಲದೇ ಇರುವ ಅವಕಾಶವನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಖುದ್ದಾಗಿ ಪ್ರತಿಯೊಂದು ಅಂಶದ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಎಲ್ಲಾ ಅಂಶ, ಅವಕಾಶಗಳ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳ ಜೊತೆ ಕೂಲಂಕುಷವಾಗಿ ಚರ್ಚೆ ನಡೆಸಿ, ಎಲ್ಲರ ಮನಗೆದ್ದು, ಎಲ್ಲರಿಗೂ ಒಪ್ಪಿತ, ಅನುಕೂಲ ಆಗುವಂತಹ ಶಾಶ್ವತ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ಗೆ ಅನುದಾನ ಬಂದಿರುವುದರಿಂದ ಹಿಡಿದು ಎಲ್ಲವೂ ಗೊತ್ತಿದೆ. ಈಗ ಇತಿಹಾಸ ಬೇಡ ಮತ್ತು ನಕರಾತ್ಮಕ ಚರ್ಚೆಯೂ ಬೇಡ. ಆಶಾವಾದತನದಿಂದ ಕೆಲಸ ಆಗಿಯೇ ಆಗುತ್ತದೆ ಎಂದೇ ಕೆಲಸ ಪ್ರಾರಂಭಿಸೋಣ. ಮಾಧ್ಯಮದವರು ಸಹ ತಮಗೆ ಮಾರ್ಗದರ್ಶನ ನೀಡಬೇಕು. ಖಂಡಿತವಾಗಿಯೂ ರೈಲ್ವೆ ಗೇಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕೆಲಸ ಮಾಡಲಾಗುವುದು. ಅದಕ್ಕೆ ಸ್ವಲ್ಪ ಸಮಯವಕಾಶ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದಾವಣಗೆರೆಯಲ್ಲೇ ತಮ್ಮನ್ನೇನು 20-30 ವರ್ಷ ಉಳಿಸಿಕೊಳ್ಳುವುದಿಲ್ಲ. ಇರುವ ಕಾಲದಲ್ಲೇ ಒಳ್ಳೆಯ ಕೆಲಸ ಮಾಡಬೇಕು ಎಂಬ ಕನಸಿನೊಂದಿಗೇ ಬಂದಿದ್ದೇನೆ. ಅದಕ್ಕಾಗಿ ಉತ್ಸಾಹ, ಹುಮ್ಮಸ್ಸನಿಂದ ಕೆಲಸ ಮಾಡುತ್ತಿದ್ದೇನೆ. ಎಲ್ಲದಕ್ಕೂ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಸೋಮವಾರ ತಹಶೀಲ್ದಾರ್‌ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ 28 ನೌಕರರು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ. ಎಲ್ಲರಿಗೂ ನೋಟಿಸ್‌ ನೀಡಲಾಗಿದೆ. ನೋಟಿಸ್‌ಗೆ ನೀಡುವ ಉತ್ತರ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಹಶೀಲ್ದಾರ್‌ ಕಚೇರಿಯೊಂದೇ ಮಾತ್ರವಲ್ಲ. ದಾವಣಗೆರೆಯಲ್ಲಿರುವ ತನಕ ಇದೇ ರೀತಿ ದಿಢೀರ್‌ ಭೇಟಿ, ಪರಿಶೀಲನೆ ನಡೆಸಲಾಗುವುದು. ತಮ್ಮಂತೆಯೇ ಎಲ್ಲರೂ ಉತ್ಸಾಹ, ಹುಮ್ಮಸ್ಸಿನಿಂದ ಕೆಲಸ ಮಾಡುವರು ಎಂಬ ವಿಶ್ವಾಸ ಇದೆ. ಅಂತಹ ಹುಮ್ಮಸ್ಸು, ಉತ್ಸಾಹದ ನಾಯಕನಾಗಿ ತಮ್ಮ ಕೆಲಸ ಮಾಡುವುದಾಗಿ ಹೇಳಿದರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ