ಸ್ವಚ್ಛ-ಸುಂದರ ನಗರ ನಿರ್ಮಾಣ

•ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗೆ ಚಾಲನೆ •ಕಾಮಗಾರಿಗಳಿಗೆ ವೇಗ ನೀಡುವ ಭರವಸೆ

Team Udayavani, Aug 14, 2019, 10:31 AM IST

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕ ರವೀಂದ್ರನಾಥ್‌ ಚಾಲನೆ ನೀಡಿದರು.

ದಾವಣಗೆರೆ: ಸ್ಮಾರ್ಟ್‌ಸಿಟಿ ಯೋಜನೆಯ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಪೂರೈಸುವ ಮೂಲಕ ಸುಂದರ, ಸ್ವಚ್ಛ ದಾವಣಗೆರೆ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ತಿಳಿಸಿದ್ದಾರೆ.

ಮಂಗಳವಾರ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗೆ ಚಾಲನೆ ನೀಡಿದ ನಂತರ ವಿದ್ಯಾನಗರ ಪಾರ್ಕ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎರಡು ವರ್ಷದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಕಳೆದ ರಾಜ್ಯ ಸರ್ಕಾರದ ಅವಧಿಯಲ್ಲಿ ಸರ್ಕಾರ, ಸ್ಮಾರ್ಟ್‌ಸಿಟಿ ಯೋಜನೆಯ ಅಧಿಕಾರಿಗಳ ವೈಫಲ್ಯದ ಪರಿಣಾಮ ಬಹಳ ನಿಧಾನಗತಿಯಲ್ಲಿ ಕಾಮಗಾರಿ ನಡೆದಿವೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗೆ 1,100 ಕೋಟಿಯಲ್ಲಿ ಬಿಡುಗಡೆಯಾಗಿರುವ 400 ಕೋಟಿಯಲ್ಲಿ ಕೇವಲ 80 ಕೋಟಿಯ ಕಾಮಗಾರಿ ನಡೆದಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಮಾರ್ಟ್‌ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ಚುರುಕು ಗೊಳಿಸಲಾಗಿದೆ. 9 ತಿಂಗಳಲ್ಲಿ 20 ಕೋಟಿ ಅನುದಾನದ ಜಂಕ್ಷನ್‌ ಅಭಿವೃದ್ಧಿ, ದೊಡ್ಡ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸಂಬಂಧಿತ ಗುತ್ತಿಗೆ ಕಂಪನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯಡಿ ವಿಮಾನಮಟ್ಟಿ, ಕೆಇಬಿ ವಸತಿ ನಿಲಯ, ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ವರೆಗೆ 3.2 ಕಿಲೋ ಮೀಟರ್‌ ಉದ್ದ, ವಿದ್ಯಾನಗರ ಪಾರ್ಕ್‌ನಿಂದ ಕುಂದುವಾಡ ಕೆರೆಯವರೆಗೆ 3.4 ಕಿಲೋ ಮೀಟರ್‌ ಉದ್ದ, ಬಾಪೂಜಿ ಎಂಬಿಎ ಕಾಲೇಜಿನಿಂದ ಎಂಸಿಸಿ ಬಿ ಬ್ಲಾಕ್‌ನ ಹಿರಿಯ ನಾಗರಿಕ ಪಾರ್ಕ್‌ವರಗೆ 1.8 ಕಿಲೋ ಮೀಟರ್‌ ಉದ್ದದ ಮಳೆ ನೀರು ಚರಂಡಿಯನ್ನು 18.78 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಳೆ ನೀರು ಎಲ್ಲಾ ಕಡೆ ಹರಿದು ಮನೆಗೆ ನುಗ್ಗುತ್ತದೆ. ತೊಂದರೆ ಆಗುತ್ತದೆ ಎಂಬ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಮಳೆ ನೀರು ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಪ್ರಾರಂಭಿಕ ಹಂತದಿಂದ ಕೊನೆಯವರೆಗೆ ಅಗಲ ವಿಸ್ತರಣೆ ಆಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಸಹ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳ ಬಗ್ಗೆ ಗಮನ ಹರಿಸಬೇಕು. ಎಲ್ಲಿಯಾದರೂ ಕಳಪೆ ಕಾಮಗಾರಿ ನಡೆಯುತ್ತಿದೆಯೇ ಎಂಬುದನ್ನ ಪರಿಶೀಲಿಸಿ, ಒಂದೊಮ್ಮೆ ಕಂಡು ಬಂದಲ್ಲಿ ತಮಗೆ ಇಲ್ಲವೇ ರವೀಂದ್ರನಾಥ್‌ ಗಮನಕ್ಕೆ ತಂದಲ್ಲಿ ಅದನ್ನ ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ದಾವಣಗೆರೆ ಹಳೆಯ ಭಾಗದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ವಿವಿಧ ಕಾಮಗಾರಿ ಕೈಗೊಂಡಿದ್ದು ಯೋಜನೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಸ ಇನ್ನೂ ನಡೆಯುತ್ತಲೇ ಇವೆ. ಜನರು ನಮ್ಮನ್ನು ಬೈಯುವಂತಾಗಿದೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವಂತೆ ಸಂಬಂಧಿತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ನಾನು ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯತ್‌ ಸದಸ್ಯನಾಗಿದ್ದಾಗ ವಿದ್ಯಾನಗರದ ಪಾರ್ಕ್‌ ಜಾಗವನ್ನು ಪರಭಾರೆ ಮಾಡವ ಪ್ರಯತ್ನ ನಡೆದಿತ್ತು. ಆಗಲೇ ಕಟ್ಟಡಗಳು ನಿರ್ಮಾಣಗೊಂಡಿದ್ದವು. ನಾನು ಅದಕ್ಕೆ ಆಕ್ಷೇಪಣೆ ಮಾಡಿದ್ದಕ್ಕೆ ಪಾರ್ಕ್‌ಗೆ ಜಾಗ ಉಳಿಯುವಂತಾಗಿ ಈಗ ವಿದ್ಯಾನಗರ ಪಾರ್ಕ್‌ ದಾವಣಗೆರೆಯ ನಂಬರ್‌ ಒನ್‌ ಪಾರ್ಕ್‌ ಎನ್ನುವಂತಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಭಾಗದವರು ಬಹಳ ಶ್ರೀಮಂತರು, ತಿಂಗಳಿಗೆ 50-60 ಸಾವಿರ ಪೆನ್ಷನ್‌ ತೆಗೆದುಕೊಳ್ಳುವರು ಇದ್ದಾರೆ. ಅವರು ಎಲ್ಲಾ ಸೇರಿಕೊಂಡು ಅಲಂಕಾರಿಕ ಗಿಡ ಇತರೆ ಅಭಿವೃದ್ಧಿ ಕೆಲಸ ಮಾಡಿ, ಪಾರ್ಕ್‌ನ್ನು ಇನ್ನೂ ಉತ್ತಮ ಪಡಿಸಬೇಕು. ಎಲ್ಲವನ್ನೂ ಸರ್ಕಾರ, ಮಹಾನಗರ ಪಾಲಿಕೆ ಮಾಡಲಿ ಎಂದು ಬಯಸದೆ ಜನರು ತಮ್ಮ ಭಾಗದ ಪಾರ್ಕ್‌ ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಯಾವುದಾದರೂ ಕೆಲಸ ನಡೆಯಬೇಕಾದಾಗ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸುವುದು ಸಲ್ಲದು. ಮನೆಯವರು ಕಾಟ ಕೊಡುತ್ತಾರೆ ಎಂದು ಇಲ್ಲಿಗೆ ಬಂದು ಬೇರೆಯವರಿಗೆ ಕಾಟ ಕೊಡುವಂತಾಗಬಾರದು. ತೀರಾ ಕಳಪೆ ಕಾಮಗಾರಿ ನಡೆದಲ್ಲಿ ಅದನ್ನ ತಡೆದು, ಸರಿಪಡಿಸುವ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.

ವಿದ್ಯಾನಗರ ಪಾರ್ಕ್‌ ಸಮಿತಿ ಅಧ್ಯಕ್ಷ ಕರಿಯಣ್ಣ ಮಾತನಾಡಿ, ಪಾರ್ಕ್‌ನಲ್ಲಿ ಇರುವ ಇಬ್ಬರು ಮಹಿಳಾ ಸಿಬ್ಬಂದಿ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಇನ್ನೂ ಇಬ್ಬರು ಪುರುಷ ಸಿಬ್ಬಂದಿಯನ್ನು ನೇಮಕ ಮಾಡಿದರೆ ಪಾರ್ಕ್‌ನಲ್ಲಿ ಸ್ವಚ್ಛತೆ, ಅಭಿವೃದ್ಧಿ ಆಗುತ್ತದೆ. ಈ ಭಾಗದ ನಾಗರಿಕರು ಅನೇಕ ಗಿಡ, ಮರ ಬೆಳೆಸುವ ಮೂಲಕ ಪಾರ್ಕ್‌ ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮುಕುಂದಪ್ಪ, 38ನೇ ವಾರ್ಡ್‌ ಅಧ್ಯಕ್ಷ ಶಿವಕುಮಾರ್‌ ಇತರರು ಇದ್ದರು. ಶಿವಾಜಿ ಪಾಟೀಲ್ ನಿರೂಪಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ