ಕಾಪಾಡಬೇಕಿದೆ ಜನಸಂಖ್ಯಾ ಸಮತೋಲನ

ವಿಶ್ವ ಜನಸಂಖ್ಯಾ ದಿನಾಚರಣೆ•ಮಾನವ ಸಂಪನ್ಮೂಲ ಸದ್ಬಳಕೆಯಾಗಲಿ•ಜಾಗೃತಿ ಅಗತ್ಯ

Team Udayavani, Jul 12, 2019, 10:14 AM IST

ದಾವಣಗೆರೆ: ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟನೆ.

ದಾವಣಗೆರೆ: ಉತ್ತಮ ಶಿಕ್ಷಣ ಮತ್ತು ಬಡತನ ನಿರ್ಮೂಲನೆ ಮೂಲಕ ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಶೈಲಜಾ ಬಸವರಾಜ್‌ ಅಭಿಪ್ರಾಯಪಟ್ಟರು.

ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಕೊರತೆ ಮತ್ತು ಬಡತನವೇ ಜನಸಂಖ್ಯಾ ಸ್ಫೊಧೀಟಕ್ಕೆ ಮುಖ್ಯ ಕಾರಣ ಎಂದರು.

ಬಡವರ್ಗದವರು ಸಹ ತಾವು ಎಲ್ಲರಿಗಿಂತ ಉನ್ನತವಾಗಿ, ಘನತೆಯಿಂದ ಬದುಕಬೇಕೆಂಬ ಮನೋಭಾವ ಹೊಂದಿದ್ದು ತಮ್ಮ ಮಕ್ಕಳನ್ನು ಕಾನ್ವೆಂಟ್‌ಗಳಿಗೆ ಕಳುಹಿಸುತ್ತಿದ್ದಾರೆ. ಕಾನ್ವೆಂಟ್‌ಗಳಲ್ಲಿನ ದುಬಾರಿ ಡೊನೇಷನ್‌, ಫೀ ನೋಡಿ ಕಡಿಮೆ ಮಕ್ಕಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಾನ್ವೆಂಟ್ ಶಿಕ್ಷಣ ಕೂಡ ಜನಸಂಖ್ಯಾ ನಿಯಂತ್ರಣಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲದಿದ್ದರೂ, ಜನಸಂಖ್ಯೆ ನಿಯಂತ್ರಣದಲ್ಲಿ ಪಾತ್ರ ವಹಿಸಿದೆ ಎಂದರು.

ಗುಣಾತ್ಮಕತೆಯಿಂದ ಕೂಡಿದ ಜನಸಂಖ್ಯೆ ಕೆಟ್ಟದ್ದಲ್ಲ. ಆದರೆ, ನಮ್ಮಲ್ಲಿನ ಮಾನವ ಸಂಪನ್ಮೂಲ ಸರಿಯಾದ ರೀತಿಯಲ್ಲಿ ಬಳಕೆ ಆಗಬೇಕು. ಜನಸಂಖ್ಯಾ ಸಮತೋಲನ ಕಾಪಾಡಿಕೊಳ್ಳಬೇಕಿದೆ. ಭಾರತ ಇಡೀ ಜಗತ್ತಿಗೇ ಜನಸಂಖ್ಯೆಯನ್ನು ರಫ್ತು ಮಾಡುತ್ತಿದೆ. ಉತ್ತಮ ಇಂಜಿನಿಯರ್‌, ವೈದ್ಯರು, ಕುಶಲಕರ್ಮಿಗಳನ್ನು ನಾವು ವಿವಿಧ ದೇಶಗಳಿಗೆ ರಫ್ತು ಮಾಡುವ ಮೂಲಕ ಗುಣಮಟ್ಟದ ಸಂಪನ್ಮೂಲವನ್ನು ನೀಡುತ್ತಿದ್ದೇವೆ. ಆದ್ದರಿಂದಲೇ ಅನೇಕ ಕಡೆ ಕೇವಲ ತಂದೆ-ತಾಯಿಗಳು ಮನೆಯಲ್ಲಿರುತ್ತಾರೆ. ಮಕ್ಕಳೆಲ್ಲಿ ಎಂದು ಕೇಳಿದರೆ, ಅಮೇರಿಕಾ, ಇಂಗ್ಲೆಂಡ್‌ ಹೋಗಿದ್ದಾರೆಂದು ಹೇಳುತ್ತಾರೆ. ಇದೇ ಪರಿಸ್ಥಿತಿ ಮುಂದುವರೆಯುತ್ತಾ ಹೋದರೆ ಮುಂದೊಂದು ದಿನ ಭಾರತ ದೇಶ ವೃದ್ಧಾಶ್ರಮ ಆಗುವುದರಲ್ಲಿ ಸಂಶಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸರ್ಕಾರ ಯುವಜನತೆಗೆ ಉತ್ತಮ ಸವಲತ್ತುಗಳು, ಉದ್ಯೋಗಾವಕಾಶ ನೀಡಿ ಇಲ್ಲಿಯೇ ನಮ್ಮ ನೆಲದ ನೈಸರ್ಗಿಕ ಸಂಪನ್ಮೂಲ ಸದ್ಬಳಕೆಯಾಗುವಂತೆ ನೋಡಿಕೊಳ್ಳಬೇಕಿದೆ. ಸರ್ವರಿಗೂ ಶಿಕ್ಷಣ, ಬಡತನ ನಿರ್ಮೂಲನಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ| ತು.ಕ. ಶಂಕರಯ್ಯ ಮಾತನಾಡಿ, ವಿದ್ಯಾರ್ಥಿಗಳೇ ದೇಶದ ಸರ್ವತೋಮುಖ ಬೆಳವಣಿಗೆಯ ರಾಯಭಾರಿಗಳು. 1930 ರಲ್ಲಿ ದ.ರಾ. ಬೇಂದ್ರೆಯವರು ಮಕ್ಕಳಿರಲವ್ವ 33 ಕೋಟಿ ಎನ್ನುತ್ತಿದ್ದರು. ಆದರೆ, ಈಗ ಸಂಖ್ಯೆ ಮಿತಿ ಮೀರಿದೆ. ಮಿತಿಯಿಲ್ಲದ ಜನಸಂಖ್ಯೆಯಿಂದ ಅಭಿವೃದ್ಧಿ ಕುಂಠಿತವಾಗುತ್ತದೆ. ಅನೇಕ ಸಮಸ್ಯೆಗಳು ತಲೆದೋರುತ್ತವೆ. ಹಾಗಾಗಿ ಎಲ್ಲರಲ್ಲೂ ಜನಸಂಖ್ಯಾ ನಿಯಂತ್ರಣದ ಕುರಿತು ತಿಳಿವಳಿಕೆ ಹೆಚ್ಚಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌.ತ್ರಿಪುಲಾಂಭ ಮಾತನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮುಖ್ಯ. ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಒದಗಿಸಲಾಗುತ್ತಿರುವ ಜನನ ನಿಯಂತ್ರಣ ಮಾರ್ಗಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣಕ್ಕೆ ಸಹರಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಯು. ಸಿದ್ದೇಶಿ, ಆರ್‌ಸಿಎಚ್ಒ ಡಾ| ಶಿವಕುಮಾರ್‌, ಡಾ| ಎಸ್‌.ಮೀನಾಕ್ಷಿ, ಡಾ| ಮುರಳೀಧರ, ಡಾ| ವೆಂಕಟೇಶ್‌ ಇತರರು ಇದ್ದರು. ರಾಚಪ್ಪ ಕುಪ್ಪಸ್ತ ಸ್ವಾಗತಿಸಿದರು. ಡಾ| ಗಂಗಾಧರ ಹಿರೇಮಠ ನಿರೂಪಿಸಿದರು. ಆನಂದಮೂರ್ತಿ ವಂದಿಸಿದರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ