ಸತ್ಯ-ಪ್ರಾಮಾಣಿಕತೆಯಿಂದ ಬದುಕಿಗೆ ಬೆಲೆ

ದಸರಾ ಧರ್ಮ ಸಮ್ಮೇಳನಸದೃಢ ದೇಶ ನಿರ್ಮಾಣದಲ್ಲಿ ಗಾಂಧೀಜಿ-ಶಾಸ್ತ್ರಿ ಸೇವೆ ದೊಡ್ಡದು: ಶ್ರೀ

Team Udayavani, Oct 3, 2019, 11:26 AM IST

ಮಾನವ ಧರ್ಮ ಮಂಟಪ(ದಾವಣಗೆರೆ): ಸಾಧನೆಯ ಹಾದಿಯಲ್ಲಿ ಕಷ್ಟಗಳು ಸಹಜ. ಅವುಗಳನ್ನು ಎದುರಿಸಿ ಜೀವನದಲ್ಲಿ ಉನ್ನತಿ ಕಾಣಬೇಕಿದೆ. ಸತ್ಯ ಮತ್ತು ಪ್ರಾಮಾಣಿಕತೆಯಿಂದ ಮನುಷ್ಯನ ಬದುಕಿಗೆ ಬೆಲೆ ಬರಲಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ| ವೀರಸೋಮೇಶ್ವರ ಜಗದ್ಗುರುಗಳು ಹೇಳಿದ್ದಾರೆ.

ನಗರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ಕಲಿಸುತ್ತದೆ. ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಶ್ವಾಸ ಇಲ್ಲದಿದ್ದರೆ ಜೀವನ, ವಿಶ್ವಾಸ ಇಲ್ಲದಿದ್ದರೆ ಸಂಬಂಧಗಳು ಮುಗಿಯುತ್ತವೆ ಎಂದರು. ಸಹನೆ ಸಾಧನೆಗೆ ಮೆಟ್ಟಿಲು. ಕಷ್ಟದ ಜೀವನ ಶಿಸ್ತನ್ನು ಕಲಿಸುವ ಪಾಠಶಾಲೆ ಎಂಬುದನ್ನು ಅರಿತಾಗ ಬದುಕು ಉನ್ನತಿಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಸತ್ಯ ಶುದ್ಧ ಜೀವನದಿಂದ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ದೇಶಕ್ಕೆ ಮಾದರಿಯಾದವರು.

ಸತ್ಯ, ಅಹಿಂಸೆ ಮಾರ್ಗದಲ್ಲಿ ಗಾಂಧೀಜಿ ಬೆಳೆದು ಬಂದವರು. ಕೆಟ್ಟದ್ದನ್ನು ನೋಡಬೇಡ, ಕೇಳಬೇಡ, ಮಾತನಾಡಬೇಡ ಎಂಬ ಮೂರು ಮಂಗಗಳ ಚಿತ್ರ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ಸೈನಿಕ ಮತ್ತು ರೈತರು ನನ್ನ ಎರಡು ಕಣ್ಣು ಎಂಬುದಾಗಿ ನಂಬಿದವರು. ಸದೃಢ ದೇಶ ನಿರ್ಮಾಣದಲ್ಲಿ ಗಾಂಧೀಜಿ ಹಾಗೂ ಶಾಸ್ತ್ರೀಜಿ ಸೇವೆ ಬಹು ದೊಡ್ಡದೆಂದು ಶ್ರೀಗಳು ಸ್ಮರಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಶಾಸಕ ಎಚ್‌. ಎಸ್‌. ಶಿವಶಂಕರ್‌ ಮಾತನಾಡಿ, ರಂಭಾಪುರಿ ಪೀಠದ ದಸರಾ ಹಬ್ಬ ನಾಡಿಗೆ ಚಿರಪರಿಚಿತ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಉದ್ಘೋಷಣೆಯು ಸಾಮರಸ್ಯ ಬದುಕಿಗೆ ಮೂಲ ಮಂತ್ರವಾಗಿದೆ. ರಂಭಾಪುರಿ ಗುರುಪೀಠ ಜಾತಿ, ಮತ, ಪಂಥಗಳನ್ನು ಮೀರಿ ಭಾವೈಕ್ಯತೆಯ ಸಂದೇಶ ಸಾರುತ್ತಿದೆ. ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರವನ್ನು ನಾಡಿನ ಜನಕ್ಕೆ ನಿರಂತರವಾಗಿ ಪಂಚಪೀಠಗಳು ಧಾರ್ಮಿಕ ನೆಲೆಯಲ್ಲಿ ತುಂಬುವ ಕಾರ್ಯ ಮಾಡಿಕೊಂಡು ಬಂದಿವೆ. ಸಮಾಜವನ್ನು ತಿದ್ದಿ, ತೀಡುವ ಕಾರ್ಯದ ಜೊತೆಗೆ ಧರ್ಮ ಕಟ್ಟುವ ಮಹತ್ಕಾರ್ಯ ಮಾಡಿವೆ ಎಂದರು.

ಭಕ್ತರಿದ್ದಲ್ಲಿಗೆ ಪೀಠಗಳೇ ಬಂದು ಮಾನವ ಧರ್ಮ ಜಾಗೃತಿಗೊಳಿಸುವ ಕಾರ್ಯ ನಿರಂತರವಾಗಿ ನಡೆದುಕೊಂಡು ಬಂದಿದೆ. ವೀರಶೈವ -ಲಿಂಗಾಯತ ಎರಡೂ ಒಂದೇ ಎಂಬುದನ್ನು ಅರಿತು ಒಂದಾಗಿ ಬಾಳುವ ಸಂಕಲ್ಪ ನಮ್ಮೆಲ್ಲರದಾಗಬೇಕಿದೆ. ಧರ್ಮ ಉಳಿದರೆ ನಾಡು ಉಳಿದೀತು. ಈ ನಿಟ್ಟಿನಲ್ಲಿ ರಂಭಾಪುರಿ ಜಗದ್ಗುರುಗಳವರು ನಾಡಿನ ಮೂಲೆ ಮೂಲೆಗೂ ಸಂಚರಿಸಿ ಧರ್ಮ, ಸಂಸ್ಕೃತಿ, ಸಂಸ್ಕಾರ ಉಳಿಸಿ-ಬೆಳೆಸುವ ಕಾರ್ಯ ಸ್ಫೂರ್ತಿ ಮತ್ತು ಆದರ್ಶದಾಯಕವಾದುದು ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಸಾಧನ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೊಡ್ಡಬಾತಿ ತಪೋವನ ಆಸ್ಪತ್ರೆ ಚೇರ್ಮನ್‌ ಡಾ| ಶಶಿಕುಮಾರ್‌ ವಿ. ಮೆಹರವಾಡೆ, ರಂಭಾಪುರಿ ಪೀಠದಿಂದ ಪ್ರಶಸ್ತಿ ನೀಡಿರುವುದು ತಮಗೆ ಇನ್ನೂ ಹೆಚ್ಚಿನ ಕಾರ್ಯ ಮಾಡಲು ಪ್ರೇರಣೆ ದೊರೆತಂತಾಗಿದೆ. ಬರುವ ದಿನಗಳಲ್ಲಿ ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾ ಉಪಾಧ್ಯಕ್ಷ ಅಣಬೇರು ರಾಜಣ್ಣ, ಜಿಲ್ಲಾಧಿಕಾರಿ
ಮಹಾಂತೇಶ ಜಿ.ಬೀಳಗಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಎನ್‌.ಜಿ. ಪುಟ್ಟಸ್ವಾಮಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಚಿತ್ರದುರ್ಗದ ಡಾ| ಎಚ್‌. ಕೆ. ಎಸ್‌. ಸ್ವಾಮಿ, ಪರಿಸರ ರಕ್ಷಣೆ ಮತ್ತು ಗಾಂಧಿ  ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು. ಸುಳ್ಳದ ಶಿವಸಿದ್ಧರಾಮೇಶ್ವರ ಶ್ರೀ, ನಂದೀಪುರದ ನಂದೀಶ್ವರ ಶ್ರೀ, ಮಹೇಶ್ವರ ಸ್ವಾಮಿ, ಕ್ಯಾಪ್ಟನ್‌ ಡಾ| ಜ್ಯೋತಿ ಪ್ರಕಾಶ್‌ ಸೇರಿಂದತೆ ಹಲವು ಗಣ್ಯರಿಗೆ ಗುರುರಕ್ಷೆಯಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಆಶೀರ್ವದಿಸಿದರು.

ಹಂಪಸಾಗರ ಹಿರೇಮಠದ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ನುಡಿ ತೋರಣ, ಕುಮಾರಿ ಕೆ. ಆರ್‌. ಭೂಮಿಕಾ ಇವರಿಂದ ಭರತನಾಟ್ಯ ಜರುಗಿತು. ಸುಳ್ಳದ ಗುರುಸಿದ್ಧಯ್ಯ ಸೌದಿಮಠ ಮತ್ತು ಗುರುನಾಥ ಸುಣಗಾರ ಅವರು ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು.

ಶ್ರೀ ಸೌಮ್ಯ ಬಸವರಾಜ್‌ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಮಹಾತ್ಮಾ ಗಾಂಧೀಜಿ  ಮತ್ತು ದಿವಂಗತ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ ಶಾಸ್ತ್ರಿಗಳ ಭಾವಚಿತ್ರಕ್ಕೆ ಶ್ರೀ ರಂಭಾಪುರಿ ಜಗದ್ಗುರುಗಳು ಪುಷ್ಪಾರ್ಚನೆ ಸಲ್ಲಿಸಿದರು. ಸಮಾರಂಭದ ನಂತರ ನಜರ್‌ ಗೌರವ ಸಮರ್ಪಿಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ