ಡಿಸಿ ದಿಢೀರ್‌ ಭೇಟಿ; ಅವ್ಯವಸ್ಥೆ ಬೆಳಕಿಗೆ

ಚನ್ನಗಿರಿ ತಾಲೂಕು ಪ್ರವಾಸಹಾಸ್ಟೆಲ್‌-ಅಂಗನವಾಡಿ ಕೇಂದ್ರಕ್ಕೆ ಭೇಟಿಗುಣಮಟ್ಟದ ಆಹಾರ ವಿತರಿಸಲು ಸೂಚನೆ

Team Udayavani, Sep 22, 2019, 11:31 AM IST

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧ ಕಚೇರಿ ಇಲಾಖೆ ಕಚೇರಿ, ವಸತಿ ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ ಶನಿವಾರ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಕಂಡುಬಂದ ನ್ಯೂನ್ಯತೆ ತಕ್ಷಣ ಸರಿಪಡಿಸಿಕೊಳ್ಳದಿದ್ದಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಗೆ ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಚನ್ನಗಿರಿ ತಾಲೂಕಿನ ಶಾಂತಿ ಸಾಗರದಲ್ಲಿರುವ ಜಂಗಲ್‌ ಲಾಡ್ಜ್ ಆ್ಯಂಡ್‌ ರೆಸಾರ್ಟ್‌ನಲ್ಲಿ ಅಧಿಕಾರಿಗಳೊಂದಿಗೆ ಪೂರ್ವಭಾವಿ ನಭೆ ನಡೆಸಿ, ಕೆಲವೆಡೆ ದಿಢೀರ್‌
ಭೇಟಿ ನೀಡಿದರು.

ಚನ್ನಗಿರಿ ತಾಲೂಕಿನ ನಲ್ಲೂರು ಕ್ಯಾಂಪ್‌ ಹಾಗೂ ನಲ್ಲೂರು ಹಟ್ಟಿಯಲ್ಲಿರುವ ಅಂಗನವಾಡಿ ಕೇಂದ್ರಗಳಿಗೆ ಅವರು ಭೇಟಿ ನೀಡಿದಾಗ ಅಂಗನವಾಡಿಗಳಲ್ಲಿ ಪ್ರವೇಶ ಪಡೆದ ಮಕ್ಕಳ ಸಂಖ್ಯೆಗಿಂತ ಬಹಳ ಕಡಿಮೆ ಹಾಜರಾತಿ, ಮಧ್ಯಾಹ್ನ 12.30 ಗಂಟೆಯಾದರೂ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡದಿರುವುದು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರದಲ್ಲಿ ಗೈರು ಹಾಜರಿ ಕಂಡು ಬಂತು. ಈ ಕುರಿತು ಚನ್ನಗಿರಿ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಈ ಕಾರ್ಯಕರ್ತೆಯರಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲು ಹಾಗೂ ಇನ್ನು
ಮುಂದೆ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸಮಯಕ್ಕೆ
ಸರಿಯಾಗಿ ನೀಡುವಂತೆ, ಶುದ್ಧ ಕುಡಿಯುವ
ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಶುಚಿಯಾಗಿಡಲು ಕ್ರಮ ಕೈಗೊಳ್ಳಲು ಸೂಚಿಸಿದರು.

ದೇವರಹಳ್ಳಿಯ ಜವಾಹರ ನವೋದಯ ವಿದ್ಯಾಲಯಕ್ಕೆ ಭೇಟಿ ನೀಡಿ, ವಿ.ಎಂ.ಸಿ/ವಿ.ಎ.ಸಿ ಸಭೆ ನಡೆಸಿ, ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಿದರು. ವಿದ್ಯಾರ್ಥಿಗಳಿಗೆ ಎಲ್ಲಾ ವಿಷಯಗಳಲ್ಲಿ ಪ್ರಗತಿ ಸಾಧಿಸಿ, ವಿದ್ಯಾಲಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕೆಂದು ಸಲಹೆ ನೀಡಿದರಲ್ಲದೆ, ವಿದ್ಯಾರ್ಥಿಗಳ ಕೊಠಡಿ ಹಾಗೂ ವಿದ್ಯಾಲಯದ ಮೂಲ ಸೌಕರ್ಯಗಳ ಹಾಗೂ ಆವರಣ ವೀಕ್ಷಿಸಿದರು.

ದೇವರಹಳ್ಳಿ ನಾಡಕಚೇರಿಗೆ ಸ್ವಂತ ಕಟ್ಟಡ ಇರದ ಕಾರಣ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ ಕೂಡಲೇ ಗ್ರಾಮ ಪಂಚಾಯತಿಗೆ ಜಾಗ ಗುರುತಿಸಿ, ಪ್ರಸ್ತಾವನೆ ಸಲ್ಲಿಸಲು ತಹಶೀಲ್ದಾರ್‌ಗೆ ಸೂಚಿಸಿದರು. ಚನ್ನಗಿರಿ ತಾಲೂಕು ಕಚೇರಿಗೆ ಭೇಟಿ ನೀಡಿ, ಭೂಮಿ ಕೇಂದ್ರ, ಎ.ಜೆ.ಎಸ್‌.ಕೆ. ಕೇಂದ್ರ, ದಾಖಲೆ ಶಾಖೆ, ಸರ್ವೇ ಶಾಖೆ, ಚುನಾವಣೆ ಶಾಖೆ, ಆಧಾರ್‌ ಪ್ರಕ್ರಿಯೆ ಪರಿಶೀಲಿಸಿ ಸಾರ್ವಜನಿಕರ ಮನವಿಗಳಿಗೆ ಕೂಡಲೇ ಸ್ಪಂದಿಸುವಂತೆ ಸಂಬಂ ಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲಿಸಿದಾಗ ಈ ವಿದ್ಯಾರ್ಥಿ ನಿಲಯಲ್ಲಿ 88 ಬಾಲಕಿಯರು ಪ್ರವೇಶ ಪಡೆದಿದ್ದು, ವಿದ್ಯಾರ್ಥಿನಿಯರು ಊರಿಗೆ ಹೋದ ಕಾರಣ ವಿದ್ಯಾರ್ಥಿ ನಿಲಯದಲ್ಲಿ ಶೇ.30ರಷ್ಟು ಮಾತ್ರ ವಿದ್ಯಾರ್ಥಿಗಳು ಹಾಜರಿರುವುದು ಅವರ
ಗಮನಕ್ಕೆ ಬಂದಿತು.

ವಸತಿ ನಿಲಯಕ್ಕೆ ಸರಬರಾಜುಗುತ್ತಿರುವ ಆಹಾರ ಸಾಮಾಗ್ರಿಗಳ ಕಳಪೆ ಗುಣಮಟ್ಟ ಹಾಗೂ ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ವ್ಯವಸ್ಥೆ ಇಲ್ಲದಿರುವುದು, 8 ತಿಂಗಳಿನಿಂದ ದಿನನಿತ್ಯ ಬಳಸುವ ನೀರಿನ ಪಂಪ್‌ ಕೆಟ್ಟು ಹೋಗಿದ್ದರೂ ಈವರೆಗೆ ದುರಸ್ತಿಪಡಿಸದ ಕಾರಣ ಮಕ್ಕಳು ಹಾಸ್ಟೆಲ್‌ ಹೊರಗೆ ಇರುವ ಸಾರ್ವಜನಿಕ ನಳದಿಂದ ನೀರನ್ನು ತಂದು ಕೊಠಡಿಯಲ್ಲಿಟ್ಟುಕೊಂಡು ಉಪಯೋಗಿಸುತ್ತಿರುವುದು ಹಾಗೂ ವಿದ್ಯಾರ್ಥಿ ನಿಲಯದ ವಾರ್ಡನ್‌ ವಾರಕೊಮ್ಮೆ ಮಾತ್ರ ವಿದ್ಯಾರ್ಥಿ ನಿಲಯಕ್ಕೆ ಬರುತ್ತಿರುವುದು ಜಿಲ್ಲಾಧಿಕಾರಿ ಗಮನಕ್ಕೆ ಬಂದಾಗ, ತಾಲೂಕು ವಿಸ್ತಾರಣಾ ಧಿಕಾರಿಗೆ ಸಂಜೆಯೊಳಗೆ ಪಂಪ್‌ ಸರಿಪಡಿಸಿ ಮಕ್ಕಳಿಗೆ ಯಾವುದೇ ಅನಾನುಕೂಲ ಆಗದಂತೆ ವೈಯಕ್ತಿಕವಾಗಿ ಗಮನಹರಿಸಬೇಕು. ಪುನಃ ಈ ರೀತಿ ನಿರ್ಲಕ್ಷ್ಯ ತೋರಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಂತರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಕೂಡಲೇ ಭೇಟಿ ನೀಡಿ
ಪರಿಶೀಲಿಸಿ, ಒಂದು ವಾರದೊಳಗೆ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿ ಕ್ರಮ ವಹಿಸಲು ತಿಳಿಸಿದರು. ಕಾಕನೂರು ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿದಾಗ, ಶಾಲೆಯ ಗ್ರಂಥಾಲಯದಲ್ಲಿ ಬಹಳಷ್ಟು ಪುಸ್ತಕಗಳಿದ್ದರೂ ಕೂಡ ವಿದ್ಯಾರ್ಥಿಗಳಿಗೆ ಉಪಯೋಗಿಸಲು ನೀಡದೇ ಇರುವುದನ್ನು ಗಮನಿಸಿ, ಕೂಡಲೇ ಪುಸ್ತಕಗಳನ್ನು ಮಕ್ಕಳಿಗೆ ಉಪಯೋಗಿಸಿಲು ಅವಕಾಶ ನೀಡುವಂತೆ ತಿಳಿಸಿದರು. ಈ ಶಾಲೆಯ
ಪ್ರಾಂಶುಪಾಲ ಮುದೋಬನಾಯ್ಕ ಸರ್ಕಾರಿ ವಸತಿಗೃಹದಲ್ಲಿ ಈವರೆಗೆ ವಾಸ್ತವ್ಯ ಮಾಡದೇ ವಸತಿ ಗೃಹಕ್ಕೆ ಬೀಗ ಹಾಕಿರುವುದನ್ನು ನೋಡಿದ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗೆ ಆ ಪ್ರಾಂಶುಪಾಲರಿಗೆ ನೋಟಿಸ್‌ ನೀಡುವಂತೆ ಸೂಚಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ