ಮೋದಿ ಪ್ರಧಾನಮಂತ್ರಿಯಲ್ಲ ಮಾರ್ಕೆಟಿಂಗ್‌ ಮ್ಯಾನ್‌

Team Udayavani, Apr 11, 2019, 11:46 AM IST

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ 5-6 ಸಾವಿರ ಕೋಟಿ ಹಣದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿರುವ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಅಲ್ಲ. ಅವರೊಬ್ಬ ಪ್ರಚಾರ ಮಂತ್ರಿ, ಮಾರ್ಕೆಂಟಿಗ್‌ ಮ್ಯಾನ್‌ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಜರಿದಿದ್ದಾರೆ.

ಬುಧವಾರ ಎಸ್‌.ಕೆ.ಪಿ. ರಸ್ತೆಯಲ್ಲಿರುವ ಶ್ರೀ ಮಾರ್ಕಾಂಡೇಶ್ವರ ದೇವಸ್ಥಾನ
ಸಮುದಾಯ ಭವನದಲ್ಲಿ ದಾವಣಗೆರೆ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ನಿಂದ ಏರ್ಪಡಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿರು.

ಪ್ರಧಾನಿ ನರೇಂದ್ರ ಮೋದಿ ಇಲ್ಲದೇ ಹೋದರೆ ದೇಶವೇ ಉಳಿಯುವುದಿಲ್ಲ
ಎಂಬ ವಾತಾವರಣ ನಿರ್ಮಾಣದ ಹೇಳಿಕೆ ನೀಡಲಾಗುತ್ತಿದೆ. ಮೋದಿಗಿಂತ ಮುಂಚೆ ದೇಶ ಸುರಕ್ಷಿತವಾಗಿರಲಿಲ್ಲವೆ, ಜನರು ಚೆನ್ನಾಗಿ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಮೋದಿಯವರು ದೇಶ ವಿಭಜನೆ ಮಾಡುವ ಮಾತುಗಳಾಡುತ್ತಿದ್ದಾರೆ. ನಮ್ಮವರ
ವಿರುದ್ಧ ನಮ್ಮವರನ್ನೇ ಎತ್ತಿಕಟ್ಟುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಬಿಜೆಪಿಗೆ ಮತ ಹಾಕುವರು ಮಾತ್ರ ದೇಶಭಕ್ತರು. ಬಿಜೆಪಿಗೆ ವಿರುದ್ಧವಾಗಿ ಮತ ಹಾಕುವರು ದೇಶದ್ರೋಹಿಗಳು ಅವರನ್ನ ಪಾಕಿಸ್ತಾನಕ್ಕೆ ಕಳಿಸಬೇಕು ಎನ್ನುವ ಮಾತುಗಳೂ ಕೇಳಿ ಬರುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊರೆತಿದ್ದು ಶೇ. 32 ರಷ್ಟು ಮತಗಳು ಮಾತ್ರ. ಬಿಜೆಪಿಗೆ ವಿರುದ್ಧವಾಗಿ ಶೇ. 68 ರಷ್ಟು ಮತ ಚಲಾವಣೆ ಆಗಿವೆ. ಅವರನ್ನ ಪಾಕಿಸ್ತಾನಕ್ಕೆ ಕಳಿಸುತ್ತಾರಾ
ಎಂದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಮ್ಮು ಮತ್ತು
ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಣೆ ಅಂಚಿಗೆ ಬಂದಿತ್ತು. ಮೋದಿ ಪ್ರಧಾನಿಯಾದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸದ ವಾತಾವರಣ ಇದೆ. ಉಗ್ರರಿಗೆ 498 ಯೋಧರು ಬಲಿಯಾಗಿದ್ದಾರೆ. ಅಲ್ಲಿ ಸರ್ಕಾರವೇ ಇಲ್ಲ. ಗನ್‌ ಮೂಲಕ ಸುರಕ್ಷತೆ ನೀಡಲಾಗುತ್ತಿದೆ. ಮೋದಿ ಅಂತಹವರಿಂದ ದೇಶದ ಸುರಕ್ಷತೆ ನಿರೀಕ್ಷೆ ಮಾಡಲಿಕ್ಕೆ ಸಾಧ್ಯವೇ ಎಂದು ಪ್ರಶ್ನಿಸಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಯುವ ಸಮುದಾಯಕ್ಕೆ ವರ್ಷಕ್ಕೆ 2 ಕೋಟಿ ಉದ್ಯೋಗ ಒದಗಿಸುವ ಭರವಸೆ ನೀಡಿದ್ದರು. ಅದರಂತೆ ಉದ್ಯೋಗ ನೀಡಲೇ ಇಲ್ಲ. ಕಳೆದ 45 ವರ್ಷದಲ್ಲಿ ಮೋದಿ ಅವಧಿಯಲ್ಲಿಯಷ್ಟು
ನಿರುದ್ಯೋಗದ ವಾತಾವರಣ ನಿರ್ಮಾಣ ಆಗಿರುವುದು ಒಂದು ದಾಖಲೆ. ಜಿಎಸ್‌ ಟಿಯಂತಹ ಅವ್ಯವಸ್ಥೆ ತೆರಿಗೆ ಜಾರಿಗೆ ತಂದಿದ್ದಾರೆ ಎಂದು ದೂರಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಚಾಯ್‌ವಾಲಾ ಆಗಿದ್ದ ಮೋದಿ ಈಗ
ಚೌಕಿದಾರ್‌ ಆಗಿದ್ದಾರೆ. ನೀರವ್‌ ಮೋದಿ, ಲಲಿತ್‌ ಮೋದಿ, ಚೌಕ್ಸಿ ಮುಂತಾದವರು ಬ್ಯಾಂಕ್‌ಗಳಲ್ಲಿನ 1 ಲಕ್ಷ ಕೋಟಿ ಸಾಲ ತೆಗೆದುಕೊಂಡು ದೇಶ ಬಿಟ್ಟು ಓಡಿ ಹೋಗಿದ್ದಾರೆ. ಮೋದಿ ಅವರಿಗೆ ಎಲ್ಲವೂ ಗೊತ್ತಿತ್ತು. ಅದರಲ್ಲಿ ಅನೇಕರು ಅವರ ಆಪ್ತರೇ ಇದ್ದಾರೆ. ಕೆಲವರ ಕುರಿತು ಮೋದಿ ಭಾಷಣ
ಮಾಡಿದ್ದಾರೆ. ಅಂತಹವರು ತಮ್ಮನ್ನು ಚೌಕಿದಾರ್‌ ಅಂದು ಹೇಳಿಕೊಳ್ಳುತ್ತಾರೆ.
ಅವರಿಗೆ ಚೌಕಿದಾರ್‌ ಆಗಲಿಕ್ಕೆ ಯಾವ ಅರ್ಹತೆ ಇದೆ ಎಂದರು.

ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ಎಂದೆಲ್ಲ ಹೇಳುವ ಮೋದಿಯವರು ರಾಜ್ಯದಲ್ಲಿ ಹಿಂದುಳಿದ ವರ್ಗದವರಿಗೆ ಲೋಕಸಭಾ ಟಿಕೆಟ್‌ ನೀಡದೇ ಇರುವುದ ನೋಡಿದರೆ ಅವರು ಯಾರ ಪರವಾಗಿ ಇದ್ದಾರೆ. ಅವರ
ಪ್ರಚಾರ ಬರೀ ಸ್ಲೋಗನ್‌ಗೆ ಸೀಮಿತ. ಅವರು ದೇಶಕ್ಕೆ ಏನು ಮಾಡಿಲ್ಲ. ಅದೇ ಕಾಂಗ್ರೆಸ್‌ನ ಸಾಧನೆ ಇತಿಹಾಸ ಎಂದರು.

ಹಿಟ್ಲರ್‌ ಮೀರಿಸುವ ನರೇಂದ್ರ ಮೋದಿ
ದಕ್ಷಿಣ ಭಾರತದಲ್ಲಿ ಗೆಲ್ಲುವ ಪ್ರಯತ್ನ ನಡೆಸುತ್ತಿರುವ ಪ್ರಧಾನ ಮಂತ್ರಿ
ನರೇಂದ್ರ ಮೋದಿ ವೈರತ್ವದಿಂದ ಐಟಿ ಮತ್ತು ಸಿಬಿಐ ದಾಳಿ ನಡೆಸುತ್ತಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುವ
ಭಯದಿಂದ ಉಗ್ರರ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಮೇಲೆ ದಾಳಿ
ನಡೆಸಿ, ನಾವೇ ಮಾಡಿದ್ದೇವೆ. ನಾವೇ ದೇಶವನ್ನ ಉಳಿಸುವರು ಎನ್ನುವಂತೆ
ಮಾತನಾಡುತ್ತಿದ್ದಾರೆ. ವೈರತ್ವದಲ್ಲಿ ಮೋದಿ ಹಿಟ್ಲರ್‌ನನ್ನೂ ಮೀರಿಸುವರು
ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು
ಶಿವಶಂಕರಪ್ಪ ದೂರಿದರು .

ನಾಚಿಕೆ ಆಗೋಲ್ವೇ?
ಇಂದಿರಾಗಾಂಧಿ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದ ಮೇಲೆ 15 ಬಾರಿ
ಸರ್ಜಿಕಲ್‌ ದಾಳಿ ನಡೆಸಲಾಗಿತ್ತು. ಅವರು ಯಾರೂ ಅದನ್ನು ಚುನಾವಣಾ
ಮತಗಳಿಗಾಗಿ ಬಳಕೆ ಮಾಡಿಕೊಳ್ಳಲಿಲ್ಲ. ಮೋದಿ ಅವರಿಗೆ ಯೋಧರ ತ್ಯಾಗ.
ಬಲಿದಾನ ತೋರಿಸಿ ಮತ ಕೇಳಲು ನಾಚಿಕೆಯಾಗುವುದಿಲ್ಲವೇ ಎಂದು
ಜಿಲ್ಲಾ ಕಾಂಗ್ರೆಸ್‌ ಉಸ್ತುವಾರಿ ಬಲ್ಕೀಶ್‌ ಬಾನು ಪ್ರಶ್ನಿಸಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ