ಶಿಕ್ಷಕರು ತಾಯಿಗಿಂತಲೂ ಹೆಚ್ಚು

ಶಿಕ್ಷಕರ ದಿನಾಚರಣೆ•ಶಿಕ್ಷಣವಿಲ್ಲದೇ ಯಾವುದೇ ಕಾರ್ಯ ಅಸಾಧ್ಯ•22 ಶಿಕ್ಷಕರಿಗೆ ಪ್ರಶಸ್ತಿ

Team Udayavani, Sep 6, 2019, 10:53 AM IST

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ್‌ ಶಿಕ್ಷಕ ದಿನಾಚರಣೆ ಉದ್ಘಾಟಿಸಿದರು.

ದಾವಣಗೆರೆ: ಮಕ್ಕಳು ಪ್ರವರ್ಧಮಾನಕ್ಕೆ ಬರುವವರೆಗೆ ಶಿಕ್ಷಣ ನೀಡುವಂತಹ ಶಿಕ್ಷಕರು ತಾಯಿಗಿಂತಲೂ ಹೆಚ್ಚು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಬಣ್ಣಿಸಿದ್ದಾರೆ.

ಗುರುವಾರ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ, ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೊದಲ ಗುರು ತಾಯಿ ಕಲಿಸುವುದಕ್ಕಿಂತಲೂ ಮಕ್ಕಳು ಪ್ರವರ್ಧಮಾನಕ್ಕೆ ಬರುವ ತನಕ ಶಿಕ್ಷಣ ನೀಡುವಂತಹ ಶಿಕ್ಷಕರು ತಾಯಿಗಿಂತಲೂ ಹೆಚ್ಚು ಎಂದರು.

ಉತ್ತಮ ಸಮಾಜ, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಶಿಕ್ಷಣ ಇಲ್ಲದೆ ಯಾರೂ ಏನೂ ಮಾಡಲಿಕ್ಕೆ ಆಗುವುದೇ ಇಲ್ಲ. ಪ್ರಧಾನಿ, ರಾಷ್ಟ್ರಪತಿ ಯಾರೆಯೇ ಆಗಲಿ, ಗುರುವಿನಿಂದ ಶಿಕ್ಷಣ ಪಡೆಯಲೇ ಬೇಕು. ಹಾಗಾಗಿಯೇ ಇಂದಿನ ಕಾಲದಲ್ಲೂ ಶಿಕ್ಷಕರಿಗೆ ಬಹಳ ಜವಾಬ್ದಾರಿ ಮತ್ತು ಗೌರವ ಇದೆ ಎಂದು ಹೇಳಿದರು.

ಜೀವನದಲ್ಲಿ ಶಿಕ್ಷಣಕ್ಕೆ ಬೆಲೆ ಕಟ್ಟಲಿಕ್ಕೆ ಆಗುವುದೇ ಇಲ್ಲ. ಶಿಕ್ಷಕರು ಸಮಾಜದಲ್ಲಿನ ತಮ್ಮ ಗೌರವ ಮತ್ತು ಜವಾಬ್ದಾರಿಗೆ ತಕ್ಕಂತೆ ಕೆಲಸ ಮಾಡಬೇಕು. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕಾರ, ಸಂಸ್ಕೃತಿ ನೀಡುವುದನ್ನ ಮರೆತಲ್ಲಿ ಶಿಕ್ಷಕರ ದಿನಾಚರಣೆಗೆ ಗೌರವವೇ ಇಲ್ಲದಂತಾಗುತ್ತದೆ ಎಂದರು.

ದಾವಣಗೆರೆ ಜಿಲ್ಲೆಯಲ್ಲಿ ಎಲ್ಲಾ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆಯುವಂತೆ ಬೋಧನೆ ಮಾಡಬೇಕು. ವಿದ್ಯೆಯ ಜೊತೆಗೆ ಮಕ್ಕಳಿಗೆ ಪೂರಕವಾದ ಸಾಂಸ್ಕೃತಿಕ, ಕ್ರೀಡೆಗಳಲ್ಲೂ ತೊಡಗಿಸಬೇಕು. ಸದಾ ಶಿಕ್ಷಣದಲ್ಲೇ ತಲ್ಲೀನರಾಗಿರುವ ಶಿಕ್ಷಕರ ಜಿಲ್ಲೆ ಯಾವುದಾದರೂ ಇದೆ ಎಂದರೆ ಅದು ದಾವಣಗೆರೆ ಜಿಲ್ಲೆ ಆಗಬೇಕು ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶೈಲಜಾ ಬಸವರಾಜ್‌ ಮಾತನಾಡಿ, ಶಿಕ್ಷಕರು ದೇಶ ಕಟ್ಟುವ ಕೆಲಸ ಮಾಡುವವರು. ಸಮಾಜದಲ್ಲಿ ಶಿಕ್ಷಕರು ಮತ್ತು ರೈತರಿಗೆ ಬಹಳ ಗೌರವ ಇದೆ. ರೈತರು ಹೊಟ್ಟೆಯ ಹಸಿವು ನೀಗಿಸಿದರೆ, ಶಿಕ್ಷಕರು ಜ್ಞಾನದ ಹಸಿವನ್ನು ನೀಗಿಸುವವರು. ಪ್ರತಿಯೊಬ್ಬರಿಗೆ, ಪ್ರತಿಯೊಂದಕ್ಕೆ ಗುರು ಬೇಕೇ ಬೇಕು. ಶಿಕ್ಷಕ‌ ಸಮುದಾಯ ಕೊಡುವಂತಹ ಬೆಳಕು ಇಡೀ ವಿಶ್ವವೇ ಭಾರತವನ್ನ ನೋಡುವಂತಾಗಲಿ ಎಂದು ಆಶಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆ 9ನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಂಬರ್‌ ಒನ್‌ ಜಿಲ್ಲೆ ಆಗಬೇಕು. ಎಲ್ಲಾ ಶಿಕ್ಷಕರು ಸೇವಾ ಮನೋಭಾವದಿಂದ ತಮಗೆ ನೀಡಿರುವ ಪಾತ್ರವನ್ನ ಶೇ.100 ರಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿ, ಗೌರವಕ್ಕೆ ಪಾತ್ರರಾದರೆ ಅದು ವಿಶ್ವ ಪ್ರಶಸ್ತಿಗಿಂತಲೂ ಮಿಗಿಲು ಎಂದರಿತು ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್.ಎಸ್‌. ಮಂಜುನಾಥ್‌ಕುರ್ಕಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷೆ ಗೀತಾ ಗಂಗಾಧರನಾಯ್ಕ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಪಾಲಾಕ್ಷ, ಡಯಟ್ ಪ್ರಾಚಾರ್ಯ ಎಚ್.ಎಸ್‌. ಲಿಂಗರಾಜು, ಪ್ರೌಢಶಾಲೆ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥಯ್ಯ, ಕಾರ್ಯದರ್ಶಿ ಮುಬಾರಕ್‌, ಕೆ. ಈಶಾನಾಯ್ಕ, ಮಂಜಾನಾಯ್ಕ, ಶಿವಗಾನಾಯ್ಕ, ಪ್ರಾಥಮಿಕ ಶಾಲೆ ಸಂಘದ ಅಧ್ಯಕ್ಷ ತಿಪ್ಪೇಶ್‌, ಕಾರ್ಯದರ್ಶಿ ಸಿದ್ದೇಶ್‌, ಶಿಕ್ಷ‌ಣಾಧಿಕಾರಿ ನಿರಂಜನಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ.ಸಿ. ಸಿದ್ದಪ್ಪ,ಜಿ. ಕೊಟ್ರೇಶ್‌ ಇತರರು ಇದ್ದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳಾಡಿದರು.

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ 22 ಜನ ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ