ಮಕ್ಕಳು ಬಂದ್ರು ಇನ್ನೂ ಬರಲಿಲ್ಲ ಸಮವಸ್ತ್ರ!

ಶೇ.5 ಪಠ್ಯಪುಸ್ತಕಗಳೂ ಬರಬೇಕು |ವಿಳಂಬವಾಗಲು ಚುನಾವಣೆ ಕಾರಣ ಎನ್ನುತ್ತಿದ್ದಾರೆ ಅಧಿಕಾರಿಗಳು

Team Udayavani, Jun 13, 2019, 1:04 PM IST

ಶಶಿಧರ್‌ ಬುದ್ನಿ
ಧಾರವಾಡ:
ಜಿಲ್ಲೆಯಲ್ಲಿ ಶಾಲಾ ಆರಂಭೋತ್ಸವಕ್ಕೆ ಹಬ್ಬದ ವಾತಾವರಣದೊಂದಿಗೆ ಚಾಲನೆ ದೊರೆತಿದ್ದು, ಮಕ್ಕಳು ಶಾಲೆಗಳತ್ತ ಹೆಜ್ಜೆ ಹಾಕಿದ್ದಾರೆ. ಆದರೆ ಈವರೆಗೆ ಶಾಲೆಗಳಿಗೆ ಶೇ.95 ಪಠ್ಯ-ಪುಸ್ತಕಗಳು ತಲುಪಿಸಿದ್ದರೆ ಸಮವಸ್ತ್ರ ಮಾತ್ರ ಈವರೆಗೂ ಬಂದಿಲ್ಲ. ಬರುವ ಲಕ್ಷಣವೂ ಕಾಣುತ್ತಿಲ್ಲ.

ಶಾಲಾ ಆರಂಭೋತ್ಸವ ದಿನ ಮಕ್ಕಳ ಕೈಗಳಲ್ಲಿ ಪಠ್ಯ-ಪುಸ್ತಕಗಳನ್ನಿಟ್ಟಿದ್ದ ಶಿಕ್ಷಕರು ಜೂನ್‌ ಮೊದಲ ವಾರದೊಳಗೆ ಸಮವಸ್ತ್ರ ನೀಡುವುದಾಗಿ ಹೇಳಿದ್ದರು. ಆದರೆ ಶೈಕ್ಷಣಿಕ ವರ್ಷ ಆರಂಭಗೊಂಡು ಶಾಲಾ ತರಗತಿಗಳು ಶುರುವಾಗಿ ಎರಡು ವಾರ ಗತಿಸಿದರೂ ಶೇ.100 ಪುಸ್ತಕಗಳು ಇನ್ನೂ ಶಾಲಾ ಮಕ್ಕಳ ಕೈ ಸೇರಿಲ್ಲ. ಶೇ.5 ಪಠ್ಯ-ಪುಸ್ತಕಗಳು ಬರುವುದು ಬಾಕಿ ಇದೆ. ಸಮವಸ್ತ್ರಗಳ ಸುಳಿವಂತೂ ಇಲ್ಲವೇ ಇಲ್ಲ.

ಸಮವಸ್ತ್ರವೇ ಬಂದಿಲ್ಲ: ಜಿಲ್ಲೆಯಲ್ಲಿ ಒಟ್ಟು 1,251 ಪ್ರಾಥಮಿಕ ಶಾಲೆಗಳ ಪೈಕಿ 219 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, 544 ಹಿರಿಯ ಪ್ರಾಥಮಿಕ ಶಾಲೆಗಳು ಇದ್ದರೆ, 442 ಪ್ರೌಢಶಾಲೆಗಳ ಪೈಕಿ 108 ಸರಕಾರಿ ಪ್ರೌಢಶಾಲೆಗಳಿವೆ. ಹೀಗಾಗಿ ಒಟ್ಟು 763 ಕಿರಿಯ, ಹಿರಿಯ ಪ್ರಾಥಮಿಕ ಶಾಲೆ ಹಾಗೂ 108 ಸರಕಾರಿ ಪ್ರೌಢಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆಯಾಗಬೇಕಿದ್ದು, ಈವರೆಗೂ ಸಮವಸ್ತ್ರಗಳು ಬಂದಿಲ್ಲ.

ಪ್ರತಿ ವರ್ಷ ಮೇ ತಿಂಗಳೊಳಗೆ ರಾಜ್ಯಮಟ್ಟದಲ್ಲಿ ಸಭೆ ಕೈಗೊಂಡು ಸಮವಸ್ತ್ರ ಕುರಿತಂತೆ ಆಯಾ ಜಿಲ್ಲಾ ನೋಡಲ್ ಅಧಿಕಾರಿಗಳಿಂದ ಸಮವಸ್ತ್ರದ ಮಾದರಿ ಪರಿಶೀಲಿಸಿದ ಬಳಿಕ ಮೇ ತಿಂಗಳ ಅಂತ್ಯದೊಳಗೆ ಆಯಾ ತಾಲೂಕಿನ ಗೋದಾಮುಗಳಿಗೆ ಸಮವಸ್ತ್ರ ಪೂರೈಸಲಾಗುತ್ತಿತ್ತು. ಬಳಿಕ ಶಾಲಾ ಆರಂಭೋತ್ಸವದಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿತ್ತು. ಆದರೆ ಶಾಲೆ ಆರಂಭಗೊಂಡು ಎರಡು ವಾರ ಕಳೆದರೂ ಸಮವಸ್ತ್ರ ಮಾತ್ರ ಶಾಲೆಯಂಗಳ ತಲುಪಿಲ್ಲ.

ಚುನಾವಣೆಯಿಂದ ವಿಳಂಬ: ಕಳೆದ ಎರಡು ವರ್ಷಗಳಿಂದ ಸಮವಸ್ತ್ರ ಸಮಸ್ಯೆ ಉಂಟಾಗುತ್ತಿದ್ದು, ಇದಕ್ಕೆ ಚುನಾವಣೆಗಳೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆ, ಬಳಿಕ ಸರಕಾರ ರಚನೆ ಕಾರಣದಿಂದ ಮೇ ತಿಂಗಳ ಕೊನೆಯಲ್ಲಿ ಪೂರೈಕೆಯಾಗಬೇಕಿದ್ದ ಸಮವಸ್ತ್ರಗಳು ತಡವಾಗಿ ಪೂರೈಕೆಯಾಗಿದ್ದವು. ಈ ಸಲ ಲೋಕಸಭೆ ಚುನಾವಣೆ ಹಾಗೂ ಶಿಕ್ಷಣ ಇಲಾಖೆಯಿಂದ ಪೂರ್ವ ತಯಾರಿ ಮಾಡಿಕೊಳ್ಳದೇ ಇರುವುದರಿಂದ ಈ ಸಲವೂ ಸಮವಸ್ತ್ರ ವಿತರಣೆಯಲ್ಲಿ ವಿಳಂಬವಾಗುವ ಲಕ್ಷಣಗಳು ಕಂಡು ಬರುತ್ತಿವೆ.

ಕಳೆದ ಬಾರಿ ಸಮವಸ್ತ್ರ ಪೂರೈಸಲಾಗುತ್ತದೆ ಎಂಬ ಸಂದೇಶ ಪತ್ರವನ್ನಾದರೂ ಮೇ ತಿಂಗಳಾಂತ್ಯದಲ್ಲಿ ಆಯಾ ಡಿಡಿಪಿಐ ಕಚೇರಿಗಳಿಗೆ ರವಾನಿಸಲಾಗಿತ್ತು. ಆದರೆ ಈ ಸಲ ಸಮವಸ್ತ್ರ ಕೊಡುತ್ತೇವೆ. ಇಂತಹ ಸಮಯದಲ್ಲಿ ಪೂರೈಸುತ್ತೇವೆ ಎಂಬ ಯಾವ ಸ್ಪಷ್ಟ ಮಾಹಿತಿ ಡಿಡಿಪಿಐ ಕಚೇರಿಗೆ ಈವರೆಗೂ ತಲುಪಿಲ್ಲ. ಇದು ಡಿಡಿಪಿಐ ಕಚೇರಿ ಅಧಿಕಾರಿಗಳಲ್ಲಿ ಆಂತಕಕ್ಕೆ ಕಾರಣವಾಗಿದೆ.

ಪುಸ್ತಕಗಳೂ ಬರಬೇಕಿದೆ: ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತೆಲುಗು, ತಮಿಳು ಮಾಧ್ಯಮಕ್ಕೆ ಸಂಬಂಧಿಸಿದಂತೆ ಜಿಲ್ಲೆಯಿಂದ 1ರಿಂದ 10 ತರಗತಿಯ ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ ಅನ್ವಯ 15,79,734 ಉಚಿತ ಪುಸ್ತಕಗಳ ಬೇಡಿಕೆ ಇದೆ. ಈ ಪೈಕಿ 15,00,747 ಪುಸ್ತಕಗಳು ವಿತರಣೆಯಾಗಿದ್ದು, 78,987 ಪುಸ್ತಕಗಳು ಬರಬೇಕಿದೆ. ಇನ್ನು ಖಾಸಗಿ ಶಾಲೆಗಳಿಂದ 6,72,242 ಪುಸ್ತಕಗಳ ಬೇಡಿಕೆ ಇದೆ. ಬೇಡಿಕೆಯನುಸಾರ ಪುಸ್ತಕ ದಾಸ್ತಾನು ಮಾಡಲಾಗಿದ್ದು, ಶಾಲೆಗಳು ಡಿಡಿ ತುಂಬಿದಂತೆ ಅವುಗಳ ವಿತರಿಸುವ ಕಾರ್ಯ ಸಾಗಿದ್ದು, ಶಾಲೆಗಳ ವಿಳಂಬ ನೀತಿಯಿಂದ ಈ ಕಾರ್ಯವೂ ಈವರೆಗೂ ಪೂರ್ಣಗೊಂಡಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ