ಕೆರೆ ಅತಿಕ್ರಮಣ ತೆರವಿಗೆ ಕ್ರಮ: ಜಿಲ್ಲಾಧಿಕಾರಿ

ಕೆರೆ ಮತ್ತೆ ಅತಿಕ್ರಮಣಗೊಳ್ಳದಂತೆ ಬೇಲಿ, ಟ್ರೆಂಚ್ ಹಾಕಿ ಸುತ್ತಲೂ ಮರ ಬೆಳೆಸಲು ಸೂಚನೆ

Team Udayavani, Jun 29, 2019, 11:59 AM IST

ಧಾರವಾಡ: ಜಿಲ್ಲೆಯಲ್ಲಿ 1261 ಕೆರೆಗಳ ಪೈಕಿ 371 ಕೆರೆಗಳನ್ನು ಅಳತೆ ಮಾಡಿದ್ದು, ಅತಿಕ್ರಮಣ ತೆರವುಗೊಳಿಸಲು ಬಾಕಿ ಇರುವ 51 ಕೆರೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಡಿಸಿ ದೀಪಾ ಚೋಳನ್‌ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಕೆರೆ ಅಳತೆ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಉಪವಿಭಾಧಿಕಾರಿಗಳಿಗೆ ಸೂಚನೆ ನೀಡಿದ ಅವರು,ಒಮ್ಮ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಿದ ಕೆರೆ ಮತ್ತೆ ಅತಿಕ್ರಮಣಗೊಳ್ಳದಂತೆ ಬೇಲಿ/ಟ್ರೆಂಚ್/ ಹಾಕಿ ಸುತ್ತಲೂ ಮರಗಳನ್ನು ಬೆಳೆಸಲು ಅರಣ್ಯ ಇಲಾಖೆಗೆ ಸೂಚಿಸಿದರು.

ಪ್ರತಿ ಕೆರೆಗೂ ಬೋರ್ಡ್‌ ಹಾಕಿ ಸರಕಾರಿ ಜಮೀನನ್ನು ಕಾಯ್ದಿರಿಸಲು ಮತ್ತು ನೀರು ಸಮರ್ಪಕವಾಗಿ ಉಪಯೋಗವಾಗುವಂತೆ ನೋಡಿಕೊಳ್ಳಲು ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಡಿಸಿ, ಅಳತೆಗೆ ಬಾಕಿ ಇರುವ 885 ಕೆರೆಗಳ ಅಳತೆ ಕೆಲಸವನ್ನು ಆದ್ಯತೆ ಮೇರೆಗೆ ಕೈಗೊಳ್ಳಲು ಭೂ ದಾಖಲೆಗಳ ಉಪನಿರ್ದೇಶಕರಿಗೆ ಸೂಚಿಸಿದರು.

ಈ ಕಾರ್ಯಕ್ಕೆ ಸಂಬಂಧಿಸಿದ ಆಯಾ ಇಲಾಖೆ ಅಧಿಕಾರಿಗಳು ಅವರ ಇಲಾಖೆಯ ನಿರ್ವಹಣೆಯಲ್ಲಿ ಇರುವ ಕೆರೆಗಳ ವಿವರ ಮತ್ತು ಆದ್ಯತೆಯ ಮೇಲೆ ಅಳತೆ ಕೈಗೊಳ್ಳಬೇಕಾದ ಕೆರೆಗಳ ಪಟ್ಟಿ ಸಲ್ಲಿಸಬೇಕು. ಅಳತೆ ಕಾರ್ಯಕ್ಕೆ ಅವಶ್ಯವಿರುವ ಪರಿಕರಗಳನ್ನು ಒದಗಿಸಬೇಕು ಎಂದರು. ಬಾಕಿ ಇರುವ ಕೆರೆಗಳ ಅಳತೆಯನ್ನು ಜಿಪಿಎಸ್‌ದಿಂದ ಅಳತೆ ಮಾಡಿ ಅಕ್ಷಾಂಶ ರೇಖಾಂಶಗಳನ್ನು ದಾಖಲಿಸಲು ಅವಶ್ಯವಿರುವ ಅನುದಾನ ನೀಡಲು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲು ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.

ಪಿಡಬ್ಲುಡಿ ಇಲಾಖೆಯ ಹೆಸರಿನಲ್ಲಿ 26 ಕೆರೆಗಳಿದ್ದು, ಆದರೆ ಅವುಗಳನ್ನು ಪಿಡಬ್ಲುಡಿ ಇಲಾಖೆಯವರು ನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಇದೆ. ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ಇನ್ನೂ ಹುಬ್ಬಳ್ಳಿ ಧಾರವಾಡ ಮಹಾಗರ ಪಾಲಿಕೆ ವ್ಯಾಪ್ತಿಯಲ್ಲಿ ದಾಖಲೆಗಳ ಪ್ರಕಾರ ಇರುವ 34 ಕೆರೆಗಳ ನಿರ್ವಹಣೆ ಮತ್ತು ಒತ್ತುವರಿ ಕುರಿತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರ ಪ್ರದೇಶದ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಿ, ಅವುಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಸೂಚಿಸಿದ ಡಿಸಿ, ಕೆಪಿಎಲ್ಸಿ ತಂತ್ರಾಶದಲ್ಲಿ ಡಾಟಾ ಎಂಟ್ರಿ ಆದ ಕೆರೆಗಳು ಆಯಾ ಇಲಾಖೆಯ ನಿರ್ವಹಣೆ ಹಾಗೂ ಕಂದಾಯ ದಾಖಲೆಗಳಲ್ಲಿ ಇಲಾಖೆ ಹೆಸರು ದಾಖಲಿರುವ ಬಗ್ಗೆ ಪರಿಶೀಲಿಸಿ ಜು.1 ರೊಳಗೆ ಎಲ್ಲ ಮಾಹಿತಿ ಸಲ್ಲಿಸಲು ಹಾಗೂ ಕಂದಾಯ ಇಲಾಖೆಯ ಆಧೀನದಲ್ಲಿರುವ ಕೆರೆಗಳ ನಿರ್ವಹಣೆಯ ಬಗ್ಗೆ ಎಲ್ಲ ತಹಶೀಲ್ದಾರರು ಮಾಹಿತಿ ಸಲ್ಲಿಸಲು ಸೂಚಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ