ನೋಡುಗರ ಮನಗೆದ್ದ ಅತ್ತೆ ಸಿಂಗಾರಿ-ಸೊಸೆ ಬಂಗಾರಿ!

101ನೇ ಪ್ರಯೋಗದ ಹಿನ್ನೆಲೆಯಲ್ಲಿ ಕಲಾ ಪೋಷಕರಿಗೆ ಅಭಿನಂದನೆ ಸಮಾರಂಭ

Team Udayavani, Jun 8, 2019, 12:26 PM IST

ಧಾರವಾಡ: ಅತ್ತೆ ಸಿಂಗಾರಿ, ಸೊಸೆ ಬಂಗಾರಿ ಹಾಸ್ಯ ನಾಟಕದ ಸನ್ನಿವೇಶ.

ಧಾರವಾಡ: ಮಂಡಲಗಿರಿಯ ಗುರು ತೋಂಟದಾರ್ಯ ನಾಟ್ಯ ಸಂಘವು ನಗರದ ಸಿಬಿಟಿ ಎದುರಿನ ನಿತಿನ್‌ ಗಿರಿ ಅವರ ಜಾಗದಲ್ಲಿ ಎರಡು ತಿಂಗಳಿಂದ ಠಿಕಾಣಿ ಹೂಡಿದ್ದು, ಈ ತಂಡದ ‘ಅತ್ತೆ ಸಿಂಗಾರಿ, ಸೊಸೆ ಬಂಗಾರಿ’ ನಾಟಕ ಧಾರವಾಡಿಗರ ಮನ ಗೆದ್ದಿದೆ.

ಈ ಹಾಸ್ಯ ನಾಟಕದ 101ನೇ ಪ್ರಯೋಗದ ಹಿನ್ನೆಲೆಯಲ್ಲಿ ಜೂ. 9ರಂದು ಸಂಜೆ 6:15 ಗಂಟೆಗೆ ಕಲಾ ಪೋಷಕರಿಗೆ ಅಭಿನಂದನೆ ಸಮಾರಂಭ ಆಯೋಜಿಸಲಾಗಿದೆ. ಪಾಲಿಕೆ ಸದಸ್ಯ ಸುಭಾಸ ಶಿಂಧೆ ಉದ್ಘಾಟಿಸಲಿದ್ದು, ನ್ಯಾಯವಾದಿ ಉದಯಕುಮಾರ ದೇಸಾಯಿ ಆಗಮಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಸಹಾಯಕ ಪೊಲೀಸ್‌ ಆಯುಕ್ತ ಎಂ.ಎನ್‌. ರುದ್ರಪ್ಪ, ಕಲಾ ಪೋಷಕರಾದ ನಿತಿನ್‌ ಗಿರಿ, ಬಸವಲಿಂಗಯ್ಯ ಹಿರೇಮಠ, ಸದಾನಂದ ಡಂಗನವರ, ಗೋವಾ ಸೂರ್ಯೋದಯ ಕನ್ನಡ ಸಂಘದ ಅಧ್ಯಕ್ಷ ಗಂಗಯ್ಯ ಹಿರೇಮಠ, ಕಾರ್ಯದರ್ಶಿ ಬಸವರಾಜ ಮೇಟಿ ಹಾಗೂ ಕಿರಣ ಸಿದ್ದಾಪೂರ ಪಾಲ್ಗೊಳ್ಳಲಿದ್ದಾರೆ.

ಇಲ್ಲೇ ಮೊದಲ ಪ್ರದರ್ಶನ: ನಾಲ್ಕು ವರ್ಷಗಳ ಹಿಂದೆ ಈ ನಾಟಕ ಧಾರವಾಡದಿಂದಲೇ ಮೊದಲ ಪ್ರದರ್ಶನ ಕಂಡಿದೆ. ಈಗಾಗಲೇ ಬನಶಂಕರಿ, ಕೊಪ್ಪಳ, ಗೊಡಚಿ ಜಾತ್ರೆಗಳಲ್ಲಿ ತಲಾ 100 ಪ್ರದರ್ಶನ, ಅಮನಗಿ, ಕೊಕಟನೂರ, ಮುದೇನೂರ ಜಾತ್ರೆಗಳಲ್ಲಿ ತಲಾ 50 ಪ್ರದರ್ಶನ ಕಂಡಿದೆ. ಧಾರವಾಡದ ಜನತೆ ಸಹ ನಾಟಕವನ್ನು ಉತ್ತಮವಾಗಿ ಸ್ವೀಕರಿಸಿದ್ದು, ನವೆಂಬರ್‌-ಡಿಸೆಂಬರ್‌ ತಿಂಗಳವರೆಗೆ ನಿರಂತರವಾಗಿ ಪ್ರದರ್ಶನ ನಡೆಸಲು ನಾಟ್ಯ ಸಂಘ ತೀರ್ಮಾನಿಸಿದೆ ಎಂದು ನಾಟ್ಯ ಸಂಘದ ವ್ಯವಸ್ಥಾಪಕ ಸಂಗಮೇಶ ಕವಡಿಮಟ್ಟಿ ತಿಳಿಸಿದ್ದಾರೆ.

ಸಾಕ್ಷರತೆ ಮೂಡಿಸುವ ಸಲುವಾಗಿ ಈ ನಾಟಕ ರಚಿಸಿದ್ದೇನೆ. ಒಬ್ಬ ತಾಯಿ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ, ನೈತಿಕತೆ ಕಲಿಸದಿದ್ದರೆ ಏನೆಲ್ಲ ಪಡಿಪಾಟಲು ಪಡಬೇಕಾಗುತ್ತದೆ ಎನ್ನುವುದೇ ನಾಟಕದ ಪ್ರಮುಖ ಅಂಶ. ಅಣ್ಣನ ಮಗಳನ್ನು ತನ್ನ ಮೂರು ಮಕ್ಕಳಲ್ಲಿ ಒಬ್ಬರಿಗೆ ಮದುವೆ ಮಾಡಿಕೊಡಬೇಕೆಂಬ ಹಠದಲ್ಲಿ ಅಣ್ಣ ಹಾಗೂ ಆತನ ಮಗಳೊಂದಿಗೆ ನಡೆಸುವ ಸನ್ನಿವೇಶಗಳಲ್ಲಿ ಹಾಸ್ಯ ಅಡಗಿದೆ ಎಂದು ಹೇಳುತ್ತಾರೆ ನಾಟಕ ಬರೆದ ಆನಂದ ಬೆಂಗಳೂರ.

ಇಡೀ ನಾಟಕ ಹಾಸ್ಯಪೂರ್ಣವಾಗಿದ್ದರೂ ಕೊನೆ ಸನ್ನಿವೇಶ ಮಾತ್ರ ಕಣ್ಣೀರು ತರಿಸುತ್ತದೆ. ಮಾವನ ಮಗಳನ್ನು ಮದುವೆಯಾಗೆಂದು ಹಠಕ್ಕೆ ಬಿದ್ದ ತಾಯಿ ಅನಕ್ಷರಸ್ಥ ಮೂವರು ಮಕ್ಕಳನ್ನು ಮತ್ತಷ್ಟು ಹಾದಿ ತಪ್ಪಿಸುತ್ತಾಳೆ. ಆಗ ಮಕ್ಕಳು ಕಲಿಸುವ ಪಾಠವೇ ಪ್ರೇಕ್ಷಕರಿಗೆ ಕಣ್ಣೀರು ತರಿಸುತ್ತದೆ.

ಎಸ್‌. ಮಮತಾಶ್ರೀ ಅತ್ತೆ ಪಾತ್ರದಲ್ಲಿ, ನೇತ್ರಾ ಅರಳಿಹಳ್ಳಿ ಸೊಸೆ ಪಾತ್ರದಲ್ಲಿ, ನೇತ್ರಾ ಹಿರೇಮಠ ಹಾಸ್ಯ ಪಾತ್ರ, ಮಾರುತಿ ಗದಗ ಶಕುನಿ, ಮಹಾಂತೇಶ ಹಿರೇಮಠ ತಂದೆ ಪಾತ್ರ, ಉಮೇಶ ಮಹಾಲಿಂಗಪುರ ಮನೆ ಆಳಿನ ಪಾತ್ರ ಹಾಗೂ ಕೆ.ಎಸ್‌. ನಟರಾಜ, ಆನಂದ ಮತ್ತು ಶಿವು ಮೂರು ಮಕ್ಕಳ ಪಾತ್ರದಲ್ಲಿದ್ದಾರೆ. ವಿಜಯ ಹಾಗೂ ಚೇತನಕುಮಾರ ಬನ್ನಟ್ಟಿ ಸಂಗೀತ ನೀಡಿದ್ದಾರೆ. 25 ಜನ ಕಲಾವಿದರನ್ನು ಒಳಗೊಂಡ ಈ ನಾಟಕ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ