ಸಂವಿಧಾನ ಬದಲಿಸಲು ಮುಂದಾದ್ರೆ ರಕ್ತಪಾತ

Team Udayavani, Apr 21, 2019, 11:31 AM IST

ಕುಂದಗೋಳ: ರಾಜ್ಯದಲ್ಲಿ ಬಿಜೆಪಿ ಅಹಿಂದ ವರ್ಗದ ಒಂದು ಅಭ್ಯರ್ಥಿಯನ್ನೂ ಹಾಕಿಲ್ಲ. ನಮ್ಮ ಸಮ್ಮಿಶ್ರ ಸರ್ಕಾರ 8 ಅಹಿಂದ ವರ್ಗದವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಸಾಮಾಜಿಕ ನ್ಯಾಯ ತೋರಿಲ್ಲ. ಮೋದಿ ಹಿಟ್ಲರ್‌ ಆಗುತ್ತಿದ್ದಾರೆ. ಸಂವಿಧಾನ ಬದಲಿಸಲು ಅವರು ಮುಂದಾದರೆ ರಕ್ತಪಾತವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ಪಟ್ಟಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಶನಿವಾರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ನಾನೊಬ್ಬ ಚೌಕಿದಾರನೆಂದು ಸುಳ್ಳು ಹೇಳುತ್ತಿರುವ ಮೋದಿ ಮಹಾಚೋರನಾಗಿದ್ದು, ಕೇವಲ ಸುಳ್ಳು ಹೇಳುವ ಮೂಲಕ ಬಿಜೆಪಿ ಪ್ರಚಾರ ನಾಯಕನಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಪತನಗೊಳಿಸಲು 20 ಶಾಸಕರ ಖರೀದಿಗೆ 600 ಕೋಟಿ ರೂ. ಎಲ್ಲಿಂದ ತಂದಿದ್ದರು. ದೇಶವನ್ನು ಲೂಟಿ ಮಾಡಿ ಹಣ ನೀಡುತ್ತಿರುವ ಇವರು ಚೌಕಿದಾರರೇ? ಐಟಿ ದಾಳಿ ಬಿಸಿ ಬಿಜೆಪಿ ಮುಖಂಡರಿಗೆ ಏಕೆ ತಟ್ಟುತ್ತಿಲ್ಲ? 2016ರಲ್ಲಿ 1 ಡಬ್ಬಿಗೆ ಕಚ್ಚಾತೈಲಕ್ಕೆ 117 ಡಾಲರ್‌ ಇದ್ದರೆ ಇದೀಗ 77 ಡಾಲರ್‌ಗೆ ಕಡಿಮೆಯಾಗಿದ್ದರೂ ಪೆಟ್ರೋಲ್ ದರ ಇಳಿಸಿಲ್ಲ. ರಸಗೊಬ್ಬರ, ಅಡುಗೆ ಅನಿಲ, 1ಕ್ಕೆ 3 ಪಟ್ಟು ಬೆಲೆ ಏರಿಸಿರುವ ಕೀರ್ತಿ ಈ ಚೌಕಿದಾರನಿಗೆ ಸಲ್ಲುತ್ತದೆ ಎಂದು ಲೇವಡಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಮಾತನಾಡಿ, ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಶೇ.20 ಬಡಕುಟುಂಬಕ್ಕೆ ಪ್ರತಿ ತಿಂಗಳು 6 ಸಾವಿರ ರೂ., ಮಹಿಳೆಯರಿಗೆ ಲೋಕಸಭಾ-ವಿಧಾನಸಭಾ ಹಾಗೂ ಉದ್ಯೋಗದಲ್ಲಿ ಶೇ. 33 ಮೀಸಲಾತಿ ನೀಡಲಾಗುವುದು ಎಂದು ಹೇಳಿದರು.

ಅಭ್ಯರ್ಥಿ ವಿನಯ ಕುಲಕರ್ಣಿ ಮಾತನಾಡಿ, ಮೋದಿ ನಾಳೆಯೇ ನಿಮ್ಮ ಅಕೌಂಟ್‌ಗೆ 15 ಲಕ್ಷ ರೂ. ಹಾಕಿದರೆ ಬಿಜೆಪಿಗೆ ಮತ ನೀಡಿ. ಇಲ್ಲವೆ ನಾವೀಗಾಗಲೇ ರೈತರ ಖಾತೆಗೆ 2 ಲಕ್ಷ ರೂ. ಸಾಲಮನ್ನಾ ಹಣ ಹಾಕಿದ್ದೇವೆ ನೋಡಿ ಮತ ಚಲಾಯಿಸಿ ಎಂದರು. ದಿ| ಶಿವಳ್ಳಿ ಅವರ ಪತ್ನಿ ಕುಸುಮಾ, ವೀರಣ್ಣ ಮತ್ತಿಕಟ್ಟಿ, ಪಿ.ಸಿ. ಸಿದ್ದನಗೌಡ, ಮಾಜಿ ಶಾಸಕ ಎಂ.ಎಸ್‌. ಅಕ್ಕಿ, ಅರವಿಂದ ಕಟಗಿ, ಉಮೇಶ ಹೆಬಸೂರ, ಹಜರತಲಿ ಜೋಡಮನಿ, ಷಣ್ಮುಖ ಶಿವಳ್ಳಿ, ಜಗದೀಶ ಉಪ್ಪಿನ, ಶಿವಾನಂದ ಬೆಂತೂರ, ಹಾಸಿಂಬಿ ಚಡ್ಡಿ, ಚಂದ್ರಶೇಖರ ಜುಟ್ಟಲ, ಎ.ಬಿ. ಉಪ್ಪಿನ, ಸಕ್ರು ಲಮಾಣಿ, ರಾಜು ಪಾಟೀಲ ಮತ್ತಿತರರಿದ್ದರು.

ಕಳಸಾ-ಬಂಡೂರಿಗೆ ಜೋಶಿ-ಶೆಟ್ಟರ ಅಡ್ಡಿ

ನವಲಗುಂದ: ಕಳಸಾ-ಬಂಡೂರಿ ಯೋಜನೆ ಅಡ್ಡಗಾಲಾಗಿದ್ದೇ ಜೋಶಿ ಮತ್ತು ಶೆಟ್ಟರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಪಟ್ಟಣದಲ್ಲಿ ವಿನಯ ಕುಲಕರ್ಣಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ರಾಜ್ಯದಿಂದ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದ ಸಂದರ್ಭದಲ್ಲಿ ನಿಮ್ಮ ಭಾಗದ ಸಂಸದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ, ಬಿ.ಎಸ್‌. ಯಡಿಯೂಪ್ಪ ಅವರೇ ಪ್ರಧಾನಿ ಮೋದಿ ಅವರ ಕಿವಿ ಊದಿ ರಾಜಿ ಸಂಧಾನಕ್ಕೆ ಅಡ್ಡಗಾಲು ಹಾಕಿದರು ಎಂದು ಕಿಡಿಕಾರಿದರು. ನಾನು ಸಿಎಂ ಆದ ಸಂದರ್ಭದಲ್ಲಿ ಮಲಪ್ರಭಾ ಬಲದಂಡೆ ಕಾಲುವೆ ಆಧುನೀಕರಣಕ್ಕೆ 1200 ಕೋಟಿ ಅನುದಾನ ನೀಡಿದ್ದೇನೆ. ಈ ಭಾಗದಲ್ಲಿ ಜೆಡಿಎಸ್‌ ಶಾಸಕರಿದ್ದರೂ 3500 ಕೋಟಿ ಅನುದಾನ ನೀಡಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಆದರೆ 15 ವರ್ಷಗಳಿಂದ ಸಂಸದರಾಗಿ ಆಯ್ಕೆಯಾದ ಜೋಶಿ ಅವರು ನಿಮ್ಮ ಕ್ಷೇತ್ರಕ್ಕೆ 10 ಕೋಟಿಯಾದರೂ ಅನುದಾನ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಾತನಾಡಿ, ಅದಾನಿ, ಅಂಬಾನಿ, ವಿಜಯ ಮಲ್ಯ ಅಂತಹ ಶ್ರೀಮಂತರ ಸಾಲಮನ್ನಾ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ನಾಯಿ ಹಾಲು ನಾಯಿಗಲ್ಲದೇ ಪಂಚಾಮೃತಕ್ಕೆ ಸಲ್ಲುವುದೇ? ಹಾಗೆಯೇ ಮೋದಿ ದುಡ್ಡು ಅಂಬಾನಿ-ಅದಾನಿಗಲ್ಲದೇ ದೇಶದ ಬಡವರಿಗೆ ಸಲ್ಲದು ಎಂಬಂತಾಗಿದೆ ಎಂದರು. ಬಿಜೆಪಿಯಲ್ಲಿ ಕಸ ಗುಡಿಸುತ್ತಿರುವ ಈಶ್ವರಪ್ಪ ಕುರುಬ ಸಮಾಜಕ್ಕೆ ಎಷ್ಟು ಟಿಕೆಟ್ ಕೊಡಿಸಿದ್ದಾರೆ? ಎಂದು ಪ್ರಶ್ನಿಸಿದರಲ್ಲದೆ, ಮುಸ್ಲಿಂ ಸಮಾಜ ಬಾಂಧವರು ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌, ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ, ಮಾಜಿ ಸಚಿವ ಕೆ.ಎನ್‌. ಗಡ್ಡಿ, ಮಾಜಿ ಶಾಸಕ ಎನ್‌.ಎಚ್. ಕೋನರಡ್ಡಿ, ಯುವ ಕಾಂಗ್ರೆಸ್‌ ಅಧ್ಯಕ್ಷ ವಿನೋದ್‌ ಅಸೂಟಿ, ಬಾಪುಗೌಡ ಪಾಟೀಲ ಮಾತನಾಡಿದರು. ಬಂಗಾರೇಶ್‌ ಹಿರೇಮಠ, ವಿಜಯ ಕುಲಕರ್ಣಿ, ಮಂಜು ಜಾಧವ್‌, ಉಸ್ಮಾನ ಬಬರ್ಚಿ, ನಿಂಗಪ್ಪ ಅಸುಂಡಿ, ಆರ್‌.ಎಚ್. ಕೋನರಡ್ಡಿ, ವರ್ಧಮಾನಗೌಡ ಹಿರೇಗೌಡರ, ಬಿ.ಬಿ.ಗಂಗಾಧರಮಠ, ವೀರಣ್ಣ ನೀರಲಗಿ ಇದ್ದ್ದರು.
ದೇಶದಲ್ಲೆಲ್ಲೂ ಮೋದಿ ಅಲೆ ಕಾಣುತ್ತಿಲ್ಲ: ದಿನೇಶ

ಹುಬ್ಬಳ್ಳಿ: ದೇಶದಲ್ಲಿ ಎಲ್ಲಿಯೂ ಮೋದಿ ಅಲೆ ಕಾಣುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಮೋದಿ ಅಲೆ ಸೃಷ್ಟಿಸುತ್ತಿದ್ದಾರೆ. ಈಗಾಗಲೇ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ. ಹೊಸ ಕೇಂದ್ರ ಸರಕಾರ ರಚನೆಯಲ್ಲಿ ಕರ್ನಾಟಕದ ಕೊಡುಗೆ ಪ್ರಮುಖವಾಗಲಿದೆ. ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಜನ ಬೆಂಬಲಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಸ್ಪರ್ಧೆ ನೀಡುತ್ತಿದ್ದು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ 16 ಸ್ಥಾನಗಳಲ್ಲಿ ಗೆಲ್ಲುವುದು ನಿಶ್ಚಿತ. ಮೈತ್ರಿ ಪಕ್ಷ ಜೆಡಿಎಸ್‌ 4-5 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ನೀಡಿದ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ ಎಂಬ ಬಗ್ಗೆ ಚಕಾರ ಎತ್ತುತ್ತಿಲ್ಲ. ವಾಯುಸೇನೆ ನಡೆಸಿದ ಏರ್‌ಸ್ಟ್ರೆ ೖಕ್‌ ಬಗ್ಗೆ ಮಾತನಾಡಿ ಮತಯಾಚಿಸುತ್ತಿದ್ದಾರೆ. ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರಾಮಮಂದಿರ ನಿರ್ಮಿಸುವುದಾಗಿ ಪ್ರಚಾರ ಪಡೆದು ಅಧಿಕಾರ ಪಡೆದ ಬಿಜೆಪಿ ರಾಮಮಂದಿರ ಸಮಸ್ಯೆ ಯಾಕೆ ಬಗೆಹರಿಸಲಿಲ್ಲ ಎಂಬುದನ್ನು ತಿಳಿಸಲಿ ಎಂದು ಸವಾಲೆಸೆದರು.

ಇಂಡಿಯಾ ಶೈನಿಂಗ್‌ ಅಭಿಯಾನದಂತೆ ಅಚ್ಛೇ ದಿನ್‌ ಅಭಿಯಾನ ಕೂಡ ವಿಫಲಗೊಳ್ಳುವುದು ಖಂಡಿತ. ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ. ಚುನಾವಣಾ ಫಲಿತಾಂಶ ನಂತರ ಅವರು ಭ್ರಮನಿರಸನಗೊಳ್ಳುವುದು ಖಚಿತ. ಯುಪಿಎ ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಕಡೆಗಣಿಸಿಲ್ಲ. ರಾಜ್ಯದಲ್ಲಿ 1 ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದೇವೆ. 4 ಜನರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡಲಾಗಿದೆ. ಲೋಕಸಭಾ ಚುನಾವಣೆ ನಂತರ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.

ಜೋಶಿ ಸಾಧನೆ ಶೂನ್ಯ: ನಾನು ಪ್ರಹ್ಲಾದ ಜೋಶಿಗೆ ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ತಮಾಷೆಗಾಗಿ ನಾನು ಜೋಶಿ ಸಾಧನೆ ಬಗ್ಗೆ ಮಾತನಾಡಿದ್ದೆ. ನಾನು ಹಾಗೂ ದೇಶಪಾಂಡೆ ಇಬ್ಬರೂ ನಮ್ಮ ಪಕ್ಷದ ಅಭ್ಯರ್ಥಿ ವಿನಯ ಕುಲಕರ್ಣಿ ಪರ ಪ್ರಚಾರ ಮಾಡುತ್ತಿದ್ದೇವೆ. ಸಂಸದ ಪ್ರಹ್ಲಾದ ಜೋಶಿ ಮಹಾನ್‌ ಸುಳ್ಳುಗಾರ. ಜೋಶಿ ಏನೂ ಸಾಧನೆ ಮಾಡದೆ, ಕ್ಷೇತ್ರದ ಅಭಿವೃದ್ಧಿ ಮಾಡದೆ ಈಗ ಮಹಾನ್‌ ಸಾಧನೆ ಮಾಡಿದ್ದಾಗಿ ಸುಳ್ಳು ಹೇಳುತ್ತ ಮತ ಕೇಳುತ್ತಿದ್ದಾರೆ. ಕಳಸಾ-ಬಂಡೂರಿ ವಿಷಯದಲ್ಲಿ ಅವರು ಪ್ರಧಾನಿ ಮೋದಿ ಮನವೊಲಿಸಿ ಸಂಧಾನ ನಡೆಸುವಲ್ಲಿ ವಿಫಲರಾಗಿದ್ದಾರೆ. ಜೋಶಿ, ಪ್ರತಾಪಸಿಂಹ ಸೇರಿ ಕೆಲವು ಬಿಜೆಪಿ ಮುಖಂಡರು ಪ್ರಚೋದನಾತ್ಮಕ ಭಾಷಣ ಮೂಲಕ ಜನರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ದಿನೇಶ ಗುಂಡೂರಾವ್‌ ಆರೋಪಿಸಿದರು.

ವೀರಣ್ಣ ಮತ್ತಿಕಟ್ಟಿ, ಅನಿಲಕುಮಾರ ಪಾಟೀಲ, ಆಲ್ತಾಫ ಹಳ್ಳೂರ, ಅಲ್ತಾಫ ಕಿತ್ತೂರ, ಶರಣಪ್ಪ ಕೊಟಗಿ, ರಾಜಾ ದೇಸಾಯಿ, ಮಹೇಂದ್ರ ಸಿಂಘಿ, ಸದಾನಂದ ಡಂಗನವರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಪ್ರತ್ಯೇಕ ಧರ್ಮ ಹೋರಾಟಕ್ಕೂ ಕಾಂಗ್ರೆಸ್‌ಗೂ ಸಂಬಂಧ ಇಲ್ಲ
ವೀರಶೈವ ಲಿಂಗಾಯತ ಹೋರಾಟಕ್ಕೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಈ ಕುರಿತು ಯಾವುದೇ ಹೇಳಿಕೆ ನೀಡದಂತೆ ಪಕ್ಷದ ಮುಖಂಡರಿಗೆ ತಿಳಿಸಲಾಗಿದೆ ಎಂದು ದಿನೇಶ ಗುಂಡೂರಾವ್‌ ಹೇಳಿದರು. ಪ್ರತ್ಯೇಕ ಧರ್ಮದ ಹೋರಾಟ ಸಮುದಾಯ ಮುಖಂಡರಿಗೆ ಸಂಬಂಧಿಸಿದ್ದು. ಅದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ಪಕ್ಷಾತೀತ ವಿಚಾರ. ಕಾಂಗ್ರೆಸ್‌ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇದರಲ್ಲಿ ಪಕ್ಷದ ಪಾತ್ರವೇನೂ ಇಲ್ಲ. ಪ್ರಸ್ತುತ ವೀರಶೈವ ಲಿಂಗಾಯತ ಹೋರಾಟ ಮುಗಿದ ಅಧ್ಯಾಯ. ಚುನಾವಣೆ ಸಂದರ್ಭದಲ್ಲಿ ಲಿಂಗಾಯತ ಮುಖಂಡರ ಸಭೆ ಮಾಡಿ ಮತ ಬೇಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ