ಈ ಸಲವೂ ಮಾವು ಮೇಳ ಡೌಟು;ಮಾವು ಪ್ರಿಯರಿಗೆ ಮತ್ತೆ ನಿರಾಸೆ
ಮ್ಯಾಂಗೋ ಟೂರಿಸಂ ಎಂಬ ಹೊಸ ಕಲ್ಪನೆಯನ್ನೂ ಪರಿಚಯಿಸಿತ್ತು.
Team Udayavani, May 3, 2021, 6:43 PM IST
ಧಾರವಾಡ: ಜಿಲ್ಲೆ ಯಲ್ಲಿ ಮಾವಿನ ಸುಗ್ಗಿ ಆರಂಭಗೊಂಡಿದ್ದು, ಕೊರೊನಾ ಕರ್ಫ್ಯೂ ಮೇ 12ರ ಬಳಿಕವೂ ಮುಂದುವರಿದರೆ ಮಾವಿನ ಮೇಳಕ್ಕೆ ಈ ಸಲವೂ ಕೊಕ್ಕೆ ಬೀಳಲಿದೆ. ಪ್ರತಿ ವರ್ಷ ಮೇ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಮಾವು ಮೇಳ ನಡೆಯುತ್ತಾ ಬಂದಿದೆ. ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯುವ ಮಾವು ಮೇಳದಲ್ಲಿ 100-150 ಟನ್ ಮಾವು ಮಾರಾಟವಾಗಿ 1 ಕೋಟಿ ರೂ.ವರೆಗೂ ವಹಿವಾಟು ನಡೆಯುತ್ತದೆ. ಆದರೆ ಕಳೆದ ವರ್ಷ ಲಾಕ್‌ಡೌನ್ ಜಾರಿಯಿಂದ ಮಾವು ಮೇಳಕ್ಕೆ ಬ್ರೇಕ್ ಬಿದ್ದಿತ್ತು. ಇದೀಗ ಎರಡನೇ ಅಲೆಯ ಹತೋಟಿಗಾಗಿ ಸರಕಾರ ಮತ್ತೆ ಕರ್ಫ್ಯೂ ಜಾರಿ ಮಾಡಿದ್ದು, ಇದು ಮುಂದುವರಿದರೆ ಈ ವರ್ಷವೂ ಮಾವು ಮೇಳವಿಲ್ಲ.
ಕುಸಿದ ಫಸಲು: ಜಿಲ್ಲೆಯಲ್ಲಿ ಪ್ರಸ್ತಕ ವರ್ಷ ಅಂದಾಜು 97 ಸಾವಿರ ಟನ್ ಮಾವು ಉತ್ಪಾದನೆ ಗುರಿ ಹೊಂದಲಾಗಿತ್ತು. ಆದರೆ ಫೆಬ್ರವರಿ ತಿಂಗಳಿನಲ್ಲಿ ಸತ ಒಂದು ವಾರಗಳ ಕಾಲ ಬಿದ್ದ ಇಬ್ಬನಿ ಮತ್ತು ಅಕಾಲಿಕ ಮಳೆಯಿಂದಾಗಿ ಶೇ.40 ಮಾವಿನ ಹೂವು, ಹೀಚು ಉದುರಿ ಹೋಗಿದ್ದು, ಉತ್ಪಾದನೆ ತೀವ್ರ ಕುಸಿತ ಕಂಡಿದೆ. ಉತ್ಪಾದನೆ ಕುಸಿತದ ಮಧ್ಯೆಯೂ ಸುಧಾರಿಸಿಕೊಂಡಿದ್ದ ಮಾವು ಮಾರುಕಟ್ಟೆಗೆ ಇದೀಗ ಕರ್ಫ್ಯೂ ಮರ್ಮಾಘಾತ ನೀಡಿದೆ.
ತೋಟಗಾರಿಕೆ ಇಲಾಖೆಯಂತೂ ಮೇ ತಿಂಗಳಲ್ಲಿ ಮಾವು ಮೇಳ ಆಯೋಜನೆಗೆ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ಕರ್ಫ್ಯೂ ಸಡಿಲಿಕೆ ಬಳಿಕವೂ ಮೇಳ ಆಯೋಜನೆ ಕಷ್ಟ ಸಾಧ್ಯವೇ ಆಗಲಿದೆ. ಅಷ್ಟರಲ್ಲಿ ಮಾವು ಸುಗ್ಗಿಯೇ ಮುಗಿದು ಹೋಗುವ ಸಾಧ್ಯತೆಯಿದೆ. ಈ ನಡುವೆ ಸ್ಥಳೀಯ ಮಾವು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಬೆಳಗಿನ ಸೀಮಿತ ಅವಧಿಯ ಕಾರಣದಿಂದ ಬೆಲೆಯಲ್ಲಿ ಕುಸಿತ ಕಂಡಿತ್ತು. ಇದೀಗ ಬೆಳಗ್ಗೆಯಿಂದ ಸಂಜೆವರೆಗೂ ಮಾರಾಟಕ್ಕೆ ಅವಕಾಶ ನೀಡಿರುವ ಕಾರಣ ಮಾವು ವ್ಯಾಪಾರ ಜೋರಾಗುವ ಲಕ್ಷಣಗಳಿವೆ.
ಕೋಟಿ ವಹಿವಾಟಿನ ಮೇಳ
ಮಾವು ಮೇಳ ರೈತರು ಹಾಗೂ ಗ್ರಾಹಕರ ಮಧ್ಯೆ ನೇರ ಸಂಪರ್ಕ ಕೊಂಡಿಯಾಗಿ ದಶಕದಿಂದ ಉತ್ತಮ ವೇದಿಕೆ ಕಲ್ಪಿಸಿದೆ. ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇದೆ. ಹೀಗಾಗಿ 2019 ಮೇ ತಿಂಗಳಲ್ಲಿ ನಡೆದ ಮೂರು ದಿನಗಳ ಮೇಳ ಮತ್ತೂಂದು ದಿನ ವಿಸ್ತರಣೆ ಆಗಿತ್ತು. ಮಾವಿನ ಹಣ್ಣಿನ ಮಾರಾಟ ಕೋಟಿ ರೂ. ದಾಟಿತ್ತು. ಮಾವು ಮಾರಾಟದ ಜತೆಗೆ ಅಪರೂಪದ ವಿವಿಧ ತಳಿಯ ಮಾವುಗಳ ಪ್ರದರ್ಶನವೂ ಗಮನ ಸೆಳೆಯುತ್ತಾ ಬಂದಿದೆ. ಮೇಳದ ಯಶಸ್ಸಿನಿಂದ
ಪ್ರೋತ್ಸಾಹ ಪಡೆದಿದ್ದ ತೋಟಗಾರಿಕೆ ಇಲಾಖೆ ಮ್ಯಾಂಗೋ ಟೂರಿಸಂ ಎಂಬ ಹೊಸ ಕಲ್ಪನೆಯನ್ನೂ ಪರಿಚಯಿಸಿತ್ತು. ಈ ಕಲ್ಪನೆಯಡಿ ಗ್ರಾಹಕರು ನೇರವಾಗಿ ಮಾವು ಬೆಳೆದ ರೈತರ ತೋಟಕ್ಕೆ ತೆರಳಿ ಖರೀದಿ ಮಾಡಬಹುದಾಗಿತ್ತು. ಕಳೆದ ಎರಡು ವರ್ಷ ಉತ್ತಮ ಸ್ಪಂದನೆ ಸಿಕ್ಕ ಬಳಿಕ ಇದಕ್ಕೆ ಸ್ಪಂದನೆ ಸಿಗಲಿಲ್ಲ. ಇದೀಗ ಕೊರೊನಾ ಪರಿಣಾಮ ಮಾವಿನ ಮೇಳದ ಜತೆ ಜತೆಗೆ ಮ್ಯಾಂಗೋ ಟೂರಿಸಂಗೂ ಬ್ರೇಕ್ ಬೀಳುವಂತಾಗಿದೆ.
ನಿಯಮವಿರಲಿ, ಮೇಳವಿರಲಿ
ಎಪಿಎಂಸಿ ಆವರಣ ಹಾಗೂ ಹೊರಗಡೆ ಪ್ರತಿ ದಿನವೂ ಜನಜಂಗುಳಿ ಮಧ್ಯೆಯೇ ಕಾಯಿಪಲ್ಲೆ ಮಾರುಕಟ್ಟೆ ಮುಕ್ತವಾಗಿ ನಡೆಯುತ್ತಿದ್ದು, ಹೀಗಿರುವಾಗ ತೋಟಗಾರಿಕೆ ಇಲಾಖೆ ಆವರಣದಲ್ಲಿ ಸೀಮಿತ ಮಾವು ಬೆಳೆಗಾರರಿಂದ ನಾಲ್ಕೈದು ದಿನ ಮಾವು ಮೇಳ ಆಯೋಜನೆ ಮಾಡಿದರೆ ಬೆಳೆಗಾರರಿಗೆ ಅನುಕೂಲ ಆಗಲಿದೆ. ಕೋವಿಡ್ ನಿಯಮ ಪಾಲನೆಯೊಂದಿಗೆ ಆಯೋಜಿಸಿದರೆ ಬೆಳಗಾರರು ಹಾಗೂ ಗ್ರಾಹಕರಿಗೂ ಅನುಕೂಲ ಆಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
*ಶಶಿಧರ್ ಬುದ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಹಂತಕರನ್ನು 4 ಗಂಟೆಗಳಲ್ಲಿ ಪತ್ತೆ ಹಚ್ಚಿದ್ಹೇಗೆ!
ವಾಸ್ತುತಜ್ಞ ಚಂದ್ರಶೇಖರ ಗುರೂಜಿ ಸ್ವಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ
ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ
ಆಪ್ತ ಕಾರ್ಯದರ್ಶಿಯಿಂದಲೇ ಕೊಲೆಯಾದರೆ ಚಂದ್ರಶೇಖರ ಗುರೂಜಿ; ಮಹಿಳೆ ಪೊಲೀಸ್ ವಶಕ್ಕೆ
ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ತನಿಖೆಗೆ ಐದು ತಂಡಗಳ ರಚನೆ