ಚುನಾವಣೆ ಬಳಿಕ ಕುಂದಗೋಳ ಅಭ್ಯರ್ಥಿ ಅಂತಿಮ

Team Udayavani, Apr 18, 2019, 5:10 PM IST

ಹುಬ್ಬಳ್ಳಿ: ಲೋಕಸಭೆ ಚುನಾವಣೆ ಮುಗಿದ ನಂತರ ಕುಂದಗೋಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಆಯ್ಕೆ ಕೈಗೊಳ್ಳಲಾಗುವುದೆಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌. ಸುದರ್ಶನ ಸ್ಪಷ್ಟಪಡಿಸಿದರು. ಇಲ್ಲಿನ ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಕುಂದಗೋಳ ವಿಧಾನಸಭೆ ಉಪಚುನಾವಣೆ ಕುರಿತು ಬುಧವಾರ ಪ್ರಮುಖರೊಂದಿಗೆ ಚರ್ಚೆ ನಡೆಸಿದ ಅವರು, ಈ ಸಭೆಯಲ್ಲಿ
ಆಕಾಂಕ್ಷಿಗಳ ಅರ್ಜಿ ಸ್ವೀಕಾರ ಹಾಗೂ ಇತರೆ ಯಾವುದೇ ನಿರ್ಧಾಗಳು ಕೈಗೊಳ್ಳುವುದಿಲ್ಲ. ಲೋಕಸಭೆ ಚುನಾವಣೆ ನಂತರದಲ್ಲೇ ಈ ಕುರಿತು ಚರ್ಚೆಗಳು ನಡೆಯಲಿವೆ. ಮೈತ್ರಿ
ಅಭ್ಯರ್ಥಿ ಪರ ಚುನಾವಣೆ ಮಾಡುವಂತೆ ಕ್ಷೇತ್ರದ ಮುಖಂಡರಿಗೆ ಸೂಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂದಗೋಳ ಉಪಚುನಾವಣೆ ಕುರಿತು ಯಾವುದೇ ಚರ್ಚೆಗಳಾಗಲಿ
ಅಥವಾ ಅಭ್ಯರ್ಥಿಗಳ ಅರ್ಜಿ ಸ್ವೀಕರಿಸಿಲ್ಲ. ಶಿವಳ್ಳಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರ ಕುಟುಂಬದವರಿಗೆ ಸಾಂತ್ವನ ಹೇಳುವುದಕ್ಕಾಗಿ ಬಂದಿದ್ದೇನೆ. ಏ.24ರಂದು ಉಪಚುನಾವಣೆ
ಕುರಿತು ಕ್ಷೇತ್ರದ ಪ್ರಮುಖರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ, ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಿ ಆಕಾಂಕ್ಷಿಗಳ ಪಟ್ಟಿ ಕೆಪಿಸಿಸಿ ಅಧ್ಯಕ್ಷರಿಗೆ ಕಳಹಿಸಲಾಗುವುದು. ನಂತರ ಆಕಾಂಕ್ಷಿಗಳ
ಕುರಿತು ಕೆಪಿಸಿಸಿ ಅಧ್ಯಕ್ಷರು ತಮ್ಮ ಅಭಿಪ್ರಾಯ ಸೂಚಿಸಿ ಎಐಸಿಸಿಗೆ ಕಳುಹಿಸುತ್ತಾರೆ. ನಂತರ ಹೈಕಮಾಂಡ್‌ ಎಲ್ಲರ ಒಮ್ಮತದ ಅಭ್ಯರ್ಥಿಯನ್ನು ಅಂತಿಗೊಳಿಸಲಿದೆ ಎಂದು ತಿಳಿಸಿದರು.

ಅಭಿಮಾನಿಗಳ ಒತ್ತಡ: ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಂದಗೋಳದಿಂದ ಆಗಮಿಸಿದ್ದ ಮಾಜಿ ಸಚಿವ ಸಿ.ಎಸ್‌. ಶಿವಳ್ಳಿ ಅವರ ಅಭಿಮಾನಿಗಳು, ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪಕ್ಷದ ಕಚೇರಿ ಮಂದೆ ಜಮಾಯಿಸಿದ್ದರು. ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಘೋಷಣೆ
ಕೂಗಿದರು. ಕುಸುಮ ಶಿವಳ್ಳಿ ಹೊರತುಪಡಿಸಿ ಮತ್ತಾರಿಗೂ ಟಿಕೆಟ್‌ ನೀಡಬಾರದು. ಒಂದು ವೇಳೆ ಬೇರೆ ಯಾರನ್ನಾದರೂ ಪರಿಗಣಿಸಿದರೆ
ಕ್ಷೇತ್ರದ ಮತದಾರರ ಒಮ್ಮತ ನಿರ್ಧಾರ ಮೇರೆಗೆ ಕುಸುಮಾ ಶಿವಳ್ಳಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ವಿ.ಆರ್‌.
ಸುದರ್ಶನ ಅವರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿ.ಆರ್‌. ಸುದರ್ಶನ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ. ಇದರೊಂದಿಗೆ ಉಪಚುನಾವಣೆಯ ತಯಾರಿ ಮಾಡಿಕೊಳ್ಳಿ.
ನಿಮ್ಮ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಿಳಿಸಲಾಗುವುದು ಎಂದರು.

ಮಾಜಿ ಸಚಿವ ಶಿವಳ್ಳಿ ಅವರ ಸಹೋದರ ಅಡಿವೆಪ್ಪ ಶಿವಳ್ಳಿ ಮತನಾಡಿ, ಇಂದಿನ ಸಭೆಯಲ್ಲಿ ಯಾವುದೇ ನಿರ್ಧಾರಗಳು ಆಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು
ಗೆಲ್ಲಿಸುವಂತೆ ಪ್ರಮುಖರು ಸೂಚಿಸಿದ್ದಾರೆ. ಏ.24ರಂದು ಮತ್ತೂಂದು ಸಭೆ ಮಾಡಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ಜನರಿಗೆ ಹೇಳಿದರು. ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ  ಪಾಟೀಲ ಹಾಗೂ ಇನ್ನಿತರರಿದ್ದರು.

ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಕ್ಷೇತ್ರದ ಮತದಾರರ
ಹಾಗೂ ನಮ್ಮ ಮನೆಯವರ ಅಭಿಮಾನಿಗಳ ಒತ್ತಡವಾಗಿದೆ.
ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧವಾಗಿದ್ದೇನೆ. ನನ್ನ
ಸ್ಪರ್ಧೆಗೆ ಕ್ಷೇತ್ರದ ಮತದಾರರ ಒತ್ತಡ ಇರುವ ಕುರಿತಾಗಿ ಪಕ್ಷದ
ಮುಖಂಡರಿಗೆ ತಿಳಿಸಿದ್ದೇನೆ. ಪಕ್ಷದ ಕಾರ್ಯಕರ್ತರು, ಪ್ರಮುಖರು
ಕೂಡ ನನಗೆ ಟಿಕೆಟ್‌ ನೀಡುವಂತೆ ಮುಖಂಡರಿಗೆ ಮನವಿ ಮಾಡಿದ್ದಾರೆ.
.ಕುಸುಮಾ ಶಿವಳ್ಳಿ,
ಸಿ.ಎಸ್‌. ಶಿವಳ್ಳಿ ಅವರ ಪತ್ನಿ

ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡಬೇಕು ಎನ್ನುವುದು ನಮ್ಮ
ಪಕ್ಷದ ಮುಖಂಡರ, ಕಾರ್ಯಕರ್ತರ ಹಾಗೂ ಕ್ಷೇತ್ರದ ಮತದಾರರ
ಒಮ್ಮತದ ನಿರ್ಧಾರವಾಗಿದೆ. ಅವರನ್ನು ಹೊರಪಡಿಸಿ ಇತರರನ್ನು
ಪರಿಗಣಿಸಬಾರದು ಎನ್ನುವದು ನಮ್ಮ ಒತ್ತಡ. ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿ ಪಕ್ಷ ನಿರ್ಧಾರ ತೆಗೆದುಕೊಂಡರೆ
ಕುಸುಮಾ ಶಿವಳ್ಳಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಿಸುವ ತಾಕತ್ತು ಕ್ಷೇತ್ರದ ಕಾರ್ಯಕರ್ತರಲ್ಲಿದೆ.
.ಸುರೇಶಗೌಡ ಪಾಟೀಲ,
ಜಿಪಂ ಸದಸ್ಯ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ