ಶಿವಳ್ಳಿ ಕುಟುಂಬ ನಡುನೀರಿನಲ್ಲಿ ಕೈ ಬಿಡಬೇಡಿ

Team Udayavani, May 14, 2019, 11:26 AM IST

ಹುಬ್ಬಳ್ಳಿ: ನನ್ನನ್ನು ಉತ್ತರ ಕರ್ನಾಟಕ ವಿರೋಧಿಯೆಂದು ಬಿಂಬಿಸಲಾಗುತ್ತಿದೆ. ಆದರೆ ಈ ಭಾಗದ ಶಾಶ್ವತ ಕುಡಿಯುವ ನೀರು, ನೀರಾವರಿಗಾಗಿ ಯೋಜನೆ ರೂಪಿಸಿದ್ದೇನೆ. ಬಿಜೆಪಿ ನಾಯಕರ ಗೊಂದಲ ಹೇಳಿಕೆಯಿಂದ ಸರಕಾರದ ಮೇಲೆ
ಅಪನಂಬಿಕೆ ಬೇಡವೆಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಸೋಮವಾರ ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಹತ್ತು ಹಲವು ಯೋಜನೆಗಳನ್ನು ಈ ಭಾಗಕ್ಕೆ ನೀಡಿದ್ದೇನೆ. ಸಿದ್ದರಾಮಯ್ಯ ಅವರ ಕಾರ್ಯಕ್ರಮಗಳನ್ನು ಮುಂದುವರಿಸಿದ್ದೇನೆ. ಯಾವುದನ್ನು ತಡೆ ಮಾಡಿಲ್ಲ. ಇದರೊಂದಿಗೆ ಹೊಸ ಯೋಜನೆಗಳನ್ನು ನೀಡಿದ್ದೇವೆ ಎಂದರು.

ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಡಿ.ಕೆ. ಶಿವಕುಮಾರ ಇಲ್ಲಿಗೆ ಬಂದಿದ್ದಾರೆ. ಆದರೆ ಬಿಜೆಪಿ ನಾಯಕರು ಡಿಕೆಶಿ ರೌಡಿಸಂ ಇಲ್ಲಿ ನಡೆಯೋದಿಲ್ಲ ಎಂದು ಹೇಳುತ್ತಿದ್ದಾರೆ. ಮಾಜಿ ಸಚಿವ ಶಿವಳ್ಳಿ ತಮ್ಮ ಕುಟುಂಬಕ್ಕೆ ಯಾವುದೇ ಆಸ್ತಿ ಮಾಡಲಿಲ್ಲ. ಆ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂಬುವುದನ್ನು ಕ್ಷೇತ್ರದ ಜನರು ಒಪ್ಪಿಕೊಂಡಿದ್ದಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದರು.

ಕೈಮುಗಿದು ಬೇಡುತ್ತೇನೆ: ಈ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಎಚ್‌.ಕೆ. ಪಾಟೀಲ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತಿ ಇದೆ. ಶಿವಳ್ಳಿ ತನ್ನ ಕುಟುಂಬಕ್ಕೆ ಏನೂ ಮಾಡಿಕೊಂಡಿಲ್ಲ. ಈ ಮೂರು ಮಕ್ಕಳಿಗೆ ಯಾವುದೇ ಆಧಾರ ಒದಗಿಸಿಲ್ಲ. ಅವರ ಜೀವಿತಾವಧಿಯಲ್ಲಿ ಗಳಿಸಿದ್ದು ಕ್ಷೇತ್ರದ ಜನರ ಪ್ರೀತಿ. ಬಿಜೆಪಿಯವರ ಬಣ್ಣದ ಮಾತಿಗೆ ಮಾರು ಹೋಗಬೇಡಿ. ಜಾತಿ ಆಧಾರದ ಮೇಲೆ ಚುನಾವಣೆ ಮಾಡಬೇಡಿ. ಬಡ ಕುಟುಂಬದ ಕೈ ಹಿಡಿಯಿರಿ. ನಿಮ್ಮಲ್ಲಿ ಕೈ ಮುಗಿದು ಬೇಡಿಕೊಳ್ಳುತ್ತೇನೆ ಯಾವುದೆ ಕಪಟ, ವಂಚನೆ ಅರಿಯದ ಮುಗ್ಧ ನನ್ನ ಸಹೋದರಿಗೆ (ಕುಸುಮಾವತಿ ಶಿವಳ್ಳಿ) ಮತ ನೀಡಿ. ಅವರ ಕುಟುಂಬವನ್ನು ನಡುನೀರಿನಲ್ಲಿ ಕೈ ಬಿಡಬೇಡಿ ಎಂದು ಮನವಿ ಮಾಡಿದರು.

ನಿಮ್ಮ ಶಾಸಕ ಹಾಗೂ ಸಚಿವ ಸಿ.ಎಸ್‌.ಶಿವಳ್ಳಿ ಅವರಿಗೆ ಕ್ಷೇತ್ರ ಹಾಗೂ ಬಡವರ ಪರ ಸಾಕಷ್ಟು ಕಾಳಜಿ ಇತ್ತು. ಧಾರವಾಡದ ಕಟ್ಟಡ ದುರಂತದಲ್ಲಿ ಅವರು ಸಾಕಷ್ಟು ಚಡಪಡಿಸಿದ್ದರು. ಕಿಮ್ಸ…ಗೆ ಆಗಮಿಸಿದಾಗ ಆಸ್ಪತ್ರೆಯ ಮೇಲ್ದರ್ಜೆಗೇರಿಸಲು ಅನುದಾನ ಕೇಳಿದ್ದರು. 100-150 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ನಾನು ಸಮ್ಮಿತಿ ಸೂಚಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಮನವಿ ಮಾಡಿದ್ದರು. ಬಡವರ ಪರ ಕಾಳಜಿ ಹೊಂದಿದ್ದ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ನಿಟ್ಟಿನಲ್ಲಿ ಅವರ ಪತ್ನಿಗೆ ಮತ ನೀಡಿ ಎಂದು ಕೋರಿದರು.

ಮುಖಂಡರಾದ ಆರ್‌.ವಿ. ದೇಶಪಾಂಡೆ, ಶಿವಶಂಕರೆಡ್ಡಿ, ಬಂಡೆಪ್ಪ ಕಾಂಶಪೂರ, ಬಸವರಾಜ ಹೊರಟ್ಟಿ, ಎಂಟಿಬಿ ನಾಗರಾಜ, ಎಚ್‌.ಕೆ. ಪಾಟೀಲ, ಎನ್‌.ಎಚ್‌. ಕೋನರಡ್ಡಿ, ಸಂತೋಷ ಲಾಡ್‌, ಪ್ರಸಾದ ಅಬ್ಬಯ್ಯ, ಶಿವರಾಮ ಹೆಬ್ಟಾರ, ಬಿ.ಆರ್‌.ಯಾವಗಲ್ಲ, ರುದ್ರಪ್ಪ ಲಮಾಣಿ, ಉಮಾಶ್ರೀ, ರಮಾನಾಥ ರೈ, ಕೆ.ಬಿ. ಪ್ರಸನ್ನ ಕುಮಾರ, ಎಂ.ಎಸ್‌ ಅಕ್ಕಿ, ವೀರಣ್ಣ ಮತ್ತಿಗಟ್ಟಿ ಇನ್ನಿತರರಿದ್ದರು.

28 ನಿಮಿಷ ನಿಂತ ಅಭ್ಯರ್ಥಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವೇದಿಕೆಗೆ ಆಗಮಿಸುತ್ತಿದ್ದಂತೆ ಮೈತ್ರಿಪಕ್ಷದ
ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪಾದಮುಟ್ಟಿ ನಮಸ್ಕರಿಸಿದರು. ನಂತರ ಭಾಷಣ ಆರಂಭಿಸುತ್ತಿದ್ದಂತೆ ಪಕ್ಕದಲ್ಲಿಯೇ ನಿಂತ ಕುಸುಮಾವತಿ ಸುಮಾರು 28 ನಿಮಿಷಗಳ ಕಾಲ ಕೈಮುಗಿದು ನಿಂತಿದ್ದರು. ಸಿ.ಎಸ್‌. ಶಿವಳ್ಳಿ ಅವರನ್ನು ನೆನಪಿಸಿದಾಗಲ್ಲೊಮ್ಮೆ ಕುಸುಮಾವತಿ ಅವರ ಕಣ್ಣಂಚಿನಿಂದ ನೀರು ಹರಿಯುತ್ತಿತ್ತು. ಶಿವಳ್ಳಿ ಅವರ ಪುತ್ರ ಅಮರಶಿವ ವೇದಿಕೆಗೆ ಆಗಮಿಸುತ್ತಿದ್ದಂತೆ ಆತನ ತಲೆ ಸವರಿದ ಸಿಎಂ ಒಂದು ಕ್ಷಣ ಭಾವುಕರಾದರು.

ಮಹದಾಯಿ ಹೋರಾಟಕ್ಕೆ ಯಾರು ದ್ರೋಹ ಮಾಡಿದ್ದಾರೆ ಎಂಬುದು ಗೊತ್ತಿದೆ. ನ್ಯಾಯಾಧೀಕರಣದ ತೀರ್ಪು ಅಧಿಸೂಚನೆ ಹೊರಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಇದುವರೆಗೂ ಕೇಂದ್ರ ಸರಕಾರ ಈ ವಿಚಾರದಲ್ಲಿ ಸಹಕಾರ ನೀಡುತ್ತಿಲ್ಲ. ಇದರಿಂದ ಈ ಭಾಗದ ಬಹುಬೇಡಿಕೆಯ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಈ ಭಾಗದ ಜನರಿಗೆ ಮೋಸ ಮಾಡಿದೆ. ಬಿಜೆಪಿ ನಾಯಕರ ಬಣ್ಣದ ಮಾತಿಗೆ ಮೋಸ ಹೊಗಬೇಡಿ.
ಎಚ್‌.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಮಾಧ್ಯಮಗಳ ವರದಿ ನಂಬಬೇಡಿ

ಹುಬ್ಬಳ್ಳಿ: ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿ ತೋರಿಸುತ್ತಿರುವ ಕಾರಣಕ್ಕೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದೇನೆ. ಬಿಜೆಪಿ ನಾಯಕರ ಗೊಂದಲದ ಹೇಳಿಕೆಗಳನ್ನಿಟ್ಟುಕೊಂಡು ಸರ್ಕಾರ ಬೀಳಿಸುತ್ತಿದ್ದಾರೆಂದು ಧಾರಾವಾಹಿಗಳ ರೀತಿಯಲ್ಲಿ ಬರುತ್ತಿರುವ ಮಾಧ್ಯಮಗಳ ಗಡುವಿನ ವರದಿಗಳನ್ನು ನಂಬಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಮಾಡಿರುವ ತಪ್ಪೇನು? ನಾನು ಹೇಳುವುದು ಒಂದು, ತೋರಿಸುವುದು ಇನ್ನೊಂದು. ಇದರಿಂದ ನನಗೆ ಯಾವುದೇ ನಷ್ಟವಿಲ್ಲ. ಮಾಧ್ಯಮಗಳಿಂದ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ಒಂದು ದಿನ ವಿಶ್ರಾಂತಿಗೆ ಹೋಗಿದ್ದು ದೊಡ್ಡ ತಪ್ಪು ಎಂಬಂತೆ ಬಿಂಬಿಸಲಾಯಿತು. ಇದಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.

ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು: ಕಳೆದ ಏಳೆಂಟು ದಿನಗಳಿಂದ ಬಿಜೆಪಿ ನಾಯಕರು ಸರ್ಕಾರ ರಚನೆ ಮಾಡುವ ಕನವರಿಕೆ ಹೆಚ್ಚು ಮಾಡಿಕೊಂಡಿದ್ದಾರೆ. ಅಂದಾಜು 45 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ನಿರ್ಧಾರ ತೆಗೆದುಕೊಂಡಿದ್ದೇವೆ. ಈಗಾಗಲೇ 11 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಆದರೆ ಬಿಜೆಪಿ ನಾಯಕರು ಕುಮಾರಸ್ವಾಮಿ ರಾಜ್ಯದ ರೈತರಿಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳುತ್ತಿದ್ದಾರೆ. ಯೋಜನೆ ಲಾಭ ಪಡೆದ ರೈತರು ಸಮ್ಮಿಶ್ರ ಸರ್ಕಾರದ ಸಾಧನೆಯನ್ನು ಕೊಂಡಾಡುತ್ತಿರುವಾಗ ಸುಳ್ಳು ಹೇಳುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಸಾಲ ಮನ್ನಾದಿಂದ ಮಾತ್ರ ರೈತರ ಸಮಸ್ಯೆಗಳು ಬಗೆಹರಿಯುತ್ತವೆ ಎನ್ನುವ ಭ್ರಮೆಯಲ್ಲಿ ನಾವಿಲ್ಲ. ಅದಕ್ಕಾಗಿ ಪರ್ಯಾಯ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.

ಕೊಟ್ಟ ಕುದುರೆ ಏರದವ ವೀರನೂ, ಧೀರನೂ ಅಲ್ಲ
ಹುಬ್ಬಳ್ಳಿ: ಕುಂದಗೋಳ ಕ್ಷೇತ್ರದ ಉಪ ಚುನಾವಣೆ ಕುಸುಮಕ್ಕಳ ಚುನಾವಣೆ ಅಲ್ಲ. ಇಡೀ ಸರಕಾರದ ಒಗ್ಗಟ್ಟಿನ ಚುನಾವಣೆ. ನೀವು ಕಾಂಗ್ರೆಸ್‌ ಬೆಂಬಲಿಸಿ. ಇಡೀ ಸರಕಾರವೇ ಕ್ಷೇತ್ರದ ಜನರ ಪರವಾಗಿ ಇರಲಿದೆ ಎಂದು ಸಚಿವ ಡಿ.ಕೆ. ಶಿವಕುಮಾರ ಹೇಳಿದರು.

ಕುಂದಗೋಳದಲ್ಲಿ ಮೈತ್ರಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕುಸುಮಕ್ಕ ಮಾತ್ರವಲ್ಲ ಈ ಕ್ಷೇತ್ರದೊಂದಿಗೆ ಇಡೀ ಸರಕಾರ ಇರುತ್ತದೆ. ಪ್ರತಿ 2-3 ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬಂದು ಶಿವಳ್ಳಿ ಅವರ ಕನಸು ನನಸಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಮಹದಾಯಿ ವಿಚಾರದಲ್ಲಿ ಈ ಭಾಗದ ಜನರಿಗೆ ಮೋಸ ಮಾಡಿರುವ ಬಿಜೆಪಿ ನಾಯಕರು ತಮ್ಮ ಸರಕಾರದ ಸಾಧನೆ ಹಾಗೂ ಅಭಿವೃದ್ಧಿ ಮೇಲೆ ಮತ ಕೇಳುತ್ತಿಲ್ಲ. ಕೊಟ್ಟ ಕುದುರೆ ಏರದವ ವೀರನು ಧೀರನು ಅಲ್ಲ ಎಂಬಂತೆ ಅಧಿಕಾರ ಸಿಕ್ಕಾಗ ಏನೂ ಮಾಡದ ಬಿಎಸ್‌ವೈ ಈಗ ನಾನು ಏನೇನೋ ಹರೀತೇನಿ ಅನ್ನುತ್ತಿದ್ದಾರೆ. ಅವರಿಂದ ಏನೂ ಆಗುವುದಿಲ್ಲ ಬಿಡಿ ಎಂದು ಲೇವಡಿ ಮಾಡಿದರು.

ತನಿಖೆ ಮಾಡಿಸಿಲ್ಲ ಯಾಕೆ: ಕಾಂಗ್ರೆಸ್‌ ಸರಕಾರ 10 ಪರ್ಸೆಂಟ್ ಸರಕಾರ ಅನ್ನುತ್ತಿದ್ದ ಮೋದಿ ಈಗ ಸಮ್ಮಿಶ್ರ ಸರಕಾರವನ್ನು 20 ಪರ್ಸೆಂಟ್ ಸರಕಾರ ಅನ್ನುತ್ತಿದ್ದಾರೆ. ಎಲ್ಲ ತನಿಖಾ ಏಜೆನ್ಸಿಗಳು ನಿಮ್ಮ ಬಳಿ ಇದ್ದರೂ ಏನು ಮಾಡಲಿಲ್ಲ ಯಾಕೆ. ಇದನ್ನು ಜನರು ಗಮನಿಸುತ್ತಿದ್ದಾರೆ. ಮೇ 23ಕ್ಕೆ ಮೋದಿ ಸರಕಾರ ಇರುವುದಿಲ್ಲ. ಯುಪಿಎ ಸರಕಾರ ಬಂದು ರಾಹುಲ್ ಗಾಂಧಿ ಪ್ರಧಾನಿ ಆಗುವುದು ಖಚಿತ. ಸೋಲಿನ ದಿನಗಳು ಹತ್ತಿರ ಬಂದಿದ್ದರಿಂದ ಬಿಜೆಪಿ ನಾಯಕರು ಏನೇನೋ ಮಾತನಾಡುತ್ತಿದ್ದಾರೆ. ದೇಶಕ್ಕಾಗಿ ತನ್ನ ದೇಹವನ್ನೇ ಸವೆಸಿದ ರಾಜೀವ ಗಾಂಧಿ ಬಗ್ಗೆ ಮಾತನಾಡುತ್ತಿರುವ ನಿಮಗೆ ಅವಮಾನ ಆಗುತ್ತಿಲ್ಲವೇ ಎಂದರು.

ಬಿಜೆಪಿಯವರಂತೆ ನಾವು ಕಟುಕರಲ್ಲ

ಸಚಿವ ಡಿ.ಕೆ. ಶಿವಕುಮಾರ ಅವರ ವಿರುದ್ಧ ಇಡಿ, ಐಟಿ ದಾಳಿ ಮೂಲಕ ಹಿಂಸೆ ನೀಡಿದರೂ ಕಣ್ಣೀರು ಹಾಕಲಿಲ್ಲ. ತಮ್ಮ ತಾಯಿಯವರನ್ನು ಐಟಿ ಕಚೇರಿಯಲ್ಲಿ ನಿಲ್ಲಿಸುವ ಪ್ರಮೇಯ ಬಂದರೂ ಎದೆಗುಂದಲಿಲ್ಲ. ಇಡೀ ರಾಜಕೀಯ ಜೀವನದಲ್ಲಿ ಕಣ್ಣೀರು ಹಾಕಿದ ಉದಾಹರಣೆಯಿಲ್ಲ. ಆದರೆ ಆಪ್ತ ಗೆಳೆಯ ಶಿವಳ್ಳಿ ಅವರನ್ನು ನೆನೆದು ಶಿವಕುಮಾರ ಕಣ್ಣೀರು ಹಾಕಿದ್ದಾರೆ. ಜನರ ಸಂಕಷ್ಟಗಳನ್ನು ನೋಡಿದಾಗ ನಮಗೆ ಕಣ್ಣೀರು ಬರುತ್ತದೆ. ನಾವು ಮನುಷ್ಯತ್ವದ ಹೃದಯದವರು, ಭಾವನಾತ್ಮಕ ಜೀವಿಗಳು. ನೋವಿನ ಕಣ್ಣೀರನ್ನು ರಾಜಕಾರಣಗೊಳಿಸುವ ಬಿಜೆಪಿ ನಾಯಕರಂತೆ ಕಟುಕರಲ್ಲ ಎಂದು ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು.
ಕುಸುಮಾವತಿ ಗೆಲುವು ನಿಶ್ಚಿತ: ಸಚಿವ ನಾಗರಾಜ ವಿಶ್ವಾಸ
ಕುಂದಗೋಳ: ಮಾಜಿ ಸಚಿವ ಸಿ.ಎಸ್‌. ಶಿವಳ್ಳಿ ಅವರ ಸೇವೆ ಸ್ಮರಣೆಯಲ್ಲಿರಿಸಿಕೊಂಡ ಕ್ಷೇತ್ರದ ಜನತೆ ಕುಸುಮಾವತಿ ಅವರನ್ನು ಆಯ್ಕೆ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಚಿವ ಎಂ.ಟಿ.ಬಿ. ನಾಗರಾಜ ಹೇಳಿದರು. ಸಂಶಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಗರು ಹೇಳುವಂತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಮುಖಂಡರಲ್ಲಿ ಭಿನ್ನಾಭಿಪ್ರಾಯವಿಲ್ಲ. ಸರ್ಕಾರ ಉರುಳಿಸುವ ಹುನ್ನಾರ ನಡೆಸುತ್ತಿರುವ ಬಿಜೆಪಿ ನಾಯಕರು ಮುಖ್ಯಮಂತ್ರಿಯಾಗುವ ಹಗಲುಗನಸು ಕಾಣುತ್ತಿದ್ದು, ಕುಂದಗೋಳ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಖಂಡಿತ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕುಸುಮಾವತಿ ಅವರ ಪತಿ ಶಿವಳ್ಳಿಯವರು ಪೌರಾಡಳಿತ ಸಚಿವರಾಗಿದ್ದರು. ಆ ಸ್ಥಾನ ಇಂದು ಖಾಲಿ ಇದ್ದು, ಕುಸುಮಾವತಿಯವರನ್ನು ಆ ಸ್ಥಾನಕ್ಕೆ ನೇಮಿಸಲು ನಾವೆಲ್ಲರೂ ಹೈಕಮಾಂಡ್‌ಗೆ ಒತ್ತಾಯಿಸಿ ಅವರನ್ನು ಅದೇ ಸ್ಥಾನಕ್ಕೇರಿಸಲು ಒತ್ತಡ ಹೇರುತ್ತೇವೆ ಎಂದು ಹೇಳಿದರು.
ಬಿಜೆಪಿ ಬುರುಡೆ ಬಿಡುತ್ತಿದೆ: ಆರ್ವಿಡಿ
ಕುಂದಗೋಳ: ನಮ್ಮ ಸರ್ಕಾರ ಬರ ನಿರ್ವಹಣೆಗೆ ಏನೂ ಮಾಡುತ್ತಿಲ್ಲ ಎಂದು ಬಿಜೆಪಿ ಬುರುಡೆ ಬಿಡುತ್ತಿದೆ. ನಮ್ಮದು ರೈತರ ಹಾಗೂ ಬಡವರ ಪರ ಸರ್ಕಾರವಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಪಟ್ಟಣದ ಹೊರವಲಯದಲ್ಲಿ ಕುಸುಮಾವತಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲಮನ್ನಾ ಮಾಡಿತ್ತು. ಹಾಗೆಯೇ ನಮ್ಮ ಸಮ್ಮಿಶ್ರ ಸರ್ಕಾರ 42 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಮೋದಿ ಅವರು ಪ್ರತಿವರ್ಷ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. ಆದರೆ ಮಾಡಿದ್ದೇನು? ಕೇವಲ ಜಾತಿ-ಧರ್ಮದ ಮೇಲೆ ಮತ ಬೇಡುವವರು ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗ ಅನೇಕರು ಶಿವಳ್ಳಿ ಸೇವೆ ನೆನೆದು ಕಣ್ಣೀರಿಟ್ಟಿದ್ದಾರೆ. ಶಿವಳ್ಳಿಯವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಕಾರಗೊಳಿಸಲು ಕುಸುಮಾವತಿ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವೆ ಉಮಾಶ್ರೀ ಮಾತನಾಡಿ, ನಮ್ಮ ಸರ್ಕಾರವಿದ್ದಾಗ ರಾಜ್ಯದ ಜನತೆಗೆ ಅನ್ನ ಭಾಗ್ಯ ಸೇರಿದಂತೆ ಅನೇಕ ಭಾಗ್ಯಗಳನ್ನು ನೀಡಲಾಗಿದ್ದು, ಈಗ ಸಮ್ಮಿಶ್ರ ಸರ್ಕಾರದಲ್ಲಿಯೂ ಹಲವು ಜನಪರ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯಕ್ಕೆ ಬಿಜೆಪಿಗರ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಶಿವಳ್ಳಿಯವರ ಪತ್ನಿ ಗೆಲ್ಲಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಬಿಜೆಪಿಗರ ಮಾತಿಗೆ ಕಿವಿಗೊಡದೆ ಇವರನ್ನು ಗೆಲ್ಲಿಸುವ ಮೂಲಕ ಶಿವಳ್ಳಿ ಆತ್ಮಕ್ಕೆ ಶಾಂತಿ ಕೋರೋಣ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಬಂಡೆಪ್ಪ ಕಾಶೆಂಪುರ, ಎಂಟಿಬಿ ನಾಗರಾಜ, ಬಸವರಾಜ ಹೊರಟ್ಟಿ, ಶಿವಶಂಕರ ರೆಡ್ಡಿ, ಎನ್‌.ಎಚ್. ಕೋನರಡ್ಡಿ, ಸಂತೋಷ ಲಾಡ್‌, ವೀರಣ್ಣ ಮತ್ತಿಕಟ್ಟಿ, ಐ.ಜಿ. ಸನದಿ, ಎಂ.ಎಸ್‌. ಅಕ್ಕಿ, ಅರವಿಂದ ಕಟಗಿ, ಚಂದ್ರಶೇಖರ ಜುಟ್ಟಲ, ದಯಾನಂದ ಕುಂದೂರ, ಉಮೇಶ ಹೆಬಸೂರ, ಸಕ್ರು ಲಮಾಣಿ, ಜಗದೀಶ ಉಪ್ಪಿನ, ಸುರೇಶ ಗಂಗಾಯಿ ಇದ್ದರು.

ಧಮ್ಕಿ ಆಡಿಯೋ ಆಯ್ತು ವೈರಲ್

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರಿಗೆ ಬಿಜೆಪಿ ಯುವ ಮುಖಂಡ ಧಮ್ಕಿ ಹಾಕಿದ್ದಾರೆಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ ಆ ಮುಖಂಡನಿಗೆ ಕರೆ ಮಾಡಿ ಧಮ್ಕಿ ಹಾಕಿದ್ದಾರೆನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಬಿಜೆಪಿ ಯುವ ಮುಖಂಡ ಅನೂಪ್‌ ಬಿಜವಾಡ ಕಾಂಗ್ರೆಸ್‌ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆಂದು ಪಕ್ಷದ ಕಾರ್ಯಕರ್ತನೊಬ್ಬ ಡಿ.ಕೆ. ಶಿವಕುಮಾರ ಬಳಿ ಹೇಳಿಕೊಂಡಿದ್ದಾನೆ. ಆಗ ಸಚಿವ ಡಿ.ಕೆ. ಶಿವಕುಮಾರ ಅವರು ಅನೂಪ್‌ಗೆ ಕರೆ ಮಾಡಿ ‘ಏನ್‌ ನಮ್ಮ ಹುಡುಗರಿಗೆ ಧಮ್ಕಿ ಹಾಕ್ತಿಯಂತೆ ಏನ್‌ ಸಮಾಚಾರ. ಅಲ್ಲಿ ಹೋಗಬೇಡ. ಇಲ್ಲಿ ಹೋಗಬೇಡ. ಅದು ಮಾಡಬ್ಯಾಡ. ಇದು ಮಾಡಬ್ಯಾಡ. ಇಲ್ಲಿ ನಮ್ಮ ಹುಡುಗ ಇದ್ದಾನೆ. ಕಾಂಗ್ರೆಸ್‌ ಕಾರ್ಯಕರ್ತನಿಗೆ ನೀನು ಧಮ್ಕಿ ಹಾಕಬೇಡ. ನಿನ್ನ ಇಲೆಕ್ಷನ್‌ ನೀನು ಏನು ಬೇಕಾದರು ಮಾಡಿಕೋ. ಧಮ್ಕಿ ಗಿಮ್ಕಿ ಹಾಕುವುದು, ಬಿಸಿನೆಸ್‌ ಮತ್ತೂಂದು ಬಿಟ್ಟು ಸುಮ್ನೆ ನಿಮ್ಮ ಕೆಲಸ ಎಷ್ಟು ಅಷ್ಟು ಮಾಡು’ ಎಂದು ಎಚ್ಚರಿಸಿದ್ದಾರೆ. ಆಗ ಅನೂಪ್‌ ‘ನಾನು ಯಾರಿಗೂ ಧಮ್ಕಿ ಹಾಕಿಲ್ಲ. ನಿಮ್ಮ ಚುನಾವಣೆ ನೀವು ಮಾಡಿ, ನಮ್ಮ ಚುನಾವಣೆ ನಾವು ಮಾಡುತ್ತೇವೆ. ಧಮ್ಕಿ ಹಾಕಿದರೆ ಏನು ಓಟು ಬರುತ್ತದೆಯೇ ಎಂದಿದ್ದಾರೆ. ಆಗ ಡಿ.ಕೆ. ಶಿವಕುಮಾರ, ನಿನ್ನ ಜೊತೆ ಆಮೇಲೆ ಮಾತನಾಡುತ್ತೇನೆ ಎಂದು ಕರೆ ಕಟ್ ಮಾಡಿದ್ದಾರೆ.

ಈ ಮಾತುಕತೆ ಆಡಿಯೋ ಈಗ ಲಭ್ಯವಾಗಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅನೂಪ್‌ ಬಿಜವಾಡ ಬಿಜೆಪಿ ಮುಖಂಡ ಶಂಕ್ರರಪ್ಪ ಬಿಜವಾಡ ಪುತ್ರರಾಗಿದ್ದು, ಶಂಕರಪ್ಪ ಬಿಜವಾಡ ಬಿ.ಎಸ್‌. ಯಡಿಯೂರಪ್ಪನವರ ಆಪ್ತರಾಗಿದ್ದಾರೆ.

ಸಿಎಂ ತಂಗಿದ್ದ ಹೋಟೆಲ್ ಮೇಲೆ ಹದ್ದಿನ ಕಣ್ಣು
ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್ಗಳಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮುಖಂಡರು ಹಣ ಹಂಚಿಕೆ ಮಾಡುತ್ತಿದ್ದಾರೆಂದು ಬಿಜೆಪಿ ನಾಯಕರು ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳು ಸಿಎಂ ಕುಮಾರಸ್ವಾಮಿ ತಂಗಿರುವ ಇಲ್ಲಿನ ಹೋಟೆಲ್ಗೆ ಸೋಮವಾರ ರಾತ್ರಿ ತೆರಳಿ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ ನಗರದಲ್ಲಿನ ಕೆಲ ಹೋಟೆಲ್ಗಳ ಮೇಲೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಕುಂದಗೋಳ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಆಗಮಿಸಿರುವ ಸಿಎಂ ಕುಮಾರಸ್ವಾಮಿ ಹಾಗೂ ವಿವಿಧ ನಾಯಕರು ಇಲ್ಲಿನ ಡೆನಿಸನ್ಸ್‌ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಚುನಾವಣಾ ಅಧಿಕಾರಿಗಳು ಸೋಮವಾರ ರಾತ್ರಿ ಹೋಟೆಲ್ಗೆ ತೆರಳಿ ಇಲ್ಲಿ ಎಷ್ಟು ಕೊಠಡಿಗಳಿವೆ. ಯಾರ್ಯಾರು ತಂಗಿದ್ದಾರೆ, ಎಷ್ಟು ಜನರಿದ್ದಾರೆೆ, ಎಷ್ಟು ಕೋಣೆಗಳನ್ನು ನೀಡಿದ್ದೀರಿ ಎಂಬ ಮಾಹಿತಿ ಪಡೆದು ತೆರಳಿದ್ದಾರೆ. ಸಿಎಂ ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದ ನಾಯಕರು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲೇ ಅಧಿಕಾರಿಗಳು ಹೋಟೆಲ್ಗೆ ಆಗಮಿಸಿ ಮಾಹಿತಿ ಪಡೆದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕುಂದಗೋಳದಲ್ಲಿ 4 ದಿನ ಮೈತ್ರಿ ನಾಯಕರ ರೋಡ್‌ ಶೋ
ಬೆಂಗಳೂರು: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಂಗಳವಾರದಿಂದ ಮೇ 17 ರ ವರೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಜಿಲ್ಲಾ ಪಂಚಾಯತ್‌ ಮಟ್ಟದಲ್ಲಿ ಜಂಟಿ ರೋಡ್‌ ಶೋ ಹಾಗೂ ಸಮಾವೇಶಗಳನ್ನು ನಡೆಸಲಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್, ಸಚಿವರಾದ ಡಿ.ಕೆ.ಶಿವಕುಮಾರ್‌, ಜಮೀರ್‌ ಅಹಮದ್‌ ಖಾನ್‌, ಆರ್‌.ವಿ.ದೇಶಪಾಂಡೆ, ಸತೀಶ್‌ ಜಾರಕಿಹೊಳಿ, ಜೆಡಿಎಸ್‌ ನಾಯಕರಾದ ಬಸವರಾಜ ಹೊರಟ್ಟಿ, ಆಲ್ಕೋಡ್‌ ಹನುಮಂತಪ್ಪ, ಕೋನರೆಡ್ಡಿ ಜಂಟಿ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೇ 14 ರಂದು ಅರಳಿಕಟ್ಟಿ ಹಾಗೂ ಅದರಗುಂಚಿ ಜಿಪಂ, ಮೇ 15 ರಂದು ಕಮಡೊಳ್ಳಿ ಹಾಗೂ ಯಲಿವಾಳ ಜಿಪಂ, 16 ರಂದು ಸಂಶಿ ಹಾಗೂ ಗುಡಿಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳ ನಾಯಕರ ಜಂಟಿ ರೋಡ್‌ ಶೋ ಹಾಗೂ ಬಹಿರಂಗ ಸಮಾವೇಶ ನಡೆಯಲಿವೆ. ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನ ಮೇ 17 ರಂದು ಕುಂದಗೋಳ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜಂಟಿ ನಾಯಕರ ರೋಡ್‌ ಶೋ ನಡೆಸಿ, ಬಹಿರಂಗ ಪ್ರಚಾರ ಅಂತ್ಯಗೊಳಿಸಲಿದ್ದಾರೆ.

 

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ