ಆಪರೇಷನ್‌ಗೆ ಟೀ ಮಾರಿ ಹಣ ಕೊಟ್ರಾ?

Team Udayavani, Apr 20, 2019, 11:19 AM IST

ಹುಬ್ಬಳ್ಳಿ: ರಾಜ್ಯದ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ನಿಟ್ಟಿನಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಶಾಸಕರ ಸೆಳೆಯಲು ಬಿಜೆಪಿಯವರು ಪ್ರತಿ ಶಾಸಕರಿಗೆ 20 30 ಕೋಟಿ ರೂ. ಆಮಿಷವೊಡ್ಡಿದ್ದು, ಇದಕ್ಕೆ ಪ್ರಧಾನಿ ಮೋದಿ ಚಹಾ ಮಾರಾಟ ಮಾಡಿದ ಹಣ ಕಳುಹಿಸಿದ್ದಾರೆಯೇ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇವೆ ಎಂದು ಹೇಳುತ್ತಾರೆ. ಹಾಗಿದ್ದರೆ ಜೆಡಿಎಸ್‌ ಕಾಂಗ್ರೆಸ್‌ ಶಾಸಕರಿಗೆ ಆಮಿಷವೊಡ್ಡಲು ಇಷ್ಟೊಂದು ದೊಡ್ಡ ಮೊತ್ತದ ಹಣ ಎಲ್ಲಿಂದ ಬಂತು ಎಂಬುದನ್ನು ಪ್ರಧಾನಿಯವರು ಜನತೆ ಮುಂದಿಟ್ಟರೆ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದೇನೆ ಎಂಬ ಅವರ ಹೇಳಿಕೆಗೆ ಅರ್ಥ ಬರುತ್ತದೆ. ಪ್ರಧಾನಿ ಮೋದಿ ಸಹ ಮೇ 23ರ ನಂತರ ಸಮ್ಮಿಶ್ರ ಸರ್ಕಾರ ಉಳಿಯದು ಎಂದು ಹೇಳಿದ್ದಾರೆ. ಅಲ್ಲಿಗೆ ಸರ್ಕಾರ ಅಸ್ಥಿರಕ್ಕೆ ಯಾರೆಲ್ಲ ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದರು. ಗಣಿ ಲೂಟಿ ಮಾಡಿದವರು ಇಂದು ನಾವು ಕಮಿಷನ್‌ ಹಣದಲ್ಲಿ ಚುನಾವಣೆ ಮಾಡುತ್ತೇವೆಂದು ಆರೋಪಿಸುತ್ತಿದ್ದಾರೆ.

ಅವರ ಲೂಟಿ ಜಗತ್ತಿಗೆ ಗೊತ್ತಿದೆ ಎಂದು ಶ್ರೀರಾಮುಲು ಹೆಸರು ಹೇಳದೆ ಟೀಕಿಸಿದರು. ಸರಕಾರಿ ಯೋಜನೆಗಳಲ್ಲಿ ಕಮಿಷನ್‌ ದಂಧೆ ಪರಿಚಯಿಸಿದ್ದೇ ಬಿಜೆಪಿಯವರು. ಪ್ರಧಾನಿಯವರು ನನ್ನನ್ನು ರಿಮೋಟ್ ಕಂಟ್ರೋಲ್ ಸಿಎಂ ಎಂದು ಹೀಯಾಳಿಸುತ್ತಿದ್ದಾರೆ. ರಿಮೋಟ್ ಕಂಟ್ರೋಲ್ ಸಿಎಂ ಏನೆಲ್ಲಾ ಸಾಧನೆ ಮಾಡಿದ್ದಾರೆ ಎಂದು ನೋಡಲು ಬನ್ನಿ ಎಂದರು.

ಉತ್ತರ ಕರ್ನಾಟಕ ವಿಷಯದಲ್ಲಿ ಹೆಚ್ಚು ಬೆರೆಯಲು ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದು ನಿಜ. ಆದರೆ, ನನಗೆ ಆರೋಗ್ಯ ಸಮಸ್ಯೆ ಎದುರಾಯಿತು. ಬಾಡಿಗೆ ನೀಡಿದವರು ತಮಗೆ ಮನೆ ಬೇಕು ಎಂದರು ಅದಕ್ಕೆ ಬಿಟ್ಟುಕೊಟ್ಟಿದ್ದೇನೆ. ಇದರಲ್ಲಿ ನಾನು ಮಾಡಿದ ಅಪರಾಧವಾದರು ಏನು ಎಂದು ಪ್ರಶ್ನಿಸಿದರು.

ಪಟ್ಟಿ ಸ್ವೀಕಾರ ಆಗಿದೆ
ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ರಾಜ್ಯ ಸರಕಾರದಿಂದ ಪಟ್ಟಿಯೇ ಬಂದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಕಿಸಾನ್‌ ಪೋರ್ಟಲ್ ನಲ್ಲಿ ಏ.18ರವರೆಗೂ 4,11,262 ರೈತ ಕುಟುಂಬದ ಹೆಸರು ಅಪ್‌ಲೋಡ್‌ ಆಗಿದ್ದು, 2,35,512 ಕುಟುಂಬಗಳನ್ನು ಅರ್ಹತೆ ಎಂದು ಹೇಳಲಾಗಿದ್ದು, 16,512 ಫ‌ಲಾನುಭವಿಗಳಿಗೆ ಹಣ ಹಾಕಲಾಗಿದೆ ಎಂದರು.

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಏನಾಯಿತು ಎಂದು ಬಿಜೆಪಿ ಹೇಳಬೇಕು. ಮಹದಾಯಿ ಕಾಮಗಾರಿಗೆ ರಾಜ್ಯ ಸರಕಾರ ಸಿದ್ಧವಿದ್ದರೂ, ಕೇಂದ್ರ ಅಧಿಸೂಚನೆ ಹೊರಡಿಸಿಲ್ಲ ಎಂದು ಸಿಎಂ ಹೇಳಿದರು.

ಬಾಗಲಕೋಟೆಯಷ್ಟೇ ಗೊತ್ತು
ಸರ್ಜಿಕಲ್ ದಾಳಿ ವಿಚಾರ ಪ್ರಸ್ತಾಪಿಸಿದ ಪ್ರಧಾನಿಯವರು ಬಾಲಾಕೋಟ್, ಗಲಕೋಟೆ ಬಗ್ಗೆ ಹೇಳಿದ್ದಾರೆ. ನಮಗೆ ಬಾಲಾಕೋಟ್ ಗೊತ್ತಿಲ್ಲ. ತ್ತಿರುವುದು ಬಾಗಲಕೋಟೆ ಮಾತ್ರ. ಪಾಕಿಸ್ತಾನ ಪ್ರಧಾನಿಯನ್ನು ಭೇಟಿ ಮಾಡಿ, ಉಡುಗೊರೆ ಕೊಟ್ಟು ಬಂದವರು ಯಾರು ಎಂಬುದನ್ನು ಅವರೇ ಜನತೆ ಮುಂದಿಡಲಿ. ಇಂದಿರಾ ಗಾಂಧಿ ಕಾಲದಿಂದಲೂ ಸರ್ಜಿಕಲ್ ದಾಳಿಗಳು ನಡೆಯುತ್ತ ಬಂದಿವೆ. ಇದು ಸೈನಿಕರ ಸಾಧನೆಯೇ ವಿನಃ ಅದನ್ನೇ ರಾಜಕೀಯವಾಗಿ ಬಳಕೆ ಮಾಡಿಕೊಂಡಿದ್ದು ಕೀಳುಮಟ್ಟದ ವರ್ತನೆಯಾಗಿದೆ ಎಂದರು.

ನರೇಗಾಕ್ಕೆ ಹಣ ನೀಡಲಾಗದ ಕೇಂದ್ರದ್ದು ದಿವಾಳಿ ಸರ್ಕಾರ
ರಾಜ್ಯ ಬರ ಎದುರಿಸುತ್ತಿದ್ದರೂ ನರೇಗಾದಡಿ ಬರಬೇಕಾದ 1,500 ಕೋಟಿ ರೂ. ನೀಡದ ದಿವಾಳಿ ಸರಕಾರ ನಿಮ್ಮದಾಗಿದ್ದರೂ, ರಾಜ್ಯಕ್ಕೆ ಬಂದು ಇಲ್ಲಿಯದು ಅಸಮರ್ಥ ಸರಕಾರ ಎಂದು ಜನತೆಗೆ ಸುಳ್ಳು ಹೇಳುವ ಕೆಲಸ ಮಾಡುತ್ತೀರಾ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಾಗ್ಧಾಳಿ ನಡೆಸಿದರು. ಆಯುಷ್ಮಾನ್‌ ಭಾರತ ಯೋಜನೆ ತಮ್ಮದೇ ಎನ್ನುವಂತೆ ದೊಡ್ಡ ಪ್ರಚಾರ ಪಡೆಯುತ್ತಿದ್ದಾರೆ. ಈ ಯೋಜನೆಗೆ ರಾಜ್ಯ ಸರಕಾರ ಪ್ರತಿ ವರ್ಷ 900 ಕೋಟಿ ರೂ. ನೀಡಿದರೆ, ಕೇಂದ್ರದ ಪಾಲು ಕೇವಲ 300 350 ಕೋಟಿ ರೂ. ಆಗಿದೆ. ಯುಕೆಪಿಗೆ ನಮ್ಮ ಸರಕಾರ ಹಲವು ಬಾರಿ ಮನವಿ ಮಾಡಿದರೂ ಕೇಂದ್ರದಿಂದ ಹಣ ಬಂದಿಲ್ಲ. ವಿಜಯಪುರ ಜಿಲ್ಲೆ ಅಭಿವೃದ್ಧಿಗೆ ಸಮ್ಮಿಶ್ರ ಸರಕಾರದಲ್ಲಿ ಇಲ್ಲಿವರೆಗೆ 4,335 ಕೋಟಿ, ಬೆಳಗಾವಿಗೆ 5,693 ಕೋಟಿ, ಧಾರವಾಡಕ್ಕೆ 1,200 ಕೋಟಿ ರೂ. ಅನುದಾನ ನೀಡಿದ್ದೇವೆ. ಸಹಕಾರ ಸಂಘಗಳಲ್ಲಿನ ರೈತರ ಸಾಲಮನ್ನಾಕ್ಕೆ 208 ಕೋಟಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ 11,170 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಮ್ಮದು ಅಸಮರ್ಥ ಸರಕಾರವೇ? ರಾಜ್ಯ ಸರಕಾರದ ಬಗ್ಗೆ ಪ್ರಧಾನಿ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದರು.

ರೈತರ ಒಡವೆ ಒತ್ತೆ ತಡೆಯಲು ಗೃಹಲಕ್ಷ್ಮೀ

ಹುಬ್ಬಳ್ಳಿ: ರೈತರು ಖಾಸಗಿ ಲೇವಾದೇವಿ ಇಲ್ಲವೆ ಬ್ಯಾಂಕ್‌ನಲ್ಲಿ ಮಹಿಳೆಯರ ಚಿನ್ನಾಭರಣ ಒತ್ತೆ ಇರಿಸಿ ಹಣ ಪಡೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದಲೇ ಹಣ ನೀಡಿಕೆಯ ಗೃಹಲಕ್ಷ್ಮೀ ಬೆಳೆಸಾಲ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ವಿನಯ ಕುಲಕರ್ಣಿ ಪರ ಗೋಕುಲ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೈತರು ಒತ್ತೆ ಇರಿಸಿದ ಚಿನ್ನಾಭರಣಗಳನ್ನು ಮತ್ತೆ ಬಿಡಿಸಿಕೊಳ್ಳದ ಸ್ಥಿತಿಯೂ ಬರುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರದಿಂದಲೇ ಆಭರಣ ಒತ್ತೆಯ ಸಾಲ ನೀಡಲಾಗುತ್ತಿದ್ದು, ಅದರ ಬಡ್ಡಿಯನ್ನು ಸರಕಾರವೇ ಭರಿಸುತ್ತದೆ ಎಂದರು.

ರೈತರು ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲು ಸಾಗಣೆ ವೆಚ್ಚವನ್ನು ಹಾಗೂ ಗೋದಾಮಿನಲ್ಲಿ ಇರಿಸಿದರೆ ಅದರ ಬಾಡಿಗೆಯನ್ನು ಸರಕಾರವೇ ಭರಿಸಲಿದೆ. ಬೆಲೆ ಬರದಿದ್ದರೆ, ಸಂಗ್ರಹ ದಾಸ್ತಾನಿನ ಮೇಲೆ ಶೇ.75 ಹಣ ನೀಡಲಿದೆ. ಸಹಕಾರ ಪದ್ಧತಿಯಡಿ ಕೃಷಿಗೆ ಮುಂದಾಗಿ 50-100 ರೈತರ ಗುಂಪು ರಚಿಸಿಕೊಂಡರೆ ಅಂತಹವರಿಗೆ 1 ಕೋಟಿ ರೂ. ವರೆಗೆ ಸಹಾಯಧನ ದೊರೆಯಲಿದೆ ಎಂದು ಹೇಳಿದರು.

ಮಹದಾಯಿ ವಿಚಾರದಲ್ಲಿ ಇಂದಿಗೂ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಬಂದಿದ್ದರೆ ಕಾಮಗಾರಿ ಆರಂಭಿಸುತ್ತಿದ್ದೆವು. ಆ ಕೆಲಸ ಮಾಡದ ಪ್ರಹ್ಲಾದ ಜೋಶಿ ಇದೀಗ ಬುರುಡೆ ಭಾಷಣ ಮೂಲಕ ಜನರನ್ನು ನಂಬಿಸಲು ಬರುತ್ತಾರೆ. ಅವರನ್ನು ನಂಬಬೇಡಿ, ಲೋಕಸಭೆಯಲ್ಲಿ ನಿಮ್ಮ ಪರ ಧ್ವನಿ ಎತ್ತುವ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಬೇಕು ಎಂದರು.

ಬಸವರಾಜ ಹೊರಟ್ಟಿ ಮಾತನಾಡಿ, ಈ ಬಾರಿ ಬಿಜೆಪಿಗೆ ಸೋಲು ಮನವರಿಕೆ ಆಗಿದ್ದು, ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದರು. ವಿನಯ ಕುಲಕರ್ಣಿ, ಎನ್‌.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಎ.ಎಂ. ಹಿಂಡಸಗೇರಿ, ರಾಜಣ್ಣಾ ಕೊರವಿ, ಮಹೇಂದ್ರ ಸಿಂಘಿ, ವೀರಣ್ಣ ಮತ್ತಿಕಟ್ಟಿ, ಎಂ.ಎಸ್‌. ಅಕ್ಕಿ, ಐ.ಜಿ. ಸನದಿ ಇನ್ನಿತರರಿದ್ದರು.

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ