ಬರ ನಿರ್ವಹಣೆಗೆ ನಿರ್ಲಕ್ಷ್ಯತೋರಿಲ್ಲ

Team Udayavani, May 14, 2019, 11:35 AM IST

ಹುಬ್ಬಳ್ಳಿ: ಬರ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸ‌ಲಾಗಿದ್ದು, ಅದಕ್ಕೆ ಪೂರಕ ಅನುದಾನ ನೀಡಲಾಗಿದೆ ಎಂದು ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಪೂರೈಕೆ, ಜಾನುವಾರುಗಳಿಗೆ ಮೇವಿನ ಲಭ್ಯತೆ, ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಉದ್ಯೋಗ ಕಲ್ಪಿಸುವ ದಿಸೆಯಲ್ಲಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ 727 ಕೋಟಿ ರೂ. ನೀಡಲಾಗಿದೆ. ಪ್ರತಿ ಜಿಲ್ಲಾಧಿಕಾರಿ ಪಿ.ಡಿ. ಖಾತೆಯಲ್ಲಿ 8 ಕೋಟಿ ರೂ. ಅನುದಾನ ಇರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅಗತ್ಯಕ್ಕನುಗುಣವಾಗಿ ಅನುದಾಬ ಬಳಸುವಂತೆ ಎಲ್ಲ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒಗಳಿಗೆ ಪತ್ರ ಬರೆಯಲಾಗಿದೆ ಎಂದರು.

18ರಲ್ಲಿ 14 ವರ್ಷ ಬರ: ರಾಜ್ಯದಲ್ಲಿ ಬರ ಹಾಗೂ ಪ್ರವಾಹ ಪರಿಸ್ಥಿತಿ ಅವಲೋಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಲು ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಸಮಿತಿ ಈಗಾಗಲೇ 10 ಸಭೆಗಳನ್ನು ನಡೆಸಿ ಜಿಲ್ಲಾಡಳಿತ ವತಿಯಿಂದ ಕ್ರಮ ಕೈಗೊಳ್ಳಲು ಸೂಕ್ತ ನಿರ್ದೇಶಕ ನೀಡಿದೆ. ಕಳೆದ 18 ವರ್ಷಗಳಲ್ಲಿ 2005, 2007, 2010 ಹಾಗೂ 2017 ಹೊರತುಪಡಿಸಿದರೆ 14 ವರ್ಷ ರಾಜ್ಯದಲ್ಲಿ ಬರ ಉಂಟಾಗಿದೆ. ಬರ ನಿರ್ವಹಣೆಗೆ ಶಾಶ್ವತ ಪರಿಹಾರ ಕ್ರಮ ಅವಶ್ಯಕವಾಗಿದೆ. ಅರಣ್ಯಗಳನ್ನು ರಕ್ಷಿಸಬೇಕು. ಗಿಡಗಳನ್ನು ಹೆಚ್ಚಾಗಿ ಬೆಳೆಸುವುದು, ಕೆರೆ ಹೂಳೆತ್ತುವುದು. ನದಿಗಳ ನೀರಿನ ಸಮರ್ಪಕ ಬಳಕೆಯನ್ನೊಳಗೊಂಡ ವ್ಯಾಪಕ ಯೋಜನೆ ಕೈಗೊಳ್ಳುವುದು ಅವಶ್ಯವಾಗಿದೆ ಎಂದರು.

ಚುನಾವಣಾ ನೀತಿ ಸಂಹಿತೆ ಕಾರಣದಿಂದ ಧಾರವಾಡ-ಕಲಬುರಗಿ ಜಿಲ್ಲೆಗಳಲ್ಲಿ ಬರ ನಿರ್ವಹಣೆ ಕಾರ್ಯಕ್ರಮ ರೂಪಿಸಲು ಸಾಧ್ಯವಾಗುತ್ತಿಲ್ಲ. ಪ್ರಗತಿ ಪರಿಶೀಲನಾ ಸಭೆಗಳನ್ನು ಮಾಡಬಹುದು. ಆದರೆ ಜನಪ್ರತಿನಿಧಿಗಳನ್ನು ಕರೆಯುವಂತಿಲ್ಲ. ಸಭೆಗೆ ಜನಪ್ರತಿನಿಧಿಗಳನ್ನು ಕರೆಯಲು ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಕೇಂದ್ರ ಸರಕಾರ ನೆರವು ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. 2018-19ನೇ ಸಾಲಿನಲ್ಲಿ 2064 ಕೋಟಿ ರೂ. ನೆರವು ನೀಡುವಂತೆ ಕೋರಲಾಗಿತ್ತು. ಆದರೆ ಕೇಂದ್ರ ಕೇವಲ 900 ಕೋಟಿ ರೂ. ಮಾತ್ರ ನೀಡಿದೆ. ಕೇಂದ್ರ ಸರಕಾರ ನರೇಗಾ ಯೋಜನೆಯ ಅನುದಾನ 2000 ಕೋಟಿ ರೂ. ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು.

ನೀರು ಪೂರೈಕೆಗೆ ಕ್ರಮ: ಪ್ರಸ್ತುತ ರಾಜ್ಯದ 2547 ಗ್ರಾಮಗಳಿಗೆ ಬೋರ್‌ವೆಲ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 349 ವಾರ್ಡ್‌ಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರು ದಾಖಲಿಸಲು ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಮಾಡಲಾಗಿದೆ. ಜನರು 1077 ಹಾಗೂ 1070 ಸಂಖ್ಯೆಯ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ದೂರು ನೀಡಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ 1,29, 08,292 ಜಾನುವಾರುಗಳು ಮೇವನ್ನಾಧರಿಸಿದ್ದು, ರಾಜ್ಯದಲ್ಲಿ 62, 48, 640 ಮೆಟ್ರಿಕ್‌ ಟನ್‌ ಮೇವು ಲಭ್ಯವಿದೆ. ಇದು ಮುಂದಿನ 3 ತಿಂಗಳಿಗೆ ಸಾಕಾಗಲಿದೆ. ಪ್ರಸ್ತುತ 150 ಮೇವು ಬ್ಯಾಂಕ್‌ಗಳನ್ನು ತೆರೆಯಲಾಗಿದ್ದು, ರಾಜ್ಯದಿಂದ ಮೇವು ಬೇರೆ ರಾಜ್ಯಕ್ಕೆ ಹೋಗುವುದನ್ನು ತಡೆಯಲಾಗಿದೆ. 12 ಗೋಶಾಲೆಗಳಲ್ಲಿ 11,614 ಗೋವುಗಳನ್ನು ಸಂರಕ್ಷಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ 42.7 ಕೋಟಿ ರೂ. ವೆಚ್ಚದಲ್ಲಿ ರೈತರಿಗೆ ಉಚಿತವಾಗಿ 16.80 ಲಕ್ಷ ಮಿನಿ ಕಿಟ್ ವಿತರಿಸಲಾಗಿದೆ ಎಂದು ವಿವರಿಸಿದರು.

ಮಾಜಿ ಶಾಸಕ ಬಿ.ಆರ್‌. ಯಾವಗಲ್ಲ , ಮುಖಂಡರಾದ ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಡಿ.ಬಸವರಾಜ ಇದ್ದರು.

ಕಾಳಿ ನೀರನ್ನು ಬರ ಪ್ರದೇಶ‌ಕ್ಕೆ ಪೂರೈಸುವ ಚಿಂತನೆ ನಡೆದಿದೆಯೇ ಹೊರತು ರಾಜ್ಯ ಸರಕಾರ ಯಾವುದೇ ನೀಲನಕ್ಷೆ ಸಿದ್ಧಪಡಿಸಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಕಾಳಿ ನೀರನ್ನು ಈಗಾಗಲೇ ಹಳಿಯಾಳ, ಅಳ್ನಾವರ ಭಾಗಕ್ಕೆ ಪೂರೈಸುವ ಯೋಜನೆ ಕೈಗೊಳ್ಳಲಾಗಿದೆ. ಕಾಳಿ ನೀರನ್ನು ಬರ ಪ್ರದೇಶದ ಭಾಗಗಳಿಗೆ ಪೂರೈಸಲು ಅಲ್ಲಿನ ಜನರು ಯಾಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೋ ನನಗೆ ಗೊತ್ತಿಲ್ಲ.
•ಆರ್‌.ವಿ. ದೇಶಪಾಂಡೆ, ಕಂದಾಯ ಸಚಿವ

ಮೋಡ ಬಿತ್ತನೆ ಚರ್ಚೆ

ಮೋಡ ಬಿತ್ತನೆ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಪ್ರಸ್ತಾವನೆ ಬಂದಿದ್ದು, ಅದನ್ನು ಕ್ಯಾಬಿನೆಟ್ ಮುಂದೆ ಚರ್ಚೆಗೆ ತರಲಾಗುವುದು. ಕಳೆದ ಬಾರಿ ಮೋಡ ಬಿತ್ತನೆಯಿಂದ ಕೆಲ ಭಾಗದಲ್ಲಿ ಒಳ್ಳೆಯ ಮಳೆಯಾಗಿದ್ದು, ಜನ-ಜಾನುವಾರುಗಳಿಗೆ ಅನುಕೂಲವಾಗಿದೆ. ಆದರೆ ಕೆಲವೆಡೆ ಮೋಡ ಬಿತ್ತನೆಯಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಮೋಡ ಬಿತ್ತನೆ ಅವಶ್ಯಕತೆ ಕುರಿತು ಸಮರ್ಪಕವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ