ಸಮಗ್ರ ತ್ಯಾಜ್ಯ ನಿರ್ವಹಣಾ ಯೋಜನೆಗೆ ಗ್ರಹಣ

Team Udayavani, Jul 17, 2019, 9:36 AM IST

ಹುಬ್ಬಳ್ಳಿ: ಬೆಂಗೇರಿಯಲ್ಲಿ ಅರ್ಧಕ್ಕೆ ನಿಂತಿರುವ ಕಾಂಪ್ಯಾಕ್ಟ್ ಸ್ಟೇಶನ್‌ ನಿರ್ಮಾಣ.

ಹುಬ್ಬಳ್ಳಿ: ಮಹಾನಗರ ಪಾಲಿಕೆ ರೂಪಿಸಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಯೋಜನೆಗೆ ಆರಂಭಿಕ ಹಿನ್ನಡೆಯಾಗಿದೆ. ಕಾಂಪ್ಯಾಕ್ಟ್ ಸ್ಟೇಶನ್‌ ನಿರ್ಮಾಣಕ್ಕೆ ಜನರ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೆಲವೆಡೆ ಜನಪ್ರತಿನಿಧಿಗಳೂ ಧ್ವನಿಗೂಡಿಸಿರುವುದು ಸಮಸ್ಯೆಯಾಗಿ ಪರಿಣಮಿಸಿದೆ.

ಮಹಾನಗರದ ಘನತ್ಯಾಜ್ಯ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಸಮಗ್ರ ಘನತ್ಯಾಜ್ಯ ವಿಲೇವಾರಿ ಯೋಜನೆ ರೂಪಿಸಿದೆ. ಹುಬ್ಬಳ್ಳಿಯಲ್ಲಿ 4 ಹಾಗೂ ಧಾರವಾಡದಲ್ಲಿ 2 ಕಾಂಪ್ಯಾಕ್ಟ್ ಸ್ಟೇಶನ್‌ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಸ್ಟೇಶನ್‌ಗಳಲ್ಲಿರುವ ಕಂಟೇನರ್‌ಗಳಿಗೆ ಕಸ ಸುರಿಯುವುದರಿಂದ ಎಲ್ಲ ಟಿಪ್ಪರ್‌ಗಳು ಅಂಚಟಗೇರಿ ಕಸಮಡ್ಡಿಗೆ ಹೋಗುವ ಅಗತ್ಯವಿಲ್ಲ. ಇದರಿಂದ ಸಮಯ ಹಾಗೂ ಇಂಧನ ಉಳಿಯುತ್ತದೆ ಎಂಬುದು ಯೋಜನೆ ಪ್ರಮುಖ ಉದ್ದೇಶವಾಗಿದೆ.

ಜನ-ಪ್ರತಿನಿಧಿಗಳ ವಿರೋಧ: ಜನರ ವಿರೋಧಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಧ್ವನಿಗೂಡಿಸುತ್ತಿರುವುದು ಪಾಲಿಕೆ ಅಧಿಕಾರಿಗಳಿಗೆ ನುಂಗಲಾರದ ತುತ್ತಾಗಿದೆ. ಪಾಲಿಕೆ ಚುನಾವಣೆ ಹತ್ತಿರವಾಗುತ್ತಿದ್ದು, ಯಾವ ಸದಸ್ಯರು ಯೋಜನೆ ಪರವಾಗಿ ಮಾತನಾಡುತ್ತಿಲ್ಲ. ಜನರಿಗೆ ಬೇಡವಾದರೆ ಯಾಕೆ ಈ ಯೋಜನೆ ಎನ್ನುವ ಮನಸ್ಥಿತಿಗೆ ಪಾಲಿಕೆ ಕೆಲ ಮಾಜಿ ಸದಸ್ಯರು ಬಂದಂತಿದೆ. ಮೇಲಿಂದ ಮೇಲೆ ಆಗುತ್ತಿರುವ ಪಾಲಿಕೆ ಆಯುಕ್ತರ ವರ್ಗಾವಣೆಯೂ ಯೋಜನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

2018ರ ಸೆಪ್ಟೆಂಬರ್‌ ತಿಂಗಳಲ್ಲಿ ಮೊದಲ ಕಾಂಪ್ಯಾಕ್ಟ್ ಸ್ಟೇಷನ್‌ ಪೂರ್ಣಗೊಂಡಿತ್ತು. ಇದರ ಆಧಾರದ ಮೇಲೆ 2019 ಜೂನ್‌ ಅಂತ್ಯಕ್ಕೆ ಎಲ್ಲ ಸ್ಟೇಷನ್‌ಗಳು ಪೂರ್ಣಗೊಂಡು ಕಾರ್ಯಾರಂಭವಾಗಲಿವೆ ಎನ್ನುವ ನಿರೀಕ್ಷೆ ಇತ್ತು. ಆದರೆ ಜನರ ತೀವ್ರ ವಿರೋಧದಿಂದ ಅಸಾಧ್ಯ ಎನ್ನುವಂತಾಗಿದೆ. ಸಾಕಷ್ಟು ಬಾರಿ ಸ್ಥಳೀಯರನ್ನು ಮನವೊಲಿಸುವ ಕಾರ್ಯವಾಗಿದ್ದು, ಯಾವುದಕ್ಕೂ ಒಪ್ಪದ ಹಿನ್ನೆಲೆಯಲ್ಲಿ ಕೊನೆಯ ಅಸ್ತ್ರವಾಗಿ ಪೊಲೀಸರ ನೆರವಿನೊಂದಿಗೆ ಯೋಜನೆ ಅನುಷ್ಠಾನ ಅನಿವಾರ್ಯ ಎನ್ನುವ ಅಭಿಪ್ರಾಯ ಅಧಿಕಾರಿಗಳದ್ದಾಗಿದೆ.

ಎಲ್ಲೆಲ್ಲಿ ಹೇಗೆ ಸಾಗಿದೆ?: ಮಹಾನಗರ ವ್ಯಾಪ್ತಿಯಲ್ಲಿ ನಿರ್ಧರಿಸಿದ್ದ 6 ಕಾಂಪ್ಯಾಕ್ಟ್ ಸ್ಟೇಶನ್‌ಗಳ ಪೈಕಿ ಇಂದಿರಾ ನಗರದ 11ನೇ ವಲಯ ಕಚೇರಿ ಆವರಣ ಹಾಗೂ ಉಣಕಲ್ಲನಲ್ಲಿ ನಿರ್ಮಾಣವಾಗಿದ್ದು, ಪ್ರಾಯೋಗಿಕ ಕಾರ್ಯಾರಂಭವಾಗಿದೆ. ಉಳಿದಂತೆ ಬೆಂಗೇರಿಯ ಚಿಕ್ಕು ಹಣ್ಣಿನ ತೋಟದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆಯಾದರೂ ಸದ್ಯಕ್ಕೆ ಸ್ಥಗಿತಗೊಂಡಿದೆ. ನಂದಿನಿ ಲೇಔಟ್‌ನಲ್ಲಿ ನಿರ್ಮಾಣಕ್ಕೆ ಜನರು ಸುತಾರಾಂ ಒಪ್ಪದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಧಾರವಾಡ ಕಲ್ಯಾಣನಗರದಲ್ಲಿ ಕಾಮಗಾರಿ ಭಾಗಶಃ ಪೂರ್ಣಗೊಂಡಿದೆ. ಇನ್ನೂ ಮೀನು ಮಾರುಕಟ್ಟೆಯಲ್ಲಿ ನಿರ್ಮಿಸಲು ನಿರ್ಧರಿಸಿದ್ದ ಸ್ಥಳ ಸೂಕ್ತವಾಗಿಲ್ಲ. ಇತ್ತೀಚೆಗೆ ಗುರುತಿಸಿದ ಸ್ಥಳ ಪುರಾತತ್ವ ಇಲಾಖೆ ವ್ಯಾಪ್ತಿಗೆ ಒಳಪಡುವ ಹಿನ್ನೆಲೆಯಲ್ಲಿ ಇಲಾಖೆ ಅಧಿಕಾರಿಗಳು ಅನುಮತಿ ನೀಡದ ಪರಿಣಾಮ ಮತ್ತೂಂದು ಸ್ಥಳದ ಹುಡುಕಾಟದಲ್ಲಿದ್ದಾರೆ. ಅಧಿಕಾರಿಗಳು ಗುರುತಿಸಿ ಸ್ಥಳಗಳೆಲ್ಲವೂ ಪಾಲಿಕೆ ಒಡೆತನದಲ್ಲಿದ್ದರೂ ಸುತ್ತಲಿನ ಜನರ ವಿರೋಧವಿದೆ.
• ಜೂನ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಹುಸಿ
• ಅವಳಿ ನಗರದಲ್ಲಿ ಆರರಲ್ಲಿ ಎರಡು ಮಾತ್ರ ಪೂರ್ಣ
• 2 ಕೇಂದ್ರ ಆರಂಭವೇ ಇಲ್ಲ; ಇನ್ನೆರಡು ಅರ್ಧಚಂದ್ರ
• ನೈರ್ಮಲ್ಯ ಕೊರತೆ ಶಂಕೆ; ಜನ ವಿರೋಧಕ್ಕೆ ಕಾರಣ
• ಕೆಲವೆಡೆ ಜನಪ್ರತಿನಿಧಿಗಳಿಂದಲೂ ಅಪಸ್ವರದ ಮಾತು
ಜನರ ವಿರೋಧ ಯಾಕೆ?: ಯೋಜನೆ ಅನುಷ್ಠಾನ ಹಾಗೂ ಆರಂಭದಲ್ಲಿ ತೋರುವ ಆಸಕ್ತಿ ನಂತರದಲ್ಲಿ ಪಾಲಿಕೆ ಅಧಿಕಾರಿಗಳಲ್ಲಿ ಇರುವುದಿಲ್ಲ ಎನ್ನುವ ಭಯ ಜನರಲ್ಲಿದೆ. ಕಾಂಪ್ಯಾಕ್ಟ್ ಸ್ಟೇಶನ್‌ಗಳು ನಿರ್ಮಾಣವಾಗುವುದರಿಂದ ಸುತ್ತಲಿನ ಪ್ರದೇಶದಲ್ಲಿ ದುರ್ವಾಸನೆ, ಸ್ವಚ್ಛತೆ ಕೊರತೆ, ವಿವಿಧ ಕಾಯಿಲೆ ಭೀತಿ ಜನರಲ್ಲಿದೆ. ಸ್ವಚ್ಛತೆಗೆ ಪಾಲಿಕೆ ಅಷ್ಟೊಂದು ಒತ್ತು ನೀಡುತ್ತಿಲ್ಲ. ಆರಂಭದಲ್ಲಿ ಅಷ್ಟೇನು ಸಮಸ್ಯೆಯಾಗದಿದ್ದರೂ ಮುಂದೆ ಈ ಸ್ಟೇಶನ್‌ ಸುತ್ತಮುತ್ತ ಜೀವನ ನಡೆಸುವುದು ದುಸ್ತರವಾಗಲಿದೆ. ಸ್ಟೇಶನ್‌ ಇದ್ದರೆ ವಾಣಿಜ್ಯ ಕಟ್ಟಡಗಳಿಗೆ ನಿರೀಕ್ಷಿತ ಬಾಡಿಗೆ ಬರುವುದಿಲ್ಲ ಎನ್ನುವ ಅಂಶಗಳು ಮುನ್ನೆಲೆಗೆ ಬಂದಿವೆ.

ಕಾಂಪ್ಯಾಕ್ಟ್ ಸ್ಟೇಶನ್‌ ನಿರ್ಮಾಣ ಮಾಡುವುದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಟಿಪ್ಪರ್‌ನಿಂದ ನೇರವಾಗಿ ದೊಡ್ಡ ಕಂಟೇನರ್‌ಗೆ ಹಾಕಿ ಅಲ್ಲಿಂದ ಅಂಚಟಗೇರಿ ಕಸಮಡ್ಡಿಗೆ ಸಾಗಿಸುವುದರಿಂದ ಕಸ ಹಾಕುವ ಪ್ರಶ್ನೆಯಿಲ್ಲ. ವೈಜ್ಞಾನಿಕವಾಗಿ ನಿರ್ಮಾಣ ಮಾಡುವುದರಿಂದ ವಾಸನೆ ಸೇರಿದಂತೆ ಯಾವ ಸಮಸ್ಯೆ ಇರುವುದಿಲ್ಲ. ಮಹಾನಗರ ಅಭಿವೃದ್ಧಿಗೆ ಜನರು ಸಹಕಾರ ನೀಡಬೇಕು.• ಆರ್‌. ವಿಜಯಕುಮಾರ, ಕಾರ್ಯನಿರ್ವಾಹಕ ಎಂಜಿನಿಯರ್‌, ಘನತ್ಯಾಜ್ಯ ನಿರ್ವಹಣೆ

ಜನನಿಬಿಡ ಪ್ರದೇಶದಲ್ಲಿ ಸ್ಟೇಶನ್‌ ನಿರ್ಮಾಣಕ್ಕೆ ಮುಂದಾಗಿರುವುದು ಸರಿಯಲ್ಲ. ಪಾಲಿಕೆ ಅಧಿಕಾರಿಗಳು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಜೀವನ ನಡೆಸುವುದು ತುಂಬಾ ಕಷ್ಟವಾಗುತ್ತಿದೆ. ಹೀಗಾಗಿ ನಗರದ ಹೊರೆಗೆ ಸ್ಟೇಶನ್‌ ನಿರ್ಮಿಸಿರುವುದು ಸೂಕ್ತ.• ಪರಮೇಶಪ್ಪ ಸಿಂದಗಿ,ಬೆಂಗೇರಿ ನಿವಾಸಿ

 

•ಹೇಮರಡ್ಡಿ ಸೈದಾಪುರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ