ವರ್ಷದಲ್ಲಿ ರೈಲ್ವೆ ಮ್ಯೂಸಿಯಂಗೆ ಮೂರ್ತರೂಪ

•ಐತಿಹಾಸಿಕ ವೈಭವ ಪ್ರದರ್ಶನಕ್ಕೆ ಆಗಲಿದೆ ವೇದಿಕೆ•ರೈಲ್ವೆ ನಿಲ್ದಾಣ 2ನೇ ದ್ವಾರದ ಬಲಬದಿಯಲ್ಲೇ ನಿರ್ಮಾಣ

Team Udayavani, Jul 20, 2019, 9:56 AM IST

ಹುಬ್ಬಳ್ಳಿ: ಗದಗ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆಯ ಐತಿಹಾಸಿಕ ಪರಂಪರೆ ಸಾರುವ ಮ್ಯೂಸಿಯಂ ಸ್ಥಳ.

ಹುಬ್ಬಳ್ಳಿ: ರೈಲ್ವೆ ಇಲಾಖೆ ತನ್ನ ಪಾರಂಪರಿಕ ಐತಿಹಾಸಿಕ ಗತವೈಭವವನ್ನು ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ಮ್ಯೂಸಿಯಂವೊಂದನ್ನು ನಗರದಲ್ಲಿ ಸ್ಥಾಪಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೇ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆಗಳಿವೆ.

ಗದಗ ರಸ್ತೆ ರೈಲ್ವೆ ಕೇಂದ್ರೀಯ ಆಸ್ಪತ್ರೆ ಎದುರು, ರೈಲ್ವೆ ನಿಲ್ದಾಣಕ್ಕೆ ಸಾರ್ವಜನಿಕರ ಸಂಪರ್ಕ ಕಲ್ಪಿಸಲು ನಿರ್ಮಿಸಲಾಗುತ್ತಿರುವ 2ನೇ ದ್ವಾರದ ಬಲ ಬದಿಯಲ್ಲಿಯೇ ಅಂದಾಜು 53 ಮೀಟರ್‌ ಉದ್ದ, 65 ಮೀಟರ್‌ ಅಗಲವುಳ್ಳ ವಿಸ್ತೀರ್ಣದ ಜಾಗದಲ್ಲಿ ರೈಲ್ವೆ ಮ್ಯೂಸಿಯಂ ಸ್ಥಾಪಿಸಲಾಗುತ್ತಿದೆ.

ಮ್ಯೂಸಿಯಂ ನಿರ್ಮಾಣದ ಸಲುವಾಗಿ ಇಲಾಖೆಯ ಎರಡು ವಸತಿಗೃಹಗಳಲ್ಲಿದ್ದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲಿಯೇ ಪ್ರತ್ಯೇಕವಾಗಿ ಎರಡು ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಐತಿಹಾಸಿಕ ಚರಿತ್ರೆ, ಇಂಜಿನ್‌, ಬೋಗಿ, ಈ ಮೊದಲು ಸಿಗ್ನಲ್ಗೆ ಯಾವ ತಂತ್ರಜ್ಞಾನ ಬಳಸಲಾಗುತ್ತಿತ್ತು. ಹುಬ್ಬಳ್ಳಿ-ಧಾರವಾಡ, ಮೈಸೂರು ಮರಾಠಾ ರೈಲ್ವೆದಲ್ಲಿ ಏನೇನು ಬದಲಾವಣೆ ಆಯಿತು. ರೈಲ್ವೆಗೆ ಸಂಬಂಧಿಸಿದ ಎಲ್ಲ ಚಾರಿತ್ರಿಕತೆ ಸಂಗ್ರಹಿಸಿ ಪ್ರದರ್ಶನ ಮಾಡಲು ಇಲಾಖೆ ಸಿದ್ಧತೆ ನಡೆಸಿದೆ.

ಮ್ಯೂಸಿಯಂನಲ್ಲಿ ಏನೇನು ಇರಲಿದೆ: ರೈಲ್ವೆ ಇಲಾಖೆ ನಡೆದುಬಂದ ದಾರಿ ಕುರಿತು ಹಾಗೂ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಯಾವ ವರ್ಷ ಅಡಿಗಲ್ಲು ಸಮಾರಂಭ ನಡೆಯಿತು, ಯಾರು ನೆರವೇರಿಸಿದರು, ನಿಲ್ದಾಣ ಯಾವಾಗಿನಿಂದ ಆರಂಭವಾಯಿತು, ರೈಲ್ವೆ ಬೋಗಿಗಳ ನಿರ್ಮಾಣ ಕಾರ್ಯಾಗಾರ ಯಾವಾಗ ಕಾರ್ಯಾರಂಭವಾಯಿತು, ಇದರ ವಿಸ್ತೀರ್ಣವೆಷ್ಟು? ನ್ಯಾರೋ ಗೇಜ್‌ನಲ್ಲಿ ಓಡಾಡುತ್ತಿದ್ದ ರೈಲಿನ ಇಂಜಿನ್‌ ಹೇಗಿತ್ತು, ಬೋಗಿಗಳು ಹೇಗಿದ್ದವು, ನ್ಯಾರೋ ಗೇಜ್‌ನಿಂದ ಮೀಟರ್‌ ಗೇಜ್‌ ಯಾವಾಗ ಪರಿವರ್ತನೆಗೊಂಡಿತು, ನಂತರ ಮೀಟರ್‌ ಗೇಜ್‌ನಿಂದ ಬ್ರಾಡ್‌ಗೇಜ್‌ ಯಾವಾಗ ಪರಿವರ್ತನೆಗೊಂಡಿತು, ಈ ವೇಳೆ ಯಾವ್ಯಾವ ಉಪಕರಣಗಳನ್ನು ಬಳಸಲಾಗುತ್ತಿತ್ತು, ನೈಋತ್ಯ ರೈಲ್ವೆ ವಲಯ ಯಾವಾಗ ಸ್ಥಾಪನೆಯಾಯಿತು ಸೇರಿದಂತೆ ಇನ್ನಿತರೆ ಮಾಹಿತಿಗಳು ಮ್ಯೂಸಿಯಂನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿವೆ.

ಸದ್ಯ ನೈಋತ್ಯ ರೈಲ್ವೆ ವಲಯದಲ್ಲಿ ಬ್ರಾಡ್‌ಗೇಜ್‌ ವ್ಯವಸ್ಥೆ ಇದ್ದು. ಮೊದಲು ರೈಲ್ವೆ ಇತಿಹಾಸದಲ್ಲಿದ್ದ ನ್ಯಾರೋ ಗೇಜ್‌, ಮೀಟರ್‌ ಗೇಜ್‌ ಈಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅದರಲ್ಲೂ ಮಕ್ಕಳು ಹಾಗೂ ಯುವ ಜನಾಂಗಕ್ಕೆ ಇವುಗಳ ಬಗ್ಗೆ ತಿಳಿಸಲು ಇಲಾಖೆ ಮುಂದಾಗಿದೆ. ರಾಜ್ಯದ ಯಾವ ವಿಭಾಗದಲ್ಲೂ ಈಗ ನ್ಯಾರೋ ಗೇಜ್‌ ಇಂಜಿನ್‌ ಇಲ್ಲ. ಹೀಗಾಗಿ ಬೇರೆ ರಾಜ್ಯದಿಂದ ಲೋಕೋ ತರಿಸಲು ಯೋಜಿಸಿದೆ. ಅದನ್ನು ಮ್ಯೂಸಿಯಂನ ಆವರಣದ ಪ್ರವೇಶ ದ್ವಾರ ಬಳಿ ಪ್ರದರ್ಶನಕ್ಕೆ ಇಡಲಿದೆ. ಜೊತೆಗೆ ಆವರಣದ ಮ್ಯೂಸಿಯಂಗಳ ನಡುವಿನ ಜಾಗದಲ್ಲಿ ರೈಲ್ವೆ ಬೋಗಿಯೊಂದನ್ನು ಇಟ್ಟು ಅದನ್ನು ಥೇಟರ್‌ ರೀತಿ ಸಿದ್ಧಪಡಿಸಿ ಅದರಲ್ಲಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳುಳ್ಳ ಚಿತ್ರಪ್ರದರ್ಶನ ಮಾಡಲಿದೆ. ಇನ್ನೊಂದು ಬೋಗಿಯನ್ನು ಸಾಮಾನ್ಯ ರೆಸ್ಟೋರೆಂಟ್ ರೀತಿ ಸಿದ್ಧಪಡಿಸಲು ಯೋಜಿಸಿದೆ.

ಆಗ ಹೇಗಿತ್ತು? ಈಗ ಹೇಗಿದೆ?: ರೈಲ್ವೆಯ ಇತಿಹಾಸದಲ್ಲಿ ಧಾರವಾಡ, ಮೈಸೂರು, ಬೆಂಗಳೂರು ವಿಭಾಗದಲ್ಲಿ ಮೊದಲು ಯಾವ ವ್ಯವಸ್ಥೆ ಇತ್ತು. ನಿಲ್ದಾಣಗಳು ಹೇಗಿದ್ದವು. ಈಗ ಹೇಗೆ ಬದಲಾವಣೆ ಆಗಿದೆ ಎಂಬ ಕುರಿತ ಪುಸ್ತಕ, ವರದಿ, ಫೋಟೋ, ಚಿತ್ರಪ್ರದರ್ಶನ ಒಳಗೊಂಡು ರೈಲ್ವೆಗೆ ಸಂಬಂಧಿಸಿದ ಐತಿಹಾಸಿಕ ಮಾಹಿತಿಯು ಮ್ಯೂಸಿಯಂನಲ್ಲಿರಲಿದೆ. ಇದು ಮಕ್ಕಳು ಮತ್ತು ಯುವ ಜನಾಂಗ ಸೇರಿದಂತೆ ಪ್ರತಿಯೊಬ್ಬರಿಗೂ ರೈಲ್ವೆಯ ಗತವೈಭವದ ಕುರಿತು ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂಬುದು ಇಲಾಖೆ ಅಧಿಕಾರಿಗಳ ಚಿಂತನೆ.

ರೈಲ್ವೆಯ ಐತಿಹಾಸಿಕ ಗತವೈಭವಗಳನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಇಲಾಖೆಯು ಗದಗ ರಸ್ತೆಯ ಕೇಂದ್ರೀಯ ರೈಲ್ವೆ ಆಸ್ಪತ್ರೆ ಎದುರು ರೈಲ್ವೆ ಮ್ಯೂಸಿಯಂ ಸ್ಥಾಪಿಸಲು ಯೋಜಿಸಿದೆ. ಈಗಾಗಲೇ ಅದರ ಕಾಮಗಾರಿ ನಡೆದಿದೆ. ಹೊರ ರಾಜ್ಯದಿಂದ ನ್ಯಾರೋ ಗೇಜ್‌ನ ಎಂಜಿನ್‌ ಸಹ ತರಿಸಲು ಸಿದ್ಧತೆಗಳು ನಡೆದಿವೆ. ಪ್ರಸಕ್ತ ರೈಲ್ವೆ ಆರ್ಥಿಕ ವರ್ಷದೊಳಗೆ ಮ್ಯೂಸಿಯಂ ಕೆಲಸ ಪೂರ್ಣಗೊಳ್ಳಲಿದೆ.•ಇ. ವಿಜಯಾ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೈಋತ್ಯ ರೈಲ್ವೆ ವಲಯ

 

•ಶಿವಶಂಕರ ಕಂಠಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ