ಕಿಮ್ಸ್‌ ನಿರ್ದೇಶಕ ಹುದ್ದೆಗೆ ತೀವ್ರ ಪೈಪೋಟಿ

Team Udayavani, Nov 20, 2019, 11:50 AM IST

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರತಿಷ್ಠಿತ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಯ ಕಾಯಂ ನಿರ್ದೇಶಕ ಹುದ್ದೆಗಾಗಿ ತೀವ್ರ ಪೈಪೋಟಿ ನಡೆದಿದ್ದು, ಒಟ್ಟು 14 ವೈದ್ಯರು ಅರ್ಜಿ ಸಲ್ಲಿಸಿದ್ದಾರೆ. ಇವುಗಳ ಪರಿಶೀಲನೆಯು ಮಂಗಳವಾರ ಮುಗಿದಿದ್ದು, ಕೆಲವೇ ದಿನಗಳಲ್ಲಿ ನೂತನ ನಿರ್ದೇಶಕರ ನೇಮಕಾತಿ ಆಗುವ ಸಾಧ್ಯತೆಗಳಿವೆ.

ಅರ್ಜಿ ಪರಿಶೀಲನಾ ಸಮಿತಿ ಸದಸ್ಯರಾದ ರಾಜೀವ ಗಾಂಧಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಲಿಂಗೇಗೌಡ, ಬೆಂಗಳೂರು ಮೆಡಿಕಲ್‌ ಕಾಲೇಜಿನ ಪ್ರಾಂಶುಪಾಲ ಡಾ| ರಮೇಶ ಕೃಷ್ಣ ಹಾಗೂ ಕಿಮ್ಸ್‌ನ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಅವರು ಮಂಗಳವಾರ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಿದರು.

ಆಯ್ಕೆ ಪ್ರಕ್ರಿಯೆ ಹೇಗೆ?: ಅರ್ಜಿ ಪರಿಶೀಲನಾ ಸಮಿತಿಯ ಮೂವರು ಸದಸ್ಯರು ನ. 20ರಂದು ಬೆಳಗ್ಗೆ ವೈದ್ಯಕೀಯ ಶಿಕ್ಷಣ ಇಲಾಖೆ (ಡಿಎಂಇ)ಯ ನಿರ್ದೇಶಕರಿಗೆ ಸಲ್ಲಿಸಲಿದ್ದಾರೆ. ನಂತರ ಆಯ್ಕೆ ಸಮಿತಿಯು ಅರ್ಜಿಗಳನ್ನು ಮರು ಪರಿಶೀಲನೆ ನಡೆಸಲಿದೆ.

ಆನಂತರ ಅರ್ಹ ಅರ್ಜಿದಾರರನ್ನು ಸಂದರ್ಶನಕ್ಕೆ ಆಹ್ವಾನಿಸಲಿದೆ. ಈ ಸಂದರ್ಭದಲ್ಲಿ ಅಗ್ರ ಐವರನ್ನು ಆಯ್ಕೆ ಮಾಡಲಿದೆ. ಆ ಬಳಿಕ ಆಡಳಿತ ಪರಿಷತ್‌ (ಗವರ್ನಿಂಗ್‌ ಕೌನ್ಸಿಲ್‌)ನ ಅಧ್ಯಕ್ಷರಾದ ವೈದ್ಯಕೀಯ ಶಿಕ್ಷಣ ಸಚಿವರ ಸಮ್ಮುಖದಲ್ಲಿ ಅಂತಿಮವಾಗಿ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ. ಕಿಮ್ಸ್‌ ನಿರ್ದೇಶಕರ ಕಾಯಂ ಹುದ್ದೆಯನ್ನು ಎಂಸಿಐ ನಿಯಮಾವಳಿ ಹಾಗೂ ಕಿಮ್ಸ್‌ ಸಂಸ್ಥೆಯ ಬೈಲಾಗಳನ್ನು ಪರಿಗಣಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆದರೆ ನಿರ್ದೇಶಕರ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದ 14 ಜನರಲ್ಲಿಒಂದಿಬ್ಬರು 58 ವರ್ಷ ಮೀರಿದ್ದಾರೆ ಹಾಗೂ ಕೆಲವರು ಜ್ಯೇಷ್ಠತೆಯ ಅರ್ಹತೆ ಹೊಂದಿಲ್ಲವೆಂಬ ಮಾತುಗಳು ಕೇಳಿಬರುತ್ತಿವೆ.

ರಾಜ್ಯದಲ್ಲಿ ಸದ್ಯ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿರುವುದರಿಂದ ವೈದ್ಯಕೀಯ ಶಿಕ್ಷಣ ಸಚಿವರ ಲಭ್ಯತೆ ಮೇಲೆ ಕಿಮ್ಸ್‌ನ ನಿರ್ದೇಶಕರ ನೇಮಕಾತಿಯು ನಿರ್ಧರಿತವಾಗಿದೆ. ಒಂದು ವೇಳೆ ಸಚಿವರು ಚುನಾವಣೆಯ ಪ್ರಚಾರದಲ್ಲಿಯೇ ಬಿಡುವು ಮಾಡಿಕೊಂಡು ಕಿಮ್ಸ್‌ಗೆ ನೂತನ ನಿರ್ದೇಶಕರನ್ನು ನೇಮಕ ಮಾಡಲು ಮುಂದಾದರೆ ತಿಂಗಳಾಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡು ಕಿಮ್ಸ್‌ಗೆ ನೂತನ ನಿರ್ದೇಶಕರು ನಿಯುಕ್ತಿಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಕಿಮ್ಸ್‌ನ ನಿರ್ದೇಶಕರ ಕಾಯಂ ಹುದ್ದೆಗಾಗಿ 14 ಜನರು ಅರ್ಜಿ ಸಲ್ಲಿಸಿದ್ದಾರೆ. ಮೂರು ಸದಸ್ಯರುಳ್ಳ ಅರ್ಜಿ ಪರಿಶೀಲನಾ ಸಮಿತಿಯಿಂದ ಮಂಗಳವಾರ ಅರ್ಜಿದಾರರ ದಾಖಲೆಗಳನ್ನು ಪರಿಶೀಲಿಸಲಾಯಿತು. ನ. 20ರಂದು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಸಲ್ಲಿಸಲಾಗುವುದು. ಆನಂತರ ನೇಮಕಾತಿ ಸಮಿತಿಯು ಮುಂದಿನ ಪ್ರಕ್ರಿಯೆ ನಡೆಸಿ ಅರ್ಹ ಅರ್ಜಿದಾರರನ್ನು ಸಂದರ್ಶನಕ್ಕೆ ಆಹ್ವಾನಿಸಲಿದೆ. ಅಂತಿಮವಾಗಿ ಆಡಳಿತ ಪರಿಷತ್‌ ನಿರ್ದೇಶಕರನ್ನು ನೇಮಕಾತಿ ಮಾಡಲಿದೆ. -ರಾಜಶ್ರೀ ಜೈನಾಪುರ, ಮುಖ್ಯ ಆಡಳಿತಾಧಿಕಾರಿ, ಕಿಮ್ಸ್‌

 

-ಶಿವಶಂಕರ ಕಂಠಿ


ಈ ವಿಭಾಗದಿಂದ ಇನ್ನಷ್ಟು

  • ಹುಬ್ಬಳ್ಳಿ:ಹೈದರಾಬಾದ್‌ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿನ ಆರೋಪಿತರ ಮೇಲೆ ನಡೆಸಿದ ಎನ್‌ಕೌಂಟರ್‌ ಹೀನ ಕೃತ್ಯ ಎಸಗುವ ಕ್ರಿಮಿನಲ್‌ಗ‌ಳಿಗೆ ಎಚ್ಚರಿಕೆಯ ಗಂಟೆಯಾಗಿದೆ...

  • ಹುಬ್ಬಳ್ಳಿ: ತಾಲೂಕಿನಾದ್ಯಂತ ಮಳೆಗೆ ಎಲ್ಲ ರಸ್ತೆಗಳು ಹಾಳಾಗಿದ್ದು, ಸಮರ್ಪಕ ದುರಸ್ತಿ ಕಾರ್ಯ ಕೈಗೊಳ್ಳದ ಬಗ್ಗೆ ತಾಪಂ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು. ಗುರುವಾರ...

  • ಹುಬ್ಬಳ್ಳಿ: ಕಂಡರಿಯದ ದರ ಇದ್ದರೂ ನೀಡುವುದಕ್ಕೆ ಉಳ್ಳಾಗಡ್ಡಿಯೇ ಇಲ್ಲವಲ್ಲ ಎಂದು ರೈತ ಸಂಕಷ್ಟ ಪಡುತ್ತಿದ್ದರೆ, ಗಂಟೆಗೊಮ್ಮೆ ಹೆಚ್ಚುತ್ತಿರುವ ಉಳ್ಳಾಗಡ್ಡಿ...

  • ಧಾರವಾಡ: ನಲವತ್ತೆರಡು ಎಕರೆ ವ್ಯಾಪ್ತಿಯ ಕೆರೆಯ ತುಂಬೆಲ್ಲಾ ಬರೀ ಚರಂಡಿ ನೀರಿನ ಗಬ್ಬು ನಾತ. ಈ ಚರಂಡಿ ನೀರಿನಲ್ಲಿಯೇ ಆವರಿಸಿದೆ ಕಸ-ಕಳೆ. ಎಕರೆಯಷ್ಟು ಕೆರೆಯ ಒತ್ತುವರಿ....

  • ಧಾರವಾಡ: ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಬಳಕೆಯಾಗುವ ಒಟ್ಟು 58 ವಾದ್ಯಗಳ ಪೈಕಿ 48 ವಾದ್ಯಗಳು ರೂಪುಗೊಳ್ಳುವ ಮರಗಳ ಸಸಿಗಳನ್ನು, ಹಳ್ಳಿಗೇರಿಯ ನೇಚರ್‌...

ಹೊಸ ಸೇರ್ಪಡೆ