ಮಹದಾಯಿ ಚಳವಳಿಗೆ ನಾಲ್ಕು ವರ್ಷ

Team Udayavani, Jul 16, 2019, 8:55 AM IST

ನರಗುಂದ: ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ಮತ್ತು ಕಳಸಾ-ಬಂಡೂರಿ ಚಳವಳಿ ನಾಲ್ಕು ವರ್ಷ ಪೂರೈಸಿದೆ. ನ್ಯಾಯಾಧೀಕರಣ ಹಂಚಿಕೆ ಮಾಡಿದರೂ ಮಲಪ್ರಭೆ ಒಡಲು ತುಂಬದ ಮಹದಾಯಿ. ಕಿವುಡು ಸರ್ಕಾರಗಳೆದುರು ಮೂಕ ವೇದನೆಯೊಂದಿಗೆ ಮಲಪ್ರಭೆ ಮಕ್ಕಳ ಕೂಗು 5ನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ.

ಐದು ದಶಕಗಳ ಬೇಡಿಕೆಯ ಮಹದಾಯಿ ಮಲಪ್ರಭೆ ಜೋಡಣೆಗೆ 2015 ಜು.16ರಂದು ವಿವಿಧ ಸಂಘಟನೆಗಳೊಂದಿಗೆ ರೈತ ಸೇನಾ- ಕರ್ನಾಟಕ ಪಟ್ಟಣದ ಹೆದ್ದಾರಿ ಬದಿಗಿರುವ ಹುತಾತ್ಮ ರೈತ ದಿ.ಈರಪ್ಪ ಕಡ್ಲಿಕೊಪ್ಪರ ವೀರಗಲ್ಲಿನ ಎದುರು ವೇದಿಕೆ ನಿರ್ಮಿಸಿ ನಿರಂತರ ಚಳವಳಿ ಪ್ರಾರಂಭಿಸಿತು. ಮಹದಾಯಿ ನದಿಯಲ್ಲಿ ರಾಜ್ಯದ ಪಾಲು, ಕಳಸಾ-ಬಂಡೂರಿ ನಾಲೆಗಳ 7.56 ಟಿಎಂಸಿ ಅಡಿ ನೀರಿನ ಬೇಡಿಕೆಯೊಂದಿಗೆ ಬೆರಳೆಣಿಕೆ ರೈತರಿಂದ ಚಾಲನೆ ಪಡೆದ ಈ ಹೋರಾಟದ ಮಹತ್ವ, ಉದ್ದೇಶ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಜಾಗೃತಿ ಮೂಡಿಸಿತು. ದಿನದಿಂದ ದಿನಕ್ಕೆ ಕಾವು ಪಡೆದು ದಿನ ಕಳೆದಂತೆ ಮಣ್ಣಿನ ಮಕ್ಕಳು ಸಮರೋಪಾದಿಯಲ್ಲಿ ಸಾಗಿಬಂದು ಹೋರಾಟದ ಸ್ವರೂಪವನ್ನೇ ಬದಲಿಸಿದ್ದು ದಾಖಲಾರ್ಹ ಚಳವಳಿ ಎನಿಸಿಕೊಂಡಿತು.

ಜನಾಂದೋಲನ ಸ್ವರೂಪ: ಚಳವಳಿ ಗಂಭೀರವಾದಂತೆ ರೈತರ ಕೂಗಿಗೆ ಎಚ್ಚೆತ್ತ ಕ್ಷೇತ್ರದ ಹಾಲಿ ಶಾಸಕ ಸಿ.ಸಿ. ಪಾಟೀಲ, ಮಾಜಿ ಶಾಸಕ ಬಿ.ಆರ್‌.ಯಾವಗಲ್ಲ ಜಂಟಿಯಾಗಿ ವೇದಿಕೆಯೇರಿ ರೈತ ಸಮುದಾಯಕ್ಕೆ ನೈತಿಕ ಬೆಂಬಲ ನೀಡಿದ್ದರಿಂದ ಚಳವಳಿ ಜನಾಂದೋಲನ ಸ್ವರೂಪ ಪಡೆಯಿತು.

ಹೋರಾಟ ಕಾವು ಪಡೆಯುತ್ತಿದ್ದಂತೆ ಅತ್ತ ನವಲಗುಂದ, ರಾಮದುರ್ಗ, ಸವದತ್ತಿ, ಅಣ್ಣಿಗೇರಿ, ಬೈಲಹೊಂಗಲ, ಹುಬ್ಬಳ್ಳಿ, ಧಾರವಾಡಗಳಲ್ಲೂ ವೇದಿಕೆ ಹುಟ್ಟಿಕೊಂಡವು. ರಾಜ್ಯ, ಕೇಂದ್ರ ಸರ್ಕಾರಗಳಿಗೆ ಬಿಸಿ ತುಪ್ಪವಾದ ಹೋರಾಟ ವೇದಿಕೆಗಳು ಕೆಲವೆಡೆ ಸಂಪನ್ನವಾದರೂ ಬಂಡಾಯ ನಾಡು ಖ್ಯಾತಿಯ ನರಗುಂದ ವೇದಿಕೆ ಮಾತ್ರ 4 ವರ್ಷಗಳಿಂದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ ಹೋರಾಟದ ಹಾದಿ ಸ್ಮರಣೀಯ.

‘ಪಕ್ಷಾತೀತ ಹೋರಾಟ’ ಎಂಬ ಹಣೆಪಟ್ಟಿ ಕಟ್ಟಿಕೊಂಡು ನಾಡಿನ ಎಲ್ಲ ರಾಜಕೀಯ ಪಕ್ಷಗಳು, ಕನ್ನಡಪರ, ರೈತಪರ ನೂರಾರು ಸಂಘಟನೆಗಳು, ನಾಡಿನಾದ್ಯಂತ ಮಠಾಧಿಧೀಶರ ಬೆಂಬಲ ಪಡೆದು ಏಳು ಬೀಳುಗಳ ಮಧ್ಯೆ ಚಳವಳಿ ನರಗುಂದ ಇತಿಹಾಸದಲ್ಲೇ ಕಂಡರಿಯದ ರೀತಿಯಲ್ಲಿ ಹೆಜ್ಜೆಯಿಟ್ಟಿದ್ದು ಗಮನಾರ್ಹ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಮೂರೂ ಪಕ್ಷಗಳ ರೈತ ವಿರೋಧಿ ನೀತಿಗೆ ಈ ಹೋರಾಟ ಇಂದಿಗೂ ಸಾಕ್ಷಿಯಾಗಿದೆ.

ವರ್ಷದುದ್ದಕ್ಕೂ ನಿರಂತರ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್‌, ಧರಣಿ, ಪ್ರತಿಭಟನೆ ಸೇರಿ ಒಂದು ಹೋರಾಟದಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ಮೀರಿ ಎಲ್ಲ ಹಂತದ ಹೋರಾಟಕ್ಕೆ ಸಾಕ್ಷಿಯಾದ ಮಹದಾಯಿ ಚಳವಳಿಯನ್ನು ಬೆಂಬಲಿಸಿ ಹಿಂದೆ ಸರಿದ ರಾಜಕೀಯ ನಾಯಕರ ಭವಿಷ್ಯವನ್ನು ನಿರ್ಧರಿಸುವ ಮಟ್ಟಕ್ಕೆ ಚಳವಳಿ ಬೆಳೆದು ನಿಂತಿದೆ.

ಸನ್ಯಾಸ ದೀಕ್ಷೆ: ಹೋರಾಟ ಹುಟ್ಟುಹಾಕಿದ ರೈತ ಸೇನಾ ಕರ್ನಾಟಕ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ 2016 ಅ.17ರಂದು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ಮಹತ್ವದ ಘಟ್ಟಗಳಲ್ಲಿ ಒಂದು. ಸುದೀರ್ಘ‌ 4 ವರ್ಷ ಕಳೆದರೂ ಹೋರಾಟಕ್ಕೆ ಜಯ ತಂದುಕೊಡುವಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಧೋರಣೆ ಆಕ್ರೋಶದ ಅಲೆ ಹುಟ್ಟಿಸಿದೆ.

ಇಂದು ನರಗುಂದ ಬಂದ್‌: ಜು. 16ರಂದು ಮಹದಾಯಿ ಹೋರಾಟ 4 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೆ ನರಗುಂದ ಬಂದ್‌ ಕರೆ ನೀಡಲಾಗಿದೆ. ಪಟ್ಟಣದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಬೇರೆ ತಾಲೂಕುಗಳಿಂದ ಪೊಲೀಸರನ್ನು ನಿಯೋಜಿಸಲಾಗಿದೆ.

 

•ಸಿದ್ಧಲಿಂಗಯ್ಯ ಮಣ್ಣೂರಮಠ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ