ತೊಟ್ಟಿಲು ತೂಗಲು ಕೈ-ಕಮಲ ಸೆಣಸಾಟ

Team Udayavani, Apr 27, 2019, 11:00 AM IST

ಧಾರವಾಡ: ಬಣ್ಣದ ತೊಟ್ಟಿಲಿನ ತವರು ಎಂದೇ ಹೆಸರು ಪಡೆದುಕೊಂಡ ಕಲಘಟಗಿ ಕ್ಷೇತ್ರದಲ್ಲಿ ಇದೀಗ ಲೋಕಸಭೆ ಚುನಾವಣೆಯಲ್ಲಿ ಯಾರು ಮುಂದಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿ ನಡೆದಿದ್ದು, ಕೈ-ಕಮಲ ಪಡೆ ನಾ ಮುಂದು, ತಾ ಮುಂದು ಎನ್ನುತ್ತಿವೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಬಲಾಬಲದ ಕೋಟೆಯಾಗಿ ಮಾರ್ಪಟ್ಟಿದ್ದ ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕೈ-ಕಮಲ ಪಾಳೆಯ ಬಿರುಸಿನ ಸೆಣಸಾಟ ನಡೆಸಿದ್ದು, ಇಲ್ಲಿ ಯಾರಿಗೆ ಮತದಾರ ಹೆಚ್ಚು ಮುನ್ನಡೆ ಕಲ್ಪಿಸಲಿದ್ದಾನೆ ಎನ್ನವ ಚರ್ಚೆ ಕ್ಷೇತ್ರದ ಹಳ್ಳಿ, ಪಟ್ಟಣಗಳಲ್ಲಿ ರಿಂಗಣಿಸುತ್ತಿದೆ.

ಸದಾ ಹೊರಗಿನಿಂದ ಬಂದವರೇ ಆಳ್ವಿಕೆ ಮಾಡುವುದಕ್ಕೆ ಹೆಸರಾಗಿದ್ದ ಈ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಸಿ.ಎಂ. ನಿಂಬಣ್ಣವರ 26 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಕ್ಷೇತ್ರವೆಲ್ಲ ಕೇಸರೀಕರಣಗೊಂಡಿತ್ತು. ಆದರೆ ಯಾವಾಗ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಟಿಕೆಟ್ ಸಿಕ್ಕಿತೋ ಅಲ್ಲಿಗೆ ಶುರುವಾಯಿತು ನಿಜವಾದ ಕಾಳಗ.

ಏನಾಗಿದೆ ಚುನಾವಣೆಯಲ್ಲಿ?: 2014ರ ಲೋಕಸಭೆ ಚುನಾವಣೆಯಲ್ಲಿ ಬರೋಬ್ಬರಿ 75 ಸಾವಿರ ಮತಗಳನ್ನು ಬಾಚಿಕೊಂಡಿದ್ದ ಬಿಜೆಪಿ ಈ ಬಾರಿಯೂ ಇಲ್ಲಿ ಹೆಚ್ಚಿನ ಮತ ಗಳಿಕೆಗೆ ಎಲ್ಲ ಕಸರತ್ತು ಮಾಡಿದೆ. ಆರೆಸ್ಸೆಸ್‌ ಮತ್ತು ಸಂಘ ಪರಿವಾರದ ಬೆಂಬಲ, ಮೋದಿ ಸಾಧನೆಗಳನ್ನು ಮುಂದಿಟ್ಟುಕೊಂಡೇ ಇಲ್ಲಿ ಬಿಜೆಪಿಗರು ಮತ ಕೇಳಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರಿಗಿಂತ ಇಲ್ಲಿ ಮೋದಿಯೇ ಹೆಚ್ಚು ಪ್ರಸ್ತುತವಾಗಿ ಚುನಾವಣೆ ನಡೆದಿರುವುದು ಗೋಚರಿಸುತ್ತಿದೆ.

ನಿಗದಿ, ಮುಗದ, ದೇವಿಕೊಪ್ಪ, ಮಡಕಿಹೊನ್ನಳ್ಳಿ, ಮಿಶ್ರಿಕೋಟಿ, ಹುಲಕೊಪ್ಪ ಸೇರಿದಂತೆ ಎಲ್ಲಾ ಜಿಪಂ ಕ್ಷೇತ್ರಗಳಲ್ಲೂ ಕೈ ಮತ್ತು ಕಮಲದ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಅಷ್ಟೇಯಲ್ಲ, ಧಾರವಾಡ ತಾಲೂಕಿನ 35ಕ್ಕೂ ಅಧಿಕ ಹಳ್ಳಿಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರಿಗೆ ಇಂದಿಗೂ ಹಿಡಿತವಿದ್ದು, ಇದು ಬಿಜೆಪಿಗೆ ಕೊಂಚ ಮಾರಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ (2018)ಇಲ್ಲಿ ಬಿಜೆಪಿ 80 ಸಾವಿರ ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್‌ 57 ಸಾವಿರ ಮತಗಳನ್ನು ಮಾತ್ರ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರೊಂದಿಗೆ ಈ ಕ್ಷೇತ್ರದ ಜನರ ಒಡನಾಟ ಹೆಚ್ಚಾಗಿದ್ದು, ಇದೀಗ ಪಕ್ಷಭೇದ ಮರೆತು ವ್ಯಕ್ತಿ ಆಧಾರಿತವಾಗಿಯೇ ಈ ಕ್ಷೇತ್ರದ ಜನರು ಮತ ಹಾಕಿದ್ದು, ಇದರ ಫಲಿತಾಂಶ ಮೇ 23ಕ್ಕೆ ತಿಳಿಯಲಿದೆ.

ಇನ್ನು ಅಳ್ನಾವರ, ಕಲಘಟಗಿ ಎರಡು ಪ್ರಮುಖ ಪಟ್ಟಣದಲ್ಲಿ ಕಾಂಗ್ರೆಸ್‌ ಕೊಂಚ ಮುನ್ನಡೆ ಕಾಯ್ದುಕೊಳ್ಳುವ ಸಾಧ್ಯತೆ ಇದ್ದು, ದೇವರಹುಬ್ಬಳ್ಳಿ, ಮಡಕಿಹೊನ್ನಳ್ಳಿಯಂತಹ ದೊಡ್ಡ ಗ್ರಾಮಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ದೇವಿಕೊಪ್ಪ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಕೈ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದ್ದನ್ನು ಮರೆಯುವಂತಿಲ್ಲ.

ಆರೆಸ್ಸೆಸ್‌ ವರ್ಸಸ್‌ ಲಿಂಗಾಯತ: ಇಡೀ ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಲಘಟಗಿ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿದೆ. ಇಲ್ಲಿ ಒಳಹೊಡೆತವನ್ನು ಎರಡೂ ಪಕ್ಷಗಳ ಅಭ್ಯರ್ಥಿಗಳು ಮಾಡಿರುವುದು, ಇದೀಗ ಕಟ್ಟೆ ಪುರಾಣದಲ್ಲಿ ಹಳ್ಳಿಗರ ಬಾಯಿಂದಲೇ ಕೇಳಿ ಬರುತ್ತಿದೆ. ಬಿಜೆಪಿ ಪಾಳೆಯ ಇಲ್ಲಿ ಆರೆಸ್ಸೆಸ್‌ ಕಾರ್ಯಕರ್ತರ ಪಡೆಯನ್ನು ಗುಪ್ತವಾಗಿಯೇ ಬಳಸಿಕೊಂಡು ಪಕ್ಷದ ಪರ ಮತ ನೀಡುವಂತೆ ಮತದಾರರ ಮನೆ ಮತ್ತು ಮನ ತಲುಪಲು ಯತ್ನಿಸಿದೆ. ಇದೇ ವೇಳೆ ಕೈ ಪಾಳೆಯ ಇದೊಂದು ಬಾರಿ ಲಿಂಗಾಯತ ಸಮುದಾಯದ ವ್ಯಕ್ತಿ ಚುನಾವಣೆ ಕಣದಲ್ಲಿದ್ದು ಅವರಿಗೆ ಮತ ನೀಡಬೇಕು ಎಂದು ಪ್ರಚಾರ ಮಾಡಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಆರೆಸ್ಸೆಸ್‌ ಮತ್ತು ಲಿಂಗಾಯತ ಎರಡೂ ಸಿದ್ಧಾಂತಗಳು ಗುಪ್ತಗಾಮಿನಿಯಾಗಿ ಕೆಲಸ ಮಾಡಿದ್ದಂತೂ ಸತ್ಯ.

ಕಲಘಟಗಿ ಕ್ಷೇತ್ರದಲ್ಲಿ ಶಾಸಕ ಸಂತೋಷ ಲಾಡ್‌ 2013ರಲ್ಲಿ ಏಕಾಂಗಿಯಾಗಿ 75 ಸಾವಿರ ಮತಗಳನ್ನು ಪಡೆದುಕೊಂಡಿದ್ದರು. ಅಲ್ಲಿ ಬಿಜೆಪಿಗೆ ಬರೀ 6 ಸಾವಿರ ಮತಗಳು ಸಿಕ್ಕಿದ್ದವು. 2014ರ ಲೋಕಸಭೆಯಲ್ಲಿ ಬಿಜೆಪಿ ಇಲ್ಲಿ ಬರೋಬ್ಬರಿ 65 ಸಾವಿರ ಮತಗಳನ್ನು ಬಾಚಿದೆ. ಅಂದರೆ ಜೋಷಿ ಗೆಲುವಿನ ಅಂತರದ ಶೇ.50 ಮತಗಳು ಇದೊಂದೇ ಕ್ಷೇತ್ರದಿಂದ ಮರಳಿ ಬಿಜೆಪಿಗೆ ತರುವಲ್ಲಿ ಕಮಲ ಪಾಳೆಯ ಯಶಸ್ವಿಯಾಗಿತ್ತು.

ಈ ಬಾರಿ ಖಂಡಿತವಾಗಿಯೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪಕ್ಷದ ಅಭ್ಯರ್ಥಿ ವಿನಯ್‌ ಕುಲಕರ್ಣಿ ಅವರೇ ಜಯ ಗಳಿಸುತ್ತಾರೆ. ಅವರು ಮಾಡಿದ ಕೆಲಸ ಮತ್ತು ಜನರೊಂದಿಗಿನ ಒಡನಾಟ ಕೈ ಹಿಡಿಯಲಿದ್ದು, ಕಲಘಟಗಿ ಕ್ಷೇತ್ರದಲ್ಲಿ 25 ಸಾವಿರಕ್ಕೂ ಮತಗಳ ಮುನ್ನಡೆಯನ್ನು ಕಾಂಗ್ರೆಸ್‌ ಕಾಯ್ದುಕೊಳ್ಳಲಿದೆ.

•ಮಲ್ಲನಗೌಡ ಪಾಟೀಲ, ಕಾಂಗ್ರೆಸ್‌ ಮುಖಂಡ

ಕಳೆದ ಚುನಾವಣೆಗಳು ಪಕ್ಷಾಧಾರಿತವಾಗಿ ನಡೆದಿದ್ದು ಸತ್ಯ. ಈ ಬಾರಿ ವ್ಯಕ್ತಿ ಆಧಾರಿತ ಚುನಾವಣೆ ನಮ್ಮ ಕ್ಷೇತ್ರದಲ್ಲಿ ಆಗಿದೆ. ಇಲ್ಲಿ ಮೋದಿ ಮತ್ತು ವಿನಯ್‌ ಕುಲಕರ್ಣಿ ಅವರು ನೇರ ಸ್ಪರ್ಧಿಗಳು. ಎರಡೂ ಪಕ್ಷಗಳ ಮಧ್ಯೆ ಸಂಘರ್ಷ ನಡೆದಿದ್ದಂತೂ ಸತ್ಯ. ಗೆಲುವು ಯಾರದು ಎಂದು ಮೊದಲೇ ಹೇಳಲು ಸಾಧ್ಯವಿಲ್ಲ.

•ಗುರುಸಿದ್ದಪ್ಪ ಟೊಂಗಳಿ, ದೇವಿಕೊಪ್ಪ ನಿವಾಸಿ

ಈ ಕ್ಷೇತ್ರದಲ್ಲಿ ಕುಡಿವ ನೀರು, ನೀರಾವರಿಗೆ ನೀರಿನ ಪೂರೈಕೆ ಸೇರಿದಂತೆ ಅನೇಕ ಜ್ವಲಂತ ಸಮಸ್ಯೆಗಳು ದಶಕಗಳಿಂದ ಜನರನ್ನು ಬಾಧಿಸುತ್ತಿವೆ. ಚುನಾವಣೆ ಸಂದರ್ಭದಲ್ಲಿ ಇವುಗಳ ಆಧಾರದ ಮೇಲೆ ಮತ ಚಲಾವಣೆ ಆಗುತ್ತಿಲ್ಲ. ಬದಲಿಗೆ ಸಿದ್ದಾಂತ, ವ್ಯಕ್ತಿ ಆಧಾರಿತ ಮತ ಚಲಾವಣೆಯೇ ನಡೆಯುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ. ಇಲ್ಲಿ ಸಣ್ಣ ಉದ್ಯಮಗಳಿಲ್ಲ, ವಾಣಿಜ್ಯ ಚಟುವಟಿಕೆಗಳು ಇಲ್ಲ. ಈ ಕ್ಷೇತ್ರದ ಜನರು ಇಂದಿಗೂ ಕೂಲಿ, ಉದ್ಯೋಗಕ್ಕೆ ಹುಬ್ಬಳ್ಳಿ-ಧಾರವಾಡ ನಗರವನ್ನೇ ಅವಲಂಬಿಸಿ ಬದುಕುತ್ತಿದ್ದಾರೆ.
2013ರ ವಿಧಾನಸಭೆ ಚುನಾವಣೆ ಬಲಾಬಲಕಾಂಗ್ರೆಸ್‌: 75,769ಕೆಜೆಪಿ: 34,760 ಬಿಜೆಪಿ: 65702014ರ ಲೋಕಸಭೆ ಚುನಾವಣೆ ಬಲಾಬಲ ಕಾಂಗ್ರೆಸ್‌: 65,439ಬಿಜೆಪಿ: 39,7682018ರ ವಿಧಾನಸಭೆ ಚುನಾವಣೆ ಬಲಾಬಲ ಬಿಜೆಪಿ: 83,267ಕಾಂಗ್ರೆಸ್‌: 57,2202019ರ ಲೋಕಸಭೆ ಚುನಾವಣೆ ಬಲಾಬಲ ಒಟ್ಟು ಮತ ಚಲಾಯಿಸಿದ ಮತದಾರರು: 1,46,561ಕಾಂಗ್ರೆಸ್‌-ಬಿಜೆಪಿ ಸಮಬಲದ ಕಾದಾಟ?

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ