ಮಹದಾಯಿ ಅಧಿಸೂಚನೆಗೆ ಸಂತಸ

Team Udayavani, Jul 13, 2019, 1:17 PM IST

ನರಗುಂದ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಗೆ ಒತ್ತಾಯಿಸಿ ಹಮ್ಮಿಕೊಂಡ ನಿರಂತರ ಸತ್ಯಾಗ್ರಹದಲ್ಲಿ ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಮಾತನಾಡಿದರು.

ನರಗುಂದ: ಕಳೆದ ನಾಲ್ಕು ವರ್ಷಗಳಿಂದ ಜೀವ ಜಲಕ್ಕಾಗಿ ನಿರಂತರ ರೈತರು ಹೋರಾಟ ಮಾಡುತ್ತಲೇ ಬಂದಿದ್ದರೂ ಸರ್ಕಾರಗಳ ಅಸಡ್ಡೆ ಧೋರಣೆ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಈ ಮಧ್ಯೆ ಮಹದಾಯಿ ಯೋಜನೆ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ ಅಧಿಸೂಚನೆ ಹೊರಡಿಸುವ ಚಿಂತನೆ ನಡೆದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ ಹೇಳಿದರು.

ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ 1457ನೇ ದಿನ ನಿರಂತರ ಸತ್ಯಾಗ್ರಹ ವೇದಿಕೆಯಲ್ಲಿ ಮಾತನಾಡಿದ ಅವರು, ಈಗಲಾದರೂ ಅಧಿಸೂಚನೆ ಹೊರಡಿಸುವ ಚಿಂತನೆ ನಡೆಸಿದ್ದು, ಹೋರಾಟದ ಹಾದಿಯಲ್ಲಿ ರೈತರು ತುಸು ನೆಮ್ಮದಿ ಪಡುವಂತಾಗಿದೆ ಎಂದರು.

ದುರ್ದೈವದ ಸಂಗತಿಯೆಂದರೆ ಮಹದಾಯಿ ನ್ಯಾಯಾಧೀಕರಣ ನದಿ ನೀರು ಹಂಚಿಕೆ ಮಾಡಿ ವರ್ಷ ಗತಿಸುತ್ತ ಬಂದರೂ ಇದುವರೆಗೆ ಮಹದಾಯಿ ನೀರು ಮಲಪ್ರಭೆಯ ಒಡಲು ಸೇರುತ್ತಿಲ್ಲ. ಆದರೆ ಮಹದಾಯಿ ಮತ್ತು ಕಳಸಾ-ಬಂಡೂರಿ ನೀರು ಮಲಪ್ರಭೆ ಸೇರುವವರೆಗೂ ಈ ಹೋರಾಟ ಅಚಲ ಎಂದು ರಾಘವೇಂದ್ರ ಗುಜಮಾಗಡಿ ಸ್ಪಷ್ಟಪಡಿಸಿದರು.

ನರಗುಂದ ಬಂದ್‌: ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಕಾರ್ಯದರ್ಶಿ ಫಕೀರಪ್ಪ ಜೋಗಣ್ಣವರ ಮಾತನಾಡಿ, ಜು.16ಕ್ಕೆ ಈ ಹೋರಾಟ ಸುದೀರ್ಘ‌ 4 ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಕಾಲಿಡಲಿದೆ. ಅಂದು ನರಗುಂದ ಬಂದ್‌ ಕರೆ ನೀಡಲಾಗಿದ್ದು, ಅಂದು ಬೆಳಗ್ಗೆ ಪುರಸಭೆ ಆವರಣದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ ಬೃಹತ್‌ ಮೆರವಣಿಗೆ ಮೂಲಕ ವೇದಿಕೆಗೆ ಆಗಮಿಸಿ ಹೋರಾಟ ಮುನ್ನಡೆಸಲಾಗುವುದು ಎಂದು ತಿಳಿಸಿದರು.

ಮಲಪ್ರಭೆ ಹೋರಾಟ ಸಮನ್ವಯ ಸಮಿತಿ ಉಪಾಧ್ಯಕ್ಷ ರಮೇಶ ನಾಯ್ಕರ, ಯಲ್ಲಪ್ಪ ಗುಡದರಿ, ಲಕ್ಷ್ಮಣ ಮನೇನಕೊಪ್ಪ, ವೆಂಕಪ್ಪ ಹುಜರತ್ತಿ, ಮಲ್ಲಪ್ಪ ಐನಾಪುರ, ವಾಸು ಚವ್ಹಾಣ, ವೆಂಕಟೇಶ ಸಾಬಳೆ, ಈರಣ್ಣ ಗಡಗಿ, ಮಲ್ಲೇಶಪ್ಪ ಬಾಳಿಕಾಯಿ, ಹನುಮಂತ ಸರನಾಯ್ಕರ, ಹನುಮಂತ ಕೋರಿ, ಅನಸಮ್ಮ ಶಿಂಧೆ, ನಾಗರತ್ನ ಸವಳಭಾಯಿ, ದೇವಕ್ಕ ತಾಳಿ, ಮಾಬೂಬಿ ಕೆರೂರ, ಚನ್ನವ್ವ ಕರ್ಜಗಿ ಮುಂತಾದವರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ