ಅಲ್ಲಿಕೆರೆ ನೀರು ಇಲ್ಲಿ ಕೆರೆ ತುಂಬಿಸಿದ ಕಥೆ

| ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಕಾರ | ಬಿದ್ದ ಮಳೆ ನೀರು ಎದ್ದು ಬಂದು ಕೆರೆ ತುಂಬಿತು | ಹರಿವ ನೀರು ಎತ್ತಿ ಕೆರೆ ತುಂಬಿದ ಯುವಕರು | ಗುರುವಿನ ಮಾರ್ಗದರ್ಶನದ ಯಶೋಗಾಥೆ

Team Udayavani, Aug 6, 2019, 9:54 AM IST

ಧಾರವಾಡ: ಗ್ರಾಮದಲ್ಲಿ ಸುಮ್ಮನೆ ಬಿದ್ದು ಹೋಗುವ ನೀರನ್ನು ಬೋರ್‌ವೆಲ್ ಇಟ್ಟು ಮೇಲಕ್ಕೆತ್ತಿದರು.

ಧಾರವಾಡ: ಈ ಊರಿನ ಯುವಕರು ಹಠವಾದಿಗಳು. ಬರಗಾಲದಲ್ಲಿ ಕೆರೆ ಕಟ್ಟುವವರು. ಮಳೆಯಾಗಿಯೂ ನೀರು ಬರದಿದ್ದರೆ ಎಲ್ಲೋ ದೂರದಲ್ಲಿ ಹರಿಯುವ ನೀರನ್ನು ಹೊತ್ತು ತಂದಾದರೂ ಸರಿ ತಮ್ಮೂರಿನ ಕೆರೆಗೆ ನೀರು ತುಂಬಿಸಿಕೊಳ್ಳುವವರು.

ಮೂರು ವರ್ಷದ ಹಿಂದೆ ಬರ ಬಿದ್ದಾಗ ಹಣ ಸೇರಿಸಿ ಕೆರೆ ಮೇಲ್ದರ್ಜೆಗೇರಿಸಿದ್ದ ಧಾರವಾಡ ಸಮೀಪದ ದೇವರಹುಬ್ಬಳ್ಳಿ ಗ್ರಾಮದ ಯುವಕರು ಇದೀಗ ರೈತರ ಹೊಲದಲ್ಲಿ ಬಿದ್ದು ಸುಕಾ ಸುಮ್ಮನೆ ಹರಿದು ಹೋಗುವ ನೀರನ್ನು ರಾತ್ರಿ ಹಗಲೆನ್ನದೇ ಏತ ನೀರಾವರಿ ಮೂಲಕ ತಮ್ಮೂರಿನ ಕೆರೆಗೆ ತಂದು ಹಾಕುತ್ತಿದ್ದಾರೆ.

ಸರ್ಕಾರದ ಸಹಾಯವಿಲ್ಲದೇ, ನೀರಾವರಿ ಇಲಾಖೆಯ ಧನಸಹಾಯ ಲೆಕ್ಕಿಸದೇ ‘ನಮ್ಮ ನೀರು ನಮ್ಮ ಹಕ್ಕು’ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟು ತಮ್ಮೂರಿನ ಹೊಲದ ಬದುವುಗಳಲ್ಲಿ ಬಿದ್ದು ಹಳ್ಳ ಸೇರಿ ಮುಂದಿನ ಊರಿಗೆ ಹರಿದು ಹೋಗುತ್ತಿದ್ದ ನೀರನ್ನು ತಾವೇ ಬಳಸಿಕೊಂಡು ಜಲಸಂಗ್ರಾಮಕ್ಕೆ ಮುನ್ನುಡಿ ಬರೆದಿದ್ದಾರೆ.

ಕಳೆದ ಹತ್ತು ದಿನಗಳಿಂದ ಬಿಟ್ಟು ಬಿಡದೇ ಮಳೆ ಸುರಿಯುತ್ತಿದ್ದರೂ ಈ ಕೆರೆಗೆ ನಿರೀಕ್ಷೆಯಷ್ಟು ನೀರು ಹರಿದು ಬರಲಿಲ್ಲ. ಇದು ಹಣ ಸೇರಿಸಿ ಭಕ್ತಿಯಿಂದ ಶ್ರಮದಾನ ಮಾಡಿ ಕೆರೆ ಕಟ್ಟಿದ ಯುವಕರ ಮನಸ್ಸಿಗೆ ಘಾಸಿ ಮಾಡಿತು. ಊರಿನ ಹಳೆಯ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಕೆಲವು ಕೆರೆಗಳು ಕೋಡಿ ಬಿದ್ದಾಗಿದೆ. ಆದರೆ ಗ್ರಾಮದ ಜನರ ದೃಷ್ಟಿಯಲ್ಲಿ ಪವಿತ್ರ ಮತ್ತು ಕುಡಿಯುವ ನೀರಿನ ಕೆರೆ ಎಂದೇ ಕರೆಯಿಸಿಕೊಳ್ಳುವ ಸಿದ್ಧಾರೂಢ ಮಠದ ಕೆರೆಗೆ ಯಾಕೆ ನೀರು ಬರುತ್ತಿಲ್ಲ ? ಎನ್ನುವ ಪ್ರಶ್ನೆಯ ಬೆನ್ನು ಬಿದ್ದರು. ಅಂತಿಮವಾಗಿ ಕೆರೆಯಿಂದ ಕೂಗಳತೆ ದೂರದಲ್ಲಿ ಹರಿದು ಹೋಗುತ್ತಿದ್ದ ಕಿರುಗಾಲುವೆಯಲ್ಲಿನ ನೀರನ್ನು ಏತ ನೀರಾವರಿ ಮೂಲಕ ಮೇಲಕ್ಕೆತ್ತಬೇಕೆಂದು ನಿಶ್ಚಯಿಸಿ ಪ್ರಯತ್ನ ಆರಂಭಿಸಿದರು. ಕಳೆದ ಹತ್ತು ದಿನಗಳಲ್ಲಿ ಕೆರೆಗೆ ಅರ್ಧಕ್ಕಿಂತಲೂ ಹೆಚ್ಚು ನೀರು ಬಂದಿದ್ದು, ಇನ್ನೊಂದು ವಾರದಲ್ಲಿ ಕೆರೆ ಭರ್ತಿಯಾಗಲಿದೆ.

2 ಕಿ.ಮೀ.ನಿಂದ ನೀರು: ಪಕ್ಕದಲ್ಲಿಯೇ ಬೇಡ್ತಿ ಹಳ್ಳ ತುಂಬಿ ಹರಿಯುತ್ತಿದ್ದು, ಅಲ್ಲಿಂದಲೇ ನೀರನ್ನು ತಂದು ತಮ್ಮೂರಿನ ಕೆರೆಗಳನ್ನು ತುಂಬಿಸಿಕೊಳ್ಳಬೇಕು ಎಂದು ಈ ಗ್ರಾಮದ ಯುವಕರು ಕನಸು ಕಾಣುತ್ತಿದ್ದಾರೆ. ಕಳೆದ ವರ್ಷ 150ಕ್ಕೂ ಅಧಿಕ ಪೈಪ್‌ಗ್ಳನ್ನು ಬಳಸಿಕೊಂಡು 2 ಕಿ.ಮೀ.ದೂರದಿಂದ ಈ ಕೆರೆಗೆ ನೀರು ತುಂಬಿಸಿದ್ದರು. ಆದರೆ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಕೆರೆಗೆ ಪೂರ್ಣ ಪ್ರಮಾಣದಲ್ಲಿ ನೀರು ಬಂದಿರಲೇ ಇಲ್ಲ.ಅಷ್ಟೇಯಲ್ಲ, ನೀರು ಬರದೇ ಹೋಗಿದ್ದಕ್ಕೆ ನಿರಾಶರಾದ ಯುವಕರು ತಮ್ಮ ಹೊಲಗಳಲ್ಲಿನ ಬೋರ್‌ವೆಲ್ನಿಂದಲೂ ಇಲ್ಲಿಗೆ ನೀರು ತುಂಬಿಸುವ ಪ್ರಯತ್ನ ಮಾಡಿದರೂ ಕೆರೆ ತುಂಬಲಿಲ್ಲ. ಅದಕ್ಕಾಗಿ ಈ ವರ್ಷ ಹಠ ಹಿಡಿದು ಕೆರೆ ತುಂಬಿಸಲು ಕಂಕಣ ಕಟ್ಟಿ ನಿಂತಿದ್ದಾರೆ.

ಅಲ್ಲಿ ಕೆರೆ ನೀರು ಇಲ್ಲಿ ಕೆರೆಗೆ ಬಂತು: ಒಂದು ಕೆರೆ ತುಂಬಿದ ಮೇಲೆ ಇನ್ನೊಂದು ಕೆರೆಗೆ ಅದೇ ನೀರು ಹರಿದು ಹೋಗುವ ಕೆರೆ ಜಲ ಸಂಪರ್ಕ ಜಾಲ ಬಹಳ ಕಾಲದಿಂದಲೂ ದೇವರಹುಬ್ಬಳ್ಳಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಇದೆ. ಆದರೆ ಈ ಕೆರೆಗೆ ಜಲಾನಯನ ಪ್ರದೇಶದ ಕೊರತೆ ಇದೆ. ಅಲ್ಲದೇ ಕೆರೆ ಅಭಿವೃದ್ಧಿಯಾದಾಗಿಂದ ಅದರ ಆಳ ಹೆಚ್ಚಿದ್ದು ಹೆಚ್ಚಿನ ನೀರಿನ ಸಂಗ್ರಹ ಸಾಮರ್ಥ್ಯವೂ ಇದೆ. ಹೀಗಾಗಿ ಅಲ್ಪ ಮಳೆಗೆ ಕೆರೆ ತುಂಬುತ್ತಲೇ ಇಲ್ಲ. ಇದೀಗ ಗ್ರಾಮಸ್ಥರು ಈ ಕೆರೆಯ ಮೇಲ್ಭಾಗದಲ್ಲಿದ್ದ ಅಲ್ಲಿಕೆರೆ ತುಂಬಿ ಅಲ್ಲಿನ ನೀರು ವಿನಾಕಾರಣ ಹಳ್ಳ ಸೇರುತ್ತಿತ್ತು. ಅದನ್ನು ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಗುದ್ದಲಿ, ಪಿಕಾಸಿ ಹಿಡಿದು ಒಂದೇ ದಿನದಲ್ಲಿ ಕುಡಿಯುವ ನೀರಿನ ಕೆರೆಗೆ ತಿರುಗಿಸಿ ಕೆರೆಗೆ ನೀರು ತಂದಿದ್ದಾರೆ.

ಧರ್ಮಸ್ಥಳ ಸಹಕಾರ: ಸತತ ಬರಗಾಲದಿಂದ ಗ್ರಾಮದಲ್ಲಿ ಕೆರೆಗಳು ಅಭಿವೃದ್ಧಿಯಾಗಿರಲಿಲ್ಲ. 2017ರಲ್ಲಿ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ 11 ಲಕ್ಷ ರೂ.ಗಳ ನೆರವಿನ ಹಸ್ತ ನೀಡಿತ್ತು. ಒಟ್ಟು 26 ಲಕ್ಷ ರೂ.ಗಳ ವೆಚ್ಚದಲ್ಲಿ ಕೆರೆ ಅಭಿವೃದ್ಧಿಗೊಳಿಸಲಾಗಿತ್ತು. ಇನ್ನುಳಿದ 15 ಲಕ್ಷ ರೂ.ಗಳಷ್ಟು ಹಣವನ್ನು ಗ್ರಾಮಸ್ಥರು ಸೇರಿಸಿದ್ದರು. ಅದರಲ್ಲೂ ಯುವಕರು 10,20,30,50 ಸಾವಿರ ರೂ.ಗಳವರೆಗೂ ಕೆರೆ ಅಭಿವೃದ್ಧಿಗೆ ದಾನ ಮಾಡಿದ್ದರು. ಕೆರೆ ಅಭಿವೃದ್ಧಿಯಾದರೂ ಕೆರೆಗೆ ಎರಡೂ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ನೀರು ಬಂದಿರಲಿಲ್ಲ.

ಸ್ಥಳೀಯ ತಂತ್ರಜ್ಞಾನ: ಕೆರೆಗೆ ಹಳ್ಳದಿಂದ ನೀರೆತ್ತಲು ದೊಡ್ಡ ಪ್ರಮಾಣದ ಯಂತ್ರಗಳು ಮತ್ತು ಪೈಪ್‌ಲೈನ್‌ ಅಗತ್ಯವಿದೆ. ಇದನ್ನು ಸರ್ಕಾರದಿಂದ ಪಡೆದು ಯೋಜನೆ ಅನುಷ್ಠಾನಗೊಳಿಸುವುದು ಸುಲಭದ ಮಾತಲ್ಲ. ಹೀಗಾಗಿ ಗ್ರಾಮದಲ್ಲಿ ವಿದ್ಯುತ್‌ ಕಾಮಗಾರಿ ಮಾಡುವ ಯುವಕರು ತಮ್ಮ ಮನೆ-ಹೊಲದಲ್ಲಿನ ಕೊಳವೆಬಾವಿ ಯಂತ್ರಗಳನ್ನು ಹೊತ್ತು ತಂದು ಕಿರು ಏತ ನೀರಾವರಿ ಪರಿಕಲ್ಪನೆಯಲ್ಲಿ ಕೆರೆಗೆ ನೀರು ಹರಿಸಿದ್ದಾರೆ. ಇನ್ನು ಮಳೆ ಗಾಳಿಗೆ ವಿದ್ಯುತ್‌ ರಾತ್ರಿಯಿಡಿ ಕಣ್ಣಾಮುಚ್ಚಾಲೆ ಆಟ ಶುರು ಮಾಡಿದಾಗ, ನೀರಿನ ಹರಿವೂ ಕಡಿಮೆಯಾಯಿತು. ಅದರಿಂದ ಬೇಸರಗೊಂಡ ಯುವಕರು ರಾತ್ರಿಯಿಡಿ ಬೋರ್‌ವೆಲ್ಗಳನ್ನು ಕಾದು ನೀರು ಹರಿಸಿ ಸೈ ಎನಿಸಿಕೊಂಡಿದ್ದಾರೆ.

ಓಡುವ ನೀರನ್ನು ನಿಲ್ಲಿಸಬೇಕು, ನಿಂತ ನೀರನ್ನು ಇಂಗಿಸಬೇಕು ಅಂದಾಗಲೇ ಅಂತರ್ಜಲ ಮತ್ತು ಮಳೆನೀರು ಕೊಯ್ಲು ಪರಿಪೂರ್ಣತೆ ಪಡೆಯುತ್ತದೆ. ಈ ತತ್ವಕ್ಕೆ ಕಟ್ಟು ಬಿದ್ದಿರುವ ಗ್ರಾಮದ ಯುವಕರು ತಮ್ಮ ಹೊಲಗಳಲ್ಲಿ ಅಲ್ಲಲ್ಲಿ ಕೃಷಿ ಹೊಂಡಗಳನ್ನು ತೋಡಿಸಿಕೊಂಡಿದ್ದಾರೆ. ಜತೆಗೆ ಶ್ರೀಮಠದ ಮಾರ್ಗದರ್ಶನದಲ್ಲಿ ಇದೀಗ ಬಿದ್ದು ಹೋಗುವ ನೀರನ್ನು ತಮ್ಮೂರಿನ ಕೆರೆಗೆ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ವಿಳಂಬವಾದರೆ ಹರಿಯುವ ನೀರೂ ಕಡಿಮೆಯಾಗುತ್ತದೆ. ಹೀಗಾಗಿ ಮಳೆ ಬಿದ್ದಂತೆಲ್ಲ ಹರಿಯುವ ನೀರನ್ನು ಕೆರೆ ಒಡಲಿಗೆ ತುಂಬಿಸುವ ಸವಾಲು ಯುವಕರಿಗಿತ್ತು. ಕೊನೆಗೂ ನಿರೀಕ್ಷೆಯಂತೆ ಕೆರೆ ತುಂಬಿಸಿ ಸೈ ಎಣಿಸಿದ್ದಾರೆ. ತಮ್ಮ ಮನೆಗಳಲ್ಲಿನ ಕೊಳವೆಬಾವಿ ಯಂತ್ರಗಳನ್ನು ತಂದು ಮೇಲಿನಿಂದ ಹರಿದು ಬರುವ ಕಿರುಹಳ್ಳ (ಒಡ್ಡು)ದಲ್ಲಿ ಹಾಕಿ ಅಲ್ಲಿಂದ ನೀರನ್ನು ಎತ್ತಿ ಕೆರೆಗೆ ನೀರು ತುಂಬಿಸುತ್ತಿದ್ದಾರೆ.
ಸರ್ಕಾರದ ಸಹಾಯ, ಜನಪ್ರತಿನಿಧಿಗಳ ಭರವಸೆ ಸೇರಿದಂತೆ ಎಲ್ಲವನ್ನೂ ನಾವು ನೋಡಿಯಾಗಿದೆ. ಅದಕ್ಕೇ ನಮ್ಮೂರಿನ ಯುವಕರು ಸಿದ್ಧಾರೂಢ ಮಠದ ಶ್ರೀ ಸಿದ್ಧಶಿವಯೋಗಿಗಳ ಮಾರ್ಗದರ್ಶನದಲ್ಲಿ ಕೆರೆ ಅಭಿವೃದ್ಧಿ ಮಾಡಿ ನೀರು ತುಂಬಿಸುತ್ತಿದ್ದೇವೆ. ಈ ವರ್ಷ ಭರಪೂರ ನೀರು ಬಂದಿದೆ.• ಮಹಾಂತೇಶ ಕುಂದಗೋಳ, ನಾಗಪ್ಪ ಆರೇರ, ದೇವರಹುಬ್ಬಳ್ಳಿ ಯುವಕರು.
•ಬಸವರಾಜ ಹೊಂಗಲ್

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ