ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್
Team Udayavani, Jan 21, 2021, 1:26 PM IST
ಧಾರವಾಡ: ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯನ್ನು ಧಾರವಾಡದ ಹೈಕೋರ್ಟ್ ವಜಾಗೊಳಿಸಿದೆ.
ಮಾಜಿ ಸಚಿವ ವಿನಯ ಕುಲಕರ್ಣಿಯವರ ಜಾಮೀನು ಅರ್ಜಿಯ ವಿಚಾರಣೆ ಬುಧವಾರದಿಂದ ನಡೆದಿತ್ತು. ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ವಾದ ಮಂಡಿಸಿದ್ದರು. ಇಂದು ಹೈಕೋರ್ಟ್ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಕೆ.ಎನ್.ನಟರಾಜ ವಾದ ಪ್ರತಿವಾದ ಆಲಿಸಿದ ನಂತರ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿದ್ದಾರೆ.
ಕಳೆದ ನವೆಂಬರ್ 5 ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನ ಸಿಬಿಐ ಬಂಧನ ಮಾಡಿತ್ತು. ಇದಾದ ನಂತರ ಧಾರವಾಡ ಜಿಲ್ಲಾ ಪ್ರಧಾನ ಮತ್ತು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲಾಗಿತ್ತು. ಅಲ್ಲಿ ಅರ್ಜಿ ವಜಾ ಆದ ನಂತರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಇದೀಗ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಜಾ ಆದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನಿಗಾಗಿ ಮೇಲ್ಮನವಿ ಸಲ್ಲಿಸುವ ಅನಿವಾರ್ಯತೆ ಎದುರಾಗಿದೆ.