ಹು-ಧಾ ವಿಶೇಷ ಹೂಡಿಕೆ ಪ್ರದೇಶ ಸ್ಥಾಪನೆಗೆ ಹಕ್ಕೊತ್ತಾಯ

Team Udayavani, Aug 25, 2019, 9:53 AM IST

ಹುಬ್ಬಳ್ಳಿ: ಹು-ಧಾ ಅಭಿವೃದ್ಧಿ ವೇದಿಕೆ ಉದ್ಘಾಟನೆ-ಮೊದಲ ಸಭೆ ನಡೆಯಿತು. ವಿಜಯ ಸಂಕೇಶ್ವರ, ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ ಇನ್ನಿತರರಿದ್ದರು.

ಹುಬ್ಬಳ್ಳಿ: ಬೃಹತ್‌ ಕೈಗಾರಿಕೆಗಳ ಆರಂಭ, ಕೈಗಾರಿಕಾ ವಲಯ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ವಿಶೇಷ ಹೂಡಿಕೆ ಪ್ರದೇಶ(ಎಸ್‌ಐಆರ್‌)ಸ್ಥಾಪನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕೆಂದು ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ ವೇದಿಕೆ ಹಕ್ಕೊತ್ತಾಯ ಮಂಡಿಸಿದೆ.

ವಿಆರ್‌ಎಲ್ ಸಮೂಹ ಸಂಸ್ಥೆ ಚೇರ್ಮನ್‌ ಡಾ| ವಿಜಯ ಸಂಕೇಶ್ವರ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಕೆಎಲ್ಇ ತಾಂತ್ರಿಕ ವಿವಿ ಕಟ್ಟಡದಲ್ಲಿ ವೇದಿಕೆ ಉದ್ಘಾಟನೆ ಹಾಗೂ ಮೊದಲ ಸಭೆಯಲ್ಲಿ ಅವಳಿ ನಗರದಲ್ಲಿ ಕೈಗಾರಿಕಾ ಅಭಿವೃದ್ಧಿ ಅವಕಾಶ ಹಾಗೂ ಸವಾಲುಗಳು, ಮೂಲಸೌಕರ್ಯಗಳ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು.

ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ, ಸಚಿವ ಜಗದೀಶ ಶೆಟ್ಟರ ಇನ್ನಿತರರು ಪಾಲ್ಗೊಂಡಿದ್ದರು. ಹು-ಧಾ ಹಾಗೂ ಉಕದಲ್ಲಿ ಬೃಹತ್‌ ಕೈಗಾರಿಕೆಗಳ ಆರಂಭ ನಿಟ್ಟಿನಲ್ಲಿ ಇರಿಸಬೇಕಾದ ಹೆಜ್ಜೆಗಳ ಕುರಿತಾಗಿ ಚಿಂತನ-ಮಂಥನ ನಡೆಯಿತು.

ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ವೇದಿಕೆ ಉದ್ದೇಶ, ಚರ್ಚೆ ಹಾಗೂ ನಿರ್ಣಯಗಳ ಕುರಿತಾಗಿ ಹು-ಧಾ ಅಭಿವೃದ್ಧಿ ವೇದಿಕೆ ಉಪ ಚೇರ್ಮನ್‌ ಹಾಗೂ ಕೆಎಲ್ಇ ತಾಂತ್ರಿಕ ವಿವಿ ಕುಲಪತಿ ಡಾ| ಅಶೋಕ ಶೆಟ್ಟರ ವಿವರಿಸಿದರು. ಹು-ಧಾದಲ್ಲಿ ಆರ್ಥಿಕಾಭಿವೃದ್ಧಿ, ಬೃಹತ್‌ ಕೈಗಾರಿಕೆಗಳ ಸ್ಥಾಪನೆಗೆ ಉದ್ಯಮಸ್ನೇಹಿ ವಾತಾವರಣ ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆಯೊಂದಿಗೆ ವೇದಿಕೆ ಕಾರ್ಯ ನಿರ್ವಹಿಸಲಿದೆ. ಆವಳಿ ನಗರದಲ್ಲಿ ಇಂದಿಗೂ ಯಾವುದೇ ದೊಡ್ಡ ಉದ್ಯಮಗಳು ಇಲ್ಲವಾಗಿದ್ದು, ಶೇ.55 ಸೇವಾ ವಲಯ ಅವಲಂಬಿತ ಸ್ಥಿತಿ ಇದೆ. ದೇಶದಲ್ಲಿ ಉತ್ಪಾದನಾ ವಲಯದ ಸರಾಸರಿ ಪಾಲು ಶೇ.7ರಿಂದ 25ರಷ್ಟು ಇದ್ದರೆ, ಅವಳಿನಗರದಲ್ಲಿ ಶೇ.7ಕ್ಕಿಂತ ಕಡಿಮೆ ಇದೆ. ಶೇ. 98 ಎಂಜಿನಿಯರಿಂಗ್‌ ಪದವೀಧರರು, ಶೇ.90 ಇತರೆ ಪದವೀಧರರು ಉದ್ಯೋಗಕ್ಕಾಗಿ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ ಎಂದರು.

ಬೃಹತ್‌ ಕೈಗಾರಿಕೆಗಳ ಸ್ಥಾಪನೆ ಹಾಗೂ ಕೈಗಾರಿಕಾ ಅಭಿವೃದ್ಧಿ ನಿಟ್ಟಿನಲ್ಲಿ ಬಹುದೊಡ್ಡ ಪರಿಣಾಮ ಬೀರುವ ಯತ್ನಗಳನ್ನು ಕೈಗೊಳ್ಳಬೇಕಾಗಿದೆ. ಸಾರ್ವಜನಿಕರ ಬೆಂಬಲವೂ ಅವಶ್ಯವಾಗಿದೆ. ಕೈಗಾರಿಕೆ ಅಭಿವೃದ್ಧಿ ನಿಟ್ಟಿನಲ್ಲಿ ದೇಶದಲ್ಲಿ ಐದು ಪ್ರಮುಖ ಕೈಗಾರಿಕಾ ಕಾರಿಡಾರ್‌ ರೂಪಿಸಲಾಗಿದೆ. ಅದರಲ್ಲಿ ಮುಂಬಯಿ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ ಒಂದಾಗಿದ್ದು, ಇದರ ವ್ಯಾಪ್ತಿಯಲ್ಲೇ ಬೆಳಗಾವಿ ಹಾಗೂ ಹು-ಧಾ ಬರುತ್ತದೆ ಎಂದು ವಿವರಿಸಿದರು.

ಗುಜರಾತ್‌ ಮಾದರಿ: ಮುಂಬಯಿ-ದೆಹಲಿ ಕೈಗಾರಿಕಾ ಕಾರಿಡಾರ್‌ ಯೋಜನೆ ಬಳಸಿಕೊಂಡು ಗುಜರಾತ್‌ ಮಹತ್ವದ ಸಾಧನೆ ತೋರಿದೆ. ಅದೇ ಮಾದರಿಯನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಗುಜರಾತ್‌ನಲ್ಲಿ ನರೇಂದ್ರ ಮೋದಿ ಸಿಎಂ ಆಗಿದ್ದಾಗ ವಿಶೇಷ ಹೂಡಿಕೆ ವಲಯ ಕಾಯ್ದೆ-2009 ಜಾರಿಗೆ ತಂದಿದ್ದರು. ಅದರಡಿ 12 ವಲಯ ಗುರುತಿಸಲಾಗಿತ್ತು. ನಂತರ ಅದು 17ಕ್ಕೆ ಹೆಚ್ಚಿತು. ಅದರಲ್ಲಿ 3 ವಲಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಕೈಗಾರಿಕೆ ಅತ್ಯುತ್ತಮವಾಗಿ ಬೆಳೆದಿದೆ ಎಂದರು.

ನಮ್ಮಲ್ಲಿಯೂ ಕೈಗಾರಿಕಾ ಅಭಿವೃದ್ಧಿಗೆ ವಿಶೇಷ ಹೂಡಿಕೆ ಪ್ರದೇಶ ರಚನೆ, ವಿಶ್ವದರ್ಜೆ ಮೂಲಸೌಕರ್ಯ ನೀಡಿಕೆ, ಭೂ ಬ್ಯಾಂಕ್‌ ಸ್ಥಾಪನೆ, ವಿಶೇಷ ಕಾಯ್ದೆ ರಚನೆಗೆ ಒತ್ತು ನೀಡಬೇಕಾಗಿದೆ. ಹು-ಧಾ, ಬೆಳಗಾವಿ ಹಾಗೂ ಗೋವಾ ಸೇರಿಕೊಂಡು ಡಿಫೆನ್ಸ್‌ ಪಾರ್ಕ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಗಾಮನಗಟ್ಟಿ-ಇಟಿಗಟ್ಟಿಯಲ್ಲಿ ಸುಮಾರು 590 ಎಕರೆ ಭೂಮಿ ಇದ್ದು, ಅಲ್ಲಿ ಐಟಿ ಪಾರ್ಕ್‌ ಸ್ಥಾಪನೆ, ಐಟಿ ಎಸ್‌ಇಝಡ್‌, ಆಹಾರ ಸಂಸ್ಕರಣೆ ಕೈಗಾರಿಕೆ ಆರಂಭಿಸಬೇಕು. ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂಬುದು ವೇದಿಕೆ ಹಕ್ಕೊತ್ತಾಯವಾಗಿದೆ ಎಂದು ಡಾ| ಅಶೋಕ ಶೆಟ್ಟರ ಹೇಳಿದರು. ಉದ್ಯಮಿಗಳಾದ ಎಚ್.ಎನ್‌. ನಂದಕುಮಾರ, ರಮೇಶ ಶೆಟ್ಟಿ, ಎಂ.ವಿ. ಕರಮರಿ, ಗೋವಿಂದ ಜೋಶಿ, ಡಾ| ವಿಎಸ್‌ವಿ ಪ್ರಸಾದ, ವಿವೇಕ ನಾಯಕ, ಗೌತಮ್‌ ಓಸ್ತವಾಲ್, ಜಗದೀಶ ಹಿರೇಮಠ, ಸಂತೋಷ ಹುರಳಿಕೊಪ್ಪ, ಸಂದೀಪ ಬೂದಿಹಾಳ, ನಾಗರಾಜ ದಿವಟೆ ಇದ್ದರು.

ತ್ರಿವಳಿನಗರವಾಗಿ ಅಭಿವೃದ್ಧಿಗೆ ಮುಂದಾಗೋಣ:

 ಕೈಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ಹು-ಧಾ ಅವಳಿನಗರ ಬದಲಾಗಿ ಬೆಳಗಾವಿ ಸೇರಿಸಿಕೊಂಡು ತ್ರಿವಳಿನಗರ ಅಭಿವೃದ್ಧಿಗೆ ಮುಂದಾಗೋಣ ಎಂದು ಸಚಿವ ಜಗದೀಶ ಶೆಟ್ಟರ ಹೇಳಿದರು. ಹು-ಧಾ ಅಭಿವೃದ್ದಿ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬೆಳಗಾವಿಯನ್ನು ಸೇರಿಸಿಕೊಂಡು ಅಭಿವೃದ್ಧಿಗೆ ಮುಂದಾದರೆ ದೊಡ್ಡ ಪರಿಣಾಮ ಬೀರಬಹುದಾಗಿದೆ. ಅಭಿವೃದ್ಧಿ ವೇಗವೂ ಹೆಚ್ಚಲಿದೆ ಎಂದರು.
ಅವಳಿ ನಗರದಲ್ಲಿ ಒಳಚರಂಡಿ ವ್ಯವಸ್ಥೆಗೆ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಅನುದಾನ ನೀಡಲಾಗಿತ್ತು. ಮುಖ್ಯ ಒಳಚರಂಡಿ ನಿರ್ಮಾಣ ಮಾಡಲಾಗಿದ್ದು, ಉಪ ಚರಂಡಿ ಹಾಗೂ ಮುಖ್ಯ ಒಳಚರಂಡಿಗೆ ಸಂಪರ್ಕದ ಕಾಮಗಾರಿ ಕೈಗೊಳ್ಳಬೇಕಾಗಿದೆ. ಅಮೃತ ಯೋಜನೆಯಲ್ಲಿ ಕಾಮಗಾರಿ ಕೈಗೊಳ್ಳಲು ಕೆಯುಡಿಐಎಫ್ಸಿಗೆ ಸೂಚಿಸಲಾಗಿದೆ. ಅಂದಾಜು 300-400 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಹೇಳಲಾಗುತ್ತಿದ್ದು, ಇದರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು. 24/7 ನೀರು ಪೂರೈಕೆ ಯೋಜನೆ ಟೆಂಡರ್‌ ರದ್ದಾಗಿದ್ದು, ಮತ್ತೆ ಟೆಂಡರ್‌ ಕರೆಯಲಾಗುವುದು ಎಂದು ಹೇಳಿದರು. 3,700 ಎಕರೆ ಭೂಮಿ: ದುರ್ಗದ ಕೆರೆಯ ಸುಮಾರು 3,700 ಎಕರೆ ಜಮೀನು ಟ್ರಿಬ್ಯುನಲ್ನ ತಪ್ಪಿನಿಂದಾಗಿ ಮಾಲೀಕರ ಕಬ್ಜಾಕ್ಕೆ ಹೋಗಿತ್ತು. ಅದನ್ನು ಮತ್ತೆ ಸರಕಾರದ ಸುಪರ್ದಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿವಾದ ಪರಿಹಾರಗೊಂಡರೆ 3,700 ಎಕರೆಯಷ್ಟು ಭೂಮಿ ಕೈಗಾರಿಕಾ ಅಭಿವೃದ್ಧಿ ಇನ್ನಿತರ ಕಾರ್ಯಕ್ಕೆ ಲಭ್ಯವಾಗಲಿದೆ ಎಂದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ